ಬೆಂಗಳೂರು: ಯಾರಾದರೂ ನಿಮ್ಮ ಫೋನ್ (Phone) ಕಳೆದುಕೊಂಡು ಪೊಲೀಸರಿಗೆ ದೂರು ನೀಡಿದ್ದರೆ, ನಿಮಗೊಂದು ಖುಷಿ ಸಮಾಚಾರವಿದೆ ನೋಡಿ. ಅದೇನೆಂದರೆ ಕಳೆದ ಎರಡು ವಾರಗಳಲ್ಲಿ ಕದ್ದ ಮತ್ತು ಕಳೆದುಹೋದ ಸುಮಾರು 2,500 ಮೊಬೈಲ್ (Mobile) ಫೋನ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಇದ್ರಲ್ಲಿ ನಿಮ್ಮ ಫೋನ್ ಇರಬಹುದು ಚೆಕ್ ಮಾಡಿಕೊಳ್ಳಿ. ಸಿಇಐಆರ್ ಪೋರ್ಟಲ್ (CEIR Portal) ಬಳಸಿಕೊಂಡು 2,500 ಫೋನ್ ಪತ್ತೆ ಮಾಡಿದ ಪೊಲೀಸ್ ಪಡೆ
ಹೌದು, ಕದ್ದ ಮತ್ತು ಕಳೆದುಹೋದ ಪ್ರಕರಣದಲ್ಲಿ ಸಿಇಐಆರ್ ವ್ಯವಸ್ಥೆಯ ಮೂಲಕ ಕಳೆದ ಎರಡು ವಾರಗಳಲ್ಲಿ ಸುಮಾರು 2,500 ಮೊಬೈಲ್‌ಗಳನ್ನು ಪತ್ತೆಹಚ್ಚಿ ಫೋನ್ ಮಾಲೀಕರಿಗೆ ಪೊಲೀಸರು ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೋನ್‌ಗಳನ್ನು ಪತ್ತೆ ಹಚ್ಚುವಲ್ಲಿ ಕೇಂದ್ರ ಸಲಕರಣೆ ಗುರುತಿಸುವಿಕೆ ನೋಂದಣಿ (ಸಿಇಐಆರ್) ವ್ಯವಸ್ಥೆ ಸಹಕಾರಿಯಾಗಿದ್ದು ಈ ಸೇವೆಯನ್ನು ಬಳಸಿಕೊಂಡು ಪೊಲೀಸರು ಇಂತದ್ದೊಂದು ಯಶಸ್ವಿ ಕಾರ್ಯಚರಣೆ ಮಾಡಿದ್ದಾರೆ. ಅದಲ್ಲದೇ ಈ ತಂತ್ರಜ್ಞಾನ ಫೋನ್ ಕಳ್ಳರಿಗೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.
ಇದನ್ನೂ ಓದಿ: Success Story: ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆ ಬೇಧಿಸಿದ ಗಟ್ಟಿಗಿತ್ತಿ ಸೌಮ್ಯ! ಈ ಯಶಸ್ಸಿನ ಕಾರಣ ತಿಳಿಯಿರಿ
ಏನಿದು ಸಿಇಐಆರ್? ಹೇಗೆ ಕೆಲಸ ಮಾಡುತ್ತದೆ?
ಸಿಇಐಆರ್ ದೂರು ನೀಡುವ ಕಾರ್ಯವಿಧಾನ ಕದ್ದ ಸಾಧನಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಅವುಗಳನ್ನು ಬಳಸಲು ಪ್ರಯತ್ನಿಸಿದಾಗ ಪೊಲೀಸರಿಗೆ ಎಚ್ಚರಿಕೆ ನೀಡುತ್ತದೆ. CEIR ಪೋರ್ಟಲ್‌ನಲ್ಲಿ ಸಾಧನ ಮತ್ತು ಅದರ ಮಾಲೀಕರ ಎಲ್ಲಾ ವಿವರಗಳನ್ನು ಒದಗಿಸಿದ ನಂತರ, ಮೊಬೈಲ್ ಸ್ವಯಂಚಾಲಿತವಾಗಿ ನಿರ್ಬಂಧಿಸಲ್ಪಡುತ್ತದೆ. ಹೊಸ ಸಿಮ್ ಕಾರ್ಡ್ ಅನ್ನು ಸೇರಿಸುವ ಮೂಲಕ ಸಾಧನವನ್ನು ಬಳಸುವ ಯಾವುದೇ ಪ್ರಯತ್ನವು ಹೊಸ ಬಳಕೆದಾರರ ಸಂಖ್ಯೆ ಮತ್ತು ಸ್ಥಳ ಮತ್ತು ಇತರ ವಿವರಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ.
ದೂರು ಬಂದ ಬಳಿಕ ಮೊದಲು ಪೊಲೀಸರು ಆ ಸಂಖ್ಯೆಗೆ ಮರಳಿ ಕರೆ ಮಾಡುತ್ತಾರೆ. ಪ್ರತಿಕ್ರಿಯೆ ನೀಡದಿದ್ದಲ್ಲಿ ಮೊಬೈಲ್ ಫೋನ್ ಸಕ್ರಿಯಗೊಳಿಸುತ್ತಾರೆ. ಇದು ಕದ್ದ ಅಥವಾ ಕಳೆದು ಹೋದ ಫೋನ್ ಎಂದು ತಿಳಿಸುತ್ತಾರೆ. ಮತ್ತು ಅದನ್ನು ಹಿಂತಿರುಗಿಸಬೇಕು ಇಲ್ಲಾ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡುತ್ತಾರೆ. ಇದು ರಿಸೀವರ್ ಬಳಸಿದ ಸಿಮ್ ಕಾರ್ಡ್ ಎಲ್ಲಾ ವಿವರಗಳನ್ನು ಒದಗಿಸುತ್ತದೆ ಮತ್ತು ಪೊಲೀಸರು ಫೋನ್ ಸಿಕ್ಕ ವ್ಯಕ್ತಿ ಜೊತೆ ಸಂಪರ್ಕದಲ್ಲಿರಲು ಸುಲಭವಾಗುತ್ತದೆ. ಇಂತಹ ಪ್ರಕರಣದಲ್ಲಿ ಖುದ್ದಾಗಿ ಬಂದು ಫೋನ್ ನೀಡುವುದಿಲ್ಲ ಬದಲಿಗೆ ಮೊಬೈಲ್‌ಗಳನ್ನು ಕೊರಿಯರ್‌ಗಳ ಮೂಲಕ ಪೊಲೀಸರಿಗೆ ಹಿಂತಿರುಗಿಸುತ್ತಾರೆ.
ಕರ್ನಾಟಕದಲ್ಲೂ ಸಿಇಐಆರ್ ಅನುಷ್ಠಾನ
ದೆಹಲಿ ಮತ್ತು ಮುಂಬೈ ನಂತರ ಸಿಇಐಆರ್ ಅನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ ಎಂದು ಡೈರೆಕ್ಟರ್ ಜನರಲ್ ಮತ್ತು ಪೊಲೀಸ್ ಮಹಾನಿರೀಕ್ಷಕ ಪ್ರವೀಣ್ ಸೂದ್ ತಿಳಿಸಿದ್ದಾರೆ. "ಫೆಬ್ರವರಿಯಲ್ಲಿ ಈ ವ್ಯವಸ್ಥೆ ಅನುಷ್ಠಾನಗೊಂಡಾಗಿನಿಂದ, ನಾವು ಕನಿಷ್ಠ 2,500 ಮೊಬೈಲ್ ಫೋನ್‌ಗಳನ್ನು ಅವುಗಳ ಮಾಲೀಕರಿಗೆ ಹಿಂತಿರುಗಿಸಿದ್ದೇವೆ. ಅವರಲ್ಲಿ ಸುಮಾರು 2,000 ಮಂದಿ ಬೆಂಗಳೂರಿನಲ್ಲಿ ಮತ್ತು ಉಳಿದವರು ವಿವಿಧ ಜಿಲ್ಲೆಗಳಲ್ಲಿ ಪತ್ತೆಯಾಗಿದ್ದಾರೆ" ಎಂದು ತಿಳಿಸಿದ್ದಾರೆ.
CEIR ಪೋರ್ಟಲ್‌ಗೆ ಹೇಗೆ ಲಾಗಿನ್ ಆಗುವುದು ಎಂಬುದರ ಬಗ್ಗೆ ತಿಳಿದಿಲ್ಲದವರು. ಅವರು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ತಮ್ಮ ಸಾಧನದ ವಿವರಗಳನ್ನು ಅಪ್‌ಲೋಡ್ ಮಾಡಲು ಸಿಬ್ಬಂದಿಯ ಸಹಾಯವನ್ನು ಪಡೆಯಬಹುದು. ಮೊಬೈಲ್ ಕಳ್ಳತನವಾದರೆ ಈ ಪ್ರಕ್ರಿಯೆ ತುಂಬಾ ಸರಳವಾಗಿ ಫೋನ್ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಮೊಬೈಲ್ ಹಿಂತಿರುಗಿಸದಿದ್ದರೆ, ಅದನ್ನು ಹೊಂದಿರುವವರು ಅದನ್ನು ಬಳಸಲಾಗುವುದಿಲ್ಲ. ಏಕೆಂದರೆ ಅದನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಸೂದ್ ಅವರು ಹೇಳಿದ್ದಾರೆ.
ಈ ಪೋರ್ಟಲ್ ಬಳಸಲು ಸಿಮ್ ಕರ್ನಾಟಕದಲ್ಲಿ ನೋಂದಣಿಯಾಗಿರಬೇಕು
ಈ ವ್ಯವಸ್ಥೆ ಬಳಸಿಕೊಳ್ಳಲು ಮೊಬೈಲ್ ಮತ್ತು ಸಿಮ್ ಅನ್ನು ಕರ್ನಾಟಕದಲ್ಲಿ ನೋಂದಾಯಿಸಿಕೊಳ್ಳಬೇಕು. ಇದರಿಂದ ಕಳೆದು ಹೋದ ಮೊಬೈಲ್ ಅನ್ನು ದೇಶದ ಯಾವುದೇ ಭಾಗಕ್ಕೆ ತೆಗೆದುಕೊಂಡ ಹೋದರೂ ಪತ್ತೆಹಚ್ಚಬಹುದು. ಹಿಂದೆ ರಾಜ್ಯದಲ್ಲಿ ಕಳೆದು ಹೋದ ಮೊಬೈಲ್ಗಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಈಗ ಅದು ಸುಲಭವಾದ ಮಾರ್ಗವಾಗಿದೆ ಎಂದು ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲೂ ಯಶಸ್ವಿ ಕಾರ್ಯಾಚರಣೆ
ಹುಬ್ಬಳ್ಳಿ-ಧಾರವಾಡದ ಪೊಲೀಸ್ ಕಮಿಷನರ್ ರಮಣ್ ಗುಪ್ತಾ ಅವರು ಕಳೆದ ಎರಡು ವಾರಗಳಲ್ಲಿ ಸುಮಾರು 40 ಫೋನ್‌ಗಳನ್ನು ಮಾಲೀಕರಿಗೆ ಹಿಂತಿರುಗಿಸಿದ್ದಾರೆ ಮತ್ತು ಇನ್ನೂ 50 ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಅವುಗಳನ್ನು ಶೀಘ್ರದಲ್ಲೇ ಹಿಂತಿರುಗಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ಹುಬ್ಬಳ್ಳಿ-ಧಾರವಾಡದ ನಾಗರಿಕರು ಅಂತಹ ಫೋನ್‌ಗಳ ವಿವರಗಳನ್ನು ವಾಟ್ಸಾಪ್ ಸಂಖ್ಯೆಗೆ (8277952828) ಅಪ್‌ಲೋಡ್ ಮಾಡಬಹುದು. ಈ ಸಂಖ್ಯೆಗೆ 'ಹಾಯ್' ಸಂದೇಶವನ್ನು ಕಳುಹಿಸುವ ವ್ಯಕ್ತಿಗೆ ಫಾರ್ಮ್‌ನೊಂದಿಗೆ ಲಿಂಕ್ ಅನ್ನು ಕಳುಹಿಸಲಾಗುತ್ತದೆ ಮತ್ತು ಭರ್ತಿ ಮಾಡಿದ ಮತ್ತು ಕಳುಹಿಸುವ ಫಾರ್ಮ್ ಸಂಬಂಧಿಸಿದ ಜನರನ್ನು ತಲುಪುತ್ತದೆ ಎಂದಿದ್ದಾರೆ.
ಗದಗದಲ್ಲೂ 26 ಫೋನ್‌ಗಳನ್ನು ಹಿಂದಿರುಗಿಸಿದ ಪೊಲೀಸರು
ಗದಗ ಜಿಲ್ಲೆಯಲ್ಲೂ ವಾಟ್ಸ್‌ಆ್ಯಪ್ ನಂಬರ್ (8277969900) ಅಳವಡಿಸಲಾಗಿದೆ ಎಂದು ಜಿಲ್ಲಾ ಎಸ್‌ಪಿ ಬಿ.ಎಸ್.ನೇಮಗೌಡ ತಿಳಿಸಿದ್ದಾರೆ. “CEIR ಬಗ್ಗೆ ಅರಿವಿಲ್ಲದವರು ದೂರುಗಳನ್ನು ಸಲ್ಲಿಸಲು ಪೊಲೀಸ್ ಠಾಣೆಗೆ ಭೇಟಿ ನೀಡಬಹುದು, ನಮ್ಮ ಸಿಬ್ಬಂದಿ ಅವರಿಗೆ ಸಹಾಯ ಮಾಡುತ್ತಾರೆ ಎಂದಿದ್ದಾರೆ. ಮೊಬೈಲ್ ಕಳೆದು ಹೋದರೆ ಇ-ಲಾಸ್ಟ್ ಆಪ್ ಮೂಲಕ ದೂರು ದಾಖಲಿಸಲಾಗುತ್ತದೆ. ದರೋಡೆ ಮಾಡಿದರೆ, ಎಫ್‌ಐಆರ್ ದಾಖಲಿಸಲಾಗುತ್ತದೆ ಮತ್ತು ಸಿಇಐಆರ್ ಪೋರ್ಟಲ್‌ನಲ್ಲಿ ವಿವರಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ” ಎಂದು ಅವರು ಹೇಳಿದರು.
ಗದಗ ಪೊಲೀಸರರೂ ಸಹ 26 ಮೊಬೈಲ್ ಫೋನ್‌ಗಳನ್ನು ಹಿಂತಿರುಗಿಸಿದ್ದು, ಇನ್ನೂ 41 ಫೋನ್‌ಗಳನ್ನು ಪತ್ತೆ ಹಚ್ಚಿದ್ದಾರೆ.
ಒಟ್ಟಾರೆ ಈ ವ್ಯವಸ್ಥೆ ಫೋನ್ ಕಳ್ಳರಿಗೆ ಚಳಿಜ್ವರ ಬರಿಸಿದೆ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ