ಚಿಕ್ಕಮಗಳೂರು: ಮೂಡಿಗೆರೆಯಲ್ಲಿ (Mudigere) ತಿಂಗಳ ಅವಧಿಯಲ್ಲಿ ಇಬ್ಬರು ಕಾಡಾನೆಗೆ (Wild Elephant) ಬಲಿಯಾಗಿದ್ದಾರೆ. ಪ್ರತಿ ಬಾರಿ ಮೂಗಿಗೆ ತುಪ್ಪ ಸವರುತ್ತಿದ್ದ ಅರಣ್ಯ ಅಧಿಕಾರಿಗಳ (Forest officers) ವಿರುದ್ಧ ಸ್ಥಳಿಯರು ಅಕ್ಷರಶಃ ಕೆಂಡಾಮಂಡಲರಾಗಿದ್ದರು. ಮೃತದೇಹವನ್ನ (Dead Body) ಅರಣ್ಯ ಇಲಾಖೆ ಬಾಗಿಲಲ್ಲಿ ಇಟ್ಟು ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ, ಪೊಲೀಸರು-ಅರಣ್ಯಾಧಿಕಾರಿಗಳು ಹಾಗೂ ಸ್ಥಳಿಯರು ಮಧ್ಯೆ ತೀವ್ರ ವಾಕ್ಸಮರ ಉಂಟಾಗಿತ್ತು. ಸ್ಥಳಿಯರು ಪೊಲೀಸ್ ಜೀಪನ್ನೇ (Police jeep) ಪಲ್ಟಿ ಮಾಡಿ, ಅರಣ್ಯ ಇಲಾಖೆ ಗೇಟ್ ಮುರಿಯಲು ಯತ್ನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮನಸ್ಸೋ ಇಚ್ಛೆ ಲಾಠಿ ಬೀಸಿದ್ದಾರೆ. ಒದೆ ತಿಂದರೂ ಸ್ಥಳಿಯರು ಆಕ್ರೋಶ ಮಾತ್ರ ಕಡಿಮೆಯಾಗಿಲ್ಲ.
ಅರಣ್ಯಾಧಿಕಾರಿಗಳ ವಿರುದ್ಧ ಜನರ ಆಕ್ರೋಶ
ಮೂಡಿಗೆರೆ ತಾಲೂಕಿನ ಜನ ಅರಣ್ಯ ಇಲಾಖೆ ಮೇಳೆ ಅಕ್ಷರಶಃ ಕೆಂಡಾಮಂಡಲರಾಗಿದ್ದರು. ಆಗಸ್ಟ್ 15ರಂದು ದನ ಹುಡುಕುತ್ತಿದ್ದ ವ್ಯಕ್ತಿ ಹಾಗೂ ನಿನ್ನೆ ತೋಟದಿಂದ ಬರುತ್ತಿದ್ದ 45 ವರ್ಷದ ವ್ಯಕ್ತಿಯನ್ನ ಆನೆ ಬಲಿ ಪಡೆದಿತ್ತು. ಪ್ರತಿ ಬಾರಿ ಆನೆ ದಾಳಿಯಾದಗಲೂ ಅಧಿಕಾರಿಗಳು ನಮ್ಮ ಮೂಗಿಗೆ ತುಪ್ಪ ಸವರುತ್ತಾರೆ ಎಂದು ಸ್ಥಳೀಯರ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದರು. ಇಂದು ಮೃತದೇಹವನ್ನ ಅರಣ್ಯ ಇಲಾಖೆ ಬಾಗಿಲಲ್ಲಿ ಇಟ್ಟು ಈ ಸಾವಿಗೆ ಅಧಿಕಾರಿಗಳೇ ಕಾರಣ. ಇದು ಅಧಿಕಾರಿಗಳು ಮಾಡಿದ ಕೊಲೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ, ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಮನಸ್ಸೋ ಇಚ್ಛೆ ಲಾಠಿ ಬೀಸಿದ್ದಾರೆ.
ಆನೆ ದಾಳಿಯಿಂದ ರೊಚ್ಚಿಗೆದ್ದ ಜನರು
ಪ್ರತಿ ಬಾರಿ ಆನೆ ಇದೆ ಎಂದು ಫೋನ್ ಮಾಡಿದರೆ ಗಂಟೆ ಬಿಟ್ಟು ಬರುವ ಅಧಿಕಾರಿಗಳು ಎರಡು ಪಟಾಕಿ ಸಿಡಿಸಿ ಹೋಗುತ್ತಾರೆ. ಅವರು ಮತ್ತೆ ಬರುವುದು ಮತ್ತೆ ಆನೆ ಬಂದಾಗಲೇ ಎಂದು ಅಧಿಕಾರಿಗಳ ವಿರುದ್ಧ ರೆಬಲ್ ಆಗಿದ್ದರು. ಆನೆಯನ್ನ ಸೆರೆ ಹಿಡಿಯುವಂತೆ ನೂರಾರು ಬಾರಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಜನ ಮಾತ್ರ ಮೇಲಿಂದ ಮೇಲೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶಿತರಾಗಿದ್ದರು.
ಇದನ್ನೂ ಓದಿ: Kodimath Swamiji: ಮತ್ತೆ ಸುನಾಮಿ ಬಂದೀತು ಹುಷಾರ್! ಭಯಾನಕ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಪೊಲೀಸರಿಂದ ಲಾಠಿಚಾರ್ಜ್
ಮೂಡಿಗೆರೆ ತಾಲೂಕಿನ ಕುಂದೂರು, ಸಾರಗೋಡು, ಗುತ್ತಿಹಳ್ಳಿ, ಊರಬಗೆ, ಕೋಗಿಲೆ, ಗೌಡಹಳ್ಳಿ, ದೇವವೃಂದ, ಬೈರಾಪುರ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಆನೆ ಸಮಸ್ಯೆ ಮಿತಿ ಮೀರಿದೆ. ಆನೆಗಳು ಹಳ್ಳಿಗೆ ಬರುತ್ತಿವೆ. ಬೆಳೆಗಳು ಒಂದೂ ಉಳಿಯುತ್ತಿಲ್ಲ. ಜನ ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಆರಾಮಾಗಿದ್ದಾರೆ ಎಂದು ಅಧಿಕಾರಿಗಳ ಮೇಲೆ ಕೆಂಡಕಾರುತ್ತಾ ಮೂಡಿಗೆರೆ ಆರ್.ಎಫ್.ಓ. ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ, ಅಧಿಕಾರಿಗಳು-ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ಉಂಟಾಗಿ ಲಾಠಿ ಚಾರ್ಜ್ ನಡೆಸಿದ್ದಾರೆ.
ಇದನ್ನೂ ಓದಿ: Baby Elephant: ಅಯ್ಯಯ್ಯೋ, ಅಮ್ಮಾ ಅಂದ್ಕೊಂಡು ಅಂಬಾ ಜೊತೆ ಬಂದ್ಬಿಟ್ಟೆ! ಕನ್ಫ್ಯೂಸ್ ಆಗಿ ಕೊಟ್ಟಿಗೆಗೆ ಬಂದ ಆನೆಮರಿ
ಒಟ್ಟಾರೆ, ಸ್ಥಳೀಯರು ಆನೆ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗಲೇ ಅಧಿಕಾರಿಗಳು ಕ್ರಮಕೈಗೊಂಡರೆ ಏನೂ ಆಗುತ್ತಿರಲಿಲ್ಲ. ಪ್ರಾಣವೂ ಉಳಿಯೋದು. ಬೆಳೆಯೂ ಉಳಿಯೋದು. ಆದರೆ, ಅಧಿಕಾರಿಗಳ ಆಯ್ತು... ಮಾಡೋಣ.... ಬರೋಣ... ಓಡಿಸೋಣ... ನೋಡೋಣ... ಎಂಬ ಸಿದ್ಧ ಉತ್ತರ ಇಂದು ಸ್ಥಳಿಯರನ್ನ ಈ ರೀತಿ ಕೆರಳಿಸಿತ್ತು. ಈಗಾಗಲೇ ಹಿಂಡು-ಹಿಂಡು ಕಾಡನೆಗಳು ಮಲೆನಾಡಲ್ಲಿ ಲಗ್ಗೆ ಇಟ್ಟಿವೆ. ಕೂಡಲೇ ಅವುಗಳನ್ನ ಸ್ಥಳಾಂತರಿಸದಿದ್ದರೆ ಇವತ್ತು ಅರ್ಧಕ್ಕೆ ಬಿಟ್ಟಿರುವ ಕೆಲಸವನ್ನ ಮುಂದಿನ ದಿನಗಳಲ್ಲಿ ಪೂರ್ತಿ ಮಾಡುತ್ತೇವೆ ಎಂದು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ