3 ವರ್ಷಗಳಿಂದ ಪತ್ರ ನೀಡದೆ ಸತಾಯಿಸಿದ್ದ ಪೋಸ್ಟ್​ಮನ್​​; ಈತನಿಂದ ಕೆಲಸ ಕಳೆದುಕೊಂಡವರೆಷ್ಟೋ ಮಂದಿ..!

ಪತ್ರ ಬರುವುದು ಸ್ವಲ್ಪ ತಡವಾದರೂ ಪ್ರತಿದಿನ ಅಂಚೆಯಣ್ಣನನ್ನು ಕೇಳುತ್ತಿರುತ್ತೇವೆ. ಆದರೆ ಕೊಪ್ಪಳದಲ್ಲೊಬ್ಬ ಪೋಸ್ಟ್​ಮನ್​ ಜನರಿಗೆ ತಲುಪಿಸಬೇಕಾದ ಅಂಚೆಪತ್ರಗಳನ್ನು ಸುಮಾರು 3 ವರ್ಷಗಳಿಂದ ಕೊಡದೇ ಕರ್ತವ್ಯ ಲೋಪ ಎಸಗಿದ್ದಾನೆ.

Latha CG | news18-kannada
Updated:November 12, 2019, 6:40 PM IST
3 ವರ್ಷಗಳಿಂದ ಪತ್ರ ನೀಡದೆ ಸತಾಯಿಸಿದ್ದ ಪೋಸ್ಟ್​ಮನ್​​; ಈತನಿಂದ ಕೆಲಸ ಕಳೆದುಕೊಂಡವರೆಷ್ಟೋ ಮಂದಿ..!
ಅಂಚೆ
  • Share this:
ಕೊಪ್ಪಳ,(ನ.12): ಅಂಚೆ ಇಲಾಖೆ ಹಳ್ಳಿಯಿಂದ ದಿಲ್ಲಿಯವರೆಗೂ ತನ್ನ ಜಾಲವನ್ನು ಹರಡಿಕೊಂಡಿದೆ. ಜನರು ಸಂವಹನಕ್ಕಾಗಿ ಈಗಲೂ ಪತ್ರ ವ್ಯವಹಾರ ಮಾಡುತ್ತಾರೆ. ಸರ್ಕಾರ ಹಾಗೂ ಜನರ ನಡುವೆ ಸಂಪರ್ಕ ಸೇತುವೆಯಾಗಿಯೂ ಅಂಚೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ತಂತ್ರಜ್ಞಾನ ಮುಂದುವರೆದು ಸಂಪರ್ಕ ವೃದ್ಧಿಸಿದರೂ ಅಂಚೆಯಣ್ಣನ ಪತ್ರಕ್ಕಾಗಿ ಕಾಯುತ್ತೇವೆ. ಪತ್ರ ಬರುವುದು ಸ್ವಲ್ಪ ತಡವಾದರೂ ಪ್ರತಿದಿನ ಅಂಚೆಯಣ್ಣನನ್ನು ಕೇಳುತ್ತಿರುತ್ತೇವೆ. ಆದರೆ ಕೊಪ್ಪಳದಲ್ಲೊಬ್ಬ ಪೋಸ್ಟ್​ಮನ್​ ಜನರಿಗೆ ತಲುಪಿಸಬೇಕಾದ ಅಂಚೆಪತ್ರಗಳನ್ನು ಸುಮಾರು 3 ವರ್ಷಗಳಿಂದ ಕೊಡದೇ ಕರ್ತವ್ಯ ಲೋಪ ಎಸಗಿದ್ದಾನೆ.

ಹೌದು, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಗಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.  ಸುರೇಶ್ ತಳವಾರ ಎಂಬ ಪೋಸ್ಟ್​ಮನ್​ ಜನರಿಗೆ ತಲುಪಿಸಬೇಕಾದ ಅಂಚೆಪತ್ರಗಳನ್ನು ಸುಮಾರು 3 ವರ್ಷಗಳಿಂದ ಕೊಡದೇ ಸತಾಯಿಸಿರುವ ವ್ಯಕ್ತಿ. ಕಳೆದ ಮೂರು ವರ್ಷಗಳಿಂದ ಜನರಿಗೆ ಯಾವೊಂದು ಪತ್ರವನ್ನು ಕೊಡಲಿಲ್ಲ ಎಂದು ತಿಳಿದು ಬಂದಿದೆ.

ಶಿವಸೇನಾದಿಂದ ವಿಶ್ವಾಸ ದ್ರೋಹ; ರಾಜ್ಯ ಬಿಜೆಪಿ ನಾಯಕರ ಕಿಡಿ

ಸಂದರ್ಶನ ಪತ್ರ, ಉದ್ಯೋಗ ಪತ್ರ, ನೇಮಕ ಪತ್ರಕ್ಕಾಗಿ ಸಂಗನಗಾಳ ಗ್ರಾಮದ ಯುವಕರು ಪ್ರತಿದಿನ ಕಾಯುತ್ತಿದ್ದರು. ಇಂದು ಬರುತ್ತೆ, ನಾಳೆ ಬರುತ್ತೆ ಎಂಬ ನಿರೀಕ್ಷೆಯಿಂದ ದಿನನಿತ್ಯ ಅಂಚೆಯಣ್ಣನನ್ನು ಕೇಳುತ್ತಿದ್ದರು. ಆದರೆ ಎಷ್ಟು ಬಾರಿ ಕೇಳಿದರೂ ಪೋಸ್ಟ್​​ಮನ್​ ಸುರೇಶ್​ ಮಾತ್ರ ಯಾವ ಪತ್ರವೂ ಬಂದಿಲ್ಲ ಎಂದು ಹೇಳುತ್ತಿದ್ದ ಎನ್ನಲಾಗಿದೆ.

ಇದರಿಂದ ಅನುಮಾನಗೊಂಡ ಯುವಕರು ಅಂಚೆ ಕಚೇರಿಯ ಬಾಗಿಲು ತೆಗೆದು ನೋಡಿದ್ದಾರೆ. ಆಗ ಗ್ರಾಮದ ಯುವಕರಿಗೆ ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ. ಬರೋಬ್ಬರಿ ಮೂರು ವರ್ಷಗಳ ಪತ್ರಗಳು ಅಂಚೆ ಕಚೇರಿಯಲ್ಲಿ ಪತ್ತೆಯಾಗಿವೆ. ಆಧಾರ್​ ಕಾರ್ಡ್​, ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ಹಲವಾರು ಯೋಜನೆಗಳ ಪತ್ರಗಳು ಧೂಳು ಹಿಡಿದಿದ್ದವು. ಪೋಸ್ಟ್​​ಮನ್​ ಸುರೇಶ್​ ಜನರಿಗೆ ಯಾವುದೇ ಪತ್ರ ಹಂಚದೆ ಅಂಚೆ ಕಚೇರಿಯಲ್ಲೇ ಕೊಳೆಯುವಂತೆ ಮಾಡಿದ್ದನು.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೋಸ್ಟ್​​ಮನ್​ ಸುರೇಶ್​​ಗೆ ಹಿಡಿಶಾಪ ಹಾಕಿದ್ದಾರೆ. ಅನೇಕ ಯುವಕರಿಗೆ ಸಮಯಕ್ಕೆ ಸರಿಯಾಗಿ ಉದ್ಯೋಗ ಪತ್ರ, ನೇಮಕ ಪತ್ರ ಸಿಗದೆ ಸಿಕ್ಕ ಅವಕಾಶ ಕಳೆದುಕೊಂಡಿದ್ದಾರೆ. ಅಂಚೆಯಣ್ಣ ಮಾಡಿದ ಮೋಸಕ್ಕೆ ಸ್ಥಳೀಯರು ಕೋಪಗೊಂಡು ಅಂಚೆ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.  ಗ್ರಾಮಕ್ಕೆ ಆಗಮಿಸಿದ  ಅಂಚೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ; ಪಕ್ಷಗಳ ಮುಂದಿರುವ ಆಯ್ಕೆ ಮತ್ತು ಪರಿಣಾಮವೇನು?
First published:November 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ