ಚಳಿಗಾಲ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ: ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್

ಕಾಯ್ದೆ ಜಾರಿಗೆ ತರುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಇದೇ ಡಿಸೆಂಬರ್ 7 ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮಂಡನೆ ಮಾಡಲಿದ್ದೇನೆ.

ಸಚಿವ ಪ್ರಭು ಚವ್ಹಾಣ್

ಸಚಿವ ಪ್ರಭು ಚವ್ಹಾಣ್

  • Share this:
ರಾಯಚೂರು (ನ.25): ಪಶುಸಂಗೋಪನೆ ಇಲಾಖೆಯ ಜವಾಬ್ದಾರಿ ನೀಡಿದ ದಿನದಿಂದ ಮನಸ್ಸಿನಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕರ್ನಾಟಕದಲ್ಲಿ ಜಾರಿಗೊಳಿಸುವ ಮಹದಾಸೆ ಇತ್ತು. ಅದು ಈಗ ಕೈಗೂಡುವ ಸಮಯ ಹತ್ತಿರವಾಗಿದೆ ಎಂದು ಪಶುಸಂಗೋಪನೆ ಹಾಗೂ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌಹಾಣ್  ತಿಳಿಸಿದ್ದಾರೆ. ಈ ಕಾಯ್ದೆ ಜಾರಿಗೆ ತರುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಇದೇ ಡಿಸೆಂಬರ್ 7 ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಮಂಡನೆ ಮಾಡಲಿದ್ದೇನೆ. ಅದಕ್ಕೆ ಬೇಕಾದ ಎಲ್ಲ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಇನ್ನು ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿರುವ ಬೇರೆ ಬೇರೆ ರಾಜ್ಯಗಳಲ್ಲಿ ಅನುಷ್ಠಾನಗೊಂಡ ಕಾಯ್ದೆಯ ಅಧ್ಯಯನ ನಡೆಸಲಾಗಿದ್ದು, ಈ ಬಗ್ಗೆ ಇಲಾಖಾ ಅಧಿಕಾರಿಗಳ ಮಟ್ಟದಲ್ಲಿ ಹಾಗೂ ಪರಿಣಿತರೊಂದಿಗೆ ಚರ್ಚೆ ಮಾಡಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಗೋಹತ್ಯೆ ನಿಷೇಧ ಕಾಯ್ದೆ ಹೆಚ್ಚು ಬಲವಾಗಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು

ರಾಜ್ಯದಲ್ಲಿ ಇನ್ನು ಮುಂದೆ ಗೋಹತ್ಯೆ ನಿಷೇಧವಾಗಲಿದ್ದು ರಾಜ್ಯದ ಒಳಗೂ ಮತ್ತು ಹೊರಗೂ ಗೋ ಮಾಂಸ ಆಮದು ಮತ್ತು ರಫ್ತು ಸಂಪೂರ್ಣ ನಿಷೇಧ ಆಗಲಿದೆ.2010 ರಲ್ಲಿ ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯ 1964 ಬದಲಾಗಿ, ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2010ನ್ನು ಅಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ವಿಧಾನಮಂಡಲದಲ್ಲಿ ಮಂಡಿಸಿದ ನಂತರ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ಅಂದು ರಾಜ್ಯಪಾಲರಾಗಿದ್ದ ಹಂಸರಾಜ್​ ಭಾರಧ್ವಾಜ್​ ಅವರು ಇದನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಿದ್ದರಿಂದ ಕಾಯ್ದೆಯ ಅನುಷ್ಟಾನದಲ್ಲಿ ವಿಳಂಬವಾಯಿತು. ಅಲ್ಲದೆ ಕೇಂದ್ರ ಗೃಹ ಇಲಾಖೆ ಸಹ ಕೆಲವು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿ ತಿದ್ದುಪಡಿಗೆ ಸೂಚನೆ ನೀಡಿತ್ತು. ಸದ್ಯ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು ಕಾಯ್ದೆಯನ್ನು ಮತ್ತಷ್ಟು ಬಲಪಡಿಸಿ ಅನುಷ್ಟಾನಗೊಳಿಸುವ ಪ್ರಯತ್ನದಲ್ಲಿದ್ದೇವೆ ಎಂದು  ತಿಳಿಸಿದ್ದಾರೆ.

ಕರ್ನಾಟಕ ಗೋ ಹತ್ಯೆ ಪ್ರತಿ ಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964 ಹಾಗೂ ನಿಯಮ1977 ರಲ್ಲಿ ಗೋವುಗಳು ಅಥವಾ ಎಮ್ಮೆ ಕರುಗಳು ವಧೆ/ಹತ್ಯೆಗೆ ನಿಷೇಧವಿದೆ. ಇತರೆ ಜಾನುವಾರು ಹೋರಿ, ಎತ್ತು, ಎಮ್ಮೆ, 12 ವರ್ಷಕ್ಕಿಂತ ಹೆಚ್ಚು ವಯಸ್ಸಾದಲ್ಲಿ, ಸಂವರ್ಧನೆಗೆ, ಭಾರ ಎಳೆಯಲು, ತೀವ್ರ ಕಾಯಿಲೆ, ಹಾಲು ಉತ್ಪಾದನೆಗೆ, ಅಥವಾ ಇನ್ನಾವುದೇ ಕಾರಣದಿಂದ ಅಸಮರ್ಥವಾಗಿದ್ದರೆ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆದುಕೊಳ್ಳದ ಹೊರತು ವಧೆ ನಿಷೇಧವಿದೆ. ಕಾಯ್ದೆ ಜಾರಿಗೆ ಬಂದರೆ ಜಾನುವಾರುಗಳ ವಧೆಗೆ ನಿಷೇಧ, ಗೋಮಾಂಸ ಮಾರಾಟ ಹಾಗೂ ಬಳಕೆಗೆ ನಿಷೇಧ, ವಧೆಗಾಗಿ ರಾಜ್ಯದಲ್ಲಿ ಹಾಗೂ ಹೊರ ರಾಜ್ಯಗಳಿಗೆ ಜಾನುವಾರಗಳ ಅಕ್ರಮ ಸಾಗಾಣಿಕೆ, ವಧೆಗಾಗಿ ಜಾನುವಾರಗಳ ಖರೀದಿ, ಮಾರಾಟ ಅಥವಾ ವಿಲೇವಾರಿಗೆ ಕಡಿವಾಣ ಬೀಳಲಿದೆ. ಅಲ್ಲದೇ ಬೇರೆ ರಾಜ್ಯಗಳಲ್ಲಿ ಅನುಷ್ಟಾನವಾಗಿರುವ ಕಾಯ್ದೆಯನ್ನು ಅವಲೋಕಿಸಿ ಗೋ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದರು.

ವರದಿ: ಶರಣಪ್ಪ ಬಾಚಲಾಪುರ
Published by:Seema R
First published: