ಬೆಂಗಳುರು(ಸೆ.07): ಕರ್ನಾಟಕದ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ (Karnataka Food and Civil Supplies Minister Umesh Vishwanath Katti) ಅವರ ಹಠಾತ್ ನಿಧನ ಇಡೀ ರಾಜಕೀಯ ವಲಯದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ. ಕತ್ತಿ ಅಗಲಿಕೆಗೆ ರಾಜಕೀಯ ನಾಯಕರು, ಗಣ್ಯರು ಸೇರಿದಂತೆ ರಾಜ್ಯಾದ್ಯಂತ ಜನ ಕಂಬನಿ ಮಿಡಿಯುತ್ತಿದ್ದಾರೆ. ಹೀಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಕೂಡಾ ಸಚಿವ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಉಮೇಶ್ ಕತ್ತಿ ಅವರು ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು ಎಂದು ಪ್ರಧಾನಿ ಸ್ಮರಿಸಿದ್ದಾರೆ.
ಇದನ್ನೂ ಓದಿ: ಹಳೆಯ ಒಡನಾಟ ನೆನಪು ಮಾಡಿಕೊಳ್ಳುತ್ತಾ ಕಣ್ಣೀರಿಟ್ಟ ಸಿಎಂ; ಬೆಳಗಾವಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ 'ಉಮೇಶ್ ಕತ್ತಿ ಅವರು ಓರ್ವ ಅನುಭವಿ ನಾಯಕರಾಗಿದ್ದು, ಕರ್ನಾಟಕದ ಅಭಿವೃದ್ಧಿಗೆ ಯಥೇಚ್ಛ ಕೊಡುಗೆ ನೀಡಿದ್ದರು. ಇದೀಗ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ. ಈ ಸಮಯದಲ್ಲಿ ಅವರ ಕುಟುಂಬಸ್ಥರ ದುಃಖದಲ್ಲಿ ನಾನೂ ಪಾಲುದಾರನಾಗಿದ್ದೇನೆ. ಈ ದುಃಖಕರ ಸನ್ನಿವೇಶದಲ್ಲಿ ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಾಂತ್ವನ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
Shri Umesh Katti Ji was an experienced leader who made rich contributions to Karnataka’s development. Pained by his demise. My thoughts are with his family and supporters in this tragic hour. Om Shanti.
— Narendra Modi (@narendramodi) September 7, 2022
ಸಚಿವರಾಗಿದ್ದ ಉಮೇಶ್ ಕತ್ತಿ ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿನ ನಿವಾಸದಲ್ಲಿ ರಾತ್ರಿ 10 ಗಂಟೆ ಅವರಿಗೆ ಎದೆನೋವು ಕಾಣಿಸಿಕೊಂಡು, ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.
ಕೇಂದ್ರ ಸಚಿವ ಭಗವಂತ್ ಖೂಬಾ ಸಂತಾಪ
ಕತ್ತಿ ನಿಧನಕ್ಕೆ ಕೇಂದ್ರ ಸಚಿವ ಭಗವಂತ್ ಖೂಬಾ ಸಂತಾಪ ಸೂಚಿಸಿದ್ದು, ಆತ್ಮೀಯರಾಗಿದ್ದ ಹಿರಿಯ ಸಚಿವರಾದ ಶ್ರೀ ಉಮೇಶ್ ಕತ್ತಿಯವರು ನಿಧನರಾದ ಸುದ್ದಿ ತಿಳಿದು ತುಂಬಾ ಆಘಾತವಾಗಿದೆ. ಸದಾ ಕನ್ನಡಿಗರು ಹಾಗೂ ಕರ್ನಾಟಕದ ಕುರಿತು ಚಿಂತಿಸುತ್ತಿದ್ದ ಹಾಗೂ ನಾಡಿನ ಏಳಿಗೆಗಾಗಿ ಶ್ರಮಿಸುತ್ತಿದ್ದ ಅವರು ತುಂಬ ಬೇಗ ನಮ್ಮನ್ನು ಅಗಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
Saddened by demise of Karnataka Minister Sri Umesh Katti Ji.
An irreparable loss to the state.
I pray for his sadgati.
Om Shanti. pic.twitter.com/BM8p7NFQMi
— Tejasvi Surya (@Tejasvi_Surya) September 7, 2022
ಮಾಜಿ ಸಿಎಂ ಬಿಎಸ್ವೈ ಸಂತಾಪ
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿ, ಉಮೇಶ್ ಕತ್ತಿ ಅವರ ನಿಧನ ರಾಜ್ಯಕ್ಕೆ, ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನದ ಸುದ್ದಿ ನೋವು ತರಿಸಿದೆ. ಭಗವಂತ ಅವರ ಕುಟುಂಬಕ್ಕೆ, ಕ್ಷೇತ್ರದ ಜನತೆಗೆ ನೋವು ತಡೆದುಕೊಳ್ಳುವ ಶಕ್ತಿ ಭರಿಸಲಿ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರಭಾವಿ ನಾಯಕರಾಗಿದ್ದರು. 9 ಬಾರಿ ಶಾಸಕರಾಗಿ, 4 ಬಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ನಾನು ಸಹ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಬೆಳಗಾವಿಗೆ ಉಮೇಶ್ ಕತ್ತಿ ಪಾರ್ಥಿವ ಶರೀರ ರವಾನೆ; ತಂದೆ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ
ಹುಕ್ಕೇರಿಯಲ್ಲಿ ಅಂತ್ಯಕ್ರಿಯೆ
ಉಮೇಶ್ ಕತ್ತಿ ಅವರ ಹುಟ್ಟೂರಾದ, ಹುಕ್ಕೇರಿಯ ಬೆಲ್ಲದ ಬಾಗೇವಾಡಿಯಲ್ಲಿ ಸಂಜೆ 5 ಗಂಟೆಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಸದ್ಯ ಕತ್ತಿ ಸ್ವಗೃಹದಲ್ಲಿ ನಿರವ ಮೌನ ಆವರಿಸಿದ್ದು, ನಿಧನ ಸುದ್ದಿ ಕೇಳಿ ಸಂಬಂಧಿಕರು ಮನೆಗೆ ಆಗಮಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ಶಾಸಕರು, ವಿರೋಧ ಪಕ್ಷಗಳ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಉಮೇಶ್ ಕತ್ತಿ ಅವರ ತಂದೆಯ ಸಮಾಧಿ ಪಕ್ಕದಲ್ಲಿಯೇ, ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆಯಲಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ