• Home
  • »
  • News
  • »
  • state
  • »
  • PM Modi In Bengaluru: ಬೆಂಗಳೂರಿನ ಅಭಿವೃದ್ಧಿಗೆ ಕೆಂಪೇಗೌಡರೇ ಪ್ರೇರಣೆ, ಕರ್ನಾಟಕವನ್ನು ಹಾಡಿ ಹೊಗಳಿದ ಪ್ರಧಾನಿ: ಇಲ್ಲಿದೆ ಮೋದಿ ಭಾಷಣದ ಹೈಲೈಟ್ಸ್

PM Modi In Bengaluru: ಬೆಂಗಳೂರಿನ ಅಭಿವೃದ್ಧಿಗೆ ಕೆಂಪೇಗೌಡರೇ ಪ್ರೇರಣೆ, ಕರ್ನಾಟಕವನ್ನು ಹಾಡಿ ಹೊಗಳಿದ ಪ್ರಧಾನಿ: ಇಲ್ಲಿದೆ ಮೋದಿ ಭಾಷಣದ ಹೈಲೈಟ್ಸ್

  • News18 Kannada
  • Last Updated :
  • Bangaon, India
  • Share this:

ಬೆಂಗಳೂರು(ನ.11): ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಎಲ್ಲಕ್ಕಿಂತ ಮೊದಲು ಕನಕದಾಸ, ವಾಲ್ಮೀಕಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಪಿಎಂ ಮೋದಿ ಬಳಿಕ ವಂದೇಭಾರತ್ ರೈಲಿಗೆ ಹಸಿರು ನಿಶಾನೆ ನೀಡಿದರು. ತದ ನಂತರ ಕಾಶಿ ದರ್ಶನ ರೈಲಿಗೆ ಹಸಿರು ನಿಶಾನೆ ನೀಡಿದ ಪ್ರಧಾನಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್-2 ಉದ್ಘಾಟನೆ ಮಾಡಿದರು. ತದ ನಂತರ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಗೊಳಿಸಿದ ಪಿಎಂ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಸಭೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತಣಾಡಿದ ಪ್ರಧಾನಿ ಮೋದಿ ಭಾರತದ ಅಭಿವೃದ್ಧಿಗೆ ಕರ್ನಾಟಕ ನೀಡುತ್ತಿರುವ ಕೊಡುಗೆಯನ್ನು ಹಾಡಿ ಹೊಗಳಿದ್ದಾರೆ. ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್​ ಹೀಗಿದೆ.


* ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಕರ್ನಾಟಕದ ಸಮಸ್ತ ಜನತೆಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಎಂದು ಕೈ ಮುಗಿದಿದ್ದಾರೆ.


* ವಿಶೇಷ ದಿನದಂದು ಬೆಂಗಳೂರಿಗೆ ಬರುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಇಂದು ಕರ್ನಾಟಕದ ಹಾಗೂ ದೇಶದ ಎರಡು ಮಹಾನ್ ಪುರುಷರಿಗೆ ಗೌರವ ಸಲ್ಲಿಸುವ ಸುವರ್ಣಾವಕಾಶ ಲಭಿಸಿದೆ.


* ಅವರು ನಮ್ಮ ಸಂಸ್ಕೃತಿ ರಕ್ಷಣೆಗೆ ಕೊಡುಗೆ ನೀಡಿದ್ದಾರೆ. ಕನಕದಾಸರು ಹಾಗೂ ವಾಲ್ಮೀಕಿ ಇಬ್ಬರೂ ಮಹಾನುಭಾವರಿಗೆ ಮತ್ತೊಮ್ಮೆ ನನ್ನ ನಮನ


* ಇಂದು ಕರ್ನಾಟಕಕ್ಕೆ ಮೊದಲ ಸ್ವದೇಶಿ ವಂದೇ ಭಾರತ್ ರೈಲು ಸಿಕ್ಕಿದೆ. ಈ ರೈಲು ಚೆನ್ನೈ-ಬೆಂಗಳೂರು-ಮೈಸೂರು ಈ ಮೂರನ್ನು ಪರಸ್ಪರ ಸಂಪರ್ಕಿಸುತ್ತದೆ.


* ಅಯೋಧ್ಯೆ, ಪ್ರಯಾಗ್​ರಾಜ್ ಹಾಗೂ ಕಾಶಿ ಯಾತ್ರೆ ನೀಡುವ ರೈಲು ಕೂಡಾ ಆರಂಭವಾಗಿದೆ.


* ಇಂದು ಕೆಂಪೇಗೌಡ ನಿಲ್ದಾಣದ ಎರಡನೇ ಟರ್ಮಿನಲ್ ಕೂಡಾ ಲೋಕಾರ್ಪಣೆಯಾಗಿದೆ. ಇದರ ಫೋಟೋಗಳನ್ನು ನಾನೇ ಪೋಸ್ಟ್​ ಮಾಡಿದ್ದೆ. ಆದರೆ ಇಂದು ಇಲ್ಲಿಗೆ ಭೇಟಿ ನೀಡಿದ ಬಳಿಕ ಫೋಟೋಗಳಿಗಿಂತಲೂ ಇದು ಭವ್ಯ, ಆಧುನಿಕವಾಗಿದೆ ಎಂದು ಅರಿವಾಗಿದೆ.


* ಇದು ಬೆಂಗಳೂರಿನ ಜನರ ದೀರ್ಘಕಾಲದ ಬೇಡಿಕೆಯಾಗಿತ್ತು. ಇದೀಗ ನಮ್ಮ ಸರ್ಕಾರ ಇದನ್ನು ಪೂರ್ಣಗೊಳಿಸಿದೆ.


* ನನಗೆ ಕೆಂಪೇಗೌಡರ 108ಅಡಿ ಎತ್ತರದ ಪ್ರತಿಮೆ ಅನಾವರಣ, ಜಲಾಭಿಷೇಕದ ಅವಕಾಶ ಸಿಕ್ಕಿದೆ. ಇದು ಭವಿಷ್ಯದ ಬೆಂಗಳೂರು ಹಾಗೂ ಭಾರತಕ್ಕೆ ನಿರಂತರ ಶ್ರಮಿಸುವ ಪ್ರೇರಣೆ ನೀಡುತ್ತದೆ.


* ಇಂದು ಭಾರತ ಸ್ಟಾರ್ಟಪ್​ನಿಂದ ಭಾರತ ಗುರುತಿಸಿಕೊಳ್ಳುತ್ತದೆ. ಭಾರತ ಗುರುತಿಸಿಕೊಳ್ಳುವಲ್ಲಿ ಬೆಂಗಳೂರಿನ ಕೊಡುಗೆ ಅತ್ಯಂತ ಮಹತ್ವದ್ದು,


* ಸ್ಟಾರ್ಟ್​ಅಪ್​ ಎನ್ನುವುದು ಒಂದು ಕಂಪನಿಯಿಂದ ಆಗುವುದಿಲ್ಲ. ಅದೊಂದು ಮನೋಭಾವ, ಸಮಗ್ರ ಪ್ರಯತ್ನದ ಫಲ. ಸ್ಟಾರ್ಟಪ್​ ಎಂದರೆ ಹೊಸತನವನ್ನು ತರುವ ಒಂದು ಹಠ


* ಬೆಂಗಳೂರು ಭಾರತದ ಭವಿಷ್ಯಕ್ಕೆ ಅತ್ಯಂತ ಮುಖ್ಯ ನಗರ. ಬೆಂಗಳೂರು ಭಾರತದ ಯುವಶಕ್ತಿಯ ಪ್ರತೀಕವಾಗಿದೆ. ವಂದೇ ಭಾರತ್ ಎಕ್ಸ್​ಪ್ರೆಸ್​ ಕೇವಲ ಒಂದು ರೈಲು ಮಾತ್ರವೇ ಅಲ್ಲ. ಅದು ಹೊಸ ಭಾರತದ ಹೊಸ ಮೈಲಿಗಲ್ಲು. ಮುಂದಿನ ದಿನಗಳಲ್ಲಿ ಭಾರತದ ರೈಲುಗಲು ಹೇಗಿರಲಿವೆ ಎಂಬುದರ ಒಂದು ಝಲಕ್ ಅಷ್ಟೇ.


* ಇಲೆಕ್ಟ್ರಿಕ್‌ ವಾಹನ ನಿರ್ಮಾಣದಲ್ಲಿ ಕರ್ನಾಟಕದ ಪಾತ್ರ ದೊಡ್ಡದಿದೆ. ಸೇನಾ ವಾಹನಗಳ ನಿರ್ಮಾಣದಲ್ಲೂ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ಕರ್ನಾಟಕ ಡಬಲ್ ಇಂಜಿನ್ ಶಕ್ತಿಯಿಂದ ನಡೆಯುತ್ತಿದೆ ಎಂದರು.


* ಸಣ್ಣ ರೈತರ ಅನುಕೂಲಕ್ಕೆ ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಆಹಾರ ಧಾನ್ಯಗಳು ಸಕಾಲಕ್ಕೆ ಮಾರುಕಟ್ಟೆ ತಲುಪಲು ಅನುಕೂಲ ಕಲ್ಪಿಸಿದ್ದೇವೆ. ಎಲ್ಲರೂ ಜೊತೆಗೂಡಿದರೆ ದೇಶ ಸದೃಢವಾಗುತ್ತದೆ. ಹೀಗಾಗಿ ದೇಶದ ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕಲು ಎಲ್ಲರನ್ನೂ ಭಾಗಿದಾರರಾಗಿ ಮಾಡಿಕೊಳ್ಳಲಾಗಿದೆ.


* ಕನಕದಾಸರು ಒಂದು ಕಡೆಯಿಂದ ಕೃಷ್ಣನ ಭಕ್ತಿಯ ಮಾರ್ಗ ತೋರಿದರು. ಮತ್ತೊಂದೆಡೆ ‘ಕುಲಕುಲವೆಂದು ಹೊಡೆದಾಡದಿರಿ’ ಎಂದು ಕಿವಿಮಾತು ಹೇಳಿದರು.


* ಇಂದು ಜಗತ್ತಿನಲ್ಲಿ ಕಿರುಧಾನ್ಯದ ಬಗ್ಗೆ ಮಾತು ಕೇಳಿಬರುತ್ತಿದೆ. ‘ರಾಮಧಾನ್ಯ ಚರಿತ್ರೆ’ ಮೂಲಕ ಕಿರುಧಾನ್ಯವಾದ ರಾಗಿಯ ಉದಾಹರಣೆ ನೀಡಿ ಸಾಮಾಜಿಕ ಸಮಾನತೆಯ ಸಂದೇಶ ನೀಡಿದರು.


* ಬೆಂಗಳೂರು ನಗರವನ್ನು ನಾಡಪ್ರಭು ಕೆಂಪೇಗೌಡರ ಪರಿಕಲ್ಪನೆಯಂತೆಯೇ ಅಭಿವೃದ್ಧಿಪಡಿಸುತ್ತೇವೆ. ಕೆಂಪೇಗೌಡರು ಬೆಂಗಳೂರನ್ನು ಆರ್ಥಿಕವಾಗಿ ಮಾತ್ರವಲ್ಲ ಸಾಂಸ್ಕೃತಿವಕಾಗಿಯೂ ಸದೃಢಗೊಳಿಸಬೇಕು ಎಂದು ಚಿಂತಿಸಿದ್ದರು. ಬೆಂಗಳೂರು ಇಂದು ಜಾಗತಿಕ ನಗರವಾಗಿ ಬೆಳೆದಿದೆ.


* ಬೆಂಗಳೂರಿನ ಪರಂಪರೆ ಸಂರಕ್ಷಿಸುವ ಜೊತೆಗೆ ಆಧುನಿಕ ಸೌಲಭ್ಯಗಳನ್ನೂ ಒದಗಿಸಬೇಕು. ಈ ಕಾರ್ಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮೋದಿ ಹೇಳಿದರು. ಇಲ್ಲಿ ನೆರೆದಿರುವ ಎಲ್ಲ ಸಂತರನ್ನೂ, ಹಿರಿಯರನ್ನು ನಮಿಸುತ್ತೇನೆ. ಎಲ್ಲರಿಗೂ ಧನ್ಯವಾದಗಳು ಎಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮುಗಿಸಿ ವೇದಿಕೆಯಿಂದ ತೆರಳಿದರು.


* ಮುಂದೆ ಭಾರತದ ರೈಲ್ವೇ ಹೇಗಿರುತ್ತದೆ ಎಂಬುವುದಕ್ಕೆ ವಂದೇ ಭಾರತ ಉದಾಹರಣೆ. ಭಾರತ ಈಗ ನಿಂತು ಚಲಿಸುವ ದಿನಗಳನ್ನು ಹಿಂದೆ ಬಿಟ್ಟಿದೆ. ವೇಗವಾಗಿ ಓಡಲು ಇಚ್ಛಿಸುತ್ತದೆ ಎಂಬುವುದಕ್ಕೆ ಸಾಕ್ಷಿ. ವಂದೇ ಭಾರತ್ ಭಾರತೀಯ ರೈಲ್ವೆಯ ಹೊಸ ಗುರುತಾಗಲಿದೆ. ಸಾರಿಗೆ ವೇಗ ಹೆಚ್ಚಿಸಿ ಸಮಯ ಉಳಿಯಲಿದೆ ಎಂದಿದ್ದಾರೆ.

Published by:Precilla Olivia Dias
First published: