ಬ್ರಿಟಿಷರ ಆಡಳಿತವೇ ಚೆನ್ನಾಗಿತ್ತು ಎಂದ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್; ವಿಧಾನಪರಿಷತ್​ನಲ್ಲಿ ಬಿಸಿಬಿಸಿ ಚರ್ಚೆ

ಸಂವಿಧಾನದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಕಲಾ ವಿಭಾಗವಷ್ಟೇ ಅಲ್ಲ ಎಲ್ಲಾ ಶಿಕ್ಷಣ ವಿಭಾಗದಲ್ಲೂ ಸಂವಿಧಾನ ವಿಚಾರವಾಗಿ ಕೋರ್ಸ್ ಇರಬೇಕು ಎಂದು ಕಾಂಗ್ರೆಸ್ ಸದಸ್ಯ ವೇಣುಗೋಪಾಲ್ ಸಲಹೆ ನೀಡಿದರು.

ವಿಧಾನ ಪರಿಷತ್ ಕಲಾಪ

ವಿಧಾನ ಪರಿಷತ್ ಕಲಾಪ

 • Share this:
  ಬೆಂಗಳೂರು(ಮಾ. 17): ವಿಧಾನಪರಿಷತ್​ನಲ್ಲಿ ಇವತ್ತು ನಡೆದ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಬ್ರಿಟಿಷ್ ಆಡಳಿತದ ವಿಚಾರವೂ ಹರಿದುಬಂದು ಸದಸ್ಯರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾಯಿತು. ಚರ್ಚೆಯ ವೇಳೆ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಅವರು ಬ್ರಿಟಿಷರಿಗೆ ಧನ್ಯವಾದ ಹೇಳಿದರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯ ಪ್ರಾಣೇಶ್, ಭಾರತೀಯರ ಮೇಲೆ ದೌರ್ಜನ್ಯ ಎಸಗಿದ ಬ್ರಿಟಿಷರಿಗೆ ಧನ್ಯವಾದ ಹೇಗೆ ಹೇಳುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಇತರ ಬಿಜೆಪಿ ಸದಸ್ಯರು, ಇಂಥ ಸಂದರ್ಭಕ್ಕಾಗಿ ಗಾಂಧಿಜಿ ಅವರು ನಮಗೆ ಸ್ವಾತಂತ್ರ್ಯ ಕೊಡಬೇಕಿತ್ತಾ ಎಂದು ಕೇಳಿದರು.

  ಪಿ.ಆರ್. ರಮೇಶ್ ಮಾತನ್ನು ದಾಳವಾಗಿಟ್ಟುಕೊಳ್ಳಲು ಯತ್ನಿಸಿದ ಪ್ರಾಣೇಶ್, ಸಂವಿಧಾನದ ಬದಲು ಬ್ರಿಟಿಷರ ಆಡಳಿತದ ಬಗ್ಗೆ ಚರ್ಚೆ ಮಾಡಿ ಎಂದು ಕಿಚಾಯಿಸಿದರು. ಇದಕ್ಕೆ ಬಗ್ಗದ ಕಾಂಗ್ರೆಸ್ ಸದಸ್ಯ ಮತ್ತೊಮ್ಮೆ ಬ್ರಿಟಿಷರ ಆಳ್ವಿಕೆ ಚೆನ್ನಾಗಿತ್ತು ಎಂದು ಸಮರ್ಥಿಸಿಕೊಂಡರು.

  ಈ ವೇಳೆ ಸಚಿವ ಸಿ.ಟಿ. ರವಿ ಕೂಡ ಪಿ.ಆರ್. ರಮೇಶ್ ವಿರುದ್ಧ ಮುಗಿಬಿದ್ದರು. ದೇಶವನ್ನು ಲೂಟಿ ಮಾಡಿ ಭಾರತೀಯರನ್ನು ದಾಸ್ಯರನ್ನಾಗಿ ಮಾಡಿದ ಬ್ರಿಟಿಷರಿಗೆ ಧನ್ಯವಾದ ಹೇಳುವ ನಿಮಗೆ ನಾಚಿಕೆ ಆಗಬೇಕು. ಬ್ರಿಟಿಷರಿಗೆ ಧನ್ಯವಾದ ಹೇಳುವುದಾದರೆ ವಿಧಾನಪರಿಷತ್​ನಲ್ಲಿ ಮಹಾತ್ಮ ಗಾಂಧಿ ಫೋಟೋ ತೆಗೆದುಹಾಕಿ ಮೆಕಾಲೆ ಫೋಟೋ ಹಾಕಿ ಎಂದು ಸಿ.ಟಿ. ರವಿ ಕಿಡಿಕಾರಿದರು.

  ಇದನ್ನೂ ಓದಿ: ಉಪಲೋಕಾಯುಕ್ತರ ಬಲ ಹೆಚ್ಚಿಸುವ ತಿದ್ದುಪಡಿ ವಿಧೇಯಕ ಮಂಡನೆ; ಕೆಲಸಕ್ಕೆ ಬಾರದ ಶಾಸನ ಎಂದು ರಮೇಶ್ ಕುಮಾರ್ ಆಕ್ಷೇಪ

  ಬ್ರಿಟಿಷರಿಗೆ ಧನ್ಯವಾದ ಹೇಳಿದ್ದಕ್ಕೆ ರಮೇಶ್ ಕ್ಷಮೆ ಕೇಳಬೇಕು. ಅದಕ್ಕೆ ವಿವರಣೆ ನೀಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಆಗ ಪಿ.ಆರ್. ರಮೇಶ್ ತಮ್ಮ ಮಾತಿಗೆ ವಿವರಣೆ ನೀಡಿದರು. ಬ್ರಿಟಿಷರು ಭಾರತೀಯ ರಾಜರ ಮಧ್ಯೆ ವಿಷ ಬೀಜ ಬಿತ್ತಿದ್ದರಿಂದ ಸ್ವಾತಂತ್ರ್ಯ ಹೋರಾಟಕ್ಕೆ ಅನುಕೂಲ ಆಯಿತು. ಇದರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು. ವಿಷ ಬೀಜ ಬಿತ್ತಿದ್ದಕ್ಕೆ ಬ್ರಿಟಿಷರಿಗೆ ಧನ್ಯವಾದ ಹೇಳಿದೆ ಎಂದು ಕಾಂಗ್ರೆಸ್ ಎಂಎಲ್​ಸಿ ಪಿ.ಆರ್. ರಮೇಶ್ ಸ್ಪಷ್ಟನೆ ನೀಡಿದರು.

  ಇದಾದ ಬಳಿಕ ಸಂವಿಧಾನದ ಮೇಲಿನ ಚರ್ಚೆ ಮುಂದುವರಿಯಿತು. ಸಂವಿಧಾನದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಕಲಾ ವಿಭಾಗವಷ್ಟೇ ಅಲ್ಲ ಎಲ್ಲಾ ಶಿಕ್ಷಣ ವಿಭಾಗದಲ್ಲೂ ಸಂವಿಧಾನ ವಿಚಾರವಾಗಿ ಕೋರ್ಸ್ ಇರಬೇಕು ಎಂದು ಕಾಂಗ್ರೆಸ್ ಸದಸ್ಯ ವೇಣುಗೋಪಾಲ್ ಸಲಹೆ ನೀಡಿದರು.

  First published: