ವಿಜಯಪುರ (ಜು, 18): ಬಸವನಾಡಿನಲ್ಲಿ 10 ವರ್ಷಗಳ ಹಿಂದೆ ನಡೆದಿದ್ದ ಹತ್ಯೆ (Murder) ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಸಿನಿಮಾ ಕಥೆಯನ್ನೇ ಹೋಲುವಂತಿರೋ ನೈಜ ಘಟನೆಯೊಂದು ವಿಜಯಪುರದ (Vijyapura) ಬಸವನಾಡಿನಲ್ಲಿ ನಡೆದಿದೆ. 10 ವರ್ಷಗಳ ಹಿಂದೆ ನಡೆದಿದ್ದ ಹತ್ಯೆ ಪ್ರಕರಣ ಇದೀಗ ಬಹಿರಂಗಗೊಂಡಿದೆ. ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಪ್ರಕರಣದ ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ದಾನೇಶ್ವರಿಯ (Daneshwari) ಚಿಕ್ಕಪ್ಪನ ಜೊತೆಗೆ ದಾನೇಶ್ವರಿಯ ಗಂಡ ಹಾಗೂ ಭಾವ ಕುಡಿದ ಮತ್ತಿನಲ್ಲಿ ದಾನೇಶ್ವರಿಯನ್ನು ಕೊಲೆ ಮಾಡಿದ್ದು ನಾವೇ ಅಂತ ಹೇಳಿದ್ದಾಗ, ದಾನೇಶ್ವರಿಯ ನಾಪತ್ತೆ (Missing) ಪ್ರಕರಣದ ಅಸಲಿ ಕಹಾನಿ ಬಯಲಾಗುತ್ತದೆ.
ಗಂಡ-ಹೆಂಡತಿ ನಡುವೆ ಮನಸ್ತಾಪ
ವಿಜಯಪುರ ನಗರದ ಬಸವರಾಜ ಮಮದಾಪುರ ಇವರ ಪುತ್ರಿಯಾದ ಪ್ರಿಯಾಂಕಾ ದಾನೇಶ್ವರಿ ಇವಳನ್ನು, ತಮ್ಮ ಸಂಬಂಧಿಕರಲ್ಲಿಯೇ ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ಹುಚ್ಚಪ್ಪಗೌಡ ಪಾಟೀಲ್ ಎಂಬಾತನ ಜೊತೆ 2008 ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಮದುವೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರದ ದಿನಗಳಲ್ಲಿ ಇಬ್ಬರಲ್ಲಿಯೂ ಮನಸ್ತಾಪ ಉಂಟಾಗಿ ಪದೇಪದೇ ತವರು ಮನೆಗೆ ಬರುತ್ತಿದ್ದಳು. ಇತ್ತ ಕಡೆ ಪೋಷಕರೂ ಅವಳ ಮನವೊಲಿಸಿ ಗಂಡನ ಮನೆಗೆ ಬಿಟ್ಟು ಬರುತ್ತಿದ್ದರು.
ಗಂಡನ ಜೊತೆ ಬಾಳೋದಿಲ್ಲ ಎಂದ ಹೆಂಡತಿ
2011ರ ವರೆಗೂ ಹೀಗೆಯೇ ಮುಂದುವರೆದಿತ್ತು. ಒಂದು ದಿನ ಮೃತ ದಾನೇಶ್ವರಿ ನನಗೆ ಗಂಡನ ಜೊತೆಗೆ ಸಂಸಾರ ಮಾಡಲು ಇಷ್ಟವಿಲ್ಲ, ನಾನು ಇನ್ನೊಬ್ಬನನ್ನು ಪ್ರೀತಿಸುತ್ತಿದ್ದೇನೆ ಎಂದು ಪೋಷಕರ ಬಳಿ ಹೇಳುತ್ತಾಳೆ. ಆಗ ನಿನಗೆ ಮದುವೆಯಾಗಿದ್ದು, ಈ ರೀತಿಯಾಗಿ ಮಾಡುವುದು ಸರಿಯಲ್ಲ ಎಂದು ಸಂಬಂಧಿಕರು ಎಲ್ಲ ರೀತಿಯ ಬುದ್ಧಿವಾದ ಹೇಳಿ ಮತ್ತೆ ಗಂಡನ ಮನೆಗೆ ಬಿಟ್ಟು ಬರುತ್ತಾರೆ. ಈ ವಿಚಾರ ಗಂಡನ ಮನೆಯವರಿಗೆ ಗೊತ್ತಾಗುತ್ತದೆ. ಬಳಿಕ ಹಿರಿಯರ ಸಮ್ಮುಖದಲ್ಲಿ ಮಾತುಕತೆ ಮಾಡಿ ಎಲ್ಲವನ್ನು ಸರಿ ಮಾಡ್ತಾರೆ.
ದಾನೇಶ್ವರಿ ತಾಯಿಯಿಂದ ದೂರು
ಒಂದು ದಿನ ನಿಮ್ಮ ಮಗಳು ಅಂಗಡಿಗೆ ಹೋಗಿ ಬರುವೆನೆಂದು ಹೇಳಿ ನಾಪತ್ತೆಯಾಗಿದ್ದಾಳೆ ಅಂತ ಗಂಡನ ಮನೆಯವರು ದಾನೇಶ್ವರಿ ಮನೆಯವರಿಗೆ ಹೇಳುತ್ತಾರೆ. ಆಗ ದೂರು ಕೊಡಲು ಮುಂದಾದ ದಾನೇಶ್ವರಿ ಪೋಷಕರನ್ನು ತಡೆದ ಇವ್ರು, ದೂರು ಕೊಟ್ಟರೆ ನಮ್ಮ ಮರ್ಯಾದೆಯೇ ಹೋಗುತ್ತದೆ. ದೂರು ನೀಡುವುದು ಬೇಡ ಅಂತ ಸುಮಾರು 10 ವರ್ಷಗಳ ಕಾಲ ನಾಪತ್ತೆ ಅಂತಾಲೇ ಬಿಂಬಿಸಿದ್ದರು. ಇದಾದ ಮೇಲೂ ಎರಡು ಕುಟುಂಬಗಳ ನಡುವೆ ಸಂಬಂಧ ಚೆನ್ನಾಗಿಯೇ ಇತ್ತು. ಯಾವಾಗ 10 ವರ್ಷವಾದರೂ ಮಗಳು ಬರುವುದಿಲ್ಲವೋ ಆಗ ದಾನೇಶ್ವರಿಯ ತಾಯಿ ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಮಗಳು ಕಾಣೆಯಾದ ಬಗ್ಗೆ 01.06.2021ರಂದು ದೂರು ನೀಡುತ್ತಾರೆ.
ಇದನ್ನೂ ಓದಿ: Bomb Threat: ಹುಚ್ಚ ವೆಂಕಟ್ ಹೆಸರಲ್ಲಿ ಬಾಂಬ್ ಬೆದರಿಕೆ ಎಂದ್ರು ಡಿಕೆಶಿ; ಆತಂಕಪಡುವ ಅಗತ್ಯವಿಲ್ಲ-ಐಶ್ವರ್ಯಾ
ಕುಡಿದ ಮತ್ತಿನಲ್ಲಿ ಗಂಡ ಬಾಯ್ಬಿಟ್ಟ ಭಯಾನಕ ಸತ್ಯ
ಆರಂಭದಲ್ಲಿ ಈಕೆ ಕಾಣೆಯಾದ ಬಗ್ಗೆ ಕುಟುಂಬಸ್ಥರು ಸುಮ್ಮನಾಗಿದ್ದರು. ತನ್ನ ಪ್ರಿಯಕರ ಶ್ರೀಧರ ಜೊತೆಗೆ ಹೋಗಿರಬಹುದು ಎಂದು ತಿಳಿದು ಸುಮ್ಮನಾಗಿದ್ದರು. ಜೊತೆಗೆ ಮರ್ಯಾದೆಗೆ ಹೆದರಿ ಕುಟುಂಬಸ್ಥರು ದೂರ ನೀಡಿರಲಿಲ್ಲ. ಒಂದು ದಿನ ದಾನೇಶ್ವರಿಯ ಚಿಕ್ಕಪ್ಪನ ಜೊತೆಗೆ ದಾನೇಶ್ವರಿಯ ಗಂಡ ಹಾಗೂ ಭಾವ ಕುಡಿದ ಮತ್ತಿನಲ್ಲಿ ದಾನೇಶ್ವರಿಯನ್ನು ಕೊಲೆ ಮಾಡಿದ್ದು ನಾವೇ ಅಂತ ಹೇಳಿದ್ದಾಗ, ದಾನೇಶ್ವರಿಯ ನಾಪತ್ತೆ ಪ್ರಕರಣದ ಅಸಲಿ ಕಹಾನಿ ಬಯಲಾಗುತ್ತದೆ.
ಸಿನಿಮಾ ರೀತಿಯ ಮರ್ಯಾದಾ ಹತ್ಯೆಯ ಸ್ಕೆಚ್
ಆರಂಭದಲ್ಲಿ ಆತ ಕುಡಿದ ಮತ್ತಿನಲ್ಲಿ ಈ ರೀತಿ ಹೇಳಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ಪೊಲೀಸ್ ಅಧಿಕಾರಿಗಳಿಗೆ ಈ ವಿಚಾರದಲ್ಲಿ ಅನುಮಾನ ಬಂದ ಕಾರಣ ತನಿಖೆ ಕೈಗೊಂಡು ಪ್ರಕರಣ ಬೇಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ದಾನೇಶ್ವರಿಯ ತಂದೆ ಇತ್ತೀಚಿಗೆ ಅಂದರೆ 07 ಜುಲೈ 2022ರಂದು ಮಗಳು ಕೊಲೆಯಾಗಿದ್ದಾಳೆ ಅಂತ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಾರೆ. ದೂರು ದಾಖಲಿಸಿಕೊಂಡ ಪೊಲೀಸರು, ತನಿಖೆಯನ್ನು ಚುರುಕುಗೊಳಿಸಿದಾಗ ಆ ವೇಳೆ ಬಯಲಾಗಿದ್ದೆ ಸಿನಿಮಾ ರೀತಿಯ ಮರ್ಯಾದಾ ಹತ್ಯೆಯ ಸ್ಕೆಚ್.
ಕುತ್ತಿಗೆಗೆ ನೈಲಾನ್ ಪ್ಲಾಸ್ಟಿಕ್ ಹಗ್ಗದಿಂದ ಬಿಗಿದು ಕೊಲೆ
ದಾನೇಶ್ವರಿಯನ್ನು ಪುಸಲಾಯಿಸಿ ದೇವರ ದರ್ಶನಕ್ಕೆ ಶ್ರೀಶೈಲಗೆ ಹೋಗುವ ನೆಪ ಮಾಡಿದ ದಾನೇಶ್ವರಿಯ ಗಂಡ ಹುಚ್ಚಪ್ಪಗೌಡ ಪಾಟೀಲ್ ಹಾಗೂ ಬಾವ ಸಿದ್ದನಗೌಡ ಪಾಟೀಲ್ 24 ಜುಲೈ 2011ರಂದು ಬಾಡಿಗೆ ಕಾರು ಮಾಡಿಕೊಂಡು ಶ್ರೀಶೈಲಗೆ ಹೋಗುತ್ತಾರೆ. ದೇವರ ದರ್ಶನ ಪಡೆದು ವಾಪಸ್ ಬರುವಾಗ ಅಂದರೆ 25 ಜುಲೈ 2011ರಂದು ಆಂಧ್ರಪ್ರದೇಶದ ಕೊರಪುರ ಫಾರೆಸ್ಟ್ ಚೆಕ್ ಪೋಸ್ಟ್ ಬಳಿಯ, ಮಂತನಾಲಮ್ ಹಳ್ಳಿಯ ಬ್ರಿಜ್ ಬಳಿ ದಾನೇಶ್ವರಿಯ ಕುತ್ತಿಗೆಗೆ ನೈಲಾನ್ ಪ್ಲಾಸ್ಟಿಕ್ ಹಗ್ಗದಿಂದ ಬಿಗಿದು ಕೊಲೆ ಮಾಡಿ, ದಟ್ಟವಾದ ಕಾಡಿನ ಬ್ರಿಜ್ ಕೆಳಗೆ ಅವಳನ್ನು ವಿವಸ್ತ್ರಗೊಳಿಸಿ ಎಸೆದು ಹೋಗಿರುತ್ತಾರೆ. ಅವಳ ಮೈಮೇಲಿನ ಬಟ್ಟೆಯನ್ನು ನಾರಾಯಣಪುರ ಡ್ಯಾಂನ ಬ್ರಿಜ್ ನಲ್ಲಿ ಎಸೆದು ಹೋಗಿರುತ್ತಾರೆ.
ಇದನ್ನೂ ಓದಿ: Kodagu: ಎಂಟೇ ದಿನಕ್ಕೆ ಜನರನ್ನು ಕಾಳಜಿ ಕೇಂದ್ರದಿಂದ ಹೊರ ಹಾಕಲು ಸಿದ್ಧತೆ; ಕೊಡಗಿನಲ್ಲಿ ಅಮಾನವೀಯ ಘಟನೆ
7 ಜುಲೈ 2022ರಂದು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರ ವಿರುದ್ಧ 120ಬಿ, 302, 201, 506, 34 ಐಪಿಸಿ ಸೆಕ್ಷನ್ ಗಳನ್ನು ಹಾಕಿ ಜೈಲಿಗಟ್ಟಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯ ಕೊಲೆ ಮಾಡಲು ಸಹಕರಿಸಿದ ಮೂವರ ಪೈಕಿ ಈಗಾಗಲೇ ಇಬ್ಬರು ಸಾವನಪ್ಪಿದ್ದು, ಒಬ್ಬರು ಮಾತ್ರ ಬದುಕಿದ್ದಾರೆ. ಸುಮಾರು 10 ವರ್ಷಗಳ ಹಿಂದೆ ನಡೆದಿರುವ ಒಂದು ಭಯಾನಕ, ಸಿನಿಮೀಯ ರೀತಿಯ ಕೊಲೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಮರ್ಯಾದೆಗೆ ಹೆದರಿ ದೂರು ಕೊಡಲು ಹಿಂಜರಿದಿದ್ದ ದಾನೇಶ್ವರಿಯ ಪೋಷಕರು ಮಗಳನ್ನು ಕೊಲೆ ವಿಚಾರ ಕೇಳಿ ಕಣ್ಣೀರು ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ