ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಇದೇ 20ರ ಸೋಮವಾರದಂದು ರಾಜ್ಯ ರಾಜಧಾನಿ ಬೆಂಗಳೂರಿಗೆ (Bengaluru) ಆಗಮಿಸುತ್ತಿದ್ದು, ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ, ಬಿಗಿಭದ್ರತೆಯ ದೃಷ್ಟಿಯಿಂದ ಅವರು ಸಂಚರಿಸಲಿರುವ ಮಾರ್ಗದಲ್ಲಿ ಬರುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ (Higher Education Institutions) ಅಂದು ರಜೆ (Leave) ಘೋಷಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Ashwath Narayan) ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ರಜೆ ಅನ್ವಯ
ಶನಿವಾರ ಈ ಬಗ್ಗೆ ಸರಕಾರ ಆದೇಶ ಹೊರಡಿಸಿದೆ. ಇದರಂತೆ, ಪ್ರಧಾನಿ ಹಾದು ಹೋಗಲಿರುವ ಐಐಎಸ್ಸಿ, ಗೊರಗುಂಟೆ ಪಾಳ್ಯ, ಸಿಎಂಟಿಐ, ವರ್ತುಲ ರಸ್ತೆ, ಡಾ.ರಾಜಕುಮಾರ್ ಸ್ಮಾರಕ ಮೇಲ್ಸೇತುವೆ, ಲಗ್ಗೆರೆ ಸೇತುವೆ, ನಾಯಂಡಹಳ್ಳಿ, ಮೈಸೂರು ರಸ್ತೆ ಆರ್.ವಿ.ಕಾಲೇಜು, ನಾಗರಬಾವಿ, ಸುಮನಹಳ್ಳಿ ಮೇಲ್ಸೇತುವೆ, ಎಂಇಐ ಜಂಕ್ಷನ್, ಗೋವರ್ಧನ್ ಚಿತ್ರಮಂದಿರ, ಯಶವಂತಪುರ ಮತ್ತು ಜಕ್ಕೂರು ವಿಮಾನ ನಿಲ್ದಾಣ ಮಾರ್ಗಗಳ ಸುತ್ತಮುತ್ತಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ರಜೆ ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ರೋಡ್ ಶೋ ರದ್ದು
ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ರೋಡ್ ಶೋ ರದ್ದುಗೊಂಡಿದ್ದು, ರಸ್ತೆ ಮಾರ್ಗದ ಬದಲು ವಾಯುಮಾರ್ಗದಲ್ಲೇ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಒಂದು ಹೆಚ್ಚುವರಿ ಕಾರ್ಯಕ್ರಮವನ್ನು ಇದೀಗ ಸೇರ್ಪಡೆ ಮಾಡಲಾಗಿದೆ. ಯಲಹಂಕ ವಾಯುನೆಲೆಯಿಂದ ಕೊಮ್ಮಘಟ್ಟ ಮತ್ತು ಕೊಮ್ಮಘಟ್ಟದಿಂದ ಬೇಸ್ ಕ್ಯಾಂಪಸ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ನಡೆಸಬೇಕು ಎನ್ನುವ ರಾಜ್ಯ ಬಿಜೆಪಿ ಆಶಯಕ್ಕೆ ಎಸ್ಜಿಪಿ ತಣ್ಣೀರೆರಚಿದೆ.
ಎಸ್ಜಿಪಿ ಭದ್ರತೆ ಕಾರಣದಿಂದ ಅನುಮತಿ ನೀಡಿಲ್ಲ
ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ನಡೆಸಲು ಅವಕಾಶ ನಿರಾಕರಿಸಿದೆ. ರೋಡ್ ಶೋ ಪ್ರಸ್ತಾಪವನ್ನು ಪರಿಶೀಲಿಸುವುದಾಗಿ ತಿಳಿಸಿದ್ದ ಎಸ್ಜಿಪಿ ಭದ್ರತೆ ಕಾರಣದಿಂದ ಅನುಮತಿ ನೀಡಿಲ್ಲ. ಅಲ್ಲದೆ, ಬೆಂಗಳೂರಿನ ಕಾರ್ಯಕ್ರಮಗಳಿಗೆ ರಸ್ತೆ ಮಾರ್ಗದಲ್ಲಿ ತೆರಳದೆ ವಾಯುಮಾರ್ಗದಲ್ಲೇ ತೆರಳಲು ವ್ಯವಸ್ಥೆ ಮಾಡಿದೆ. ಒಂದು ಕಾರ್ಯಕ್ರಮದಿಂದ ಮತ್ತೊಂದು ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕವೇ ಪ್ರಯಾಣಿಸಲಿದ್ದಾರೆ.
ಇದನ್ನೂ ಓದಿ: Mysore Palace: ನಾಳೆ ಮೈಸೂರು ಅರಮನೆಗೆ ಹೋಗ್ತಿದ್ದೀರಾ? ಜೂನ್ 21ರವರೆಗೂ ಪ್ಯಾಲೇಸ್‌ಗೆ ನೋ ಎಂಟ್ರಿ!
ಬೆಂಗಳೂರು ಮತ್ತು ಮೈಸೂರಿಗೆ ಭೇಟಿ
ಜೂನ್ 20 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರು ಮತ್ತು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಅವರ ಕಾರ್ಯಕ್ರಮ ಪಟ್ಟಿ ಬಂದಿದೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ಜರುಗಬೇಕೆಂಬ ಉದ್ದೇಶದಿಂದ ನಮ್ಮೆಲ್ಲಾ ಸಚಿವ ಸಂಪುಟದ ಸಹೋದ್ಯೋಗಿಗಳು, ಹಿರಿಯ ನಾಯಕ ಸದಾನಂದ ಗೌಡರು, ಎಲ್ಲಾ ಶಾಸಕರು ಶ್ರಮವಹಿಸುತ್ತಿದ್ದಾರೆ. ಅಧಿಕಾರಿಗಳ ಕೂಡ ಸಂಪೂರ್ಣ ಸಹಕಾರ ನೀಡಿ ಕೈ ಜೋಡಿಸಿದ್ದಾರೆ. ಬಿಬಿಎಂಪಿ, ಬಿಡಿಎ, ಜಿಲ್ಲಾಧಿಕಾರಿಗಳು ಮತ್ತು ಭದ್ರತಾ ದೃಷ್ಟಿಯಿಂದ ಕರ್ನಾಟಕ ಪೊಲೀಸ್, ಬೆಂಗಳೂರು ಆಯುಕ್ತರು ಸೇರಿದಂತೆ ಎಲ್ಲರೂ ಸ್ಥಳ ಪರಿಶೀಲನೆ ಮಾಡಿದ್ದಾರೆ. ಎಸ್.ಪಿ.ಜಿ ಮಾರ್ಗದರ್ಶನದಲ್ಲಿ ಭದ್ರತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.
ಇದನ್ನೂ ಓದಿ: Mysuru: ಟಾಟಾ ತೆಕ್ಕೆಗೆ ಪಾರಂಪರಿಕ ಲಲಿತಮಹಲ್ ಪ್ಯಾಲೇಸ್? ಖಾಸಗಿ ಒಡೆತನಕ್ಕೆ ಪಂಚತಾರಾ ಹೋಟೆಲ್?
ಎಲ್ಲೆಲ್ಲಿಗೆ ಭೇಟಿ ನೀಡ್ತಾರೆ ಪ್ರಧಾನಿ ಮೋದಿ?
ಪ್ರಧಾನ ಮಂತ್ರಿಗಳು ಬೆಳಿಗ್ಗೆ 11.55 ಕ್ಕೆ ಯಲಹಂಕ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಅವರು ಹೆಲಿಕಾಪ್ಟರ್ ಮೂಲಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಎರಡು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬ್ರೈನ್ ಸೆಲ್ ಅಭಿವೃದ್ಧಿ ಕೇಂದ್ರವನ್ನು ಕ್ರಿಸ್ ಗೋಪಾಲಕೃಷ್ಣ ಅವರು 450 ಕೋಟಿ ರೂ.ಗಳ ದೇನಿಗೆಯಲ್ಲಿ ನಿರ್ಮಿಸಿದ್ದು ಅದರ ಉದ್ಘಾಟನೆ ನಡೆಯಲಿದೆ. ನಂತರ ಮೈಂಡ್ ಟ್ರೀ ಸಂಸ್ಥೆ 850 ಹಾಸಿಗೆಗಳ ಸಂಶೋಧನಾ ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ