ಬೆಂಗಳೂರು: ಹಿಂದಿನ ಸಿಎಜಿ ವರದಿಯು (CAG Report) ಬೆಂಗಳೂರು ರಸ್ತೆಗಳು (Bengaluru Roads) ಹೆಚ್ಚಿನ ಅಪಾಯಕಾರಿ ಎಂದು ವರದಿ ಮಾಡಿತ್ತು. ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆ ಕುರಿತು ಭಾರತದ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧಕರು ಈ ವರದಿ ಬಿಡುಗಡೆ ಮಾಡಿತ್ತು. ಈ ವರದಿಯಲ್ಲಿ ಬೆಂಗಳೂರು ರಸ್ತೆಗಳು ತುಂಬಾ ಅಪಾಯಕಾರಿ ಎಂದು ಉಲ್ಲೇಖಿಸಿತ್ತು. ಸಿಲಿಕಾನ್ ಸಿಟಿಯ ಮೂಲಭೂತ ಸಮಸ್ಯೆಗಳಲ್ಲಿ (Basic Facility) ರಸ್ತೆಗಳು ಪ್ರಮುಖವಾಗಿವೆ. ಐಟಿ ಹಬ್ ಆಗಿರುವ ಹೈಟೆಕ್ ಸಿಟಿಯಲ್ಲಿ ರಸ್ತೆಗಳದ್ದು ದೊಡ್ಡ ಅವಾಂತರ. ರಸ್ತೆಗಳಲ್ಲಿ ಹೊಂಡ-ಗುಂಡಿಗಳೇ ಹೆಚ್ಚಿದ್ದು (Bengaluru Potholes), ಪ್ರತಿಯೊಬ್ಬ ಪ್ರಯಾಣಿಕನು ಸರ್ಕಾರ, ಬಿಬಿಎಂಪಿಗೆ (Government And BBMP) ಹಿಡಿ ಶಾಪ ಹಾಕದೇ ಓಡಾಡುವುದಿಲ್ಲ.
ರಸ್ತೆ ಗುಂಡಿಗಳದ್ದು ಒಂದು ಕಾಟವಾದರೆ, ಅಭಿವೃದ್ಧಿ ಹೆಸರಲ್ಲಿ ಗಲ್ಲಿಗಲ್ಲಿಯಲ್ಲೂ ರಸ್ತೆಗಳನ್ನು ಮುಚ್ಚಿರುತ್ತಾರೆ. ಮೆಟ್ರೋ ಕಾಮಗಾರಿಯಿಂದಾಗಿಯಂತೂ ಬೆಂಗಳೂರು ರಸ್ತೆಗಳು ಇನ್ನಷ್ಟು ಹದಗೆಟ್ಟಿವೆ ಎನ್ನಬಹುದು. ಇದು ಬೆಂಗಳೂರಿನ ಎಲ್ಲಾ ಏರಿಯಾಗಳ ಸಮಸ್ಯೆಯಾಗಿದೆ.
ಕೋಟಿ ಕೋಟಿ ತೆರಿಗೆ ಕಟ್ಟಿದರೂ ಇಲ್ಲ ಉತ್ತಮ ರಸ್ತೆ
ಇನ್ನೂ ಬೆಂಗಳೂರಿನ ಬಾಣಸವಾಡಿ ವಾರ್ಡ್ನಲ್ಲೂ ನಿವಾಸಿಗಳದ್ದು ಇದೇ ಗೋಳು. ಕೋಟಿ-ಕೋಟಿ ತೆರಿಗೆ ಕಟ್ಟುತ್ತೇವೆ ಆದರೆ ನಾವು ಓಡಾಡುವ ರಸ್ತೆಗಳೇ ಚೆನ್ನಾಗಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಅಧಿಕಾರಿಗಳ ವಿರುದ್ಧ ಬಾಣಸವಾಡಿ ನಿವಾಸಿಗಳು ಗರಂ
ಪಾಲಿಕೆಗೆ 18.68 ಕೋಟಿ ರೂ. ತೆರಿಗೆ ಪಾವತಿಸುವ ಬಾಣಸವಾಡಿ ವಾರ್ಡ್ನ ನಿವಾಸಿಗಳು ವಾರ್ಡ್ನ ರಸ್ತೆಗಳ ಬಗ್ಗೆ ದೂಷಣೆ ಮಾಡುತ್ತಿದ್ದಾರೆ. ಅಧಿಕಾರಿಗಳು ಕೂಡಲೇ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಾರ್ಡ್ನ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿವೆ ಮತ್ತು ಕಳಪೆ ಮಟ್ಟದ ಟಾರ್ನಿಂದ ಕೂಡಿವೆ ಎಂದು ಸುದ್ದಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಈ ರಸ್ತೆಗಳಲ್ಲಿ ದಿನನಿತ್ಯ ವಾಹನ ಚಲಾಯಿಸುವುದೇ ಹರಸಾಹಸವಾಗಿ ಪರಿಣಮಿಸಿದೆ. ಅಧಿಕಾರಿಗಳು ಗುಂಡಿ ತುಂಬುವ ಕಾರ್ಯಗಳ ಮೇಲೆ ನಿಗಾ ವಹಿಸದೆ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ರಸ್ತೆಗಳನ್ನು ಸರಿ ಮಾಡುವುದು ಅವರ ಆದ್ಯತೆಯಾಗಿರಲಿಲ್ಲ' ಎಂದು ಒಎಂಬಿಆರ್ ಲೇಔಟ್ ನಿವಾಸಿ ಅಮಿತ್ ನಿಗ್ಲಿ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ.
ಬಾಣಸವಾಡಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ
ಬಾಣಸವಾಡಿಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ ಎಂದು ಜನ ಆರೋಪಿಸಿದ್ದಾರೆ. ಅತಿಕ್ರಮಿಸಿದ ಕಾಲುದಾರಿಗಳು, ಕತ್ತರಿಸದ ಮರಗಳು ನಿವಾಸಿಗಳಿಗೆ ಇನ್ನಷ್ಟು ಸಂಕಷ್ಟ ತಂದಿವೆ ಎಂದಿದ್ದಾರೆ.
ಬೀದಿದೀಪ ಇಲ್ಲದಿರುವುದರಿಂದ ರಸ್ತೆಗಳಲ್ಲಿ ಒಬ್ಬೊಬ್ಬರೇ ಓಡಾಡುವುದು ಸಹ ಕಷ್ಟವಾಗಿದೆ ಎನ್ನುತ್ತಾರೆ ನಿವಾಸಿಗಳು. ಈ ಕುರಿತು ಹಲವು ಬಾರಿ ಬಿಬಿಎಂಪಿಗೆ ದೂರು ನೀಡಿದರೂ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ, ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿಲ್ಲ. ದೂರು ಕೊಟ್ಟರೆ ಸ್ವಲ್ಪ ಕಾಯಿರಿ ಎಂದು ಸುಮ್ಮನೇ ಸಮಜಾಯಿಷಿ ನೀಡುತ್ತಾರೆ”ಎಂದು ಇನ್ನೊಬ್ಬ ಬಾನಸವಾಡಿ ನಿವಾಸಿ ಅಂಜು ಮೆನೇಜಸ್ ಹೇಳಿದರು.
''ಬಹಳ ವರ್ಷಗಳಿಂದ ಬೀದಿದೀಪಗಳನ್ನು ಬದಲಾಯಿಸಿಲ್ಲ. ಇದು ಕಳ್ಳತನ, ಸುಲಿಗೆಯಂತಹ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿದೆ" ಎಂದು ಅಂಜು ತಿಳಿಸಿದರು.
ವಾರ್ಡ್ನಲ್ಲಿ ಕೆಲಸ ಮಾಡಲು ಎಂಜಿನಿಯರ್ಗಳ ಹಿಂದೇಟು
ಹೆಸರು ಹೇಳಲು ಇಚ್ಛಿಸದ ಹಿರಿಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಯೊಬ್ಬರು, "ಯಾವುದೇ ಎಂಜಿನಿಯರ್ಗಳು ವಾರ್ಡ್ನಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ಮೂರು ತಿಂಗಳಿಂದ ವಾರ್ಡ್ಗೆ ಎಂಜಿನಿಯರ್ ಇಲ್ಲದ ಸಂದರ್ಭಗಳಿವೆ. ಆಗಾಗ ಅಧಿಕಾರಿಗಳನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಎಳೆದು ತರುತ್ತಿರುವ ನಾಗರಿಕರು ಅಧಿಕಾರಿಗಳಲ್ಲಿ ಭಯ ಮೂಡಿಸಿದ್ದಾರೆ. ಅವರಲ್ಲಿ ಹಲವರು ಇಲ್ಲಿಂದ ವರ್ಗಾವಣೆ ಬಯಸಿದ್ದಾರೆ,'' ಎಂದು ಅಧಿಕಾರಿ ಹೇಳಿದರು.
ಪದೇ ಪದೇ ದರೋಡೆಯಂತಹ ಘಟನೆಗಳು ಮತ್ತು ತಡರಾತ್ರಿ ವಾಹನಗಳ ಸಂಚಾರದಿಂದ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. “ನಾವು ಪದೇ ಪದೇ ರಾತ್ರಿ ಗಸ್ತು ತಿರುಗುವಂತೆ ಪೊಲೀಸರಿಗೆ ಪತ್ರ ಬರೆದಿದ್ದೇವೆ. ಅವರು ತಮ್ಮ ಕೈಲಾದದ್ದನ್ನು ಮಾಡುವುದಾಗಿ ಭರವಸೆ ನೀಡಿದ್ದರೂ, ಈ ಬಗ್ಗೆ ಏನೂ ಕ್ರಮ ತೆಗೆದುಕೊಂಡಿಲ್ಲ, ”ಎಂದು ಮತ್ತೊಬ್ಬ ನಿವಾಸಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ