ಯಶ್​-ಸುದೀಪ್​-ಪುನೀತ್​ರ​ ಹೆಗಲ ಮೇಲೆ ಬಂದೂಕು ಇರಿಸಿ ಹಾರಿಸಲಾಯಿತ ಈ ರಾಜಕೀಯ ಗುಂಡು ...?

ಚುನಾವಣಾ ಸಮಯದಲ್ಲಿ ಪಕ್ಷಗಳ ನಿಧಿಗೆ ಹಣವನ್ನು ನೀಡುವವರೇ ಆಪತ್ಭಾಂಧವರು. ಇವರೇ ಚುನಾವಣಾ ಸಮಯದಲ್ಲಿ ಎರುದಾಳಿ ಪಕ್ಷಗಳ ಟಾರ್ಗೆಟ್​. ಹೌದು ಅದಕ್ಕಾಗಿಯೇ ಪಕ್ಷದ ಬೊಕ್ಕಸಕ್ಕೆ ನಿಧಿ ತುಂಬುವ ಕೈಗಳನ್ನು ಕತ್ತರಿಸುವ ಕಾರ್ಯಕ್ಕೆ ಮೊದಲು ಚಾಲನೆ ನೀಡಲಾಗುತ್ತದೆ. ನಂತರ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳೇ ಟಾರ್ಗೆಟ್​.

Anitha E | news18
Updated:January 3, 2019, 4:53 PM IST
ಯಶ್​-ಸುದೀಪ್​-ಪುನೀತ್​ರ​ ಹೆಗಲ ಮೇಲೆ ಬಂದೂಕು ಇರಿಸಿ ಹಾರಿಸಲಾಯಿತ ಈ ರಾಜಕೀಯ ಗುಂಡು ...?
ಸಾಂದರ್ಭಿಕ ಚಿತ್ರ
  • News18
  • Last Updated: January 3, 2019, 4:53 PM IST
  • Share this:
- ಅನಿತಾ ಈ, 

ಇಂದು ಬೆಳಗಾಗುತ್ತಿದ್ದಂತೆಯೇ ಚಂದನವನದ ಮಂದಿಗೆ ರಿಯಲ್​ ಐಟಿ ರೇಡ್​ ಸಿನಿಮಾ ತೋರಿಸಲಾಯಿತು. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಸ್ಯಾಂಡಲ್​ವುಡ್​ ಆದಾಯ ತೆರಿಗೆ ದಾಳಿಗೆ ಸಾಕ್ಷಿಯಾಗಿದೆ. ಚಂದನವನ ಎಷ್ಟೇ ಬಣ್ಣಗಳಿಂದ ಕೂಡಿದ ರಂಗೀನ್​ ಲೋಕವಾದರೂ ಇಲ್ಲೂ ನಡೆಯವುದು ಈ ಕಪ್ಪು-ಬಿಳುಪಿನ ಆಟವೇ ಅನ್ನೋದು ಇಂದು ಬಹಿರಂಗವಾಗಿದೆ.

ಚುನಾವಣೆ ಬಂತೆಂದರೆ ಸಾಕು ಪ್ರತಿಯೊಂದು ಪಕ್ಷವೂ ತನ್ನದೇ ಆದ ರೀತಿಯಲ್ಲಿ ಕಸರತ್ತುಗಳನ್ನು ಆರಂಭಿಸುತ್ತವೆ. ಅದರಲ್ಲೂ ಅಧಿಕಾರದಲ್ಲಿರುವ ಪಕ್ಷ ಶಕ್ತಿ ಮೀರಿ, ತನ್ನಲ್ಲಿರುವ ಶಕ್ತಿಯನ್ನೆಲ್ಲ ಬಳಸಿಕೊಂಡು ಚುನಾವಣೆಗೆ ತಯಾರಿ ನಡೆಸುತ್ತದೆ.

ಇದನ್ನೂ ಓದಿ: ಐಟಿ ದಾಳಿ ಹಿಂದಿದೆಯಾ ರಾಜಕೀಯ ಹುನ್ನಾರ: ಅಲ್ಲಾಡಲಿದೆಯಾ ರಾಕ್​ಲೈನ್​ ಕೋಟೆಯ ಬುನಾದಿ..?

ಅದರಲ್ಲೂ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪಕ್ಷಗಳು ಹಣವನ್ನು ನೀರಿನಂತೆ ಚೆಲ್ಲುತ್ತವೆ. ಈ ವಿಷಯ ರಹಸ್ಯವಾಗೇನೂ ಉಳಿದಿಲ್ಲ. ಪಕ್ಷಗಳ ನಿಧಿಗೆ ಹಣವನ್ನು ನೀಡುವವರೇ ಚುನಾವಣಾ ಸಮಯದ ಆಪತ್ಭಾಂಧವರಾಗಿರುತ್ತಾರೆ.

ಇಂತಹ ಆಪತ್ಭಾಂಧವರೇ ಚುನಾವಣಾ ಸಮಯದಲ್ಲಿ ಎರುದಾಳಿ ಪಕ್ಷಗಳ ಟಾರ್ಗೆಟ್​. ಹೌದು ಅದಕ್ಕಾಗಿಯೇ ಪಕ್ಷದ ಬೊಕ್ಕಸಕ್ಕೆ ನಿಧಿ ತುಂಬುವ ಕೈಗಳನ್ನು ಕತ್ತರಿಸುವ ಕಾರ್ಯಕ್ಕೆ ಮೊದಲು ಚಾಲನೆ ನೀಡಲಾಗುತ್ತದೆ. ನಂತರ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳೇ ಟಾರ್ಗೆಟ್​.

ಪ್ರತಿ ಬಾರಿ ಯಾವ ಚುನಾವಣೆಗೂ ಮುನ್ನ ಐಟಿ ದಾಳಿ ನಡೆದರೆ ಅದು ಕೇಂದ್ರದಲ್ಲಿನ ಆಡಳಿತ ಪಕ್ಷದ ಮೇಲೆ ಅನುಮಾನ ಹುಟ್ಟಿಸುತ್ತದೆ. ಈ ಹಿಂದೆ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯುವ ಮುನ್ನ ಮತ್ತು ನಂತರ ಸಚಿವ ಡಿ.ಕೆ. ಶಿವಕುಮಾರ್​ ಅವರ ಮೇಲೆ ಐಟಿ ದಾಳಿ ನಡೆಸಲಾಗಿತ್ತು.ಆಗಲೂ ಸಹ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಉದ್ದೇಶ ಪೂರಕವಾಗಿ ಈ ದಾಳಿ ನಡೆಸಿದ್ದು, ಕಾಂಗ್ರೆಸ್​ಗೆ ಚುನಾವಣೆಯಲ್ಲಿ ಪೆಟ್ಟುಕೊಡಲೆಂದು ಹೀಗೆ ಮಾಡಿದೆ ಎನ್ನಲಾಗುತ್ತಿತ್ತು.

ಈಗ ಹೊಸ ವರ್ಷದ ಆರಂಭದಲ್ಲೂ ಸಹ ನಡೆದಿರುವ ಐಟಿ ದಾಳಿಯ ಮೇಲೂ ಇದೇ ರೀತಿಯ ಆರೋಪಗಳು ಕೇಳಿ ಬರುತ್ತಿವೆ. ಹೌದು, ಇಲ್ಲೂ ಸಹ ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ನಟ-ನಿರ್ಮಾಪಕರ ಮೇಲೆ ಐಟಿ ದಾಳಿ ನಡೆದಿದೆ. ಆದರೆ ಇವರುಗಳೊಂದಿಗೆ ಯಾವುದೇ ಪಕ್ಷಗಳೊಂದಿಗೆ ಗುರುತಿಸಿಕೊಳ್ಳದ ಯಶ್​, ಪುನೀತ್​, ಸುದೀಪ್​ ಜತೆಗೆ ಬಿಜೆಪಿಯೊಂದಿಗೆ ಹೆಸರು ತಳುಕು ಹಾಕಿಕೊಂಡಿರುವ ನಿರ್ಮಾಪಕ ವಿಜಯ್​ ಕಿರಗುಂದೂರು ಅವರ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬಿಗ್​ ಬಜೆಟ್​ ಸಿನಿಮಾಗಳ ಕತೆ ಹೇಳುತ್ತಿರುವ ಐಟಿ ದಾಳಿಯ ಬಗ್ಗೆ ಮೊದಲಿಗೆ ಹೇಳುವುದಾದರೆ, ಶಿವರಾಜ್​ ಕುಮಾರ್​ ಜೆಡಿಎಸ್​ನೊಂದಿಗೆ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಜೆ.ಡಿ.ಎಸ್​. ಮುಖಂಡ ಮಧು ಬಂಗಾರಪ್ಪ, ಶಿವಣ್ಣನ ಹೆಂಡತಿ ಗೀತಾ ಅವರ ಸಹೋದರ. ಅಲ್ಲದೆ ಗೀತಾ ಶಿವರಾಜ್​ಕುಮಾರ್​ ಸಹ ಕಳೆದ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಬಾರಿ ಶಿವಮೊಗ್ಗ ಕ್ಷೇತ್ರಕ್ಕೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು  ತಮಗೆ ಸಿಕ್ಕಿದ್ದ ಅವಕಾಶವನ್ನು ತಮ್ಮ ಮಧು ಬಂಗಾರಪ್ಪ ಅವರಿಗೆ ಗೀತಾ ಬಿಟ್ಟುಕೊಟ್ಟಿದ್ದರು.

ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್,​ ಕಾಂಗ್ರೆಸ್​ ಶಾಸಕ ಮುನಿರತ್ನ ಅವರ ಸಂಬಂಧಿ. ಅಲ್ಲದೆ ಹೆಸರಾಂತ ನಿರ್ಮಾಪಕರೂ ಹೌದು. ನೇರವಾಗಿ ಇಲ್ಲದಿದ್ದರೂ ಪರೋಕ್ಷವಾಗಿ ರಾಕ್​ಲೈನ್​ ಕಾಂಗ್ರೆಸ್​ ಪರ ಅನ್ನೋದು ಹೇಳಬೇಕಾಗಿಲ್ಲ.

ಇನ್ನೇನು ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ಗೆ ಆರ್ಥಿಕವಾಗಿ ಬೆಂಬಲ ನೀಡುವವರಲ್ಲಿ ವೆಂಕಟೇಶ್​ ಸಹ ಒಬ್ಬರು ಎನ್ನಲಾಗುತ್ತಿದೆ. ಇದರಿಂದಲೇ ಈ ಐಟಿ ದಾಳಿ ನಡೆಸಲಾಗುತ್ತಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಇದನ್ನೂ ಓದಿ: ಸಿನಿಮಾ ಜತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ 'ಕೆ.ಜಿ.ಎಫ್'​ ನಿರ್ಮಾಪಕರ ಕರಾಮತ್ತು..!

ನಿರ್ಮಾಪಕ ಸಿ.ಆರ್​. ಮನೋಹರ್​ ಕೇವಲ ಸಿನಿಮಾ ಕ್ಷೇತ್ರವಲ್ಲದೆ, ರಾಜಕೀಯದಲ್ಲೂ ಗುರುತಿಸಿಕೊಂಡವರು. ಪ್ರಸ್ತುತ ಜೆ.ಡಿಎಸ್​. ವಿಧಾನ ಪರಿಷತ್​ ಸದಸ್ಯನಾಗಿದ್ದಾರೆ. ಕೋಲಾರದವರೇ ಆದ ಕೇಶವ್​ ಹಾಗೂ ಸಿ.ಆರ್​. ಮನೋಹರ್​ ಅವರ ನಡುವೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ಪಕ್ಷದ ನಿಧಿಗೆ ಮನೋಹರ್​ ಖಜಾನೆ ಇದ್ದಂತೆ. ಈ ಕಾರಣದಿಂದ ಇವರ ಮೇಲೂ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ.

'ಕೆ.ಜಿ.ಎಫ್​'  ನಿರ್ಮಾಪಕ ವಿಜಯ್​ ಕಿರಗಂದೂರ್​ ಸದ್ಯ ಸಿನಿಮಾದ ಯಶಸ್ಸಿನ ಗುಂಗಲ್ಲಿರುವಾಗಲೇ ಐಟಿ ದಾಳಿಯ ಬರ ಸಿಡಿಲು ಬಡಿದಿದೆ. ಇವರು ಬಿ.ಜೆ.ಪಿ ಶಾಸಕ ಅಶ್ವತ್ಥನಾರಾಯಣ ಅವರ ಸಂಬಧಿಯೂ ಹೌದು. ಅಲ್ಲದೆ  ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇವರು ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುವ ಸಾಧ್ಯತೆ ಇದೆ ಎಂಬ ಮಾತುಗಳು ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿ ಬರುತ್ತಿತ್ತು.

ಉಳಿದಂತೆ ಪುನೀತ್​ ರಾಜ್​ಕುಮಾರ್​ ಯಾವ ಪಕ್ಷದ ಪರವಾಗಿಯೂ ಪ್ರಚಾರ ಮಾಡಲಿಲ್ಲ. ಅಲ್ಲದೇ ಅತ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗಲೂ ಅವರ ಪರವಾಗಿ ಎಲ್ಲಿಯೂ ಒಂದು ಮಾತನ್ನೂ ಆಡಿರಲಿಲ್ಲ. ಇನ್ನು ಕಿಚ್ಚ ಸುದೀಪ್​ ಹಾಗೂ ಯಶ್​ ವಿಚಾರಕ್ಕೆ ಬಂದರೆ ಯಶ್​ ಬಂದರೆ, ಇವರಿಬ್ಬರೂ ನಟರು ಯಾವೊಂದು ಪಕ್ಷಕ್ಕೆ ಬ್ಯ್ರಾಂಡ್​ ಆಗದೆ ಸ್ನೇಹದಿಂದಿರುವ ಅಭ್ಯರ್ಥಿಗಳಿಗೆ ಪಕ್ಷ ಭೇದ ಮರೆತು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.

ಆದರೆ ಇಂದು ನಡೆದಿರುವ ಐಟಿ ದಾಳಿ ರಾಜಕೀಯ ಪ್ರೇರಿತವಲ್ಲ ಎಂದು ತೋರಿಸಲುವ ಸಲುವಾಗಿಯೇ ಯಾವುದೇ ಕ್ಷಗಳೊಂದಿಗೆ ಗುರುತಿಸಿಕೊಳ್ಳದ ಪುನೀತ್​, ಸುದೀಪ್​, ಯಶ್​ ಹಾಗೂ ಬಿಜೆಪಿಯೊಂದಿ ಇದ್ದಾರೆ ಎನ್ನಲಾಗುತ್ತಿರುವ ವಿಜಯ್​ ಕಿರಗಂದೂರ್​ ಅವರ ಮೇಲೂ ದಾಳಿ ನಡೆಸಲಾಗಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ.

ಜಯಣ್ಣ ಕಂಬೈನ್ಸ್ ಮೂಲಕ ಕಳೆದ 20 ವರ್ಷಗಳಿಂದ ನೂರಾರು ಚಿತ್ರಗಳನ್ನು ವಿತರಿಸಿ, ಹತ್ತಾರು ಸಿನಿಮಾಗಳನ್ನು ನಿರ್ಮಿಸಿರುವ ಖ್ಯಾತಿ ಜಯಣ್ಣ ಅವರಿಗೆ ಸಲ್ಲುತ್ತದೆ. ಜತೆಗೆ ಜಯಣ್ಣ ಒಂದು ಸಿನಿಮಾ ವಿತರಣಾ ಹಕ್ಕನ್ನು ಪಡೆದುಕೊಂಡರೆ ಕಡಿಮೆ ಅಂದರೂ 200 ಚಿತ್ರಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗೋದು ಫಿಕ್ಸ್. ಅಷ್ಟರ ಮಟ್ಟಿಗೆ ಸ್ಯಾಂಡಲ್‍ವುಡ್‍ ಅನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಜಯಣ್ಣ. ಹೀಗಾಗಿಯೇ ಜಯಣ್ಣ ಕನ್ನಡ ಚಿತ್ರರಂಗದಲ್ಲಿ ಎಲ್ಲರಿಗೂ ಬೇಕಾದ ವ್ಯಕ್ತಿ.

ವಿಶೇಷ ಅಂದರೆ 'ದಿ ವಿಲನ್', 'ಕೆ.ಜಿ.ಎಫ್'ಚಿತ್ರಗಳ ಬಿಡುಗಡೆಗೂ ಜಯಣ್ಣ ಸಹಾಯ ಮಾಡಿದ್ದರು. ಇಂತಹ ಜಯಣ್ಣ ಕಳೆದ ವರ್ಷ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ', 'ಸಾಹೇಬ' ಹಾಗೂ 'ಮಫ್ತಿ' ಸಿನಿಮಾಗಳನ್ನು ನಿರ್ಮಿಸಿದ್ದರು. ಅದರಲ್ಲಿ 'ಸಾಹೇಬ' ಹೊರತುಪಡಿಸಿ ಉಳಿದೆರಡು ಚಿತ್ರಗಳು ಕೈಹಿಡಿದಿದ್ದವು. ಈ ವರ್ಷ ಕೂಡ ಅವರು ನಿರ್ಮಿಸುತ್ತಿರುವ 'ರುಸ್ತುಂ' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಯಶ್ ನಟನೆಯ ಐದು ಸಿನಿಮಾಗಳನ್ನು ನಿರ್ಮಿಸಿರುವ ಜಯಣ್ಣ, ಪುನೀತ್ ರಾಜ್‍ಕುಮಾರ್, ಶರಣ್ ಚಿತ್ರಗಳಿಗೂ ಹಣ ಹಾಕಿದ್ದಾರೆ. ಹಾಗೇ ಜಯಣ್ಣ ಕಂಬೈನ್ಸ್​ನಲ್ಲಿ ಶಿವಣ್ಣ ನಾಯಕನಾಗಿರುವ ಮೂರನೇ ಸಿನಿಮಾ ಈ 'ರುಸ್ತುಂ'. ಹೀಗೆ ಜಯಣ್ಣ ವಿತರಣೆ ಹಾಗೂ ಪ್ರೊಡಕ್ಷನ್ ಎರಡರಲ್ಲೂ ಒಂದು ರೀತಿ ಗೆಲ್ಲುವ ಕುದುರೆ. ಆದರೆ ಇವರು ಸದ್ಯಕ್ಕೆ ಎಲ್ಲೂ ಸಹ ಯಾವ ಪಕ್ಷದೊಂದಿಗೂ ಗುರುತಿಸಿಕೊಂಡಿಲ್ಲ. ಆದರೆ ಮೂಲಗಳ ಪ್ರಕಾರ ಜಯಣ್ಣ ಪರೋಕ್ಷವಾಗಿ ಬೆಂಬಲ ನೀಡುವುದೇ ಆದರೆ ಅವರು ಕಾಂಗ್ರೆಸ್​ ಅಥವಾ ಜೆಡಿಎಸ್​ಗೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಸಿನಿಮಾವೆಂಬ ಮಾಯಲೋಕದಲ್ಲಿ ಕಪ್ಪು ಹಣ ಬಿಳಿಯಾಗುತ್ತಾ..?

ಬಣ್ಣಗಳಿಂದ ತುಂಬಿರುವ ಈ ಸಿನಿಮಾ ಕ್ಷೇತ್ರ ನಿಜಕ್ಕೂ ಒಂದು ಮಾಯಾ ಲೋಕವೇ ಸರಿ. ಇಲ್ಲಿ ಶೇಕಡಾ 50ಕ್ಕಿಂತ ಹೆಚ್ಚು ಕಪ್ಪು ಹಣ ಹರಿದಾಡುತ್ತಿದೆಯಂತೆ. ಕಪ್ಪು ಹಣವನ್ನು ಬಿಳಿ ಮಾಡಲು ಸಿನಿಮಾಲೋಕಕ್ಕಿಂತ ಉತ್ತಮ ಮಾರ್ಗ ಅನ್ನೋದು ತಿಳಿದಿರುವ ಸತ್ಯ.  ಸಿನಿಮಾದಲ್ಲಿ ಹಣ ಹೂಡಿ ನಷ್ಟವಾಗಲಿ, ಲಾಭವಾಗಲಿ ಸಮಸ್ಯ ಇಲ್ಲ. ಹೀಗಾಗಿಯೇ ಉದ್ಯಮಿಗಳು ಹಾಗೂ ರಾಜಕಾರಣಿಗಳು ನೇರವಾಗಿ ಅಥವಾ ಪರೋಕ್ಷವಾಗಿ ಸಿನಿಮಾಗಳ ಮೇಲೆ ಹಣ ಹೂಡುತ್ತಾರೆ. ಅದರಲ್ಲೂ ರಿಯಲ್ ಎಸ್ಟೇಟ್‍ನವರು ಹಾಗೂ ಬಿಲ್ಡರ್​ಗಳೇ ಹೆಚ್ಚು ಅನ್ನೋದನ್ನು ಮತ್ತೆ ಹೇಳಬೇಕಿಲ್ಲ. ಇಂತಹವರೇ ಪಕ್ಷಗಳ ನಿಧಿಗೆ ಹಣದ ಪೂರೈಕೆಯನ್ನೂ ಮಾಡುತ್ತಾರೆ. ಹೀಗಾಗಿಯೇ ಇಂದಿನ ಐಟಿ ದಾಳಿಗೂ ರಾಜಕೀಯಕ್ಕೂ ಸಂಬಂಧವಿದೆ ಎನ್ನಲಾಗುತ್ತಿದೆ.


 

 

 

 
First published: January 3, 2019, 4:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading