ದೋಸ್ತಿ ಸರ್ಕಾರದಲ್ಲಿ ಖಾತೆಗಾಗಿ ಕಿತ್ತಾಟ: ಮಂತ್ರಿಗಿರಿ ಕಗ್ಗಂಟು ಮಧ್ಯೆ ‘ರೈತರ ಸಾಲಮನ್ನಾ’ ಮರೆತರಾ ಸಿಎಂ?


Updated:June 10, 2018, 8:06 PM IST
ದೋಸ್ತಿ ಸರ್ಕಾರದಲ್ಲಿ ಖಾತೆಗಾಗಿ ಕಿತ್ತಾಟ: ಮಂತ್ರಿಗಿರಿ ಕಗ್ಗಂಟು ಮಧ್ಯೆ ‘ರೈತರ ಸಾಲಮನ್ನಾ’ ಮರೆತರಾ ಸಿಎಂ?

Updated: June 10, 2018, 8:06 PM IST
-ಗಣೇಶ್​ ನಚಿಕೇತು, ನ್ಯೂಸ್​-18 ಕನ್ನಡ

ಬೆಂಗಳೂರು(ಜೂನ್​.10): ಜೆಡಿಎಸ್​ ಕಾಂಗ್ರೆಸ್​ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ, ಇಲ್ಲಿಯವರೆಗೂ ಒಂದಲ್ಲ ಒಂದು ರೀತಿಯ ಸಂಕಷ್ಟ ಎದುರಾಗುತ್ತಲ್ಲೇ ಇದೆ. ಕಾಂಗ್ರೆಸ್​ ಜೆಡಿಎಸ್​ನಲ್ಲಿ ಮಂತ್ರಿಗಿರಿ ಖಾತೆಗಳಿಗಾಗಿ ಕಿತ್ತಾಟ ನಡೆಯುತ್ತಿದ್ದು, ಒಂದೆಡ ಎಂ.ಬಿ ಪಾಟೀಲ್​ ಟೀಮ್​ ಮತ್ತೊಂದೆಡೆ ಶಾಸಕ ಸತೀಶ್​ ಜಾರಕಿಹೊಳಿ ತಂಡದಿಂದ ಬಂಡಾಯ ಮುಂದುವರೆದಿದೆ.

ಈ ಮಧ್ಯೆ 15 ದಿನಗಳ ಹಿಂದೆ ಕಾವೇರಿದ್ದ ರೈತರ ಸಾಲಮನ್ನಾ ವಿಚಾರ ಸಿಎಂ ಮರೆತ್ತಿದ್ದಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಸಾಲಮನ್ನಕ್ಕಾಗಿ ಹೋರಾಟಗಳು ಶುರುವಾಗಿದ್ದ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಅವರು, ವಿಧಾನಸೌಧದಲ್ಲಿ ರೈತಮುಖಂಡರ ಜೊತೆಗೆ ಸಭೆ ನಡೆಸಿದರು. ಸಭೆಯಲ್ಲಿ ರೈತರ ಸಲಹೆ ಸ್ವೀಕರಿಸಿದ ಬಳಿಕ ಕುಮಾರಸ್ವಾಮಿ ಅವರು, ಸಂಪೂರ್ಣ ಸಾಲಮನ್ನಾಕ್ಕೆ ಎರಡು ಸೂತ್ರಗಳನ್ನು ಮುಂದಿಟ್ಟರು.

15 ದಿನ ಅವಕಾಶ ನೀಡಿ : ‘ರಾಜ್ಯದ ಎಲ್ಲಾ ರೈತರು 15 ದಿನದ ಕಾಲಾವಕಾಶ ನೀಡಿ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆ ಪಡೆದು ಸಾಲಮನ್ನಾದ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತೇನೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡುತ್ತೇನೆ. ನಂತರ ಅಂತಿಮ ಆದೇಶ ಪ್ರಕಟಿಸಲಾಗುತ್ತದೆ’ ಎಂದು ಕುಮಾರಸ್ವಾಮಿ ಹೇಳಿದ್ದರು.

ಆದರೆ, ಸದ್ಯ ಮಂತ್ರಿಮಂಡಲ ರಚನೆಯಲ್ಲಿ ಸಿಲುಕಿರುವ ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ವಿಚಾರಗಳು ಮರೆತಿದ್ದಾರೆ ಎಂದು ಚರ್ಚೆ ನಡೆಯುತ್ತಿದೆ. ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಕಾರ್ಯವು ಆರಂಭವಾಗುತ್ತಿದ್ಧಂತೆ ಬಂಡಾಯದ ಬಿಸಿಯು ತಟ್ಟಲಾರಂಭಿಸಿದೆ.

ಮಂತ್ರಿಮಂಡಲ ಕಗ್ಗಂಟು: ಸಚಿವ ಸ್ಥಾನದಿಂದ ವಂಚಿತರಾಗಿರುವಂತಹ ಎಂ.ಬಿ. ಪಾಟೀಲ್ ಅವರು ಅಸಮಾಧಾನಗೊಂಡಿದ್ದು, ಅವರನ್ನು ಸ್ವತಃ ಹೈಕಮಾಂಡ್​ ರಾಹುಲ್​ ಗಾಂಧಿ ಮತ್ತು ಕಾಂಗ್ರೆಸ್​ ನಾಯಕ ಅಹಮ್ಮದ್ ಪಟೇಲ್​​​ ಸಮಾಧಾನಿಸುತ್ತಿದ್ದರೂ ಫಲಪ್ರದವಾದಂತೆ ಕಾಣಿಸುತ್ತಿಲ್ಲ.
Loading...

ಹಿಂದಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಅವರ ಹೆಸರನ್ನು ಸಚಿವ ಸ್ಥಾನದ ಪಟ್ಟಿಯಿಂದ ಕೈಬಿಡಲಾಗಿದೆ. ಹೀಗಾಗಿ ಎಂ.ಬಿ.ಪಾಟೀಲ್ ಅವರು ತೀವ್ರವಾಗಿ ನೊಂದಿದ್ದು ರಾಜೀನಾಮೆ ನೀಡಲು ಮುಂದಾಗಿದ್ದರು. ಅಲ್ಲದೇ ಅವರ ಬಳಿ 20 ಶಾಸಕರ ತಂಡವಿದೆ ಎಂದು ಬೆದರಿಕೆ ಹಾಕುತ್ತಿದ್ದರು.

ಇನ್ನೊಂದೆಡೆ ಸಚಿವ ಸ್ಥಾನ ಸಿಗದುದ್ದರ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡುವ ಸಾಧ್ಯತೆ ಹೆಚ್ಚಿದೆ. ತಮ್ಮ ಬೆಂಬಲಿಗರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ತೀರ್ಮಾನ ಪ್ರಕಟಿಸುವುದಾಗಿ ಘೋಷಿಸಲಾಗಿತ್ತು.

ಡಿಕೆಶಿ ಅಡ್ಡಿ: ಆರಂಭದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಡಿ.ಕೆ. ಶಿವ ಕುಮಾರ್ ಅಡ್ಡಿಯಾಗಿ ಪರಿಣಮಿಸಿದ್ದರು. ತಮಗೆ ಇಂಧನ ಖಾತೆಗಾಗಿ ಚೌಕಾಸಿ ನಡೆಸಿದ್ದರು. ಹಿಂದಿನ ಸರ್ಕಾರದಲ್ಲಿ ತಾವು ಜಾರಿಗೊಳಿಸಿದ ಏಷ್ಯಾದ ಅತಿದೊಡ್ಡ ಪಾವಗಡ ಸೌರ ವಿದ್ಯುತ್ ಪಾರ್ಕ್ ಅಪೂರ್ಣಗೊಂಡಿದ್ದು, ಅದು ಪೂರ್ಣಗೊಳಿಸಬೇಕು ಎನ್ನುವ ಆಸಕ್ತಿ ಹೊಂದಿದ್ದರು. ಆದರೆ, ರೇವಣ್ಣನ ಕಾರಣಕ್ಕೆ ಡಿಕೆಶಿಗೆ ಇಂಧನ ಖಾತೆ ಕೈ ತಪ್ಪಿತ್ತು.

ಜೆಡಿಎಸ್​ನಲ್ಲಿ ಸಿಎಸ್​ ಪುಟ್ಟರಾಜು ಮತ್ತು ಜಿ.ಟಿ ದೇವಗೌಡರು ಕೂಡ ತಮಗೆ ಪ್ರಬಲ ಖಾತೆ ನೀಡುವಂತೆ ಮುನಿಸಿಕೊಂಡಿದ್ದಾರೆ. ದೇವೆಗೌಡರ ನಿರ್ಧಾರದಿಂದ ಬೇಸತ್ತಿದ್ದಾರೆ ಎನ್ನಲಾಗಿದೆ. ಒಟ್ನಲ್ಲಿ ಜೆಡಿಎಸ್​ ಕಾಂಗ್ರೆಸ್​ನಲ್ಲಿ ಬಂಡಾಯ ಶಮನಗೊಳಿಸಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ರೈತರ ಸಾಲಮನ್ನಾ ವಿಚಾರ ಮುನ್ನಲೆಗೆ ಬಂದಿಲ್ಲ ಎಂದು ತಿಳಿದು ಬಂದಿದೆ.

ರೈತರ ಸಾಲಮನ್ನಾ: ರೈತಮುಖಂಡರ ಜೊತೆ ಸಭೆ ನಡೆಸಿದ್ದ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ಸಾಲಮನ್ನಾಕ್ಕೆ ಮುಂದಾಗಿದ್ದರು. ರೈತರಿಂದ ಅಗತ್ಯ ಮಾಹಿತಿ ಪಡೆದ ಬಳಿಕ ಸಾಲಮನ್ನಾ ಜಾರಿಗೊಳಿಸುವ ಸಂಬಂಧ ಸಿಎಂ ತ್ವರಿತವಾಗಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿದ್ದವು.

ಸಾಲ ಮನ್ನಾ ಹೇಗೆ ಜಾರಿ ಮಾಡಬೇಕು. ಕೇವಲ ಬೆಳೆ ಸಾಲ ಮನ್ನಾ ಮಾಡಬೇಕೆ, ಸಂಪೂರ್ಣ ಸಾಲ ಮನ್ನಾ ಮಾಡಬೇಕೆ ಎಂಬುದರ ಬಗ್ಗೆ ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ರಾಹುಲ್​ ಗಾಂಧಿ ಸಭೆ ನಡೆಸಬೇಕು ಎಂದು ಹೇಳಿದ್ದರು. ಇದಕ್ಕೆ ವಿಪಕ್ಷ ನಾಯಕ ಯಡಿಯೂರಪ್ಪನವರ ಒಪ್ಪಿಗೆ ಪಡೆಯಲು ಮುಂದಾಗಲಿದ್ದು, ಒಟ್ಟಿಗೆ ಸಂಪೂರ್ಣ ಸಾಲಮನ್ನಾ ಬಗ್ಗೆ ಅಂತಿಮ ತೀರ್ಮಾನ ಪ್ರಕಟಿಸಲಿದ್ದೇವೆ ಎನ್ನಲಾಗಿತ್ತು.

‘ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ. ರೈತರ ಸಾಲಮನ್ನಾ ಮಾಡಬೇಕಾಗಿರುವ ಕಾರಣ ಹಣ ಹೊಂದಿಸಬೇಕಿದೆ. ಅದರ ಮೇಲೆ ಬೃಹತ್‌ ಮೊತ್ತದ ಸಾಲ ಮನ್ನಾ ಮಾಡಲು, ಸಂಪನ್ಮೂಲ ಕ್ರೊಡೀಕರಣಕ್ಕಾಗಿ ಜನರ ಮೇಲೆ ತೆರಿಗೆ ಹೊರೆ ಹೆಚ್ಚಿಸಬೇಕಾಗುತ್ತದೆ’ ಎಂದು ಅಧಿಕಾರಿಗಳು ಕೂಡ ಸಿಎಂ ಗಮನಕ್ಕೆ ತಂದಿದ್ದರು.

ಆದರೆ ಅಂತಮವಾಗಿ ಸಿಎಂ ಕುಮಾರಸ್ವಾಮಿ ಅವರು, ಕೇಂದ್ರ ಸರ್ಕಾರದ ಪಾಲನ್ನು ಅವರ ಮೇಲೆ ಹಾಕಲು ಚಿಂತಿಸಿದ್ದು. ರಾಜ್ಯ ಮತ್ತು ಕೇಂದ್ರ ಸರ್ಕಾರ ಒಟ್ಟಿಗೆ ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಸಿದ್ದತೆ ನಡೆಸಿಕೊಳ್ಳಲು ಮುಂದಾಗಿದ್ಧಾರೆ ಎನ್ನಲಾಗಿದೆ. ಆದರೆ, ಮಂತ್ರಿಮಂಡಲ ಮಧ್ಯೆ ಸಿಎಂ ಮತ್ತು ಸಿದ್ದರಾಮಯ್ಯನವರು ಸಾಲಮನ್ನಾ ಸಂಬಂಧ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿವೆ ಮೂಲಗಳು.
First published:June 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...