ಶಿವಮೊಗ್ಗ: ಶಿವಮೊಗ್ಗದಲ್ಲಿ ನಿರ್ಮಾಣವಾಗಿರುವ ಕುವೆಂಪು ವಿಮಾನ ನಿಲ್ದಾಣದ (Kuvempu Airport) ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi), ಆರಂಭದಲ್ಲಿಯೇ ಕನ್ನಡದಲ್ಲಿ ಮಾತು ಆರಂಭಿಸಿದರು. ರಾಷ್ಟ್ರಕವಿ ಕುವೆಂಪು ಅವರ ಪುಣ್ಯಭೂಮಿಗೆ ನಮಿಸುತ್ತೇನೆ. ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಸಾವಿರಾರು ಕೋಟಿ ಯೋಜನೆಗಳ ಶಿಲಾನ್ಯಾಸ ಮಾಡುವ ಅವಕಾಶ ಸಿಕ್ಕಿದೆ. ಇಂದು ಶಿವಮೊಗ್ಗಕ್ಕೆ ತನ್ನದೇ ಏರ್ಪೋರ್ಟ್ (Shivamogga Airport) ಸಿಕ್ಕಿದೆ. ಇಲ್ಲಿಯ ಜನರ ಬಹುದಿನಗಳ ಕನಸು ಈಡೇರಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಅತ್ಯಂತ ಭವ್ಯ ಮತ್ತು ಸುಂದರವಾಗಿ ನಿರ್ಮಾಣವಾಗಿದೆ. ನಿರ್ಮಾಣದಲ್ಲಿ ಕರ್ನಾಟಕದ ತಂತ್ರಜ್ಞಾನ ಹೊಂದಿದೆ. ಈ ವಿಮಾನ ನಿಲ್ದಾಣ ಯುವ ಪೀಳಿಗೆಯ ಕನಸು ನನಸು ಮಾಡಲಿದೆ. ಇಂದು ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ಹಲವು ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ.
ಇಂದು ಜನನನಾಯಕ ಬಿ.ಎಸ್.ಯಡಿಯೂರಪ್ಪ ಅವರ ಜನ್ಮ ದಿನ. ಅವರ ದೀರ್ಘಾಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಆಡಿದ ಮಾತುಗಳು ಪ್ರತಿಯೊಬ್ಬರ ಜೀವನಕ್ಕೆ ಸ್ಪೂರ್ತಿ ಆಗಲಿದೆ.
ಇದೇ ವೇಳೆ ಎಲ್ಲರೂ ನಿಮ್ಮ ಮೊಬೈಲ್ ತೆಗೆದು ಫ್ಲ್ಯಾಶ್ ಲೈಟ್ ಆನ್ ಮಾಡುವ ಮೂಲಕ ಯಡಿಯೂರಪ್ಪ ಅವರನ್ನು ಗೌರವಿಸಬೇಕು ಎಂದು ಮನವಿ ಮಾಡಿಕೊಂಡರು. ಯಡಿಯೂರಪ್ಪ ಅವರು ತಮ್ಮ ಜೀವನವನ್ನು ರೈತರಿಗಾಗಿ ಮುಡಿಪು ಇರಿಸಿದ್ದಾರೆ.
ಡಬಲ್ ಇಂಜಿನ್ ಸರ್ಕಾರ
ಯಾವುದೇ ವಾಹನ ಇದ್ರೆ ಅದಕ್ಕೆ ಡಬಲ್ ಇಂಜಿನ್ ಹಚ್ಚಿದ್ರೆ ಅದರ ವೇಗ ಹೆಚ್ಚಾಗಲಿದೆ. ಅದೇ ರೀತಿ ಕರ್ನಾಟಕದ ಅಭಿವೃದ್ಧಿ ರಥ ಸಹ ವೇಗದಿಂದ ಸಾಗುತ್ತಿದೆ. ಸಣ್ಣ ಗ್ರಾಮದಿಂದ ಹಿಡಿದು ಮಹಾನಗರವರೆಗೂ ನಮ್ಮ ಅಭಿವೃದ್ಧಿ ಕಾರ್ಯಗಳು ತಲುಪಿವೆ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಕಾಂಗ್ರೆಸ್ ಅಡಳಿತಾವಧಿಯಲ್ಲಿ ಏರ್ ಇಂಡಿಯಾ ಹೆಸರು ಹಗರಣಗಳಿಂದ ಸುದ್ದಿ ಆಗುತ್ತಿದೆ. ಆದ್ರೆ ಇಂದು ಏರ್ ಇಂಡಿಯಾ ತನ್ನ ಸಾಧನೆಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಏವಿಯೇಶನ್ ಸೆಕ್ಟರ್ನಲ್ಲಿ ಹಲವು ಉದ್ಯೋಗವಕಾಶಗಳು ತೆರೆದುಕೊಳ್ಳಲಿವೆ ಎಂದು ಭರವಸೆ ನೀಡಿದರು.
ಪ್ರತಿಯೊಬ್ಬರಿಗೂ ವಿಮಾನಯಾನ ಸೇವೆ
2014ಕ್ಕೂ ಮೊದಲು ಕೇವಲ ನಗರಗಳಿಗೆ ಮಾತ್ರ ವಿಮಾನಯಾನ ಸೇವೆ ಸೀಮಿತವಾಗಿತ್ತು. 2014ಕ್ಕೂ ಮೊದಲು ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳಿದ್ದವು. ಕೇವಲ ಏಳು ವರ್ಷಗಳಲ್ಲಿ 74 ಏರ್ಪೋರ್ಟ್ ಮಾಡಲಾಗಿದೆ. ಇದು ನಮ್ಮ ಸರ್ಕಾರ ಎಷ್ಟು ವೇಗವಾಗಿ ಕೆಲಸ ಮಾಡುತ್ತದೆ ಎಂಬವುದು ಗೊತ್ತಾಗುತ್ತದೆ.
ಹವಾಯಿ ಚಪ್ಪಲ ಧರಿಸುವ ವ್ಯಕ್ತಿಯೂ ವಿಮಾನದಲ್ಲಿ ಪ್ರಯಾಣಿಸಬೇಕು ಎಂದು ಉಡಾನ್ ಯೋಜನೆ ತರಲಾಯ್ತು ಎಂದು ಹೇಳಿದರು.
ಇದನ್ನೂ ಓದಿ: Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ; ಸೂರ್ಯ ಚಂದ್ರ ಇರೋವರೆಗೂ ಬಿಎಸ್ವೈ ಯೋಜನೆಗಳು ಶಾಶ್ವತ ಎಂದ ಸಿಎಂ
ಪ್ರವಾಸೋದ್ಯಮ ಅಭಿವೃದ್ಧಿ
ವಿಮಾನ ನಿಲ್ದಾಣದಿಂದ ಶಿಮಮೊಗ್ಗದ ಪ್ರವಾಸೋದ್ಯಮ ಬೆಳವಣಿಗೆ ಆಗಲಿದೆ. ಈ ಮೂಲಕ ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಒಂದು ವಿಮಾನ ನಿಲ್ದಾಣದಿಂದ ರೈತರ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸಿಗಲಿದೆ. ರೈತರ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆ ಸಿಗಲಿದೆ. ಇದೇ ವೇಳೆ ರೈಲು ಯೋಜನೆಗಳಿಂದ ನೆರೆಯ ಜಿಲ್ಲೆಗಳು ಸಹ ಅಭಿವೃದ್ಧಿಗೊಳ್ಳಲಿವೆ. ಸಮರ್ಪಕ ರಸ್ತೆ, ರೈಲು, ವಾಯು ಸಂಪರ್ಕವಿದ್ರೆ ಹೂಡಿಕೆ ಹೆಚ್ಚಾಗಲಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ