ದಾವಣಗೆರೆ: ಮಹಾಸಂಗಮ ಸಮಾವೇಶದಲ್ಲಿ (Mahasangama Conference) ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಕನ್ನಡದಲ್ಲೇ ಭಾಷಣ ಆರಂಭ ಮಾಡಿದರು. ದಾವಣಗೆರೆಯ ಸಹೋದರಿಯರು, ಸಹೋದರರಿಗೆ ನನ್ನ ನಮಸ್ಕಾರ, ಕರ್ನಾಟಕ ಬಿಜೆಪಿಯ (BJP) ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಹೇಳಿದರು. ನನಗೆ ದಾವಣಗೆರೆ ಬರುವ ಅವಕಾಶ ಸಿಕ್ಕಿ ಎಲ್ಲಾ ಸಂದರ್ಭದಲ್ಲಿ ದಾವಣಗೆರೆಯ (Davanagere) ಜನರ ಆರ್ಶೀವಾದ ಹೆಚ್ಚಾಗುತ್ತಲೇ ಇದೆ. ಕರ್ನಾಟಕ (Karnataka) ಬಿಜೆಪಿ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಏಕೆಂದರೆ ಈ ಕಾರ್ಯಕ್ರಮದಿಂದ ನಿಮ್ಮನ್ನು ಭೇಟಿಯಾಗಲು ಅವಕಾಶ ಸಿಕ್ಕಿದೆ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮನೆಯಲ್ಲೇ ಬಿಜೆಪಿ ಗೆಲುವು ಪಡೆದಿದೆ-ಖರ್ಗೆಗೆ ಮೋದಿ ಟಾಂಗ್
ವಿಜಯ ಸಂಕಲ್ಪ ರ್ಯಾಲಿ ವಿಜಯ ಮಹೋತ್ಸವ ರ್ಯಾಲಿಯಂತೆ ಕಾಣುತ್ತಿದೆ. ರ್ಯಾಲಿ ಸಾಗಿದ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಿಕ್ಕಿದೆ. ಕಾಂಗ್ರೆಸ್ ಪಕ್ಷದ ಕರ್ಮಭೂಮಿ ಕಲಬುರಗಿಯಲ್ಲಿ ಬಿಜೆಪಿ ಪಕ್ಷದ ಮೇಯರ್ ಆಯ್ಕೆಯಾಗಿದ್ದಾರೆ. ಇದು ವಿಜಯ ಸಂಕಲ್ಪ ಯಾತ್ರೆಯ ಶುಭ ಸೂಚನೆಯಾಗಿದೆ. ಇದು ಕೇವಲ ಕಲಬುರಗಿಗೆ ಮಾತ್ರ ಸಿಮೀತವಾಗಿಲ್ಲ, ಡಬಲ್ ಎಂಜಿನ್ ಸರ್ಕಾರದ ಕಾರ್ಯ ನೋಡಿದ ಇಡೀ ರಾಜ್ಯದ ಜನರು ಬಿಜೆಪಿ ಗೆಲ್ಲಿಸಲು ಮುಂದಾಗಿದ್ದಾರೆ. ಎಐಸಿಸಿ ಅಧ್ಯಕ್ಷರ ಮನೆಯಲ್ಲೇ ಕಮಲ ಜಯಭೇರಿ ಬಾರಿಸಿದೆ ಎಂದು ಹೇಳಿದರು.
ಸಿದ್ದರಾಮಯ್ಯ ವಿರುದ್ಧವೂ ಪ್ರಧಾನಿ ಮೋದಿ ವಾಗ್ದಾಳಿ
ಸಭೆ ನಡೆಯುತ್ತಿರುವ ಕ್ಷೇತ್ರದ ಪಕ್ಕದಲ್ಲೇ ತುಂಗಾಭದ್ರ ನದಿ ಹರಿಯುತ್ತಿದೆ. ದಾವಣಗೆರೆಯಲ್ಲಿ ನಾಲ್ಕು ಸಮಾವೇಶವನ್ನು ಸಂಗಮವನ್ನು ದರ್ಶನ ಮಾಡುವ ಪುಣ್ಯ ಸಿಕ್ಕಿದೆ. ಮುಂದಿನ ಮೂರು ತಿಂಗಳು ಪ್ರತಿಯೊಂದು ಬೂತ್ನಲ್ಲೂ ಇದೇ ಹುಮ್ಮಸಿನಲ್ಲಿ ಪಕ್ಷದ ಪರ ಪ್ರಚಾರ ಮಾಡಿ ಎಂದರು. ನಾನು ಕರ್ನಾಟಕ ವಿಡಿಯೋ ಒಂದನ್ನು ನೋಡಿದೆ ಕಾಂಗ್ರೆಸ್ ಮಾಜಿ ಸಿಎಂ ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ಈ ರೀತಿ ಆದರೆ ಸಾಮಾನ್ಯರ ಜೊತೆ ಹೇಗೆ ನಡೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಆದರೆ ನಮ್ಮಲ್ಲಿ ಎಲ್ಲಾ ನಾಯಕರು, ಕಾರ್ಯಕರ್ತರು ಸಮಾನ. ಪಕ್ಷದ ಕಾರ್ಯಕರ್ತರು ಸಹೋದರರು ಇದ್ದಂತೆ ಎಂದು ಹೇಳಿದರು.
ಬೆಂಗಳೂರಿಗೆ ಮೆಟ್ರೋ, ತುಮಕೂರಿನಲ್ಲಿ ಹೆಲಿಕಾಪ್ಟರ್ ಕಂಪನಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ, ಮೈಸೂರಿಗೆ ದಶಪಥ ರಸ್ತೆ ಸಿಕ್ಕಿದೆ. ಹುಬ್ಬಳ್ಳಿಯಲ್ಲಿ ಅತಿ ದೊಡ್ಡ ರೈಲ್ವೆ ಪ್ಲಾಟ್ ಪಾರ್ಮ್ ಸಿಕ್ಕಿದೆ. ಜಲ ಜೀವನ ಮಿಶನ್ ಯೋಜನೆ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್-ಜೆಡಿಎಸ್ ವಿರುದ್ಧವೂ ಮೋದಿ ವಾಗ್ದಾಳಿ
ಕರ್ನಾಟಕದಲ್ಲಿ ಸ್ವಾರ್ಥ, ಅವಕಾಶವಾದಿ ಮೈತ್ರಿ ಸರ್ಕಾರವನ್ನು ನೋಡಿದ್ದೀರಿ. ಇಂತಹ ಸರ್ಕಾರದಿಂದ ಕರ್ನಾಟಕ್ಕೆ ನಷ್ಟ ಆಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಎಂಟಿಎಂ ಆಗಲಿದೆ. ಆದ್ದರಿಂದ ರಾಜ್ಯ ಬಿಜೆಪಿಯ ಸಂಪೂರ್ಣ ಬಹುಮತದ ಸರ್ಕಾರದ ಅಗತ್ಯವಿದೆ. ಕರ್ನಾಟದ ಸ್ಥಿರ ಅಭಿವೃದ್ಧಿಗೆ ಬಹುಮತದ ಸರ್ಕಾರ ಅಗತ್ಯವಿದೆ, ಆ ಮೂಲಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು. ಕರ್ನಾಟಕದ ಜನರಿಗೆ ಸೇವೆ ಮಾಡಲು ನೀವು ನಮಗೆ ಕರ್ನಾಟಕದಲ್ಲಿ ಬಹುಮತದ ಬಿಜೆಪಿ ಸರ್ಕಾರವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ನಾಯಕರು ಚುನಾವಣೆಗೆ ಮುನ್ನವೇ ಗ್ಯಾರಂಟಿ ಘೋಷಣೆ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಒಂದು ತಾಜಾ ಉದಾಹರಣೆ ನೀಡುತ್ತೇನೆ. ಹಿಮಾಚಲದಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಕಾಂಗ್ರೆಸ್ ಗೆಲುವು ಪಡೆದು ಅಧಿಕಾರ ಪಡೆದಿದೆ. ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಗಳು ಸರ್ಕಾರ ರಚನೆಯಾಗಿ ಮೂರು ತಿಂಗಳು ಕಳೆದರೂ ಜಾರಿಯಾಗಿಲ್ಲ ಎಂದು ಟೀಕಿಸಿದರು.
ಈಗ ಹಿಮಾಚಲ ಜನರು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳು ಎಲ್ಲಿ ಹೋಯ್ತು, ಗಾಳಿಯಲ್ಲಿ ಹಾರಿ ಹೋಗಿದೆಯಾ ಅಂತ ಪ್ರಶ್ನಿಸುತ್ತಿದ್ದಾರೆ ಎಂದರು. ಕಾಂಗ್ರೆಸ್ಗೆ ಈಗ ಕರ್ನಾಟಕ ಒಂದೇ ಆಸರೆಯಾಗಿದೆ, ಆದ್ದರಿಂದಲೇ ಅವರು ಹಗಲು ಕನಸು ಕಾಣುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ