ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯ ಹೆಚ್ಎಎಲ್ಗೆ (HAL) ಪ್ರಧಾನಿ ನರೇಂದ್ರ ಮೋದಿ (PM Modi) ಭೇಟಿ ನೀಡಿ ದೇಶದ ಅತೀ ದೊಡ್ಡ ಹೆಲಿಕಾಪ್ಟರ್ ಉದ್ಘಾಟನಾ ಘಟಕ್ಕೆ ಚಾಲನೆ ನೀಡಿದ್ದಾರೆ. ಆ ಬಳಿಕ ಮಾತನಾಡಿರುವ ಪ್ರಧಾನಿ ಮೋದಿ, ಹೆಚ್‌ಎಎಲ್‌ನ ನೂತನ ಘಟಕವನ್ನು (HAL Helicopter Factory) ದೇಶ ಸೇವೆಗೆ ಸಮರ್ಪಿಸುವ ಅವಕಾಶ ನನಗೆ ಸಿಕ್ಕಿದೆ. ಇದಕ್ಕಾಗಿ ಧನ್ಯವಾದ ಹೇಳುತ್ತಿದ್ದೇನೆ. ಇದು ಡಬಲ್ ಎಂಜಿನ್ ಸರ್ಕಾರದ (Double Engine Government) ಕೆಲಸಕ್ಕೆ ದೊಡ್ಡ ಉದಾಹರಣೆಯಾಗಿದೆ. ರಕ್ಷಣಾ ವಲಯದಲ್ಲಿ (Defense Department) ಹೆಚ್ಎಎಲ್ ಭಾರತದ ಆತ್ಮ ನಿರ್ಭರಕ್ಕೆ ಬಲ ಕೊಡುತ್ತಿದೆ. ಡಬಲ್ ಇಂಜಿನ್ ಸರ್ಕಾರದ ಪ್ರಾಮಾಣಿಕ ಪ್ರಯತ್ನಗಳಿಂದ ಜನರ ವಿಶ್ವಾಸ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರಿನ ಬಂಧುಗಳಿಗೆ ನಮಸ್ಕಾರಗಳು ಎಂದು ತಿಳಿಸಿ ಸಿದ್ದಗಂಗಾ ಶ್ರೀಗಳನ್ನು ಸ್ಮರಿಸಿದರು. ಶ್ರೀಗಳು ತ್ರಿವಿಧ ದಾಸೋಹ ನಡೆಸಿಕೊಂಡು ಬಂದವರು, ಅನ್ನ ಅಕ್ಷರ ಆಶ್ರಯ ಕೊಟ್ಟವರು. ಈಗ ತ್ರಿವಿಧ ದಾಸೋಹವನ್ನು ಸಿದ್ದಲಿಂಗ ಸ್ವಾಮಿ ಶ್ರೀಗಳು ಮುಂದುವರೆಸಿದ್ದಾರೆ ಎಂದು ಪ್ರಸ್ತಾಪಿಸುವ ಮೂಲಕ ಸಿದ್ದಗಂಗಾಶ್ರೀ, ಸಿದ್ದಗಂಗಾ ಮಠದ ದಾಸೋಹ ಬಸವಣ್ಣನ ಸ್ಮರಣೆ ಮಾಡಿದರು.
2014 ಕ್ಕೂ ಮುನ್ನ ಹೇಗಿತ್ತು ಅಂತ ನೆನಪಿದೆಯಾ?
ಕರ್ನಾಟಕ ಯುವ ಟ್ಯಾಲೆಂಟ್, ಯುವ ಅನ್ವೇಷಣೆಯ ನೆಲ. ದ್ರೋಣ್ ನಿಂದ ತೇಜಸ್ ನಿರ್ಮಾಣದ ವರೆಗೂ ರಾಜ್ಯದ ಪ್ರತಿಭೆಯನ್ನು ಜಗತ್ತು ನೋಡುತ್ತಿದೆ. ಡಬಲ್ ಇಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಅನ್ನೋದಿಕ್ಕೆ ಹೆಲಿಕಾಪ್ಟರ್ ಉತ್ಪಾದನ ಘಟಕವೂ ಒಂದು ನಿದರ್ಶನ. ಈ ಘಟಕದ ಶಿಲಾನ್ಯಾಸ ಮಾಡುವ ಸೌಭಾಗ್ಯ ನನ್ನದಾಗಿತ್ತು, ಹಲವು ರಕ್ಷಣಾ ಸಾಮಾಗ್ರಿಗಳು ಭಾರತದಲ್ಲೇ ತಯಾರಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: Budget 2023: ಈ ಬಾರಿ ಬಜೆಟ್‌ನಲ್ಲಿ ಕೃಷಿಕರಿಗೆ ಖುಷಿ, ಸ್ವಾವಲಂಬಿ ಮಹಿಳೆಯರಿಗೆ ಸಹಾಯ! ಅಮೃತಕಾಲದ ಬಜೆಟ್ ಅಂತ ಬಣ್ಣಿಸಿದ ಮೋದಿ
2014 ಕ್ಕೂ ಮುನ್ನ ಹೇಗಿತ್ತು ಅಂತ ನೆನಪಿದೆಯಾ? 2014ಕ್ಕೂ ಮುಂಚಿನ 15 ವರ್ಷ ಏರೋಸ್ಪೇಸ್ ನಲ್ಲಿ ತಯಾರಾಗಿದ್ದ ರಕ್ಷಣಾ ಸಾಮಾಗ್ರಿಗಳ ಐದು ಪಟ್ಟು ಕಳೆದ ಎಂಟು ವರ್ಷಗಳಲ್ಲಿ ತಯಾರಾಗಿದೆ. ಈ ಘಟಕದಲ್ಲಿ ಯುದ್ಧ ಹೆಲಿಕಾಪ್ಟರ್ ಗಳ ತಯಾರಿಕೆಯೂ ಆಗಲಿದೆ. ನಮ್ಮ ಸೇನೆಗೆ ಮತ್ತಷ್ಟು ಬಲವನ್ನು ಈ ಘಟಕ ತುಂಬಲಿದೆ. ಈ ಭಾಗದ ಸಣ್ಣ ಸಣ್ಣ ವ್ಯಾಪಾರಿಗಳಿಗೂ ಇದು ಪೂರಕವಾಗಿದೆ. ಉದ್ಯೋಗದ ಅವಕಾಶಗಳೂ ಇನ್ನಷ್ಟು ವಿಪುಲ ಆಗಲಿವೆ. ಖಾಸಗಿ ವಲಯಕ್ಕೂ ರಕ್ಷಣಾ ವಲಯದಲ್ಲಿ ಅವಕಾಶ ಕೊಡಲಾಗಿದೆ.
ಇದೇ ಹೆಚ್‌ಎಎಲ್ ಅನ್ನು ನೆಪ ಮಾಡಿ ನಮ್ಮ ಸರ್ಕಾರದ ಮೇಲೆ ತರಹೇವಾರಿ ಆರೋಪ ಮಾಡಲಾಯಿತು. ಇದೇ ಹೆಚ್‌ಎಎಲ್ ನೆಪ ಮಾಡಿ ಜನರಿಗೆ ಸುಳ್ಳು ಹೇಳಲಾಯಿತು. ಸುಳ್ಳು ಎಷ್ಟೇ ಪ್ರಬಲವಾಗಿದ್ರೂ, ಎಷ್ಟು ಜನಕ್ಕೆ ಹೇಳಿದರೂ ಒಂದು ದಿನ ಸುಳ್ಳು ಸತ್ಯದ ಎದುರು ಸೋಲಲೇಬೇಕು. ಇವತ್ತು ಹೆಚ್‌ಎಎಲ್ ನ ಶಕ್ತಿ ವೃದ್ಧಿ, ಸುಳ್ಳುಕೋರರ ವೇಷ ಕಳಚಿದೆ.
ಭಾರತೀಯ ಸೇನೆಗೆ ಹೆಚ್‌ಎಎಲ್ ಆಧುನಿಕ ತೇಜಸ್ ತಯಾರಿಸುತ್ತಿದೆ. ರಕ್ಷಣಾ ವಲಯದಲ್ಲಿ ಹೆಚ್ಎಎಲ್ ಭಾರತದ ಆತ್ಮ ನಿರ್ಭರಕ್ಕೆ ಬಲ ಕೊಡುತ್ತಿದೆ. ತುಮಕೂರು ಕೈಗಾರಿಕಾ ಟೌನ್ ಶಿಪ್ ಉದ್ಯೋಗಗಳ ಬಾಗಿಲು ತೆರೆಯಲಿದೆ. ಟೌನ್ಶಿಪ್ನ ನಿರ್ಮಾಣ ಪಿಎಂ ಗತಿ ಶಕ್ತಿ ನ್ಯಾಷನಲ್ ಮಾಸ್ಟರ್ ಪ್ಲಾನ್ ಪ್ರಕಾರ ಆಗುತ್ತಿದೆ. ಈ ಟೌನ್ಶಿಪ್ಗೆ ಮಲ್ಟಿ ಮೋಡಲ್ ಕನೆಕ್ಟಿವಿಟಿ ಮಾಡಲಾಗುತ್ತಿದೆ. ಭೌತಿಕ ಮೂಲಸೌಕರ್ಯದಷ್ಟೇ ಸಾಮಾಜಿಕ ಮೂಲಸೌಕರ್ಯ ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಕೃಷಿ ನೀರಾವರಿ, ಮನೆಗಳಿಗೆ ನೀರು ಸಂಪರ್ಕಕ್ಕೆ ಒತ್ತು ನೀಡಲಾಗುತ್ತಿದೆ. ಜಲ ಜೀವನ ಮಿಷನ್ಗೆ ಬಜೆಟ್‌ನಲ್ಲಿ 20 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಕೊಡಲಾಗಿದೆ. ಮನೆಗಳಿಗೆ ನೀರು ಸಿಗುವ ಮೂಲಕ ಬಡ ಮಹಿಳೆಯರಿಗೆ ಅನುಕೂಲವಾಗಲಿದೆ. ನೀರಿಗಾಗಿ ಕಿಲೋಮೀಟರ್ ಗಟ್ಟಲೆ ನಡೆಯುವುದು ತಪ್ಪಲಿದೆ. 11 ಕೋಟಿ ಮನೆಗಳಿಗೆ ದೇಶದಲ್ಲಿ ನೀರು ಸಂಪರ್ಕ ಕೊಡಲಾಗಿದೆ. ಜೊತೆಗೆ ಕೃಷಿ ನೀರಾವರಿಗೂ ಆದ್ಯತೆ ನೀಡಲಾಗುತ್ತಿದೆ ಎಂದು ಒತ್ತಿ ಹೇಳಿದರು.
ಎಲ್ಲಾ ಬಡವರಿಗೂ ಮನೆ ಕೊಡಲು ಬಜೆಟ್ ನಲ್ಲಿ 70 ಸಾವಿರ ಕೋಟಿ ರೂಪಾಯಿ
ತಮ್ಮ ಭಾಷಣದಲ್ಲಿ ಭದ್ರಾ ಮೇಲ್ದಂಡೆ ಅನುದಾನ ಬಗ್ಗೆ ಪ್ರಸ್ತಾಪ ಮಾಡಿದ ಪ್ರಧಾನಿಗಳು, ಭದ್ರಾ ಮೇಲ್ದಂಡೆಗೆ 5,300 ಕೋಟಿ ರೂಪಾಯಿ ಅನುದಾನ ಕೊಡಲಾಗಿದೆ. ಈ ಯೋಜನೆಯಿಂದ ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಸಿಗಲಿದೆ. ಕೇಂದ್ರ ಬಜೆಟ್ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ಕೊಟ್ಟಿದೆ. ಸಮರ್ಥ ಭಾರತ, ಶಕ್ತಿಯುತ ಭಾರತ ನಿರ್ಮಾಣಕ್ಕೆ ಈ ಬಜೆಟ್ ಪೂರಕವಾಗಿದೆ.
ಇದನ್ನೂ ಓದಿ: Kalaburagi: ಪ್ರಧಾನಿ ಮೋದಿ ಮೆಚ್ಚಿದ ಕಲಬುರಗಿಯ ಸಿರಿಧಾನ್ಯ ಸಂಸ್ಥೆಯಿದು!
ನಮ್ಮ ಅವಧಿಯಲ್ಲಿ ಸರ್ಕಾರದ ಎಲ್ಲಾ ಯೋಜನೆಗಳ ಲಾಭ ಎಲ್ಲರಿಗೂ ಸಿಗುತ್ತಿದೆ. ವಿಶ್ವಕರ್ಮ ಸಮುದಾಯದ ಸಹೋದರ ಸೋದರಿಯರಿಗೂ ಮೊದಲ ಸಲ ವಿಶೇಷ ಕಾರ್ಯಕ್ರಮ ತಂದಿದ್ದೇವೆ. ಕುಂಬಾರ, ಕಮ್ಮಾರ, ಅಕ್ಕಸಾಲಿಗ, ಶಿಲ್ಪಿ, ಬಡಗಿ, ಗಾರೆ ಕೆಲಸದವರಿಗೆ ಪಿಎಂ ಆವಾಸ್ ಯೋಜನೆಯಡಿ ನೆರವು ನೀಡಲಾಗುತ್ತಿದೆ. ಈ ವೃತ್ತಿ ಸಮುದಾಯಗಳ ಕೌಶಲ್ಯ ಹೆಚ್ಚಳಕ್ಕೂ ನೆರವು ಕೊಡಲಾಗಿದೆ. ಎಲ್ಲಾ ಬಡವರಿಗೂ ಮನೆ ಕೊಡಲು ಬಜೆಟ್ ನಲ್ಲಿ 70 ಸಾವಿರ ಕೋಟಿ ರೂಪಾಯಿ ಇಡಲಾಗಿದೆ. ಇದರಿಂದ ರಾಜ್ಯದ ಅನೇಕ ಬಡವರಿಗೆ ಮನೆ ಪಕ್ಕಾ ಸಿಗಲಿದೆ ಎಂದು ಆಶ್ವಾಸನೆ ನೀಡಿದರು.
ದೇಶದ ಮಹಿಳೆಯರು ಹಣ ಕೂಡಿಡುವ ದೃಷ್ಟಿಯಿಂದಲೂ ಈ ಬಜೆಟ್ ನೆರವಾಗಲಿದೆ. ಸುಕನ್ಯಾ ಸಮೃದ್ಧಿ, ಜನಧನ್, ಮುದ್ರಾ ಯೋಜನೆಗಳಿಂದ ಮಹಿಳಾ ಆರ್ಥಿಕ ಸಶಕ್ತೀಕರಣ ಹೆಚ್ಚಾಗಿದೆ. ಗ್ರಾಮೀಣ ಮಹಿಳೆಯರಿಗೆ ನೆರವು ಕೊಡಲು ಬಜೆಟ್ ನಲ್ಲಿ ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಆರ್ಥಿಕತೆ, ಸಹಕಾರಿ ವಲಯವನ್ನು ಇನ್ನಷ್ಟು ಬಲಗೊಳಿಸುವ ಮೂಲಕ ರೈತರಿಗೆ ಅನುಕೂಲ ಮಾಡಿದ್ದೇವೆ. ಬಜೆಟ್ ನಲ್ಲಿ ಸಹಕಾರ ವಲಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕರ್ನಾಟಕದ ಕಬ್ಬು ಬೆಳೆಗಾರರಿಗೂ ಬಜೆಟ್ ನಿಂದ ಅನುಕೂಲವಾಗಿದೆ.
ರಾಗಿ ಹೆಸರು ಕೇಳಿ ಜನರಿಂದ ಹರ್ಷೋದ್ಘಾರ
ಕರ್ನಾಟಕದಲ್ಲಿ ಸಿರಿಧಾನ್ಯಗಳ ಮಹತ್ವ ಎಲ್ಲರಿಗೂ ಗೊತ್ತಿದೆ. ರಾಜ್ಯದಲ್ಲಿ ಸಿರಿಧಾನ್ಯ ಬೆಳೆಗಳಿಗೆ ಪ್ರೋತ್ಸಾಹ ಕೊಡಲಾಗಿದೆ. ಕರ್ನಾಟಕದ ರಾಗಿಮುದ್ದೆ, ರಾಗಿ ರೊಟ್ಟಿ ಮರೆಯಲು ಸಾಧ್ಯವೇ ಇಲ್ಲ. ಸಿರಿಧಾನ್ಯ ಬೆಳೆಗಳಿಂದ ಸಣ್ಣ ರೈತರಿಗೆ ಅನುಕೂಲವಾಗಲಿದೆ. ಡಬಲ್ ಇಂಜಿನ್ ಸರ್ಕಾರದ ಪ್ರಾಮಾಣಿಕ ಪ್ರಯತ್ನಗಳಿಂದ ಜನರ ವಿಶ್ವಾಸ ಹೆಚ್ಚಾಗಿದೆ. ಕುಂಬಾರ, ಕಮ್ಮಾರ, ಅಕ್ಕಸಾಲಿಗ, ಬಡಗಿ ಕೆಲಸದ ಈ ಎಲ್ಲಾ ಪರಿವಾರಕ್ಕೂ ಕೌಶಲ್ಯ ಅಭಿವೃದ್ಧಿ ಅಡಿ ಸಹಾಯ ಸಿಕ್ಕಿದೆ. ಕರ್ನಾಟಕದ ಜನರಿಗೆ ಮನೆ ಸಿಗೋದು ಪಕ್ಕಾ, ಜೀವನ ಬದಲಾಗೋದು ಪಕ್ಕ. ಅದಕ್ಕೆ ಬಜೆಟ್‌ನಲ್ಲಿ ಹಣ ಇಟ್ಟಿದ್ದೇವೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ