ಮಂಡ್ಯದಲ್ಲಿ 17 ಕೆರೆ ಕಟ್ಟಿಸಿರುವ ಕಲ್ಮನೆ ಕಾಮೇಗೌಡರ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ

ಇವರು ಕೇವಲ ಕೆರೆ ಮಾತ್ರವಲ್ಲದೆ  ಬೆಟ್ಟದ ತಪ್ಪಲಿನಲ್ಲಿ  ಇದುವರೆಗೂ ಸಾವಿರಾರು ಮರಗಿಡಗಳನ್ನು ನೆಟ್ಟು ತಮ್ಮ ಪರಿಸರ ಕಾಳಜಿ ಮೆರೆದಿದ್ದಾರೆ. ತಾವೊಬ್ಬ ಅನಕ್ಷರಸ್ಥರಾದರೂ ಬೆಟ್ಟದ ತಪ್ಪಲಿನ ಬಂಡೆಗಳ ಮೇಲೆ ತಮ್ಮ ಜೀವನದ ಅನುಭವದ ಮಾತುಗಳನ್ನು ಬರೆಸಿದ್ದಾರೆ.

ಕಲ್ಮನೆ ಕಾಮೇಗೌಡ

ಕಲ್ಮನೆ ಕಾಮೇಗೌಡ

  • Share this:
ಮಂಡ್ಯ(ಜೂ.28): ಆತ ಮಂಡ್ಯದ ಕುರಿಗಾಹಿ ವೃದ್ದ‌ ವ್ಯಕ್ತಿ. ಓದು ಬರೆಯಲು ಬಾರದ ಅನಕ್ಷರಸ್ಥ. ಅನಕ್ಷರಸ್ಥನಾಗಿದ್ದರೂ ಇಳಿ ವಯಸ್ಸಿನಲ್ಲಿ ಕುರಿಗಾಹಿಯಾಗಿಯೇ ಬದುಕು ಸಾಗಿಸುತ್ತಿದ್ದಾರೆ. ಈ ವೃದ್ದ ತನ್ನ ಜೀವನದಲ್ಲಿ ಬದುಕಿನುದ್ದಕ್ಕೂ ಮಾಡಿದ ಕಾರ್ಯವನ್ನು ಇದೀಗ ದೇಶದ ಪ್ರಧಾನಿ ಮೋದಿ ಕೂಡ ಕೊಂಡಾಡಿ ಶ್ಲಾಘಿಸಿದ್ದಾರೆ. ಈ ವೃದ್ದ ಸ್ವಂತ ಹಣದಲ್ಲಿ  ನಿರ್ಮಿಸಿರುವ 16 ಕೆರೆಗಳ ಕಾರ್ಯವನ್ನು ತಮ್ಮ‌ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸಿದ್ದಾರೆ.

ಹೌದು! ಆ ವೃದ್ದ ವ್ಯಕ್ತಿಯ ಹೆಸರು ಕಾಮೇಗೌಡ ಅಂತ. ಇವರು ಮಂಡ್ಯದ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ನಿವಾಸಿ. ಊರಿನಲ್ಲಿ‌ ಇವರನ್ನು ಕಲ್ಮನೆ ಕಾಮೇಗೌಡ ಎಂದೇ ಕರೆಯುತ್ತಾರೆ. ಅನಕ್ಷರಸ್ಥರಾಗಿದ್ದರೂ ಇವರು ಮಾಡಿರುವ ಕೆಲಸಕ್ಕೆ ಇಂದು ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ತಮ್ಮ ಗ್ರಾಮದ ಪಕ್ಕದಲ್ಲಿರುವ ಕುಂದೂರು ಬೆಟ್ಟದಲ್ಲಿ ಸುಮಾರು ‌17 ಕೆರೆಗಳನ್ನು ತಮ್ಮ ಜೀವನದಲ್ಲಿ ದುಡಿದ  ಸ್ವಂತ ಹಣದಲ್ಲಿ ನಿರ್ಮಿಸಿದ್ದಾರೆ.

ಈ ಕೆರೆಗಳ ನಿರ್ಮಾಣದ ಮೂಲಕ ಈ ಕಾಡಿನ ಪಕ್ಷಿ, ಪ್ರಾಣಿಗಳಿಗೆ ನೀರು ಒದಗಿಸುವ ಕೆಲಸ ಮಾಡಿದ್ದಾರೆ. ಅಲ್ಲದೇ ಈ ಕೆರೆ ನಿರ್ಮಾಣದ ಮೂಲಕ ಅಂತರ್ಜಲ ವೃದ್ದಿ ಮಾಡಿದ್ದಾರೆ. ಇವರ ಈ ಕಾರ್ಯವನ್ನು  ದೇಶದ ಪ್ರಧಾನಿ‌ ಮೋದಿ ಕೂಡ ಶ್ಲಾಘಿಸಿ‌ದ್ದು, ತಮ್ಮ‌ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕಾಮೇಗೌಡರ  ಕಾರ್ಯವನ್ನು ಪ್ರಶಂಸೆ ಮಾಡಿದ್ದಾರೆ.

ಆಯುಷ್ಮಾನ್ ಕಾರ್ಡ್ ಮಾಡಿಕೊಡುವುದಾಗಿ ಗ್ರಾಮಸ್ಥರಿಂದ ಹೆಚ್ಚುವರಿ ಹಣ ವಸೂಲಿ

ಇನ್ನು ಇವರು ಕೇವಲ ಕೆರೆ ಮಾತ್ರವಲ್ಲದೆ  ಬೆಟ್ಟದ ತಪ್ಪಲಿನಲ್ಲಿ  ಇದುವರೆಗೂ ಸಾವಿರಾರು ಮರಗಿಡಗಳನ್ನು ನೆಟ್ಟು ತಮ್ಮ ಪರಿಸರ ಕಾಳಜಿ ಮೆರೆದಿದ್ದಾರೆ. ತಾವೊಬ್ಬ ಅನಕ್ಷರಸ್ಥರಾದರೂ ಬೆಟ್ಟದ ತಪ್ಪಲಿನ ಬಂಡೆಗಳ ಮೇಲೆ ತಮ್ಮ ಜೀವನದ ಅನುಭವದ ಮಾತುಗಳನ್ನು ಬರೆಸಿದ್ದಾರೆ. ಇವರ ಈ ಕಾರ್ಯದಿಂದ ಇಂದಿಗೂ ಬೆಟ್ಟದ ತಪ್ಪಲು ಹಚ್ಚ ಹಸಿರಾಗಿದೆ. ಕೆರೆಗಳ ನಿರ್ಮಾಣದಿಂದ ಈ ಭಾಗದಲ್ಲಿನ ಅಂತರ್ಜಲ ವೃದ್ದಿಸಿದೆ.

ಇಷ್ಟೆಲ್ಲ  ಕೆಲಸನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿರುವ ಕಾಮೇಗೌಡ್ರು  ತಮ್ಮ ಸೇವೆಯನ್ನು ಸಣ್ಣದು ಎನ್ನುತ್ತಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಸೇವೆಯನ್ನು ಶ್ಲಾಘಿಸಿರೋದು ಖುಷಿ ಕೊಟ್ಟಿದೆ. ಪ್ರಕೃತಿ ಯನ್ನು‌ ಎಲ್ಲರೂ ಉಳಿಸಿ ಬೆಳೆಸುವಂತೆ ಮನವಿ ಮಾಡಿದ್ದಾರೆ.

ಒಟ್ಟಾರೆ ಮಂಡ್ಯದ ಕಲ್ಮನೆ ಕಾಮೇಗೌಡರು  ತಮ್ಮ ಪರಿಸರ ಕಾಳಜಿಯ ಕಾರ್ಯದಿಂದ ಇದೀಗ ರಾಷ್ಟ್ರದ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅಲ್ಲದೇ ಸ್ವತಃ ಪ್ರಧಾನಿ ಮೋದಿಯಿಂದ ಪ್ರಶಂಸೆ ಪಡೆದಿರುವುದು ಸಕ್ಕರೆನಾಡಿನ ಗರಿಮೆಗೆ ಮತ್ತೊಂದು ಗೌರವ ತಂದುಕೊಟ್ಟಿದೆ.
First published: