ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ (PM Modi) ಏಪ್ರಿಲ್ 9ಕ್ಕೆ ಚಾಮರಾಜನಗರ (Chamarajanagar) ಜಿಲ್ಲೆಯ ಬಂಡೀಪುರಕ್ಕೆ (Bandipur Tiger Reserve) ಭೇಟಿ ನೀಡಲಿದ್ದಾರೆ. ಹುಲಿ ಯೋಜನೆಗೆ 50 ವರ್ಷ ತುಂಬಿದ್ದಕ್ಕೆ ಪ್ರಧಾನಿ ಮೋದಿ, ಹುಲಿ ಗಣತಿ ವರದಿ ಬಿಡುಗಡೆ ಮಾಡಲಿದ್ದಾರೆ. ಇದರೊಂದಿಗೆ, ಹುಲಿ (Tiger) ಸಂರಕ್ಷಣೆಗಾಗಿ ಸರ್ಕಾರದ ದೃಷ್ಟಿಕೋನ ಮತ್ತು ಕಾರ್ಯಕ್ರಮದ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಪ್ರಧಾನಿ ಮೋದಿ ಅವರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಏಪ್ರಿಲ್ 8 ಮತ್ತು 9ರಂದು ಪ್ರವಾಸಿಗರಿಗೆ ಸಫಾರಿ ಬಂದ್ (Tiger Safari) ಮಾಡಲಾಗಿದೆ. ಅಲ್ಲದೆ ಏಪ್ರಿಲ್ 4ರಿಂದ 9ರವರೆಗೂ ಬಂಡೀಪುರದಲ್ಲಿ ಅರಣ್ಯ ಇಲಾಖೆಗೆ (Forest Department) ಸೇರಿದ ಅತಿಥಿಗೃಹ, ಕಾಟೇಜ್‌ಗಳ ಬುಕಿಂಗ್ ಸಹ ಇರುವುದಿಲ್ಲ. ಈ ಕುರಿತು ಬಂಡೀಪುರ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಅಂತ ಆರೋಪ
ಏಪ್ರಿಲ್ 9ರಂದು ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡುವ ವಿಚಾರಕ್ಕೆ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಲಿದೆ ಎಂದು ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆರೆಹಳ್ಳಿ ನವೀನ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Karnataka Elections 2023: ಚುನಾವಣೆ ಹೊತ್ತಲ್ಲಿ ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ; ದಳಪತಿಗಳಿಗೆ ಶಾಕ್!
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀತಿ ಸಂಹಿತೆ ಇರುವಾಗ ಒಬ್ಬ ಜನಪ್ರತಿನಿಧಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಎಷ್ಟು ಸರಿ? ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ಕೇರಳ ಹಾಗೂ ತಮಿಳುನಾಡಿಗೆ ಸಂಕಲ್ಪ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವುದು, ಪ್ರವಾಸಿಗರಿಗೆ ಸಫಾರಿ ಬಂದ್ ಮಾಡುವುದು ಎಷ್ಟು ಸಮಂಜಸ ಎಂದು ನವೀನ್ ಪ್ರಶ್ನಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು
ಅಲ್ಲದೆ, ಅರಣ್ಯ ಸಿಬ್ಬಂದಿಗೆ ಸನ್ಮಾನ ಮಾಡುವ ಮಾಹಿತಿ ಇದ್ದು, ಮತದಾರರ ಮೇಲೆ ಇದು ಪ್ರಭಾವ ಬೀರಿದಂತಲ್ಲವೇ? ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಚುನಾವಣೆ ನಂತರ ಪ್ರಧಾನಿ ಮೋದಿ ಬರಲಿ, ನಮ್ಮ ಆಕ್ಷೇಪ ಇಲ್ಲ ಎಂದು ಹೇಳಿದ್ದಾರೆ
ದೇಶದಲ್ಲಿ ಹುಲಿ ಯೋಜನೆಗೆ 50 ವರ್ಷ ಹಿನ್ನಲೆ ಮೂರು ದಿನಗಳ ಮೆಗಾ ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇತ್ತೀಚಿನ ಹುಲಿಗಣತಿ ವರದಿ, ಹುಲಿ ಸಂರಕ್ಷಣೆಗಾಗಿ ಸರ್ಕಾರ ಕೈಗೊಂಡ ಕ್ರಮಗಳ ವರದಿ, ಮತ್ತು ನಾಣ್ಯ ಸ್ಮರಣಿಕೆಯನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ.
ಮೋದಿ ಆಗಮನ ಹಿನ್ನೆಲೆ ಭರ್ಜರಿ ಸಿದ್ಧತೆ
ದೇಶದಲ್ಲೇ ಘೋಷಣೆಯಾಗಿರುವ 9 ಹುಲಿ ಯೋಜನೆಗಳ ಪೈಕಿ ಮೊದಲು ಬಂಡೀಪುರವೂ ಒಂದು. 2022ರ ಹುಲಿಗಣತಿ ಪ್ರಕಾರ ಬಂಡೀಪುರದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಹೆಚ್ಚು ಹುಲಿಗಳಿದೆ. ಈ ಹಿನ್ನೆಲೆ ಬಂಡೀಪುರಕ್ಕೆ ಪ್ರಧಾನಿಗಳು ಮೋದಿ ಆಗಮಿಸಲಿದ್ದು, ಬಂಡೀಪುರದಲ್ಲಿ ಸಫಾರಿ ಕೂಡ ನಡೆಸಲಿದ್ದಾರೆ. ಬಳಿಕ ತಮಿಳುನಾಡಿನ ಮದುಮಲೈ ಅರಣ್ಯಕ್ಕೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ಭೇಟಿಗೆ ಬಂಡೀಪುರದಲ್ಲಿ ಸಿದ್ಧತೆ ಆರಂಭವಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಫಾರಿ ರಸ್ತೆಗಳ ದುರಸ್ತಿ ಕಾರ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದು, ಮೇಲುಕಾಮನಹಳ್ಳಿ ಬಳಿ ಹೆಲಿಪ್ಯಾಡ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಏಪ್ರಿಲ್ ಮೊದಲ ವಾರದಲ್ಲಿ ಕರ್ನಾಟಕದ ಹುಲಿಗಳ ಮಧ್ಯೆ ಇರಲು ಬರುತ್ತೇನೆ ಎಂದು ಪ್ರಧಾನಿ ಮೋದಿ ಈಗಾಗಲೇ ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ