ಚಿತ್ರದುರ್ಗ(ಡಿ.07): ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾದ ಚಿತ್ರದುರ್ಗ (Chitradurga) ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ರೂಪಾ ಸಾವಿನ ಸುತ್ತ ಅನುಮಾನಗಳ ಹುತ್ತ ಬೆಳೆದಿದೆ. ಮೃತದೇಹ ಪರೀಕ್ಷೆ (Post mortem) ವೇಳೆ ತಲೆಗೆ ಗುಂಡು ತಗುಲಿ ಮೃತಪಟ್ಟಿದ್ದಾರೆ ಅನ್ನೋ ವಿಷಯ ಇಡೀ ದುರ್ಗದ ಜನರನ್ನ ಬೆಚ್ಚಿ ಬೀಳಿಸಿದೆ. ಡಾ.ರೂಪಾ ಮೃತಪಟ್ಟಿದ್ದು ಆತ್ಮಹತ್ಯೆಯೋ (Suicide), ಹತ್ಯೆಯೋ ಎಂಬ ತನಿಖೆ ಆರಂಭಿಸಿರುವ ಪೋಲೀಸರಿಗೆ ರೂಪಾ ಪತಿ ಡಾ.ಕೆ.ಜಿ.ರವಿ ನಡೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸಹಜ ಸಾವು ಎಂಬಂತೆ ಬಿಂಬಿಸಲು ಮುಂದಾದ ರೀತಿ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.
ಚಿತ್ರದುರ್ಗ ನಗರದ ವಿ.ಪಿ.ಬಡಾವಣೆಯ ಮನೆಯಲ್ಲಿ ಡಾ.ರೂಪಾ ಅವರು ಸೋಮವಾರ ಅನುಮಾಸ್ಪದವಾಗಿ ಸಾವನ್ನಪ್ಪಿದ್ದರು. ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಬೆಳಿಗ್ಗೆ 8 ಗಂಟೆಯ ವೇಳೆಗೆ ಪುತ್ರ ಗಮನಿಸಿ ಎರಡನೇ ಮಹಡಿಯಲ್ಲಿದ್ದ ತಂದೆ ಡಾ.ರವಿಗೆ ಮಾಹಿತಿ ನೀಡಿದ್ದಾನೆ. ವಿಷಯ ತಿಳಿದ ರವಿ ಕೂಡಲೇ ಧಾವಿಸಿ ಪತ್ನಿಯ ದೇಹವನ್ನು ಪರಿಶೀಲಿಸಿದ್ದಾರೆ, ತಲೆಯಲ್ಲಿ ತೀವ್ರ ರಕ್ತಸ್ರಾವ ಆಗಿದ್ದರಿಂದ ಕೂಡಲೇ. ತುರುವನೂರು ರಸ್ತೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಮೃತದೇಹ ಸಾಗಿಸಿದ್ದಾರೆ. ಮನೆಯಲ್ಲಿ ಕಾಲುಜಾರಿ ಬಿದ್ದು ತಲೆಗೆ ಪೆಟ್ಟುಬಿದ್ದು ಮೃತಪಟ್ಟಿದ್ದಾಗಿ ರವಿ ಅವರು ಮಾಹಿತಿ ನೀಡಿದ್ದರು. ಪೊಲೀಸರು ಹಾಗೂ ವೈದ್ಯರು ಕೂಡ ಇದನ್ನೇ ನಂಬಿದ್ದರು.
ಇದನ್ನೂ ಓದಿ: Murugha Mutt: ಮುರುಘಾ ಮಠದಲ್ಲಿ 4 ವರ್ಷದ ಹೆಣ್ಣು ಮಗು ಪತ್ತೆ, ಮೂರನೇ ಆರೋಪಿಗೆ ಜಾಮೀನು
ಆದರೆ ರೂಪಾ ಅವರ ಸಹೋದ್ಯೋಗಿಗಳು ಹಾಗೂ ಆಸ್ಪತ್ರೆಯ ವೈದ್ಯರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ತಲೆಯಲ್ಲಿ ರಂದ್ರವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಪರಿಶೀಲಿಸಿದಾಗ ಕೆಲ ಪ್ರಶ್ನೆಗಳು ಮೂಡಿವೆ, ಇದನ್ನ ಖಚಿತ ಪಡಿಸಿಕೊಳ್ಳೋಕೆ ಚಿತ್ರದುರ್ಗ ಎಸ್ಪಿ ಪರಶುರಾಮ್ ಬೆಂಗಳೂರಿನ ವಿಧಿ ವಿಜ್ಞಾನ ತಜ್ಞರ ತಂಡವನ್ನ ಸಂಪರ್ಕಿಸಿ ದುರ್ಗಕ್ಕೆ ಕರೆಸಿಕೊಂಡು ಪರಿಶೀಲನೆ ಮುಂದುವರೆಸಿದ್ರು. ಚಿತ್ರದುರ್ಗಕ್ಕೆ ಆಗಮಿಸಿದ್ದ FSL ಟೀಂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬಳಿಕ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿದ್ದ ಡಾ.ರೂಪಾ ಅವರ ಮೃತದೇಹದ ಬಗ್ಗೆ ಮಾಹಿತಿ ಕಲೆ ಹಾಕಿತು. ಬಳಿಕ ಶವಪರೀಕ್ಷೆ ನಡೆದಿದ್ದು ಇದು ಪಿಸ್ತೂಲ್ ನಿಂದಲೇ ಫೈರ್ ಮಾಡಿಕೊಂಡು ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ವೈದ್ಯೆ ರೂಪಾ ಸಾವನ್ನಪ್ಪಿದ್ದ ರೂಮಿನಲ್ಲಿ ಅವರು ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಸಿಕ್ಕಿದೆಯಂತೆ. ಆ ಪತ್ರದಲ್ಲಿ ಈ ಸಾವಿಗೆ ನಾನೇ ಕಾರಣ. ಹೃದಯಾಘಾತವಾಗಿ ಮೃತಪಟ್ಟಿದ್ದಾಗಿ ಹೇಳಿ, ಪೋಲೀಸರಿಗೆ ಈ ಕುರಿತು ಮಾಹಿತಿ ನೀಡಬೇಡಿ, ಎಂದು ಬರೆಯಲಾಗಿದೆಯಂತೆ. ತನ್ನ ಪತಿ ಡಾ.ರವಿಗೆ ಅಡ್ರೆಸ್ ಮಾಡಿ ಪತ್ರ ಬರೆದಿದ್ದ ರೂಪಾ, ನೀನು ನನಗೆ ಮೋಸ ಮಾಡಿದೆ, ನನ್ನಿಂದಲೂ ಕೆಲವು ತಪ್ಪುಗಳಾಗಿವೆ ಎಂದು ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ನಡುವೆ ಚಿತ್ರದುರ್ಗ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ರೂಪಾ ಪತ್ರ ಬರೆದಿದ್ದು ಕನ್ನಡದಲ್ಲಿ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ. ಯಾಕಂದ್ರೆ ಪತಿಯನ್ನು ಉದ್ದೇಶಿಸಿ ಬರೆದ ಪತ್ರದ ಕೊನೆಯಲ್ಲಿ ಇಂಗ್ಲಿಷ್ನಲ್ಲಿ ಸಹಿ ಹಾಕಿದ್ದಾರೆ. ಸ್ವತಃ ವೈದ್ಯೆಯಾಗಿರುವ ರೂಪಾ ಕನ್ನಡ ಅಕ್ಷರಗಳಲ್ಲಿ ಲೆಟರ್ ಬರೆದು ಇಂಗ್ಲೀಷ್ನಲ್ಲಿ ಸಹಿ ಮಾಡಿದ್ದಾರೆ ಎಂಬ ಸಹಜ ಅನುಮಾನ ವ್ಯಕ್ತವಾಗಿದೆ.
ಸದ್ಯ ಈ ಕುರಿತು ತನಿಖೆ ಮಾಡುತ್ತಿರುವ ಪೊಲೀಸರು ಹಸ್ತಾಕ್ಷರ ರೂಪಾ ಅವರದ್ದೇನಾ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಡಾ.ರೂಪಾ ಅವರ ತಲೆಗೆ ಬಿದ್ದಿರುವ ಗುಂಡು ರಿವಾಲ್ವಾರ್ನಿಂದ ಹಾರಿದ್ದು ಎಂಬುದು ಪ್ರಾಥಮಿಕ ತನಿಖೆಯಿಂದ ಖಚಿತವಾಗಿದೆ. ರಿವಾಲ್ವಾರ್ನಿಂದ ಹಾರಿದ ಗುಂಡು ಪಟಾಕಿ ಸಿಡಿದ ರೀತಿಯಲ್ಲಿ ಸದ್ದು ಮಾಡುತ್ತದೆ. ಮನೆಯಲ್ಲಿಯೇ ಇದ್ದ ಕುಟುಂಬದ ಸದಸ್ಯರಿಗೆ ಈ ಸದ್ದು ಕೇಳಿಲ್ಲ ಎಂಬುದು ಅನುಮಾನಾಸ್ಪದವಾಗಿದೆ.
‘ಡಾ. ರೂಪಾ ಸೋಮವಾರ ಬೆಳಿಗ್ಗೆ 6ಕ್ಕೆ ಹಾಸಿಗೆಯಿಂದ ಎದ್ದು. ಏರೊಬಿಕ್ಗೆ ತೆರಳಬೇಕಿತ್ತಂತೆ, ಆದರೆ ತರಬೇತುದಾರರು ರಜೆ ಹಾಕಿದ್ದರಿಂದ ಮನೆಯಲ್ಲಿಯೇ ಉಳಿದ್ದಿದ್ದರು ಎನ್ನಲಾಗಿದೆ. ಈ ವೇಳೆ ಪತಿ, ತನ್ನ ಎರಡನೇ ಮಗನ ಜೊತೆ ಲೆಮನ್ ಟೀ ಸೇವಿಸಿದ್ದರಂತೆ. ಬಳಿಕ ಪತಿ ಮನೆಯ ಎರಡನೇ ಮಹಡಿಯಲ್ಲಿದ್ದ ಜಿಮ್ಗೆ ತೆರಳಿದ್ದರು. 16 ವರ್ಷದ ಪುತ್ರ ಹಾಗೂ ಅತ್ತೆ ಮನೆಯಲ್ಲಿಯೇ ಇದ್ದರು. ರೂಪಾ ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಮೊದಲು ಕಂಡಿದ್ದು ಕಿರಿಯ ಪುತ್ರ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಲೆಯ ಬಲಭಾಗದಿಂದ ಹಾರಿದ ಗುಂಡು ಎಡಭಾಗದಿಂದ ಹೊರಗೆ ಬಂದಿದೆ. ಬೆಡ್ರೂಮಿನಲ್ಲಿದ್ದ ಕನ್ನಡಿ ಸಮೀಪದಲ್ಲಿದ್ದ ರೂಪಾ ಅವರ ತಲೆಯಿಂದ ಹೊರಗೆ ಬಂದ ಗುಂಡು ಗೋಡೆಗೆ ತಗುಲಿ ಟೇಬಲ್ ಮೇಲೆ ಬಿದ್ದಿದೆ. ಗುಂಡು ಹಾಗೂ ರಿವಾಲ್ವಾರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಇಂಗ್ಲೆಂಡ್ನಲ್ಲಿ ನಿರ್ಮಾಣವಾದ ರಿವಾಲ್ವರ್ ಆಗಿದ್ದು, ಡಾ.ರವಿ ಪರವಾನಗಿ ಹೊಂದಿದ್ದರು ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: Murugha Mutt: ಮುರುಘಾ ಮಠದಲ್ಲಿ 4 ವರ್ಷದ ಹೆಣ್ಣು ಮಗು ಪತ್ತೆ, ಮೂರನೇ ಆರೋಪಿಗೆ ಜಾಮೀನು
ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂಬಂತೆ ಗೋಚರವಾಗುತ್ತಿದ್ದು. ರೂಪಾ ಸಹೋದರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ತನಿಖೆಯ ಬಳಿಕ ನಿಜಾಂಶ ಹೊರಬರಲಿದೆ ಎಂದು ಎಸ್ಪಿ ಕೆ.ಪರಶುರಾಮ್, ಮಾಹಿತಿ ನೀಡಿದ್ದಾರೆ.
ಡಾ.ರೂಪಾ ಅವರು ಸರ್ಕಾರಿ ವೈದ್ಯರಾಗಿ ಚಿತ್ರದುರ್ಗ ತಾಲ್ಲೂಕಿನ ಹಲವೆಡೆ ಕಾರ್ಯನಿರ್ವಹಿಸಿದ್ದರು. ಜಿಲ್ಲಾ ಕುಷ್ಠರೋಗ, ಅಂಧತ್ವ ಹಾಗೂ ಮಾನಸಿಕ ರೋಗ ವಿಭಾಗದ ಅಧಿಕಾರಿಯಾಗಿದ್ದರು. ಕೀಲು ಮತ್ತು ಮೂಳೆ ತಜ್ಞರಾಗಿರುವ ಪತಿ ಡಾ.ಕೆ.ಜಿ.ರವಿ ಗಿರಿಶಾಂತ ಆರ್ಥೊ ಕೇರ್ ಸೆಂಟರ್ ನಡೆಸುತ್ತಿದ್ದರು. ಈ ನಡುವೆ ಕೃಷಿ, ಹೋಟೆಲ್ ಉದ್ಯಮಕ್ಕೆ ಕೈ ಹಾಕಿದ್ದ ಇವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು.
ನಗರದ ಹೊಳಲ್ಕೆರೆ ರಸ್ತೆಯಲ್ಲಿ ಹೋಟೆಲ್ ತೆರೆದಿದ್ದರು, ಆದರೇ ಅದರಿಂದ ನಷ್ಟ ಅನುಭವಿಸಿದ ಪರಿಣಾಮವಾಗಿ ಹೋಟೆಲ್ ಮುಚ್ಚಲಾಗಿತ್ತು, ಇಪ್ಪತೈದು ಎಕರೆ ದಾಳಿಂಬೆ ತೋಟ ಮಾಡಿ ಅದರಲ್ಲಿ ಬೆಳೆ ಬರುವ ವೇಳೆಗೆ ರೋಗ ಅರಡಿ ದಾಳಿಂಬೆ ಬೆಳೆಯೂ ಕೈಕೊಟ್ಟಿತ್ತು. ಇವೆಲ್ಲದರಿಂದ ಸರಿ ಸುಮಾರು 10-12 ಕೋಟಿ ಸಾಲ ಇವರ ಹೆಗಲ ಮೇಲಿತ್ತು.ಹಾಗಾಗಿ ಹೋಟೆಲ್, ಜಮೀನು ಆಸ್ಪತ್ರೆ ಮಾರಿ 9 ಕೋಟಿ ಸಾಲವನ್ನು ತೀರಿಸಲಾಗಿತ್ತು. ಇನ್ನೂ ₹ 3 ಕೋಟಿ ಬಾಕಿ ಇತ್ತು ಎಂದು ಡಾ.ರವಿ ಹೇಳಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ