ಹಾಸನದಲ್ಲಿ ಈಗ ಇರೋದು ದೇವೇಗೌಡರ ಕುಟುಂಬ ವಿರುದ್ಧದ ರಾಜಕಾರಣ: ಎ. ಮಂಜು

ದೇವೇಗೌಡರು ಕೊನೆಯ ಸಾರಿ ಸಂಸತ್​ನಲ್ಲಿ ಗೆಲ್ಲಲಿ ಎಂದು ಆಸೆಪಟ್ಟೆ. ಆದರೆ ಮಕ್ಕಳು ಮೊಮ್ಮಕ್ಕಳನ್ನ ರಾಜಕೀಯವಾಗಿ ಉಳಿಸಲು ಹೊರಟರು. ದೇವೇಗೌಡರು ಇದುವರೆಗೂ ಪಕ್ಷ ಸಂಘಟನೆ ಬಿಟ್ಟರೆ ರಾಜ್ಯದ ಅಭಿವೃದ್ಧಿಗೆ ರಾಜಕಾರಣ ಮಾಡುತ್ತೇನೆ ಎಂದು ಹೇಳಿಲ್ಲ ಎ. ಮಂಜು ಕಿಡಿಕಾರಿದರು.

ಮಾಜಿ ಸಚಿವ ಎ.ಮಂಜು

ಮಾಜಿ ಸಚಿವ ಎ.ಮಂಜು

  • Share this:
ಹಾಸನ: ಕುಮಾರಸ್ವಾಮಿ ಮತ್ತು ರೇವಣ್ಣ ತಮ್ಮ ಮಕ್ಕಳಿಗಾಗಿ ದೇವೇಗೌಡರನ್ನೇ ತೆಗೆದರು. ಆದರೆ ಲಾಭ ಪಡೆದವರು ರೇವಣ್ಣ ಮತ್ತು ಮಗ ಮಾತ್ರ ಎಂದು ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಮಾಜಿ ಸಚಿವ ಎ. ಮಂಜು ವ್ಯಂಗ್ಯವಾಡಿದ್ದಾರೆ. ಇಲ್ಲಿ ಮತನಾಡಿದ ಅವರು ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್, ದಳ, ಬಿಜೆಪಿ ಅಂತಾ ರಾಜಕಾರಣ ಇಲ್ಲ. ಇಲ್ಲಿ ಇರೋದು ದೇವೇಗೌಡರ ಕುಟುಂಬ ಹಾಗೂ ಅವರ ವಿರುದ್ಧದ ರಾಜಕಾರಣ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಉಳಿಯಬೇಕು ಅಂದರೆ ನಾವು ಒಟ್ಟಿಗೆ ಸೇರಿ ಅವರನ್ನು ಸದೆಬಡಿಯಬೇಕು ಎಂದು ಹೇಳಿದರು.

ಈಗ ನಮ್ಮ ಸರ್ಕಾರ ಇದೆ. ಜನಪರವಾದ ಕೆಲಸ ಮಾಡಲು ಅವಕಾಶ ಇದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ 4 ರಿಂದ 5 ಕ್ಷೇತ್ರ ಗೆಲ್ಲುತ್ತೇವೆ. ನಾವು ದೇವೇಗೌಡರ ಕುಟುಂಬದ ವಿರೋಧಿಗಳು. ಇಡೀ ಜಿಲ್ಲೆಯ 70 ರಷ್ಟು ಜನರು ದೇವೇಗೌಡರ ಕುಟುಂಬವನ್ನು ವಿರೋಧಿಸುತ್ತಾರೆ. ದೇವೇಗೌಡರು ಕೊನೆಯ ಸಾರಿ ಸಂಸತ್​ನಲ್ಲಿ ಗೆಲ್ಲಲಿ ಎಂದು ಆಸೆಪಟ್ಟೆ. ಆದರೆ ಮಕ್ಕಳು ಮೊಮ್ಮಕ್ಕಳನ್ನ ರಾಜಕೀಯವಾಗಿ ಉಳಿಸಲು ಹೊರಟರು. ದೇವೇಗೌಡರು ಇದುವರೆಗೂ ಪಕ್ಷ ಸಂಘಟನೆ ಬಿಟ್ಟರೆ ರಾಜ್ಯದ ಅಭಿವೃದ್ಧಿಗೆ ರಾಜಕಾರಣ ಮಾಡುತ್ತೇನೆ ಎಂದು ಹೇಳಿಲ್ಲ ಎ. ಮಂಜು ಕಿಡಿಕಾರಿದರು.

 ಇದನ್ನೂ ಓದಿ: ಕೊರೋನಾ ಎಫೆಕ್ಟ್; ವದಂತಿ ಹಿನ್ನೆಲೆ ಕೋಲಾರದಲ್ಲಿ 9 ಸಾವಿರ ಕೋಳಿಗಳ ನಾಶ

ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ರೇವಣ್ಣ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ರೇವಣ್ಣ ಆರೋಪ ಮಾಡೋದ್ರಲ್ಲಿ ನಿಸ್ಸೀಮರು. ಇವರಿಬ್ಬರು ಅಣ್ಣ ತಮ್ಮಂದಿರು ಸೇರಿಕೊಂಡು ಕ್ಯಾಬಿನೆಟ್, ಸರ್ಕಾರದ ಆದೇಶ ಇಲ್ಲದೇ ಇರೋದನ್ನು ಸ್ಯಾಂಕ್ಷನ್ ಮಾಡಿದ್ದಾರೆ. ಈ ರೀತಿಯ ಕಾನೂನು ಅವರು ಅಣ್ಣ, ತಮ್ಮಂದಿರು ಇದ್ದಾಗ ಮಾತ್ರ ನಡೆಯುತ್ತೆ. ಯಡಿಯೂರಪ್ಪ ರಾಜ್ಯದ ಬಗ್ಗೆ ಚಿಂತೆ ಇರುವ ಅಪರೂಪದ ಮುಖ್ಯಮಂತ್ರಿ. ಯಡಿಯೂರಪ್ಪ ಹೋರಾಟದಿಂದ ಬಂದವರು. ಆದರೆ ಇವರು (ಕುಮಾರಸ್ವಾಮಿ ಮತ್ತು ರೇವಣ್ಣ) ಅಪ್ಪನ ಹೆಸರು, ಕೃಪಾಪೋಷಿತದಿಂದ ಬಂದವರು ಎಂದು ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು ಸುತ್ತಮುತ್ತ ಅಧಿಕಾರಿಗಳಾಗಿ ಬರುವವರು ಕೋಟಿಗಟ್ಟಲೆ ದುಡ್ಡು ಕೊಟ್ಟು ಬರುತ್ತಾರೆ. ಮುಖ್ಯಮಂತ್ರಿಗಳೇ ಇದನ್ನು ಹೇಳಿದ್ಧಾರೆ. ಇದರಿಂದ ಒಳ್ಳೆಯ ಆಡಳಿತ ನಡೆಸಲು ಸಾಧ್ಯವೇ ಎಂದು ಶಾಸಕ ರಾಮಸ್ವಾಮಿ ಮಾಡಿದ ಆರೋಪಕ್ಕೆ ಎ. ಮಂಜು ತಿರುಗೇಟು ನೀಡಿದರು.

ಇದನ್ನೂ ಓದಿ: 40 ಮಹಿಳೆಯರಿಂದ ರೊಟ್ಟಿ ತಯಾರಿಕೆ; ಸ್ತ್ರೀ ಸಬಲೀಕರಣಕ್ಕೆ‌‌ ನಾಂದಿ ಹಾಡಿದ ಮಹಾದೇವಿ ಕಬ್ಬೂರು

ಲಂಚ ತೆಗೆದುಕೊಳ್ಳುವ ಅಧಿಕಾರಿಗಳನ್ನ ಪ್ರಶ್ನೆ ಮಾಡಬೇಕು ಅಂದೇ ಜನರು ನಿಮ್ಮನ್ನು ಆಯ್ಕೆ ಮಾಡಿದ್ಧಾರೆ. ನಿಮ್ಮ ಕರ್ತವ್ಯ ಬರೀ ಮೈಕ್ ಹಿಡಿದುಕೊಂಡು ಮಾತನಾಡುವುದಲ್ಲ ಎಂದು ರಾಮಸ್ವಾಮಿ ಅವರನ್ನು ಎ. ಮಂಜು ಟೀಕಿಸಿದರು.

4 ರಿಂದ 6 ಕೋಟಿ ಕೊಟ್ಟು ಡಿಸಿಯಾಗಿ ಬಂದರೆ ಆಡಳಿತ ಹೇಗಿರುತ್ತೆ? ಮುಖ್ಯಮಂತ್ರಿಗಳು ಈ ಬಗ್ಗೆ ಬರೀ ನುಡಿದರೆ ಸಾಲದು. ಆ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರಾಮಸ್ವಾಮಿ ಆಗ್ರಹಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಎ. ಮಂಜು, “ಲಂಚ ತೆಗೆದುಕೊಳ್ಳುತ್ತಿದ್ದರೆ ಅವರನ್ನು ಹಿಡಿಸಿ ಸಸ್ಪೆಂಡ್ ಮಾಡಿಸಿ. ಅಸೆಂಬ್ಲಿಯಲ್ಲಿ ಪ್ರಶ್ನೆ ಮಾಡಿ. ಅನ್ಯಾಯ ಖಂಡಿಸಿ ಅಭಿವೃದ್ಧಿ ಜನ ನಿಮಗೆ ಓಟ್ ಹಾಕಿದ್ದಾರೆ ಹೊರತು ಬರೀ ಮಾತನಾಡುವುದಕ್ಕೆ ನಿಮಗೆ ಓಟ್ ಹಾಕಿಲ್ಲ. ನೀವು ಮತ್ತು ನಿಮ್ಮ ಮಗ ಕಲ್ಲು ಗಣಿಗಾರಿಕೆ ಮಾಡುತ್ತಿದ್ದೀರಿ. ಹೇಗೆ ಮಾಡುತ್ತಿದ್ದೀರಿ ಎಂದು ನಿಮಗೆ ನೀವೆ ಪ್ರಶ್ನಿಸಿಕೊಳ್ಳಿ” ಎಂದು ತರಾಟೆಗೆ ತೆಗೆದುಕೊಂಡರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: