news18-kannada Updated:December 24, 2020, 2:53 PM IST
ಕಲಬುರ್ಗಿ ಹೈಕೋರ್ಟ್ ಪೀಠ
ಕಲಬುರ್ಗಿ(ಡಿಸೆಂಬರ್. 24): ಕರ್ತವ್ಯ ಲೋಪ ಆರೋಪದ ಮೇಲೆ ಇನ್ಸ್ಪೆಕ್ಟರ್ ರೊಬ್ಬರಿಗೆಗೆ ರಸ್ತೆಯ ಕಸ ಗುಡಿಸುವ ಶಿಕ್ಷೆ ವಿಧಿಸಿದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಕಲಬುರ್ಗಿ ಹೈಕೋರ್ಟ್ ಪೀಠದಿಂದ ತೀರ್ಪು ಹೊರ ಬಿದ್ದಿದೆ. ಹೇಬಿಯಸ್ ಕಾರ್ಪಸ್ ಕುರಿತ ದೂರು ದಾಖಲಿಸದೇ ಇರುವ ಆರೋಪದ ಹಿನ್ನೆಲೆಯಲ್ಲಿ ರಸ್ತೆಯ ಕಸ ಗುಡಿಸುವ ಶಿಕ್ಷೆ ನೀಡಲಾಗಿದೆ. ಸ್ಟೇಷನ್ ಬಜಾರ್ ನ ಸಿದ್ಧರಾಮೇಶ್ವರ್ ಗಡೇದ್ ಶಿಕ್ಷೆಗೆ ಗುರಿಯಾದ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದಾರೆ. ಮಗ ಕಾಣೆಯಾಗಿದ್ದಾನೆಂದು ಮಹಿಳೆ ದೂರು ನೀಡಿದ್ದರೂ ಎಫ್ಐಆರ್ ದಾಖಲಿಸದೆ ಕರ್ತವ್ಯ ನಿರ್ಲಕ್ಷ್ಯ ವಹಿಸಿದ್ದಾರೆಂದು ಆರೋಪಿಸಲಾಗಿದೆ. ಮಿಣಜಿಗಿ ತಾಂಡಾದ ಮಹಿಳೆ ತಾರಾಬಾಯಿ ಯಿಂದ ಕಲಬುರ್ಗಿ ಹೈಕೋರ್ಟ್ ಪೀಠದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾಗಿತ್ತು. ಸುಧೀರ್ಘ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಹಾಗೂ ಪಿ.ಕೃಷ್ಣ ಭಟ್ ಅವರನ್ನೊಳಗೊಂಡ ಪೀಠ ತೀರ್ಪು ಪ್ರಕಟಿಸಿದೆ.
ಪೊಲೀಸ್ ಠಾಣೆಯ ಅಧಿಕಾರಿಗಳ ಕಾರ್ಯವೈಖರಿ ಆಘಾತಕಾರಿಯಾಗಿದೆ. ಅಪರಾಧ ದಂಡಸಂಹಿತೆ ಅನ್ವಯ ನಿಯಮಗಳ ಪಾಲನೆ ಮಾಡಲು ಅಧಿಕಾರಿಗಳು ವಿಫಲವಾಗಿದ್ದಾರೆ. ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ರಕ್ಷಣೆಗೆ ಪೊಲೀಸರು ಮುದಾಗಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಮಹಿಳೆಯ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸದೆ ಠಾಣಾಧಿಕಾರಿ ನಿರ್ಲಕ್ಷ್ಯ ಕರ್ತವ್ಯ ಲೋಪ ಎನಿಸಿಕೊಳ್ಳುತ್ತದೆ. ನಿಯಮಗಳ ಪ್ರಕಾರ ಮಹಿಳೆಯ ಕೊಟ್ಟ ದೂರನ್ನು ದಾಖಲಿಸಿಕೊಳ್ಳಬೇಕಿತ್ತು. ಒಂದು ವೇಳೆ ಪ್ರಕರಣ ತಮ್ಮ ಠಾಣೆಯ ವ್ಯಾಪ್ತಿಗೆ ಬಾರದೆ, ಠಾಣೆಯ ವ್ಯಾಪ್ತಿಗೆ ಹೊರಗೆ ನಡೆದಿದ್ದರೂ ದೂರು ದಾಖಲಿಸಿಕೊಂಡು ಅದನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ವರ್ಗಾಯಿಸಬಹುದಾಗಿತ್ತು. ಈ ಕೆಲಸ ಮಾಡದಿರುವುದು ಅತ್ಯಂತ ದುರದೃಷ್ಟಕರ.
ಪೊಲೀಸರ ಕ್ರಮದಿಂದ ಅರ್ಜಿದಾರ ಮಹಿಳೆ ಮತ್ತು ಆಕೆಯ ಮಗನ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆಯಾಗಿದೆ. ಇನ್ಸ್ಪೆಕ್ಟರ್ ಕರ್ತವ್ಯ ಲೋಪ ಎಸಗಿದ್ದಾರೆಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ. ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಪೀಠದ ಎದುರು ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಆದರೂ ಕರ್ತವ್ಯ ಲೋಪ ಎಸಗಿದ ಅಧಿಕಾರಿ ರಸ್ತೆಯ ಕಸ ಗುಡಿಸಬೇಕೆಂದು ಪೀಠ ತೀರ್ಪು ನೀಡಿದೆ.
ಇದನ್ನೂ ಓದಿ :
Bidar Weather: ಬೀದರ್ನಲ್ಲಿ ಕನಿಷ್ಠ ತಾಪಮಾನ ದಾಖಲು : ಮತ್ತಷ್ಟು ಚಳಿ ದಟ್ಟವಾಗುವ ಸಾಧ್ಯತೆ
ಝೀರೋ ಎಫ್.ಐ.ಆರ್. ಕುರಿತು ಕಲಬುರ್ಗಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಪೊಲೀಸರಿಗೂ ಅರಿವು ಮೂಡಿಸಲು ಕಾರ್ಯಾಗಾರ ಆಯೋಜಿಸುವಂತೆ ಕಲಬುರ್ಗಿ ಎಸ್.ಪಿ.ಗೆ ಸೂಚನೆ ನೀಡಿದೆ. ತಾರಾಬಾಯಿ ಮಗ ಸುರೇಶ್ ಅಕ್ಟೋಬರ್ 20 ರಂದು ನಾಪತ್ತೆಯಾಗಿದ್ದ. ತನ್ನ ಮಗ ಕಾಣೆಯಾಗಿದ್ದಾನೆಂದು ತಾರಾಬಾಯಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಮಹಿಳೆ ಅನಿವಾರ್ಯವಾಗಿ ಕಲಬುರ್ಗಿ ಹೈಕೋರ್ಟ್ ಪೀಠದ ಎದುರು ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು.
ಇದಾದ ನಂತರ ತಾಯಾಬಾಯಿ ಮಗ ಸುರೇಶ್ ಗೋಗಿ ಗ್ರಾಮದ ತನ್ನ ಮಾವನ ಮನೆಯಲ್ಲಿರೋದನ್ನು ಪತ್ತೆ ಹಚ್ಚಿದ್ದ ಪೊಲೀಸರು ನವೆಂಬರ್ 03 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಎಫ್.ಐ.ಆರ್. ದಾಖಲಿಸಿಕೊಳ್ಳದೇ ಇದ್ದ ಕುರಿತು ಹೈಕೋರ್ಟ್ ಪೀಠದ ಅಸಮಾಧಾನ ವ್ಯಕ್ತಪಡಿಸಿದ್ದು, ರಸ್ತೆಯ ಕಸ ಗುಡಿಸುವ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಹೈಕೋರ್ಟ್ ಆದೇಶದ ಅನ್ವಯ ಪೊಲೀಸ್ ಇನ್ಸ್ಪೆಕ್ಟರ್ ರಸ್ತೆಯ ಕಸ ಗುಡಿಸುವ ಕೆಲಸ ಮಾಡುವ ಮೂಲಕ ಆದೇಶ ಪಾಲನೆ ಮಾಡಲಾರಂಭಿಸಿದ್ದಾರೆ.
Published by:
G Hareeshkumar
First published:
December 24, 2020, 2:53 PM IST