ಗಾಂಜಾ ಚಟ ಬಿಡಲು ಪೋರ್ನೋಗ್ರಫಿ ವೀಕ್ಷಣೆ!: ಕೌನ್ಸಿಲಿಂಗ್​ನಲ್ಲಿ ಬಯಲಾಯ್ತು ಶಾಕಿಂಗ್​ ವಿಚಾರ


Updated:July 12, 2018, 2:54 PM IST
ಗಾಂಜಾ ಚಟ ಬಿಡಲು ಪೋರ್ನೋಗ್ರಫಿ ವೀಕ್ಷಣೆ!: ಕೌನ್ಸಿಲಿಂಗ್​ನಲ್ಲಿ ಬಯಲಾಯ್ತು ಶಾಕಿಂಗ್​ ವಿಚಾರ

Updated: July 12, 2018, 2:54 PM IST
ನ್ಯೂಸ್ 18 ಕನ್ನಡ

ಬೆಂಗಳೂರು(ಜು.12): ಯುವಕರು ಈವರೆಗೆ ದೂಮಪಾನ, ಮದ್ಯ ಸೇವನೆ, ಡ್ರಗ್ಸ್​, ಗಾಂಜಾ ಸೇವನೆ ಈ ಮೊದಲಾದ ದುಷ್ಚಟಗಳಿಗೆ ದಾಸರಾಗುತ್ತಿದ್ದರು. ಆದರೀಗ ಈ ಕೆಟ್ಟ ಅಭ್ಯಾಸಗಳಿಗೆ ಬದಲಿಯಾಗಿ ಮತ್ತೊಂದು ಕೆಟ್ಟ ಅಭ್ಯಾಸ ಸೇರ್ಪಡೆಯಾಗಿದ್ದು, ಈ ವಿಚಾರ ವೈದ್ಯರನ್ನೇ ಬೆಚ್ಚಿ ಬೀಳಿಸಿದೆ. ಹೌದು ಬೆಂಗಳೂರಿನ ನಿಮಾನ್ಸ್​ಗೆ ಬಂದಿರುವ ಕೇಸ್​ ಒಂದರಿಂದ ಈ ವಿಚಾರ ಬಯಲಾಗಿದೆ. ಅಷ್ಟಕ್ಕೂ ಆ ಚಟ ಯಾವುದು ಅಂತೀರಾ? ಇಲ್ಲಿದೆ ನೋಡಿ ವಿವರ

ಕಳೆದ ಮಾರ್ಚ್​ನಲ್ಲಿ ಬೆಂಗಳೂರಿನ ನಿಮಾನ್ಸ್​ ಆಸ್ಪತ್ರೆಗೆ 23 ವರ್ಷದ ಬಾಲಕನೊಬ್ಬ ದಾಖಲಾಗಿದ್ದಾನೆ. ಇಂಜಿನಿಯರಿಂಗ್​ ಓದುತ್ತಿದ್ದ ಈತನಿಗೆ ತನಗಂಟಿಕೊಂಡಿದ್ದ ಕೆಟ್ಟ ಚಟವೊಂದು ವ್ಯಾಸಂಗ ಅರ್ಧಕ್ಕೇ ಕೈ ಬಿಡುವಂತೆ ಮಾಡಿದೆ!. ಸದ್ಯ ತನ್ನ ಓದನ್ನು ಮುಂದುವರೆಸಲು ಯೋಚಿಸಿರುವ ಆತ ಕೆಟ್ಟ ಚಟದಿಂದ ಹೊರ ಬರಲು ಮನಶಾಸ್ತ್ರಜ್ಞರ ಮೊರೆ ಹೋಗಿದ್ದಾನೆ. ಆತನಿಗಂಟಿಕೊಂಡಿರುವ ಆ ಚಟ ಬೇರಾವುದೂ ಅಲ್ಲ,  ಪೋರ್ನೋಗ್ರಫಿ ವೀಕ್ಷಣೆ.

ಆ ಯುವಕ ಕಳೆದ ಸುಮಾರು ಮೂರು ವರ್ಷಗಳಿಂದ ದಿನವೊಂದಕ್ಕೆ ಸುಮಾರು 15 ಗಂಟೆ ನಿರಂತರವಾಗಿ ನೀಲಿಚಿತ್ರ ವೀಕ್ಷಿಸುವುದರಲ್ಲೇ ಕಳೆಯುತ್ತಾನಂತೆ. 5-6 ಗಂಟೆ ವೀಕ್ಷಿಸುತ್ತಿದ್ದಾತ ಕ್ರಮೇಣವಾಗಿ 10ರಿಂದ 15 ಗಂಟೆಗಳ ಕಾಲ ಪೋರ್ನೋಗ್ರಫಿ ವೀಕ್ಷಣೆ, ವೆಬ್​ ಸೀರೀಸ್​ ಹಾಗೂ ಆನ್​ಲೈನ್​ ಗೇಮ್ಸ್​ ಆಡಲು ಕಳೆದಿದ್ದಾನೆ. ತನ್ನ ಚಟವನ್ನು ನಿಯಂತ್ರಿಸಿಕೊಳ್ಳಲು ಬಹಳಷ್ಟು ಪ್ರಯತ್ನಿಸಿದನಾದರೂ ಅತನಿಗಿದು ಸಾಧ್ಯವಾಗಿಲ್ಲವೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. "ನಾನು ಅತಿಯಾಗಿ ಗಾಂಜಾ ಸೇವನೆ ಮಾಡುತ್ತಿದ್ದೆ. ಅದರಿಂದ ಹೊರಬರುವ ಸಲುವಾಗಿ ನೀಲಿಚಿತ್ರ ವೀಕ್ಷಿಸಲಾರಂಭಿಸಿದೆ. ಗಾಂಜಾ ಸೇವನೆಯಿಂದ ಸಿಗುತ್ತಿದ್ದಷ್ಟೇ ಉತ್ತೇಜನ ನನಗೆ ಪೋರ್ನೋಗ್ರಫಿ ವೀಕ್ಷಿಸಿದಾಗಲೂ ಸಿಗುತ್ತದೆ," ಎಂದು ಯುವಕ ಕೌನ್ಸೆಲಿಂಗ್​ ವೇಳೆ ತಿಳಿಸಿದ್ದು, ಈ ವಿಚಾರವು ಖುದ್ದು ಮನಶಾಸ್ತ್ರಜ್ಞರನ್ನೇ ಬೆಚ್ಚಿ ಬೀಳಿಸಿದೆ.

ಇನ್ನು ಯುವಕನ ಈ ಕೇಸ್​ ಸ್ಟಡಿ ಮಾಡಿರುವ ವೈದ್ಯರು "ಗಾಂಜಾದಂತಹ ಅಮಲು ಪದಾರ್ಥ ಸೇವನೆಗೆ ಬದಲಿಯಾಗಿ ಇತ್ತೀಚೆಗೆ ಪೋರ್ನೋಗ್ರಫಿ ವೀಕ್ಷಣೆಯು ಟ್ರೆಂಡ್​ ಆಗುತ್ತಿದೆ," ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

"ಯುವಕನ ಮನಸ್ಸಿಗೆ ಗಾಂಜಾ ಸೇವನೆಯಿಂದ ಸಿಗುತ್ತಿದ್ದಷ್ಟೇ ಉತ್ತೇಜನ ಪೋರ್ನೋಗ್ರಫಿ ವೀಕ್ಷಣೆಯಲ್ಲೂ ಸಿಗಲಾರಂಭಿಸಿದೆ. ಇನ್ನು ಡಿಜಿಟಲ್​ ಅಡಿಕ್ಷನ್​ಗೊಳಗಾದ ಆ ಯುವಕ ಅದರಿಂದಲೇ ಗಾಂಜಾ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾನೆಂಬುವುದೇ ಶಾಕಿಂಗ್​ ವಿಚಾರ," ಎಂಬುವುದು ನಿಮ್ಹಾನ್ಸ್​ ವೈದ್ಯರ ಮಾತಾಗಿದೆ.
ಕೌನ್ಸೆಲಿಂಗ್​ ವೇಳೆ ಇನ್ನೂ ಹಲವಾರು ವಿಚಾರಗಳು ಬಹಿರಂಗಗೊಂಡಿದ್ದು, "ಬಾಲ್ಯದಿಂದಲೂ ಈತನನ್ನು ಮಾನಸಿಕವಾಗಿ ಘಾಸಿಗೊಳಿಸುವ ಘಟನೆಗಳು ನಡೆದಿವೆ. ಅಲ್ಲದೇ ಈತ ಚಿಕ್ಕವನಾಗಿದ್ದಾಗ ಅಣ್ಣನಿಂದ ಕಿರುಕುಳಕ್ಕೊಳಗಾಗಿದ್ದ. ಹೀಗಾಗಿ ಬಾಲ್ಯದಿಂದಲೇ ಈತ ಇತರರೊಂದಿಗೆ ಬೆರೆತುಕೊಳ್ಳಲಾಗದೆ, ಏಕಾಂಗಿಯಾಗಿ ಉಳಿದಿದ್ದ" ಎಂದು ಆತನನ್ನು ತಪಾಸಣೆ ಮಾಡಿರುವ ವೈದ್ಯರು ತಿಳಿಸಿದ್ದಾರೆ.
Loading...

ಅಲ್ಲದೇ ಚಿಕಿತ್ಸೆಗೆ ಬಂದಿರುವ ಯುವಕ ತಾನು ಪ್ರೌಡ ಶಾಲೆಯಲ್ಲಿದ್ದಾಗಲೇ ಒತ್ತಡ ಹಾಗೂ ಉತ್ತೇಜನಕ್ಕಾಗಿ ಧೂಮಪಾನ ಹಾಗೂ ಮದ್ಯಪಾನ ಮಾಡುತ್ತಿದ್ದ ವಿಚಾರವನ್ನೂ ಒಪ್ಪಿಕೊಂಡಿದ್ದಾನೆ. ಆದರೆ ಕಾಲೇಜಿಗೆ ಸೇರುತ್ತಿದ್ದಂತೆಯೇ ಗಾಂಜಾ ಸೇವನೆಯನ್ನೂ ಆರಂಭಿಸಿದ್ದು, ದಿನಕ್ಕೆ ಕನಿಷ್ಟ ಏಳು ಬಾರಿಯಾದರೂ ಸೇದುತ್ತಿದ್ದನಂತೆ. ಮುಂದೆ ಇದೇ ಆತನ ವ್ಯಾಸಂಗಕ್ಕೆ ಮುಳುವಾಗಿದೆ. ಬಳಿಕ ನಡೆದ ಅಪಘಾತವೊಂದರಿಂದ ಈತ ಆತಂಕ ಹಾಗೂ ಗಾಬರಿಗೆ ಒಳಗಾಗಲಾರಂಭಿಸಿದ್ದ. ಹೀಗಾಗಿ ಕ್ರಮೇಣ ನೀಲಿ ಚಿತ್ರ ವೀಕ್ಷಿಸುವುದನ್ನು ಆರಂಭಿಸಿದ್ದು, ಗಾಂಜಾ ಸೇವನೆಯನ್ನು ಕಡಿಮೆ ಮಾಡಿದ್ದ. ಆದರೆ ನೀಲಿ ಚಿತ್ರ ವೀಕ್ಷಣೆಗೆ ಈತ ಅದೆಷ್ಟರ ಮಟ್ಟಿಗೆ ದಾಸನಾಗಿದ್ದ ಎಂದರೆ ಆರಂಭದಲ್ಲಿ 5 ರಿಂದ 6 ಗಂಟೆ ವೀಕ್ಷಿಸುತ್ತಿದ್ದ ಯುವಕ, ದಿನಗಳೆದಂತೆ 10 ರಿಂದ 15 ಗಂಟೆ ಆನ್​ಲೈನ್​ ಹಾಗೂ ಪೋರ್ನೋಗ್ರಫಿ ನೋಡಲು ಕಳೆಯುತ್ತಿದ್ದ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ಸದ್ಯ ಡಿಜಿಟಲ್​ ಅಡಿಕ್ಷನ್ ಗಾಂಜಾ ಚಟದಷ್ಟೇ ಕೆಟ್ಟದಾ ಎಂದು ಕಂಡುಹಿಡಿಯಲು ಅಧ್ಯಯನ ನಡೆಸಬೇಕಿದೆ ಎಂಬುವುದು ಇಲ್ಲಿನ ವೈದ್ಯರ ಅಭಿಪ್ರಾಯವಾಗಿದೆ. ಅದೇನಿದ್ದರೂ ಗಾಂಜಾ ಚಟದಿಂದ ಹೊರಬರಲು ಬದಲಿ ಮಾರ್ಗವಾಗಿ ಪೋರ್ನೋಗ್ರಫಿ ವೀಕ್ಷಣೆಯನ್ನು ಆರಂಭಿಸಿ ಡಿಜಿಟಲ್​ ಅಡಿಕ್ಷನ್​ಗೊಳಗಾಗಿರುವುದು ಆತಂಕಕಾರಿ ಬೆಳವಣಿಗೆಯೇ ಸರಿ.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...