BTS 2020 - ತಂತ್ರಜ್ಞಾನವೇ ಭವಿಷ್ಯದ ಶಕ್ತಿ: ಬೆಂಗಳೂರು ಟೆಕ್ ಸಮಿಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ

Bengaluru Tech Summit 2020 - ತಂತ್ರಜ್ಞಾನ ಭವಿಷ್ಯದ ಶಕ್ತಿಯಾಗಿದ್ದು, ಅನೇಕ ಸಮಸ್ಯೆಗಳಿಗೆ ಅದು ಪರಿಹಾರ ನೀಡುತ್ತದೆ. ಈ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದರೆ ಭಾರತ ಪ್ರಬಲ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬೆಂಗಳೂರು ಟೆಕ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಭಾಷಣ

ಬೆಂಗಳೂರು ಟೆಕ್ ಸಮಿಟ್​ನಲ್ಲಿ ಪ್ರಧಾನಿ ಮೋದಿ ಭಾಷಣ

 • Share this:
  ಬೆಂಗಳೂರು(ನ. 19): ಪ್ರಧಾನಿ ನರೇಂದ್ರ ಮೋದಿ ಅವರು ಇಂದು 23ನೇ ಬೆಂಗಳೂರು ತಂತ್ರಜ್ಞಾನ ಮೇಳ (ಬಿಟಿಎಸ್-2020) ಉದ್ಘಾಟನೆ ಮಾಡಿದರು. ವಿಡಿಯೋ ಕಾನ್ಫೆರೆನ್ಸ್ ಮೂಲಕ ಆಯೋಜಿಸಲಾಗಿರುವ ಮೂರು ದಿನಗಳ ಈ ತಂತ್ರಜ್ಞಾನ ಮೇಳದಲ್ಲಿ ಭಾಷಣ ಮಾಡಿದ ಪ್ರಧಾನಿ ಮೋದಿ, ತಂತ್ರಜ್ಞಾನವೇ ಭವಿಷ್ಯದ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಅದೇ ವೇಳೆ, ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ ನಿರ್ಮಾಣದ ಉದ್ದೇಶ ಸಾಕಾರಗೊಳ್ಳಲು ತಂತ್ರಜ್ಞಾನ ಸಹಕಾರಿಯಾಗಲಿದೆ ಎಂಬುದನ್ನು ತಿಳಿಸಿದರು.

  ಐದು ವರ್ಷಗಳ ಹಿಂದೆ ನಾವು ಡಿಜಿಟಲ್ ಇಂಡಿಯಾ ಪರಿಚಯಿಸಿದೆವು. ಈಗ ಡಿಜಿಟಲ್ ಇಂಡಿಯಾ ಎಂದರೆ ನಮ್ಮ ಜನರ ಜೀವನ ಶೈಲಿಯಾಗಿದೆ. ಜನರ ಬದುಕು ಬದಲಾಗಿದೆ. ನಮ್ಮ ಸರ್ಕಾರ ಟೆಕ್ನಾಲಜಿಗೆ ಆದ್ಯತೆ ಕೊಟ್ಟಿದೆ. ತಂತ್ರಜ್ಞಾನ ಮಾರುಕಟ್ಟೆ ಅಭಿವೃದ್ಧಿಪಡಿಸಿದೆ. ಕೃಷಿಕ ಸಮುದಾಯವೂ ಕೂಡ ಈ ತಾಂತ್ರಿಕ ಅಭಿವೃದ್ಧಿ ಕಂಡಿದೆ. ಬಡವರೂ ಕೂಡ ತಂತ್ರಜ್ಞಾನದ ಭಾಗವೇ ಆಗಿದ್ದಾರೆ. ನಮ್ಮ ಆಯುಷ್ಮಾನ್ ಭಾರತ್ ಯೋಜನೆ ಕೂಡ ತಾಂತ್ರಿಕ ಅಭಿವೃದ್ಧಿಯ ಕೂಸಾಗಿದೆ ಎಂದು ಮೋದಿ ಬಣ್ಣಿಸಿದರು.

  ಆಡಳಿತ, ಬದುಕು, ಅಭಿವೃದ್ಧಿ ಹೇಗೆ ಎಲ್ಲದರಲ್ಲೂ ಟೆಕ್ನಾಲಜಿ ಪ್ರಮುಖ ಪಾತ್ರ ವಹಿಸುತ್ತಿದೆ. ಸಣ್ಣ ಅವಧಿಯಲ್ಲೇ ತಂತ್ರಜ್ಞಾನ ಹಿಡಿತ ಸಾಧಿಸಿಕೊಂಡಿದೆ. ಮುಂದಿನ ದಿನಗಳು ಬಹುತೇಕ ವಿಚಾರಗಳು ತಂತ್ರಜ್ಞಾನವನ್ನೇ ಆಧರಿಸಿಕೊಂಡಿರಲಿದೆ. ಸಂಕಷ್ಟ ಸಮಯದಲ್ಲಿ ಪ್ರತಿಭೆಯನ್ನು ಹೊರಹಾಕುವುದು ಕಷ್ಟವಾದರೂ ನಾನು ಅದನ್ನು ಸಾಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದೇವೆ ಎಂದರು.

  ಕೊರೋನಾ ಕಾಲದಲ್ಲಿ ರಸ್ತೆಯಲ್ಲಿ ನಮಗೆ ಕಂಡ Bend ಒಂದು ತಿರುವು ಮಾತ್ರ. ಅದೇ End (ಅಂತ್ಯ) ಅಲ್ಲ. ಇದನ್ನು ನೆನಪಿಟ್ಟುಕೊಂಡು ಈ ತಿರುವು ದಾಟಿ ಮುಂದೆ ಹೋಗೋಣ. ಜಾಗತಿಕ ವೈವಿಧ್ಯತೆಯು ಈಗ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಪ್ರತಿ ಕ್ಷೇತ್ರದಲ್ಲೂ ಈಗ ಟೆಕ್ನಾಲಜಿ ಅನಿವಾರ್ಯತೆ ಇದೆ. ನಾವು ಮಾಹಿತಿ ತಂತ್ರಜ್ಞಾನದ ಮಧ್ಯಕಾಲಘಟ್ಟದಲ್ಲಿ ಇದ್ದೇವೆ. ಈಗ ಎಲ್ಲವೂ ಎಲ್ಲರ ಕೈಗೆಟಕುವ ಜಾಗದಲ್ಲಿದೆ. ಎಲ್ಲಾರ ರೀತಿಯ ಸಮಸ್ಯೆಗಳಿಗೂ ಪರಿಹಾರ ಇದೆ. ಭಾರತ ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿದೆ. ಡಿಜಿಟಲ್ ಪೇಮೆಂಟ್ ಒಂದು ಕ್ರಾಂತಿ ರೂಪದಲ್ಲಿ ಆಗಿದೆ. 2 ಬಿಲಿಯನ್ ಪೇಮೆಂಟ್ ವಹಿವಾಟು ನಡೆದಿರುವುದು ಇದಕ್ಕೆ ಸಾಕ್ಷಿ. ನಾವು ಹಲವು ಸವಾಲುಗಳನ್ನ ತಂತ್ರಜ್ಞಾನದ ಮೂಲಕ ಗೆದ್ದು ಬಂದಿದ್ದೇವೆ. ಈ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಮೇಲುಗೈ ಸಾಧಿಸಿದರೆ ಭಾರತ ಬ್ರಹ್ಮಾಂಡವಾಗಿ ಹೊರಹೊಮ್ಮಲಿದೆ.

  ನಂತರ ಮಾತನಾಡಿದ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಬೆಂಗಳೂರು ಈಗ ಟೆಕ್ನಾಲಜಿ ಹಬ್ ಆಗಿದೆ ಎಂಬುದನ್ನು ತಿಳಿಸಿದರು. ಜಗತ್ತು ಈಗ ತಂತ್ರಜ್ಞಾನ ಅನ್ನೋ ನೂಲಿನ ಮೇಲೆ ನಡೆಯುತ್ತಿದೆ. ನೈಸರ್ಗಿಕ ಬದಲಾವಣೆಗಳೂ ಕೂಡ ಈಗ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಮಳೆ, ಬೆಳೆ ಹೀಗೆ ಎಲ್ಲವನ್ನೂ ತಂತ್ರಜ್ಞಾನ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಆಸ್ಟ್ರೇಲಿಯಾ ಕೂಡ ತಾಂತ್ರಿಕವಾಗಿ ಸ್ಪರ್ಧಾತ್ಮಕವಾಗಿದೆ. ಡಿಜಿಟಲ್ ಎಕನಾಮಿ ಈಗ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈ ಕ್ಷೇತ್ರದಲ್ಲಿ ಬಂಡವಾಳಗಳ ಹೂಡಿಕೆ ಹೆಮ್ಮರವಾಗುತ್ತಿದೆ ಎಂದು ಹೇಳಿದರು.

  ಇದಕ್ಕೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಕರ್ನಾಟಕಕ್ಕೆ ಈ ಬಿಟಿಎಸ್ ಮೇಳ ಐತಿಹಾಸಿಕ ಅವಕಾಶ ಕೊಟ್ಟಿದೆ. ಕೋವಿಡ್ ಸಂಕಷ್ಟದಲ್ಲೂ ಆರ್ಥಿಕತೆಯನ್ನು ಗಟ್ಟಿಯಾಗಿ ಹಿಡಿದಿಡುವ ಯೋಜನೆಗಳನ್ನ ನೀಡಿದ್ದೇವೆ. ಕರ್ನಾಟಕ ಈ ದೇಶದಲ್ಲ ಆರ್ಥಿಕ ಬೆಳವಣಿಗೆಗಳಿಗೆ ಪೂರಕವಾದ ವಾತಾವರಣ ಹೊಂದಿದೆ. ಸರ್ಕಾರದ ನೂತನ ಐಟಿ ನೀತಿಗಳು ಈ ಕ್ಷೇತ್ರಕ್ಕೆ ಹೆಚ್ಚು ಬೆಂಬಲ ನೀಡುತ್ತವೆ ಎಂದರು.

  ಬಯೋಕಾನ್ ಮುಖ್ಯಸ್ಥೆ ಕಿರಣ್ ಮುಜುಮ್ದಾರ್ ಶಾ, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್, ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವಥ ನಾರಾಯಣ, ಸಚಿವ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮೊದಲಾದವರು ಈ ವರ್ಚುವಲ್ ಸಭೆಯಲ್ಲಿ ಮಾತನಾಡಿದರು.

  ವರದಿ: ಆಶಿಕ್ ಮುಲ್ಕಿ
  Published by:Vijayasarthy SN
  First published: