ಯಾದಗಿರಿ: ಕರ್ನಾಟಕ ವಿಧಾನಸಭೆ ( Karnataka assembly election) ಹಾಗೂ ಲೋಕಸಭಾ ಚುನಾವಣೆ (Lok Shabha) ಹತ್ತಿರವಾಗುತ್ತಿದೆ. ಇತ್ತ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ (BJP Government) ಮತ್ತೊಮ್ಮೆ ಅಧಿಕಾರಕ್ಕೆ ತರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ ಕೇಂದ್ರದ ನಾಯಕರು ಮೇಲಿಂದ ಮೇಲೆ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಲ್ಲದೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದಕ್ಕೆ ಕರ್ನಾಟಕದ ಪಾತ್ರ ಮಹತ್ವವಾಗಿರುವುದರಿಂದ ರಾಜ್ಯದಲ್ಲಿ ಬಿಜೆಪಿ ಹಿಡಿತವನ್ನು ಮುಂದುವರಿಸಿಕೊಂಡು ಹೋಗುವ ಉದ್ದೇಶವನ್ನು ಹೊಂದಿದೆ. ವಾರದ ಹಿಂದೆಯಷ್ಟೆ ಹುಬ್ಬಳ್ಳಿಗೆ ಆಗಮಿಸಿದ್ದ ಮೋದಿ ಇದೀಗ ಮತ್ತೊಮ್ಮೆ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಕಲಬುರಗಿ ಹಾಗೂ ಯಾದಗಿರಿಗೆ ಆಗಮಿಸಿದ್ದ ಅವರು ಅನೇಕ ಯೋಜನೆಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರೆವೇರಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದಲ್ಲಿ ಸ್ಕಾಡಾ ಯೋಜನೆ, ನಾರಾಯಣ ಎಡದಂಡೆ ಕಾಲುವೆಯ ವಿಸ್ತರಣೆ, ಆಧುನೀಕರಣ, ಜಲ ಜೀವನ್ ಮಿಷನ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆ 710 ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ, ಚೆನ್ನೈ-ಸೂರತ್ ಗ್ರೀನ್ ಫೀಲ್ಡ್ ಯೋಜನೆಗಳನ್ನು ಉದ್ಘಾಟಿಸಿದರು.
10, 813 ಕೋಟಿ ರೂಪಾಯಿ ಕಾಮಗಾರಿಗೆ ಚಾಲನೆ
ನರೇಂದ್ರ ಮೋದಿ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಕಲ್ಯಾಣ ಕರ್ನಾಟಕಕ್ಕೆ ಆಗಮಿಸಿದರು. ಯಾದಗಿರಿಯ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಹೊರಭಾಗದಲ್ಲಿ ಗುರುವಾರ ಬೃಹತ್ ನಮೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಒಟ್ಟು 10, 813 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.
ಇದನ್ನೂ ಓದಿ: PM Modi: ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ಬೆನಿಫಿಟ್; ರಾಜ್ಯ ಬಿಜೆಪಿ ಸರ್ಕಾರವನ್ನು ಕೊಂಡಾಡಿದ ಪ್ರಧಾನಿ ಮೋದಿ
ವೇದಿಕೆಯಲ್ಲಿ ಯಾರಿದ್ದರು?
ಮೋದಿ ಕಲಬುರಗಿಯಿಂದ ಕೊಡೇಕಲ್ ಹೆಲಿಪ್ಯಾಡ್ಗೆ ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ಆಗಮಿಸಿದರು. ಹೆಲಿಪ್ಯಾಡ್ನಿಂದ ರಸ್ತೆ ಮಾರ್ಗದ ಮೂಲಕ ವೇದಿಕೆಯತ್ತ ಆಗಮಿಸಿ, ಜನರತ್ತ ಕೈಬಿಸಿದರು. ಮೋದಿ ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಗೋವಿಂದ ಕಾರಜೋಳ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ರಾಜುಗೌಡ, ವೆಂಕಟರೆಡ್ಡಿ ಮುದ್ನಾಳ, ಎ.ಎಸ್.ಪಾಟೀಲ ನಡಹಳ್ಳಿ ಭಾಗವಹಿಸಿದರು.
ಪಿಎಂ ಮೋದಿಗೆ ಸಿಎಂ ಬೊಮ್ಮಾಯಿ ಅವರು ಸನ್ಮಾನಿಸಿ ಗೌರವಿಸಿದರು. ಕಾಲಜ್ಞಾನಿ ಬಸವಣ್ಣನ ಭೂಮಿಗೆ ಮೊಟ್ಟಮೊದಲ ಬಾರಿಗೆ ನಮೋ ಆಗಮಿಸಿದ ಹಿನ್ನಲೆ, ಮೋದಿ ಅವರಿಗೆ ಸುರಪುರ ಶಾಸಕ ರಾಜುಗೌಡ ಅವರು ಬೆಳ್ಳಿಯ ಬಸವಣ್ಣನ ( ನಂದಿ) ಮೂರ್ತಿಯನ್ನು ನೆನಪಿನ ಕಾಣಿಕೆಯಾಗಿ ನೀಡಿದರು. ರಿಮೋಟ್ ಮೂಲಕ ಮೋದಿ ಹಲವು ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದರು. ಮೋದಿ ವೇದಿಕೆಯತ್ತ ಧಾವಿಸುತ್ತಿದ್ದಂತೆ ಜನಸಾಗರದಿಂದ ಮೋದಿ..! ಮೋದಿ..! ಎಂಬ ಹರ್ಷೋದ್ಘಾರ ಮೇಳೈಸಿತು. ಎಲ್ಲಡೇ ಮೋದಿ ಘೋಷಣೆ ಕೂಗಿ ಜನರು ಅಭಿಮಾನ ಮೆರೆದರು. ಸಿಎಂ ಭಾಷಣನದ ನಂತರ, ಮಾತನಾಡಿದ ನರೇಂದ್ರ ಮೋದಿ, ಯಾದಗಿರಿ ಜಿಲ್ಲೆಯು ಸಮೃದ್ಧ ಇತಿಹಾಸ ಹೊಂದಿದ್ದು, ಸುರಪುರದ ಅರಸ, ಸ್ವಾತಂತ್ರ್ಯ ಸೇನಾನಿ ರಾಜಾ ವೆಂಕಟಪ್ಪ ನಾಯಕ ಅವರನ್ನು ಪಿಎಂ ಮೋದಿ ಸ್ಮರಣೆ ಮಾಡಿದರು.
ಮೂರು ಯೋಜನೆಗೆ ಹಸಿರು ನಿಶಾನೆ
ಯಾದಗಿರಿ ಜಿಲ್ಲೆಯಲ್ಲಿ ಮೋದಿ ಇಂದು ಮೂರು ಬೃಹತ್ ಯೋಜನೆಗೆ ಹಸಿರು ನಿಶಾನೆ ತೋರಿದರು. ದೇಶದ ಎರಡನೇ ಅತೀ ದೊಡ್ಡ ಎಕ್ಸಪ್ರೆಸ್ ವೇ ಆಗಿರುವ 'ಸೂರತ್ ಚೆನ್ನೈ ಎಕ್ಸಪ್ರೆಸ್ ವೇ' ಕಾಮಗಾರಿಗೆ ಪ್ರಧಾನಿ ಅಡಿಗಲ್ಲು ಹಾಕಿದರು. ನಂತರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಾದ ಮಹತ್ವಾಕಾಂಕ್ಷೆಯ 'ಜಲಧಾರೆ' ಯೋಜನೆಗೆ ಶಿಲಾನ್ಯಾಸ ಮಾಡಿದರು. ಈ ಯೋಜನೆಯಿಂದ ಸುಮಾರು 710 ಗ್ರಾಮಗಳು 3 ಪಟ್ಟಣಗಳಿಗೆ ನೀರು ಸರಬರಾಜು ಆಗಲಿದೆ. ನಾರಾಯಣಪುರ ಎಡದಂಡೆ ಕಾಲುವೆಗೆ ಜಿಐಎಸ್ ಆಧಾರಿತ ಸ್ವಯಂಚಾಲಿತ ಯಾಂತ್ರೀಕೃತ ತಂತ್ರಜ್ಞಾನ SCADA (Supervisory Control and data acquisition) ಯೋಜನೆ ಯಾದಗಿರಿ ಜಿಲ್ಲೆಯಲ್ಲಿ ತರಲಾಗಿದೆ. ಸ್ಕಾಡಾ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.
ಬೊಮ್ಮಾಯಿ ಸರ್ಕಾರದ ಶ್ಲಾಘನೆ
ಸ್ಕಾಡಾ ಯೋಜನೆ ಸೇರಿ ಮೂರು ಯೋಜನೆಗಳನ್ನು ಉದ್ಘಾಟಿಸಿದ ನಂತರ ಮೋದಿ ನೀರಾವರಿ ಯೋಜನೆ ಜಾರಿಗೆ ತಂದಿದ್ದಕ್ಕೆ ಸಿಎಂ ಬೊಮ್ಮಾಯಿ ಹಾಗೂ ಅವರ ತಂಡದ ಕಾರ್ಯವನ್ನು ಮೋದಿ ಶ್ಲಾಘಿಸಿದರು. " ಡಬಲ್ ಇಂಜಿನ್ ಸರಕಾರವು ಉತ್ತರ ಕರ್ನಾಟಕ ಅಭಿವೃದ್ಧಿಗೆ ಬದ್ದವಾಗಿದೆ. ನಮ್ಮ ಸರಕಾರ ಕೇವಲ ವೋಟ್ ಬ್ಯಾಂಕ್ ಮಾಡುವ ಕೆಲಸ ಮಾಡುತ್ತಿಲ್ಲ. ಡಬಲ್ ಇಂಜಿನ್ ಸರಕಾರದ ಆದ್ಯತೆ ಅಭಿವೃದ್ಧಿ ಮಾಡುವ ಸಂಕಲ್ಪವಾಗಿದೆ. ಯುಪಿಎ ಸರಕಾರವು ಈ ಭಾಗ ಅಭಿವೃದ್ಧಿ ಮಾಡದಕ್ಕೆ ಬೇಸರ ವ್ಯಕ್ತಪಡಿಸಿದರು. ಯುಪಿಎ ಸರಕಾರ ಕಡೆಗಣನೆ ಮಾಡಿದಕ್ಕೆ ಯಾದಗಿರಿ ಹಿಂದುಳಿದ ಜಿಲ್ಲೆ ಹಣೆಪಟ್ಟಿ ಹೊತ್ತಿಕೊಂಡಿತ್ತು ಎಂದು ಟೀಕಿಸಿದರು.
ಯಾದಗಿರಿ ಮಹಾತ್ವಾಕಾಂಕ್ಷೆ ಜಿಲ್ಲೆ
ನಮ್ಮ ಸರಕಾರವು ಹಿಂದುಳಿದ ಜಿಲ್ಲೆಗೆ ಆದ್ಯತೆ ನೀಡಿ, ಮಹತ್ವಾಕಾಂಕ್ಷಿ ಜಿಲ್ಲೆಯನ್ನಾಗಿ ಆಯ್ಕೆ ಮಾಡಿ, ಹಲವು ಕ್ಷೇತ್ರದಲ್ಲಿ ಸುಧಾರಣೆ ತಂದಿದೆ. ಯಾದಗಿರಿ ಜಿಲ್ಲೆಯು ಕೊರೊನಾ ಲಸಿಕೆ ವಿತರಣೆಯಲ್ಲಿಯೂ ಮುಂಚೂಣಿಯಲ್ಲಿದೆ. ಈ ಜಿಲ್ಲೆ ಆರೋಗ್ಯ, ಶಿಕ್ಷಣದಲ್ಲಿ ಉತ್ತಮವಾಗಿದೆ. ಹೀಗಾಗಿ ಮಹತ್ವಾಕಾಂಕ್ಷೆ ಯಾದಗಿರಿ ಜಿಲ್ಲೆಯು ಅಭಿವೃದ್ಧಿ ಕಂಡು 10 ನೇ ಸ್ಥಾನ ಪಡೆದಿದೆ. ಹಲವು ಯೋಜನೆಗಳಿಂದ ಯಾದಗಿರಿ ಜಿಲ್ಲೆಯಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ . ಡಬಲ್ ಇಂಜಿನ್ ಸರಕಾರ ರಾಜ್ಯದ ಅಭಿವೃದ್ಧಿಗೆ ಬದ್ದವಾಗಿದೆ. ಸ್ಕಾಡಾ ಯೋಜನೆ, ನೀರಾವರಿ ಯೋಜನೆಯಿಂದ ಕೊನೆಭಾಗದ ರೈತರಿಗೆ ನೀರಾವರಿ ಸೌಲಭ್ಯ ಸಿಕ್ಕಿದೆ. ಇದರಿಂದ 4.5 ಲಕ್ಷ ಹೆಕ್ಟೇರ್ ನೀರಾವರಿಗೆ ಅನುಕೂಲವಾಗಲಿದೆ ಎಂದು ಪಿಎಂ ಮೋದಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಯ ರಿಪೋರ್ಟ್ ಕಾರ್ಡ್ಅನ್ನ ಜನರ ಮುಂದಿಟ್ಟರು.
ಮೂರು ಯೋಜನೆಗಳ ಶ್ರೇಯ ಮೋದಿಯವರಿಗೆ ಸಲ್ಲುತ್ತದೆ
ಇದಕ್ಕು ಮೊದಲು ಸಿಎಂ ಬಸವರಾಜ ಬೊಮ್ಮಾಯಿ ಅವರ ಮಾತನಾಡಿ, ನಾರಾಯಣ ಎಡದಂಡೆ ಕಾಲುವೆಯ ನವೀಕರಣ, ಸ್ಕಾಡಾ ಯೋಜನೆ, ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ನೀಡಿದ್ದ ಶ್ಶ್ರೇಯಸ್ಸು ಪಿಎಂ ಮೋದಿ ಅವರಿಗೆ ಸಲ್ಲುತ್ತದೆ. ಸ್ಕಾಡಾ ಯೋಜನೆಯಿಂದ ಕೊನೆ ಭಾಗದ ನೀರು ಹರಿಸಲಾಗುತ್ತಿದೆ. ಏಷ್ಯಾದಲ್ಲಿ ಅತಿ ದೊಡ್ಡ ಸ್ಕಾಡಾ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ