ವಯಸ್ಸು ಮೀರುತ್ತಿದೆ ನಮ್ಮನ್ನ ಕೈ ಬಿಡಬೇಡಿ : ಪೊಲೀಸ್‌ ನೇಮಕಾತಿಗೆ ವಯೋಮಿತಿ ಹೆಚ್ಚಳಕ್ಕೆ ಆಕಾಂಕ್ಷಿಗಳ ಆಗ್ರಹ

ಮೊನ್ನೆಯಷ್ಟೇ ಸಬ್ ಇನ್ಸ್​​ಪೆಕ್ಟರ್ ವಯೋಮಿತಿಯನ್ನ ಸರ್ಕಾರ 28 ಹಾಗೂ 30 ವರ್ಷ ಗರಿಷ್ಠ ವಯೋಮಿತಿ ನಿಗದಿ ಪಡಿಸಿದ್ದು, ಕಾನ್ಸ್​​ಟೇಬಲ್ ಹುದ್ದೆಯ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು(ಸೆಪ್ಟೆಂಬರ್​. 15): ಪೋಲೀಸ್ ಕಾನ್ಸ್​​ಟೇಬಲ್ ಹುದ್ದೆಗೆ ವಯೋಮಿತಿಯನ್ನ ಸಡಿಲಿಕೆ ಮಾಡಲು ಸರ್ಕಾರ ತನ್ನ ಮೊಂಡಾಟ ಮುಂದುವರೆಸಿದ್ದು, ಇದಕ್ಕಾಗಿ ಬೇಡಿಕೆಯಿಟ್ಟ ಲಕ್ಷಾಂತರ ನಿರುದ್ಯೋಗಿಗಳ ಪಾಡು ಹೇಳ ತೀರದಾಗಿದೆ. ಪ್ರಸ್ತುತ ರಾಜ್ಯ ನಾಗರಿಕ ಪೋಲೀಸ್ ನೇಮಕಾತಿ ಅಧಿಸೂಚನೆ ಪ್ರಕಾರ ಸಾಮಾನ್ಯ ವರ್ಗಕ್ಕೆ 25 ಹಾಗೂ ಪ.ಜಾ, ಪ.ವರ್ಗ ಹಾಗೂ ಹಿಂದುಗಳಿದ ವರ್ಗಕ್ಕೆ 27 ವರ್ಷಕ್ಕೆ ವಯೋಮಿತಿ ನಿಗದಿ ಪಡಿಸಲಾಗಿದೆ. ಈ ಅವಧಿಯನ್ನ 25 ರಿಂದ 27 ಕ್ಕೆ ಹಾಗೂ 27 ರಿಂದ 30 ಕ್ಕೆ ಏರಿಕೆ ಮಾಡುವಂತೆ ಒತ್ತಾಯವಾಗಿದೆ. ಪೊಲೀಸ್ ಇಲಾಖೆ ಸೇರಬೇಕೆಂದು ಕನಸು ಹೊತ್ತಿರುವ ಸಾವಿರಾರು ನಿರುದ್ಯೋಗಿಗಳು ಈ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿ ಅವರುಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಆ ಎರಡು ಸರ್ಕಾರಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದು, ವಯೋಮಿತಿ ಗಡಿಯಲ್ಲಿರುವ ನಿರುದ್ಯೋಗಿಗಳಿಗೆ ನಿರಾಸೆ ಉಂಟಾಗಿದೆ.

ಇದೀಗ ಕಂಡ ಕಂಡಲ್ಲಿ ಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿರುವ ಯುವಕರು ಯಾರೇ ಸಿಕ್ಕರೂ ಅವರ ಕಾರಿನ ಬಳಿಯೋ ಅಥವಾ ಸೆಕ್ಯುರಿಟಿಯವರಿಗೆ ಮನವಿ ಮಾಡಿ ಮಂತ್ರಿಗಳ ಕೈಗೆ ಮನವಿ ಪತ್ರ ನೀಡುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಜನರಲ್‌ ಅಭ್ಯರ್ಥಿಗಳಿಗೆ 31, ಎಸ್‌ಸಿ / ಎಸ್‌ಟಿ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ, ಗುಜರಾತ್‌ನಲ್ಲಿ ಜನರಲ್ ಕೆಟಗರಿ ಅಭ್ಯರ್ಥಿಗಳಿಗೆ 31 ವರ್ಷ, ಎಸ್‌ಸಿ / ಎಸ್‌ಟಿ / ಒಬಿಸಿ ಅಭ್ಯರ್ಥಿಗಳಿಗೆ 33 ವರ್ಷ. ಪಶ್ಚಿಮ ಬಂಗಾಳ ಮತ್ತು ಆಂದ್ರಪ್ರದೇಶದಲ್ಲಿ ಜನರಲ್‌ ಕೆಟಗರಿ ಅಭ್ಯರ್ಥಿಗಳಿಗೆ 30 ವರ್ಷ ಮತ್ತು ಇತರೆ ಅಭ್ಯರ್ಥಿಗಳಿಗೆ 32 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಆದರೆ, ನಮ್ಮಲ್ಲಿ 25, 27 ಗರಿಷ್ಠ ವಯೋಮಿತಿಯಿದ್ದು, ಇದರಿಂದ ಸಾವಿರಾರು ಯುವಕರ ಉದ್ಯೋಗದ ಕನಸು ನಚ್ಚುನೂರಾಗುತ್ತಿದೆ. ಮೊನ್ನೆಯಷ್ಟೇ ಸಬ್ ಇನ್ಸ್​​ಪೆಕ್ಟರ್ ನೇಮಕಾತಿಗೆ ವಯೋಮಿತಿಯನ್ನ ರಾಜ್ಯ ಸರ್ಕಾರ 28 ಹಾಗೂ 30 ವರ್ಷ ಗರಿಷ್ಠ ವಯೋಮಿತಿ ನಿಗದಿ ಪಡಿಸಿದ್ದು, ಕಾನ್ಸ್​​ಟೇಬಲ್ ಹುದ್ದೆಯ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದನ್ನೂ ಓದಿ : ಕುತೂಹಲಗೊಳಿಸಿದೆ ಜಗದೀಶ್ ಶೆಟ್ಟರ್ ರಹಸ್ಯ ಕಾರ್ಯಸೂಚಿ; ನಾಯಕತ್ವ ಬದಲಾವಣೆಗೆ ನಡೆದಿದೆಯಾ ಪ್ರಯತ್ನ?

ಕೋವಿಡ್ ಹಿನ್ನೆಲೆಯಲ್ಲಿ ಮಾರ್ಚ್ ನಲ್ಲಿ ನೇಮಕಾತಿ ಪ್ರಕ್ರಿಯೆಯನ್ನ ಇದೀಗ ಆರಂಭಿಸಿರುವುದು ಸುಮಾರು 16 ಸಾವಿರ ಅಭ್ಯರ್ಥಿಗಳು ವಯೋಮಿತಿ ಪ್ರಕಾರ ಅನರ್ಹರಾಗಿದ್ದಾರೆ.

ಒಟ್ಟಾರೆ ಸರ್ಕಾರಿ ಉದ್ಯೋಗದ ಕನಸು ಕಂಡು ಕಷ್ಟಪಟ್ಟು ಓದಿ ವಯೋಮಿತಿಯ ಅಂಚಿನಲ್ಲಿ ನಿಂತಿರುವ ಸಾವಿರಾರು ನಿರುದ್ಯೋಗಿಗಳ ಮಾತನ್ನ ಸರ್ಕಾರ ಆಲಿಸಬೇಕಿದೆ. ಇತರೆ ರಾಜ್ಯಗಳು ಮಾಡಿರುವ ವಯೋಮಿತಿ ಸಡಿಲಿಕೆ ನಮ್ಮ ರಾಜ್ಯದಲ್ಲೂ ಜಾರಿಯಾದರೆ ಸಾವಿರಾರು ಯುವಕರ ಕನಸು ಈಡೇರಲಿದೆ.
Published by:G Hareeshkumar
First published: