• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬಿಎಸ್​ವೈಗೆ ತಲೆನೋವು ಮುಂದುವರಿಸಿದ ಜಾರಕಿಹೊಳಿ; ಖಾತೆ ಕಿತ್ತಾಟದ ಮಧ್ಯೆ ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಅನುಮಾನ

ಬಿಎಸ್​ವೈಗೆ ತಲೆನೋವು ಮುಂದುವರಿಸಿದ ಜಾರಕಿಹೊಳಿ; ಖಾತೆ ಕಿತ್ತಾಟದ ಮಧ್ಯೆ ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ ಅನುಮಾನ

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ರಮೇಶ್ ಜಾರಕಿಹೊಳಿಯೇ ಪ್ರಮುಖ ಕಾರಣರೆಂಬುದು ಯಡಿಯೂರಪ್ಪಗೆ ಗೊತ್ತಿದೆ. ಇಷ್ಟು ಪಟ್ಟು ಹಿಡಿದು ಕೂತಿರುವ ಅವರಿಗೆ ನಿರಾಸೆ ಮಾಡುವ ಸ್ಥಿತಿಯಲ್ಲಿ ಯಡಿಯೂರಪ್ಪ ಇಲ್ಲ. ಹಾಗೆಯೇ ಹೈಕಮಾಂಡ್ ಒತ್ತಡ ಎದುರಿಸುವ ಸ್ಥಿತಿಯಲ್ಲೂ ಇಲ್ಲ.

ಮುಂದೆ ಓದಿ ...
  • News18
  • 3-MIN READ
  • Last Updated :
  • Share this:

ಬೆಂಗಳೂರು(ಫೆ. 08): ತಿಂಗಳುಗಟ್ಟಲೆ ಅನಿಶ್ಚಿತತೆಯಿಂದ ಕೂಡಿದ್ದ ಸಂಪುಟ ವಿಸ್ತರಣೆಯ ಕೆಲಸವೇನೋ ಆಯಿತು. ವಲಸಿಗರಿಗೆ ಕೊಟ್ಟ ಮಾತನ್ನು ಮುಕ್ಕಾಲು ಪಾಲು ಉಳಿಸಿಕೊಂಡಿದ್ಧಾಯಿತು ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ನಿಟ್ಟುಸಿರು ಬಿಡುವಷ್ಟರಲ್ಲಿ ಈಗ ಖಾತೆ ಹಂಚಿಕೆ ಕಾರ್ಯವೂ ತಲೆನೋವು ಸೃಷ್ಟಿಸುತ್ತಿದೆ. ನೂತನ ಸಚಿವರು ತಮಗೆ ಇಂಥದ್ದೇ ಖಾತೆ ಬೇಕು ಎಂದು ಪಟ್ಟು ಹಿಡಿದು ಕೂತಿದ್ಧಾರೆ. ಆದರೆ, ಮುಖ್ಯಮಂತ್ರಿಗೆ ಎಲ್ಲಕ್ಕಿಂತ ಹೆಚ್ಚು ತಲೆನೋವು ತಂದಿರುವುದು ರಮೇಶ್ ಜಾರಕಿಹೊಳಿ ವಿಚಾರ.


ಗೋಕಾಕ್ ಶಾಸಕ ಹಾಗೂ ನೂತನ ಸಚಿವ ರಮೇಶ್ ಜಾರಕಿಹೊಳಿ ತಮಗೆ ‘ಜಲಸಂಪನ್ಮೂಲ’ ಖಾತೆಯೇ ಬೇಕು ಎಂದು ಹಠ ಹಿಡಿದಿದ್ಧಾರೆ. ಜಲಸಂಪನ್ಮೂಲ ಖಾತೆ ಅತ್ಯಂತ ಮಹತ್ವದ್ದಾಗಿದ್ದು ಅದಕ್ಕೆ ಕಾನೂನು, ಇಂಗ್ಲೀಷ್ ಮತ್ತು ಸಂವಹನದ ಪರಿಜ್ಞಾನ ಅಗತ್ಯವಿರುತ್ತದೆ. ರಮೇಶ್ ಜಾರಕಿಹೊಳಿ ಅವರಿಂದ ಅದನ್ನು ನಾಜೂಕಾಗಿ ನಿಭಾಯಿಸಲು ಸಾಧ್ಯವಾಗುವುದಿಲ್ಲ. ದಯವಿಟ್ಟು ಅವರಿಗೆ ಆ ಖಾತೆ ಕೊಡಲು ಅವಕಾಶ ನೀಡಬೇಡಿ ಎಂದು ಕೆಲ ಮೂಲ ಬಿಜೆಪಿಗರು ಹೈಕಮಾಂಡ್​ಗೆ ಮನವಿ ಮಾಡಿಕೊಂಡಿದ್ದರು. ಹೈಕಮಾಂಡ್ ಕೂಡ ಈ ಮಾತಿಗೆ ತಲೆ ಅಲ್ಲಾಡಿಸಿದೆಯಂತೆ. ಅಂತೆಯೇ, ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ ಮಾತ್ರ ಹಂಚಿಕೆ ಮಾಡಬೇಡಿ ಎಂದು ಬಿಎಸ್​ವೈಗೆ ಹೈಕಮಾಂಡ್ ಕಟ್ಟಪ್ಪಣೆ ಮಾಡಿದೆ ಎನ್ನುತ್ತವೆ ಮೂಲಗಳು.


ಇದನ್ನೂ ಓದಿ: ಬಿಜೆಪಿ ನಾಯಕರೆಲ್ಲಾ ನನ್ನ ಶಿಷ್ಯರು ಹೇಗಾಗುತ್ತಾರೆ?: ಸಿದ್ದರಾಮಯ್ಯ ಪ್ರಶ್ನೆ


ಯಡಿಯೂರಪ್ಪಗೆ ಈಗ ಸಂದಿಗ್ಧ ಸ್ಥಿತಿ ಏರ್ಪಟ್ಟಿದೆ. ಒಂದು ಕಡೆ ಹೈಕಮಾಂಡ್, ಮತ್ತೊಂದು ಕಡೆ ರಮೇಶ್ ಜಾರಕಿಹಳಿ, ಒಂದು ರೀತಿಯಲ್ಲಿ ಅಡಕತ್ತರಿಗೆ ಸಿಲುಕಿಕೊಂಡಿದ್ದಾರೆ ಯಡಿಯೂರಪ್ಪ. ನೀರಾವರಿ ಇಲಾಖೆಯನ್ನು ಅತ್ಯಂತ ಜವಾಬ್ದಾಯುತವಾಗಿ ನಿಭಾಯಿಸಬೇಕಾಗುತ್ತದೆ. ಬಹಳ ಮುಖ್ಯವಾಗಿರುವ ಜಲ ವಿವಾದಗಳು ಇರುತ್ತವೆ. ಆದ್ದರಿಂದ ಈ ಖಾತೆಯನ್ನು ನಿರ್ವಹಿಸುವುದು ಕಷ್ಟವಾಗಬಹುದು. ಬೇರೆ ಯಾವುದಾದರೂ ಪ್ರಮುಖ ಖಾತೆ ಕೊಡುತ್ತೇನೆಂದು ಯಡಿಯೂರಪ್ಪ ಎಷ್ಟು ಹೇಳಿದರೂ ರಮೇಶ್ ಜಾರಕಿಹೊಳಿ ಮಾತ್ರ ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ತಾನು ಯಾವುದೇ ಸಮಸ್ಯೆಗೆ ಎಡೆ ಮಾಡಿಕೊಡದಂತೆ ಖಾತೆ ನಿಭಾಯಿಸುತ್ತೇನೆ. ತನ್ನ ಮೇಲೆ ನಂಬಿಕೆ ಇಟ್ಟು ಖಾತೆ ಕೊಡಿ ಎಂದು ರಮೇಶ್ ಜಾರಕಿಹೊಳಿ ದುಂಬಾಲು ಬಿದ್ದಿದ್ದಾರೆ.


ಮೈತ್ರಿ ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ರಮೇಶ್ ಜಾರಕಿಹೊಳಿಯೇ ಪ್ರಮುಖ ಕಾರಣರೆಂಬುದು ಯಡಿಯೂರಪ್ಪಗೆ ಗೊತ್ತಿದೆ. ಇಷ್ಟು ಪಟ್ಟು ಹಿಡಿದು ಕೂತಿರುವ ಅವರಿಗೆ ನಿರಾಸೆ ಮಾಡುವ ಸ್ಥಿತಿಯಲ್ಲಿ ಯಡಿಯೂರಪ್ಪ ಇಲ್ಲ. ಹಾಗೆಯೇ ಹೈಕಮಾಂಡ್ ಒತ್ತಡ ಎದುರಿಸುವ ಸ್ಥಿತಿಯಲ್ಲೂ ಇಲ್ಲ.


ರಮೇಶ್ ಜಾರಕಿಹೊಳಿ ಜೊತೆಗೆ ಎಸ್.ಟಿ. ಸೋಮಶೇಖರ್, ಡಾ. ಕೆ ಸುಧಾಕರ್, ಬೈರತಿ ಬಸವರಾಜ್ ಅವರೂ ಕೂಡ ಯಡಿಯೂರಪ್ಪ ಬಳಿ ಪ್ರಬಲ ಖಾತೆಗೆ ಹಠ ಹಿಡಿದು ಕೂತಿದ್ದಾರೆ.


ಇದನ್ನೂ ಓದಿ: ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ - ಬೇರೆ ಭಾಷೆ ವಿಷಯದಲ್ಲಿ ನಾವು ಕಠಿಣವಾಗಿಯೇ ಇರಬೇಕು: ಸಿದ್ಧರಾಮಯ್ಯ


ಯಡಿಯೂರಪ್ಪಗೆ ತಲೆನೋವಾಗಿರುವ ಮತ್ತೊಬ್ಬರೆಂದರೆ ಮಹೇಶ್ ಕುಮಟಳ್ಳಿ. ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದ ಹತಾಶೆಯಲ್ಲಿರುವ ಅಥಣಿ ಶಾಸಕರನ್ನು ಸಮಾಧಾನಪಡಿಸಲು ಬಿಎಸ್​ವೈ ಹರಸಾಹಸ ಮಾಡಿದ್ಧಾರೆ. ಅವರ ಅದೃಷ್ಟಕ್ಕೆ ಮಹೇಶ್ ಕುಮಟಳ್ಳಿಯವರು ಜಾರಕಿಹೊಳಿಯಷ್ಟು ಹಠಮಾರಿಯಾಗಿಲ್ಲ. ಸಚಿವ ಸ್ಥಾನದ ಬದಲು ಪ್ರಬಲವಾದ ನಿಗಮ ಮಂಡಳಿಯೊಂದನ್ನು ಕೊಡುವುದಾಗಿ ಯಡಿಯೂರಪ್ಪ ಕೊಟ್ಟ ವಾಗ್ದಾನಕ್ಕೆ ಮಹೇಶ್ ಕುಮಟಳ್ಳಿ ಸಮಾಧಾನಗೊಂಡಂತಿದೆ.


ಇದೇ ವೇಳೆ, ನೂತನ 10 ಸಚಿವರಿಗೆ ಖಾತೆ ಹಂಚಿಕೆ ಮಾಡಬೇಕಿರುವುದರಿಂದ ಈಗಾಗಲೇ ಇರುವ ಸಚಿವರು ತಮ್ಮಲ್ಲಿರುವ ಹೆಚ್ಚುವರಿ ಖಾತೆಗಳನ್ನು ಬಿಟ್ಟುಕೊಡಬೇಕೆಂದು ಯಡಿಯೂರಪ್ಪ ಸೂಚಿಸಿದ್ದಾರೆನ್ನಲಾಗಿದೆ. ಹೀಗಾಗಿಯೇ, ಆರ್. ಅಶೋಕ್ ಅವರು ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ. ಅಶೋಕ್ ಬಳಿ ಕಂದಾಯ ಮತ್ತು ಪೌರಾಡಳಿತ ಖಾತೆಗಳಿವೆ. ಇವುಗಳಲ್ಲಿ ಒಂದನ್ನು ಬಿಟ್ಟುಕೊಡಬೇಕಾಗಬಹುದು.


ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.


Published by:Vijayasarthy SN
First published: