ಕ್ವಾರಂಟೈನ್ ಅವಧಿಯೂ ಕರ್ತವ್ಯದ ಅವಧಿ; ರಾಜ್ಯ ಪೊಲೀಸ್ ಸಿಬ್ಬಂದಿಗೆ ಗುಡ್​ ನ್ಯೂಸ್ ಕೊಟ್ಟ ಡಿಜಿ, ಐಜಿಪಿ ಪ್ರವೀಣ್ ಸೂದ್​

ಪೊಲೀಸರು ಕ್ವಾರಂಟೈನ್​​ಗೆ ಒಳಗಾದ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಜೂ.09): ಕೊರೋನಾ ಮಾಹಾಮಾರಿ ರಾಜ್ಯಕ್ಕೆ ಕಾಲಿಟ್ಟ ಬಳಿಕ ಖಾಕಿ ಪಡೆ ಹಗಲಿರುಳು ಅವಿರತ ಶ್ರಮವಹಿಸುತ್ತಿದ್ದಾರೆ. ಕೊರೋನಾ ಸೋಂಕು ಹರಡುವಿಕೆ ತಡೆಯಲು ಕಳೆದ 76 ದಿನಗಳಿಂದ ಪೊಲೀಸರು ನಿರಂತರವಾಗಿ ಕರ್ತವ್ಯ ನಿರ್ವಹಣೆ ಮಾಡಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದ್ದಾರೆ.

ಆದರೆ, ಇತ್ತೀಚೆಗೆ ಪೊಲೀಸರು ಸಹ ಮಾಹಾಮಾರಿ ಸೋಂಕಿಗೆ ಒಳಗಾಗುತ್ತಿದ್ದು, ಇದು ಇಲಾಖೆಯ ಸಿಬ್ಬಂದಿಯನ್ನು ಆತಂಕಕ್ಕೀಡು ಮಾಡಿದೆ.  ಸೋಂಕಿತರ ಜೊತೆ ಸಂಪರ್ಕ ಹೊಂದಿದ ಹಲವು ಪೊಲೀಸರು ಸಹ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಇದೀಗ ಪೊಲೀಸ್ ಸಿಬ್ಬಂದಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ಇಲಾಖೆ ಹಲವು ಕ್ರಮಗಳನ್ನ ಕೈಗೊಳ್ಳಲು ಮುಂದಾಗಿದೆ.

ಅದರಲ್ಲಿ ಪ್ರಮುಖವಾಗಿ, ಪೊಲೀಸರು ಕ್ವಾರಂಟೈನ್​​ಗೆ ಒಳಗಾದ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.

ಒಂದೇ ದಿನದಲ್ಲಿ ಸುಮಾರು 10 ಸಾವಿರ ಮಂದಿಗೆ ಕೊರೋನಾ;‌ ಭಾರತದಲ್ಲಿ ಸೋಂಕಿತರ ಸಂಖ್ಯೆ 2,66,598ಕ್ಕೆ ಏರಿಕೆ

ಪೊಲೀಸರು ಇನ್ಮುಂದೆ ಕರ್ತವ್ಯದ ಅವಧಿಯಲ್ಲಿ ಸೋಂಕಿತನ ಸಂಪರ್ಕ ಹೊಂದಿ ಹೋಂ ಕ್ವಾರಂಟೈನ್ ಇಲ್ಲವೇ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಗಾದರೆ ಆ ಅವಧಿಯನ್ನು ಕರ್ತವ್ಯದ ಅವಧಿ ಎಂದು ಪರಿಗಣಿಸಲಾಗುತ್ತದೆ ಎಂದು ಆದೇಶಿಸಿದ್ದಾರೆ. ರಾಜ್ಯದಲ್ಲಿ ಮಾಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು, ಪೊಲೀಸರು ಪ್ರತಿನಿತ್ಯ ಸಾರ್ವಜನಿಕರ ಜೊತೆ ನೇರ ಸಂಪರ್ಕದಲ್ಲಿ ಇರುತ್ತಾರೆ.

ಅಪರಾಧ ಕೃತ್ಯಗಳಲ್ಲಿ ಆರೋಪಿಗಳನ್ನು ಬಂಧಿಸುವ ವೇಳೆಯೂ ಪೊಲೀಸರು ಸೋಂಕಿಗೆ ತುತ್ತಾಗುವುದು, ಇಲ್ಲವೇ ಸೋಂಕಿತರ ಸಂಪರ್ಕಕ್ಕೆ ಬರುವುದು ಇತ್ತೀಚೆಗೆ ಕಂಡು ಬರುತ್ತಿದೆ. ಅಲ್ಲದೇ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕ್ವಾರಂಟೈನ್​​ಗೆ ಒಳಗಾಗುತ್ತಿರುವುದರಿಂದ ಅಂತಹ ಸಂದರ್ಭವನ್ನು ಕರ್ತವ್ಯದ ಅವಧಿಯಾಗಿ ಸೂಚಿಸಲಾಗಿದೆ‌.

ಬೆಂಗಳೂರು ಸೇರಿ ರಾಜ್ಯದ ಹಲವು ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಂಕಿತರ ಜೊತೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಲವು ಸಿಬ್ಬಂದಿಗಳು ಸಹ ಕ್ವಾರಂಟೈನ್ ಆಗಿರುವುದರಿಂದ ಹೊಸ ನಿಯಮವನ್ನು ಡಿಜಿಪಿ ಪ್ರವೀಣ್ ಸೂದ್ ಹೊರಡಿಸಿದ್ದಾರೆ. ಈ ಆದೇಶ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದವರು ಹಾಗೂ ತರಬೇತಿ ನಿಮಿತ್ತ ಹೊರರಾಜ್ಯದಿಂದ ವಾಪಸ್ ರಾಜ್ಯಕ್ಕೆ ಬರುವ ಪೊಲೀಸ್ ಸಿಬ್ಬಂದಿಗೂ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
First published: