ಬೆಂಗಳೂರು ಗ್ರಾಮಾಂತರ ಪೊಲೀಸರು (Bengaluru Rural Police) ಭರ್ಜರಿ ಜಂಟಿ ಕಾರ್ಯಾಚರಣೆ ನಡೆಸಿದ್ದು, ನಕಲಿ ದಾಖಲೆ ಸೃಷ್ಟಿಸಿ ಫೇಕ್ ಅಧಾರ್ ಕಾರ್ಡ್ (Fake Aadhar card) ತಯಾರಿಸುತ್ತಿದ್ದ ಸಾಮಾನ್ಯ ಸೇವಾ ಕೇಂದ್ರಗಳ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನಾಲ್ವರು ಆರೋಪಿಗಳು ಸೇರಿದಂತೆ ಪ್ರಮುಖ ದಾಖಲೆಗಳನ್ನು (Documents) ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ (Jigani), ಹೆಬ್ಬಗೋಡಿ (Hebbagodi) ಮತ್ತು ಆನೇಕಲ್ (Anekal) ಪಟ್ಟಣದ ಹಲವು ಕಡೆ ದಾಳಿ ನಡೆಸಿದ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲ್ದಂಡೆ ಮತ್ತು ಆಂತರಿಕ ಭದ್ರತಾ ವಿಭಾಗದ ಡಿವೈಎಸ್ಪಿ ಶಕುಂತಲಾ ಗೌಡರ್ ಜಂಟಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಕಳೆದ ಹಲವು ದಿನಗಳಿಂದ ಫೇಕ್ ಅಧಾರ್ ಕಾರ್ಡ್ ಸೃಷ್ಟಿ (Duplicate Aadhar Card Printing) ಬಗ್ಗೆ ಮಾಹಿತಿ ಕಲೆ ಹಾಕಿದ್ದ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿದ್ದರು.
ದೂರು ಆಧರಿಸಿ ಫೀಲ್ಡಿಗಿಳಿದಿದ್ದ ಪೊಲೀಸರು ಫೇಕ್ ಅಧಾರ್ ಕಾರ್ಡ್ ತಯಾರಿಕೆ ಕೇಂದ್ರಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಅದರಲ್ಲೂ ಜಿಗಣಿ ಪೊಲೀಸ್ ಠಾಣೆ ಮುಂಭಾಗದ ಶ್ರೀ ಕಂಪ್ಯೂಟರ್ ಸಾಮಾನ್ಯ ಸೇವಾ ಕೇಂದ್ರದ ಮಾಲೀಕ ಪುಂಡಲೀಕ, ಹಾಗೂ ಸಿಬ್ಬಂದಿಗಳಾದ ಮುಖೇಶ್ ಹಾಗೂ ಲಕ್ಷ್ಮೀಕಾಂತ್ ಪ್ರಮುಖ ಕಿಂಗ್ ಪಿನ್ ಗಳು ಎಂಬುದು ತಿಳಿದಿತ್ತು.
ಹಾಗಾಗಿ ಬೆಂಗಳೂರು ಎಸ್ಪಿ ಮಲ್ಲಿಕಾರ್ಜುನ ಹಾಗೂ ಆಂತರಿಕ ಭದ್ರತಾ ವಿಭಾಗದ ಸುಮಾರು ಐವತ್ತಕ್ಕೂ ಅಧಿಕ ಸಿಬ್ಬಂದಿ ಮತ್ತು ಅಧಿಕಾರಿಗಳು ಜಿಗಣಿ, ಹೆಬ್ಬಗೋಡಿ ಮತ್ತು ಆನೇಕಲ್ ಪಟ್ಟಣದ ಸಾಮಾನ್ಯ ಸೇವಾ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Kodagu: ನಿಷೇಧಾಜ್ಞೆಯಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಕೋಟ್ಯಂತರ ನಷ್ಟ; 4 ದಿನದಲ್ಲಿ ಸುಮಾರು 4 ಕೋಟಿ
ಸಾವಿರಾರು ರೂಪಾಯಿ ಪಡೆದು ನಕಲಿ ಆಧಾರ್ ಕಾರ್ಡ್
ಯೆಸ್ ಅದು ಅಂತಿಂಥ ಜಾಲ ಆಗಿರಲಿಲ್ಲ. ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಆಧಾರ್ ಕಾರ್ಡ್ ನಕಲಿ ಮಾಡುತ್ತಿದ್ದ ಗ್ಯಾಂಗ್ ಅದು. ಆನೇಕಲ್ ತಾಲ್ಲೂಕಿನ ಜಿಗಣಿ ಹೆಬ್ಬಗೋಡಿ ಹಾಗೂ ಕಿತ್ತಗಾನಹಳ್ಳಿ ವ್ಯಾಪ್ತಿಯಲ್ಲಿ ಸೈಬರ್ ಅಂಗಡಿಗಳನ್ನು ತೆರೆದು ಸಾವಿರಾರು ರೂಪಾಯಿ ಹಣ ಪಡೆದು ನಕಲಿ ಆಧಾರ್ ಕಾರ್ಡ್ ತಯಾರಿಸುತ್ತಿದ್ದರು.
ಆಧಾರ್ ನಕಲಿ ಮಾಡುತ್ತಿದ್ದವರ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿದ್ದ ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡಿ ಹಾಗೂ ಐ ಎಸ್ ಡಿ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡದವರು ದಾಳಿ ನಡೆಸಿದ್ದು, ಜಿಗಣಿಯಲ್ಲಿನ ಶ್ರೀ ಕಂಪ್ಯೂಟರ್, ಪುನೀತ್ ಸೈಬರ್ ಜೋನ್ ಹೆಬ್ಬಗೋಡಿಯ ಗ್ಲೋಬಲ್ ಕಂಪ್ಯೂಟರ್ ಹಾಗೂ ಕಿತ್ತಗಾನಹಳ್ಳಿಯ ಹಲವು ಕಡೆ ನಕಲಿ ಆಧಾರ್ ಕಾರ್ಡ್ ತಯಾರು ಮಾಡುತ್ತಿದ್ದ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾರೆ.
50ಕ್ಕೂ ಹೆಚ್ಚು ಪೊಲೀಸರಿಂದ ದಾಳಿ
ಐವತ್ತಕ್ಕೂ ಹೆಚ್ಚು ಪೊಲೀಸರು ಜಿಗಣಿಯಲ್ಲಿನ ಸಾಮಾನ್ಯ ಸೇವಾ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಗೆಜೆಟೆಡ್ ಅಧಿಕಾರಿಗಳ ನಕಲಿ ಸೀಲ್, ಸಿಗ್ನೇಚರ್ ಮಾಡಿದ ಅಪ್ಲಿಕೇಶನ್ ಹಾಗೂ ಅಧಾರ್ ಪ್ರಿಂಟ್ ಮಾಡುವ ಮಷೀನ್ ಗಳನ್ನು ಟೇಬಲ್ ಕೆಳಗೆ ಬಿಸಾಡಿ ತಪ್ಪಿಸಿಕೊಳ್ಳುವ ಯತ್ನವನ್ನು ನಡೆಸಿದ್ದರು. ಆದರೆ ಮೊದಲೇ ಮಾಹಿತಿ ಪಡೆದಿದ್ದ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳ ಬಣ್ಣ ಬಯಲಾಗಿದೆ.
ಬಳಿಕ ಆಧಾರ್ ಕಾರ್ಡ್ ಮಾಡಲು ಇಟ್ಟುಕೊಂಡಿದ್ದ ಅರ್ಜಿಗಳು, ಕಂಪ್ಯೂಟರ್ ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿರುವುದಾಗಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ತಿಳಿಸಿದ್ದಾರೆ.
ಬಾಂಗ್ಲಾ ವಲಸಿಗರಿಗೂ ಇಲ್ಲಿ ಸಿಗ್ತಿತ್ತು ಆಧಾರ್ ಕಾರ್ಡ್
ಫೇಕ್ ಅಧಾರ್ ಕಾರ್ಡ್ ಪ್ರಕರಣದ ಮೂಲ ಹುಡುಕಲು ಹೋದರೆ ನಗರದ ತಿಲಕ್ ನಗರ ಠಾಣೆಯಲ್ಲಿ ಸೆರೆಯಾದ ಮೋಸ್ಟ್ ವಾಂಟೆಡ್ ಉಗ್ರನಿಗೆ ಇಲ್ಲಿನ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಧಾರ್ ಕಾರ್ಡ್ ತಯಾರಿಸಲಾಗಿತ್ತು ಎಂಬುದು ಪೊಲೀಸ್ ಇಲಾಖೆಯ ಬಲ್ಲ ಮೂಲಗಳ ಮಾಹಿತಿ. ಜೊತೆಗೆ ಬೆಂಗಳೂರು ಹೊರವಲಯದಲ್ಲಿ ಬೀಡು ಬಿಟ್ಟಿರುವ ಬಾಂಗ್ಲಾ ವಲಸಿಗರಿಗೂ ಅಧಾರ್ ಕಾರ್ಡ್ ಮಾಡಿ ಕೊಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: Ramanagara: ಮಳೆ ಅವಾಂತರಕ್ಕೆ ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಕಾರಣ: HDK ಆರೋಪ
ಒಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯ ಹುಳುಕಳನ್ನೆ ಬಂಡವಾಳ ಮಾಡಿಕೊಂಡ ಕೆಲ ಸರ್ಕಾರದ ಪರವಾನಗಿ ಸಾಮಾನ್ಯ ಸೇವಾ ಕೇಂದ್ರಗಳೇ ಹಳ್ಳ ಹಿಡಿಸುತ್ತಿರುವುದು ದೇಶದ ಭದ್ರತೆಗೆ ಮಾರಕವಾಗಿದ್ದು, ಫೇಕ್ ಅಧಾರ್ ಕಾರ್ಡ್ ಪ್ರಕರಣದ ತನಿಖೆ ಮುಂದಿನ ದಿನಗಳಲ್ಲಿ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ