ಉತ್ತಮ ವ್ಯಕ್ತಿಗೂ ಅಧಿಕಾರ ಸಿಕ್ಕಾಗ ಆತ ಮೊದಲು ಪ್ರದರ್ಶಿಸುವುದು ದರ್ಪ, ದೌರ್ಜನ್ಯವನ್ನೇ!

ಎರಡನೆಯ ದಿವಸ ಕೈದಿಗಳಿಗೆ ಹಿಂಸೆ ನೀಡುವುದು ಆರಂಭವಾಯಿತು. ನಿದ್ದೆಯ ಸಮಯದಲ್ಲಿ ಸದ್ದು ಮಾಡಿ ಎಚ್ಚರಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಲಾಠಿಯಿಂದ ಹೊಡೆಯುವುದು, ಕೈದಿಗಳು ತಿನ್ನುತ್ತಿರುವ ಆಹಾರದ ಮೇಲೆ ಉಗುಳುವುದು, ಸ್ವಚ್ಛಗೊಳಿಸಿದ ಹಾಸಿಗೆಯನ್ನು ಗಲೀಜು ಮಾಡುವುದು, ಬರಿಯ ಕೈಯಲ್ಲಿ ಶೌಚಾಲಯವನ್ನು ಸ್ವಚ್ಛಗಳೊಸುವಂತಹ ಕಾರ್ಯಗಳನ್ನು ಅತಿ ದರ್ಪ, ದೌರ್ಜನ್ಯ, ಅಮಾನವೀಯತೆಯಿಂದ ಕಾವಲು ಸಿಬ್ಬಂದಿ ಮಾಡಿದ್ದರು.

ಡಾ. ಅ.ಶ್ರೀಧರ.

ಡಾ. ಅ.ಶ್ರೀಧರ.

  • Share this:
ಮನದ ಉನ್ನತ ಸ್ಥಿತಿಯ ತಳಪಾಯ ಯಾವುದೆನ್ನುವುದನ್ನು ದಾಸ ಶ್ರೇಷ್ಠರಾದ ಕನಕದಾಸರು ಅದ್ಭುತವಾಗಿ ವಿವರಿಸಿರುತ್ತಾರೆ. ಇದನ್ನೇ ಆಧುನಿಕ ಮನೋವೈಜ್ಞಾನಿಕ ತತ್ವ, ಪ್ರಯೋಗಗಳು ವಿಧವಿಧವಾಗಿ ವಿವರಿಸಿರುವುದುಂಟು. ಅದರಲ್ಲಿಯೂ ಬಹು ಪ್ರಖ್ಯಾತಿ ಪಡೆದಿರುವ ಅಮೆರಿಕದ ಮನೋವಿಜ್ಞಾನಿ ಏಬ್ರಾಹಂ ಮ್ಯಾಸ್ಲೊ ಅವರ ಆತ್ಮಸಾಕ್ಷಾತ್ಕಾರದ (ಸೆಲ್ಫ್‌ ಆಕ್ಚ್ಯುಲೈಸೇಷನ್) ಸಿದ್ಧಾಂತವು ಮನುಷ್ಯನ ಬಯಕೆಗಳು ಹೇಗೆ ಹಂತ ಹಂತವಾಗಿ ನೀಗುತ್ತಾ ಪರಿಪೂರ್ಣ ತೃಪ್ತಿಯತ್ತ ಸಾಗುತ್ತದೆ ಎನ್ನುವುದನ್ನು ವಿವರಿಸುತ್ತದೆ.

ಪರಿಪೂರ್ಣತೆಯ ಭಾವ, ಭಾವನೆಗಳ ಹೊರ ರೂಪವೇ ಸಾಕ್ಷಾತ್ಕಾರವಾಗಿದ್ದು ತನ್ನ ತನದ ಮಹೋನ್ನತ ಅನುಭಗಳನ್ನು ಹಂಬಲಿಸಿ ಪಡೆಯುವ ಸ್ಥಿತಿಯು ಇದಾಗಿರುತ್ತದೆ. ಅಂತಹದೊಂದು ಹಂತವನ್ನು ತಲುಪಲು ಹತ್ತಾರು ಕೆಳಗಿನ ಹಂತಗಳನ್ನು ದಾಟಿ ಬರಬೇಕು. ಈ ಹಂತಗಳೆಲ್ಲದರ ತಳಪಾಯ ಹೊಟ್ಟೆಯ ಹಸಿವಿನ ಅನುಭವವೇ ಆಗಿರುತ್ತದೆ. ಹಸಿವು ನಿವಾರಣೆಯ ಪ್ರಯತ್ನಗಳು ಯಶಸ್ವಿಯಾದಾಗ ಮುಂದಿನ ಹಂತಗಳು ತಲುಪಿ ವ್ಯಕ್ತಿ, ಸಮುದಾಯ, ಸಮಾಜದಲ್ಲಿ ಉತ್ತಮ ಹೊಂದಾಣಿಕೆ, ಸಾಧನೆಗಳು ಸಾಧ್ಯ.

ನಾಗರಿಕತೆಯು ಮುಂದುವರೆಯುತ್ತಿದ್ದಂತೆಲ್ಲ ಹಸಿವಿನ ನಿವಾರಣೆಯ ಕ್ರಮದಲ್ಲಿ ಜನರನ್ನಾಳುವವರು ಮತ್ತು ರಾಜಕೀಯ ವ್ಯವಸ್ಥೆಯ ಪಾತ್ರ ಆಗಾಧ. ಅದರಲ್ಲಿಯೂ ಬಡಜನರ ಹೊಟ್ಟೆಪಾಡಿಗೂ ಸರ್ಕಾರದ ನೀತಿಗಳಿಗೂ ಬಹಳ ಹತ್ತಿರದ ನೆಂಟು. ಇಂದು ಎಲ್ಲರಲ್ಲಿಯೂ ತಲ್ಲಣಗಳನ್ನು ಹುಟ್ಟಿಸಿರುವ ರೋಗಗ್ರಸ್ತ ಜಗತ್ತು ರೋಗವು ಉಂಟುಮಾಡುತ್ತಿರುವ ತಲ್ಲಣ ಸ್ಥಿತಿಗಳಿಗಿಂತಲೂ ಹಸಿವಿನ ಭೀತಿ ಹೆಚ್ಚಾಗಿಸುತ್ತಿರುವುದು ಸ್ಪಷ್ಟ. ಒಂದೆಡೆ ಉಳ್ಳವರು ಕೊಳ್ಳಬಾಕರಾಗುತ್ತಿದ್ದರೆ ಊಳು-ಕೂಳು ಇಲ್ಲದವರ ಹಗಲು-ನಿದ್ದೆಗನಸುಗಳಲ್ಲಿಯೂ ಹಸಿವಿನದೇ ಹಿಡಿತ. ಹೊಟ್ಟೆ ತುಂಬಿಸಿಕೊಂಡಿದ್ದೂ ನಂತರದ ಸ್ಥಿತಿಗಳಲ್ಲಿ ಪರಿಪೂರ್ಣ ತೃಪ್ತಿಯನ್ನು ಕಾಣದೆ ಅಧಿಕಾರದ ದಾಹ, ಕ್ರೌರ್ಯದ ನಡೆ-ನುಡಿಗಳ ಮೂಲಕ ತೃಪ್ತಿ ಪಡೆಯಲು ಹಪಹಪಿಸುತ್ತಿರುವವರ ಬಳಿ ಲಾಠಿ ಚಲಿಸುವ, ಚಲಿಸಿ ಎಂದು ಹೇಳುವ ಬಲ ವಿಕೃತ ಸ್ವರೂಪ ತಾಳುತ್ತಿದೆ- ಹೊರ ಬಂದರೇ ಗುಂಡೇಟು ಎನ್ನುವಂತಹ ಮನೋಭಾವದ ರಾಜಕಾರಣಿಗಳ ಮಾತು, ಕೃತಿಗಳು ಭಯ ಹುಟ್ಟಿಸುತ್ತದೆ- ಸಂಕಷ್ಟದ ಸ್ಥಿತಿಗಳಲ್ಲಿರುವ ಹಸಿವಿನ ಭಯವಿರುವ ಮನುಷ್ಯರ ವರ್ತನೆಗಳಲ್ಲಿ ಏರುಪೇರಾಗುವುದು ಪ್ರಕೃತಿ ಸಹಜ, ಇದೊಂದು ತಾತ್ಕಾಲಿಕ ಸ್ಥಿತಿಯಾಗಿದ್ದು ಹೊಂದಾಣಿಕೆಯನ್ನು ಪಡೆಯಲು ಬೇಕಾದಂತಹ ಮನದ ಬಲವನ್ನು ಕ್ರೋಢೀಕರಿಸುವ ಅವಧಿಯಾಗರುತ್ತದೆ. ಇದನ್ನು ಅರ್ಥಮಾಡಿಕೊಳ್ಳಲು ಇಚ್ಛಿಸದಿರುವವರು ಮುಂಚೂಣಿಯಲ್ಲಿದ್ದು ಮತ್ತೊಂದು ರೀತಿಯ ಸಾಮೂಹಿಕ ಆತಂಕ, ಅಪಮಾನದ ಸ್ಥಿತಿಯನ್ನು ಮೂಡಿಸುತ್ತಿರುವುದು ದುರಂತದ ಸಂಗತಿ.

ಅತ್ಯುತ್ತಮ ನಾಯಕರಲ್ಲಿ ಮಾನವೀಯತೆಯೇ ಪ್ರಧಾನವಾಗಿರುವುಂತಹ ವ್ಯಕ್ತಿತ್ವದ ಲಕ್ಷಣಗಳು ಅತ್ಯಮೂಲ್ಯ ಸರಕಾಗಿ ಉಳಿದಿರುತ್ತದೆ. ಈ ಕಾರಣದಿಂದಲೇ ಆಧುನಿಕ ನಿರ್ವಹಣಾಶಾಸ್ತ್ರವು ನಾಯಕತ್ವದ ರೀತಿಗಳಲ್ಲಿ ಸಾಕ್ಷಾತ್ಕಾರದ ಸ್ಥಿತಿಗಳ ಬಗ್ಗೆ ಒತ್ತಿ ಹೇಳಿರುವುದು. ಸಾಕ್ಷಾತ್ಕಾರವನ್ನು ಪಡೆದ ವ್ಯಕ್ತಿಗಳ ಜೀವನ ಶೈಲಿಯೇ ಒಂದು ವಿಸ್ಮಯ ಎನ್ನುವ ಮಾತುಗಳೂ ಸಾಮಾನ್ಯವೇ. ಒಂದು ದೃಷ್ಟಿಯಲ್ಲಿ ಇಂತಹದೊಂದು ಅಭಿಪ್ರಾಯ ಸತ್ಯಕ್ಕೆ ಹತ್ತಿರವಾದುದು ಎನ್ನಬಹುದು. ಆದರೆ ಜೀವನ ಶೈಲಿಯಲ್ಲಿ ವಿಭಿನ್ನತೆ ಇರುವುದೇ ಹೊರತು ವಿಕೃತಿಯಾಗಲೀ, ವಿರೋಧವಾಗಲೀ ಇರುವುದಿಲ್ಲ. ತಮ್ಮ ಆಲೋಚನೆಗಳ ಸೆಳೆತಕ್ಕೆ ಸದಾ ಒಳಗಾಗಿರುವುದರಿಂದಲೇ ಮೇಲ್ನೋಟದ ಉಡುಪು, ವೈಯಾರ, ಅಂದಚೆಂದಗಳತ್ತ ಗಮನ ಹರಿಯುವುದಿಲ್ಲ. ಒಳಗಿನ ಶಕ್ತಿಗಳನ್ನು ಹಿಡಿತಕ್ಕೆ ತಂದುಕೊಳ್ಳುವ ಪ್ರಯತ್ನದಲ್ಲಿ ಸದ್ಯದ ಪರಿಸರ, ರೀತಿ, ರಿವಾಜುಗಳತ್ತ ಗಮನ ಹೋಗದಿರುವುದೇ ಸಾಮಾನ್ಯ.

ಬಹಳ ಮುಖ್ಯವಾದ ಅಂಶವೆಂದರೆ ಬಹುಜನರ ಜೀವನೋದ್ದೇಶಗಳನ್ನು ಸಫಲಗೊಳಿಸುವ ಪ್ರಯತ್ನದಲ್ಲಿ ಸಿಗಬಹುದಾದ ಅಧಿಕಾರ, ಮನ್ನಣೆ, ಮಾನ್ಯತೆಗಳಿಂದ ಅವರು ಪ್ರಭಾವಿತರಾಗುವುದಿಲ್ಲ. ಸಮುದಾಯದ ಒಳಮನಸ್ಸಿನ ಸಂಪೂರ್ಣ ನಕ್ಷೆಯನ್ನು ಗುರುತಿಸುವುದೇ ಅವರ ಹೆಬ್ಬಯಕೆ. ಮನಸ್ಸಿನ ಮೇಲೆ ಅವರಿಗಿರುವಷ್ಟು ಹಿಡಿತ, ಅರಿವು ಸಾಮಾನ್ಯರಲ್ಲಿ ಇರದು. ಪ್ರೀತಿ, ವಿಶ್ವಾಸಗಳನ್ನು ವ್ಯಕ್ತಪಡಿಸುವುದರಲ್ಲಿಯೂ ಹಿಂದೆ ಬಿದ್ದಿರುವುದಿಲ್ಲ. ಸೋಗು, ಮುಖವಾಡವಿರದ ಮುಗ್ಧ ಮನಸ್ಸಿನ ಪ್ರೇಮ, ವಾತ್ಸಲ್ಯದ ವರ್ತನೆಗಳು, ಮೋಡಿ ಹಿಡಿಸುವಂತಹ ಸವಿನುಡಿಗಳಾಗಿರದೇ, ಸಹಜವಾಗಿ ಹರಿದು ಬರುತ್ತದೆ. ಹಾಗೆಯೇ ಇಂತಹದೊಂದು ಭಾವವನ್ನು ಸಂದರ್ಭಗನುಗುಣವಾಗಿಯಾಗಲೀ, ನೆಪಮಾತ್ರಕೆ ಆಗಲೀ ವ್ಯಕ್ತಪಡಿಸಲು ಅಶಕ್ತರಾಗಿರುತ್ತಾರೆ. ಮಾನವೀಯತೆಯನ್ನು ಸದಾಕಾಲ ಗೌರವಿಸುವ ಸ್ವಭಾವ ಅವರಲ್ಲಿ ಸದಾ ಪ್ರಸನ್ನವಾಗಿರುತ್ತದೆ.

ಆದರೆ ಇಂದಿನ ಅನಾರೋಗ್ಯ ಉಂಟುಮಾಡುತ್ತಿರುವ ತುರ್ತುಸ್ಥಿತಿಯಲ್ಲಿ ಮುಂದಾಳುಗಳ ದರ್ಪ, ದೌರ್ಜನ್ಯದ ವರ್ತನೆಗಳು ಮಾತು, ಕೃತಿಗಳಾಗಿ ಹೊರಬರುತ್ತಿರುವುದು ಅತಿಶಯವಲ್ಲವೆನೋ ಎನಿಸುತ್ತದೆ. ಮನೋವಿಜ್ಞಾನದ ಅತಿ ಕುಖ್ಯಾತ ಪ್ರಯೋಗ ಒಂದರತ್ತ ಗಮನ ಹರಿಸಿದಾಗ. ಅಮೆರಿಕದ ಮನೋವಿಜ್ಞಾನಿ ಜಿಂರ್ಬಾಡೋ ಎಂಬಾತ ಕೈಗೊಂಡ “ಸೆರೆಮನೆ ಪ್ರಯೋಗ” (ಪ್ರಿಸನ್‌ ಎಕ್ಸ್​ಪಿರಿಮೆಂಟ್)ದಲ್ಲಿ ಉತ್ತಮ ವ್ಯಕ್ತಿತ್ವದ ಲಕ್ಷಣಗಳನ್ನು ಪ್ರದರ್ಶಿಸಿದವರೂ ಕೂಡ ಅಧಿಕಾರವನ್ನು ಚಲಾಯಿಸುವ ಮುಕ್ತ ಅವಕಾಶ ಸಿಕ್ಕಿದಾಗ ಮೊದಲು ವ್ಯಕ್ತಪಡಿಸುವುದೇ ದರ್ಪ ಮತ್ತು ದೌರ್ಜನ್ಯಗಳನ್ನು.

ಮನೋವಿಜ್ಞಾನದ ಈ ಪ್ರಯೋಗವನ್ನು 1971 ರ ಸಮಯದಲ್ಲಿ ಅಮೆರಿಕದ ಸ್ಟ್ಯಾಂಡ್‌ಫೋರ್ಡ್‌ ವಿಶ್ವವಿದ್ಯಾಲಯದ ಆವರಣದಲ್ಲಿಯೇ ನಡೆಸಲಾಗಿತ್ತು. ಈ ಪ್ರಯೋಗದ ಘನೋದ್ದೇಶಗಳಲ್ಲಿ ಒಂದೆಂದರೆ ಸೆರೆಮನೆಯ ವಾತಾವರಣದಲ್ಲಿ ಕೈದಿ ಮತ್ತು ಸೆರೆಮನೆ ಅಧಿಕಾರಿಗಳಂತೆ ವರ್ತಿಸುವಂತೆ ಅಭಿನಯಿಸುವವರು ನಿಜವಾಗಿಯೂ ತಮ್ಮ ಮೂಲ ಸ್ವಭಾವ, ನಡೆನುಡಿಗಳನ್ನು ಬದಲಾಯಿಸಿಕೊಂಡುಬಿಡುವರೆ ಎನ್ನುವುದಾಗಿತ್ತು. ಆಯ್ದ 24 ಯುವಜನರು ಎರಡು ವಾರಗಳ ಕಾಲ ಕೃತಕವಾಗಿ ನಿರ್ಮಿಸಲಾಗಿದ್ದ ಸೆರೆಮನೆಯಲ್ಲಿ ಕೈದಿಗಳು ಮತ್ತು ಸೆರೆಮನೆ ಗಾರ್ಡ್‌ಗಳಂತೆ ವರ್ತಿಸುವಂತೆ ತಿಳಿಸಲಾಗಿತ್ತು. ಈ ಪ್ರಯೋಗಕ್ಕೆ ಧನದ ಸಹಾಯ ಒದಗಿ ಬಂದಿದ್ದು ಅಮೆರಿಕದ ನೌಕಾಪಡೆಗೆ ಸಂಬಂಧಿಸಿದ ಸಂಸ್ಥೆಯೊಂದರಿಂದ. ಪ್ರಯೋಗದಲ್ಲಿ ಭಾಗವಹಿಸಿದ ಯುವಜನರಿಗೆ ಸಂಭಾವನೆಯನ್ನೂ ಸಹ ನೀಡಲಾಗಿತ್ತು. ಪ್ರಯೋಗದ ಉದ್ದೇಶವೇನೆಂಬುದು ಯುವಜನರಾರಿಗೂ ತಿಳಿಸಿರಲಿಲ್ಲ. ಅವರೆಲ್ಲನ್ನು ವಿಶ್ವವಿದ್ಯಾಲಯದ ಗ್ರಂಥಾಲಯದ ನೆಲ ಮಹಡಿಯಲ್ಲಿ ರಚಿಸಲಾಗಿದ್ದ ಸೆರೆಮನೆಯಲ್ಲಿ (ಅವರಿಗೆ ಜಾಗ ಯಾವುದೆಂದು ತಿಳಿಯದಂತೆ) ತಂದು ಇರಿಸಲಾಗಿತ್ತು. ಪ್ರಯೋಗ ಆರಂಭವಾದ ದಿನ ಗಾರ್ಡುಗಳು ಸಂಭಾವಿತರಂತೆ ವರ್ತಿಸಿದ್ದರು, ಮತ್ತು ಕೈದಿಗಳು ಸೆರೆಮನೆಯ ಸಣ್ಣ ಕೋಣೆಯಲ್ಲಿರುವ ಅಪರಾಧಿಗಳು ಎನ್ನುವಂತಿದ್ದರು.

ಎರಡನೆಯ ದಿವಸ ಕೈದಿಗಳಿಗೆ ಹಿಂಸೆ ನೀಡುವುದು ಆರಂಭವಾಯಿತು. ನಿದ್ದೆಯ ಸಮಯದಲ್ಲಿ ಸದ್ದು ಮಾಡಿ ಎಚ್ಚರಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಲಾಠಿಯಿಂದ ಹೊಡೆಯುವುದು, ಕೈದಿಗಳು ತಿನ್ನುತ್ತಿರುವ ಆಹಾರದ ಮೇಲೆ ಉಗುಳುವುದು, ಸ್ವಚ್ಛಗೊಳಿಸಿದ ಹಾಸಿಗೆಯನ್ನು ಗಲೀಜು ಮಾಡುವುದು, ಬರಿಯ ಕೈಯಲ್ಲಿ ಶೌಚಾಲಯವನ್ನು ಸ್ವಚ್ಛಗಳೊಸುವಂತಹ ಕಾರ್ಯಗಳನ್ನು ಅತಿ ದರ್ಪ, ದೌರ್ಜನ್ಯ, ಅಮಾನವೀಯತೆಯಿಂದ ಕಾವಲು ಸಿಬ್ಬಂದಿ ಮಾಡಿದ್ದರು. ಪ್ರಯೋಗ ನಾಲ್ಕನೆಯ ದಿನ ತಲುಪುತ್ತಿದ್ದಂತೆಯೇ ಬಹುತೇಕ ಕೈದಿಗಳು ಮಾನಸಿಕ ಸಮಸ್ಯೆಗಳಿಗೆ ಒಳಗಾಗಿದ್ದು, ಖಿನ್ನತೆ, ತೀವ್ರ ಅಸಹಾಯಕತೆಗೆ ಒಳಗಾಗಿದ್ದರು.

ಈ ಎಲ್ಲಾ ವರ್ತನೆಗಳನ್ನು ವೀಕ್ಷಕರಾಗಿ ಮನೋವಿಜ್ಞಾನಿ ಜಿಂರ್ಬಾಡೋ ಕ್ಯಾಮರಾ ಮೂಲಕ ಗಮನಿಸಿದ್ದರು. ತಮ್ಮ ಪ್ರಯೋಗ ಯಶಸ್ವಿಯಾಗಿದೆ ಎಂದು ಅತಿ ಹೆಮ್ಮೆಯಿಂದ ಗೆಳತಿಯೊಬ್ಬರಿಗೆ, ಅದುವರೆವಿಗೆ ಸಂಗ್ರಹಿಸಲಾಗಿದ್ದ, ದೃಶ್ಯಾವಳಿಗಳನ್ನು ತೋರಿಸಿದಾಗ ದಿಗ್ಬ್ರಮೆಗೊಂಡ ಆಕೆ ಮನೋವಿಜ್ಞಾನಿಯ ಅಮಾನವೀಯ ಪ್ರಯೋಗವನ್ನು ಟೀಕಿಸಿ ತಕ್ಷಣದಲ್ಲಿ ಪ್ರಯೊಗವನ್ನು ನಿಲ್ಲಿಸುವಂತೆ ಆಗ್ರಹ ಪಡಿಸಿದರಲ್ಲದೇ ಸಾರ್ವಜನಿಕರ ಗಮನಕ್ಕೂ ತರುವುದಾಗಿ ತಿಳಿಸಿದ್ದಳು. ಈ ಬೆಳವಣಿಗೆಯಿಂದಾಗಿ ಎರಡು ವಾರಗಳ ಕಾಲ ನಡೆಯಬೇಕಿದ್ದ ಪ್ರಯೋಗವನ್ನು ಆರನೆಯ ದಿನವೇ ನಿಲ್ಲಿಸಲಾಯಿತು. ನಂತರದ ದಿನಗಳಲ್ಲಿ ಈ ಪ್ರಯೊಗವನ್ನು ಆಧರಿಸಿದ ಚಲನಚಿತ್ರ, ಮತ್ತು ಸಾಕ್ಷ್ಯ ಚಿತ್ರ ಬಿಬಿಸಿ೦ ನಂತರದಲ್ಲಿ ಹೊರಬಂತು. ಆದರೆ ಈ ಪ್ರಯೋಗವು ಸ್ಪಷ್ಟವಾಗಿ ತಿಳಿಸಿದ್ದೇನೆಂದರೆ, ಕೆಲವರಿಗೆ ಅಧಿಕಾರ ಕೈಗೆ ಸರಾಗವಾಗಿ ಬಂದಾಗ ಅದನ್ನು ದುರುಪಯೋಗ ಪಡಿಸಿಕೊಳ್ಳುವಂತಹ ಸ್ವಭಾವ ಎಲ್ಲಿಂದಲೋ ತಕ್ಷಣ ಬಂದುಬಿಡುತ್ತದೆ ಎನ್ನುವುದು.

ಬಹುಶಃ ಇಂದಿನ ಪರಿಸ್ಥಿತಿಯಲ್ಲಿ ನಾವು ಕಾಣುತ್ತಿರುವುದು ಇಂತಹ ವರ್ತನೆಗಳನ್ನೇ. ನೆರವು ನೀಡುವುದರ ಮೂಲಕ ಸಾಂತ್ವನ ಹೇಳಿ, ಜನರಲ್ಲಿ ಮೂಡಿರುವ ಅಸಹಾಯಕತೆ, ಹತಾಶೆಯನ್ನು ದೂರ ಸರಿಸದೇ ಕೋಲು, ಕೋವಿಗಳ ಮೂಲಕ, ರೋಗದ ಭಯದಿಂದ ಮೊದಲೇ ಸೊರಗುತ್ತಿರುವವರನ್ನು, ಮತ್ತಷ್ಟು ಆತಂಕಕ್ಕೆ ಒಳಪಡಿಸುವುದು ಅಮಾನವೀಯ ಎನಿಸುವುದಿಲ್ಲವೆ? ಇಂದು ನಮ್ಮೆದುರಿಗಿರುವ ಅನೇಕ ಮುಂದಾಳುಗಳಲ್ಲಿ ಇಂತಹ ವರ್ತನೆಗಳೇ ಪ್ರಧಾನವಾಗಿ ಗೋಚರಿಸುತ್ತಿರುವುದು ಪ್ರಜಾಪ್ರಭುತ್ವದ ದೊಡ್ಡ ದೌರ್ಭಾಗ್ಯ.

ಲೇಖಕರು: ಡಾ. ಅ.ಶ್ರೀಧರ, ಮನೋವಿಜ್ಞಾನಿ
First published: