ಪ್ಲಂಬರ್​ನ ಶೋಕಿ ಜೀವನ; ಕಿಡ್ನಾಪ್ ಕೇಸ್ ಮತ್ತು ಸರಕಾರಿ ಅಧಿಕಾರಿ ಸ್ವಾಮಿ

ಒಂದೂವರೆ ವರ್ಷದ ಹಿಂದೆ ಪ್ಲಂಬರ್ ಸೈಫುಲ್ಲಾಗೆ ಒಂದೂವರೆ ಕೋಟಿ ರೂ ಸಿಕ್ಕಿದ್ದು ಇದೇ ಅಪಾರ್ಟ್ಮೆಂಟ್​ನ ನೆಲಮಾಳಿಗೆಯಲ್ಲೇ. ಈತನಿಗೆ ಸಿಕ್ಕ ಹಣಕ್ಕೂ ಕೆಐಎಡಿಬಿ ಅಧಿಕಾರಿ ಪಿ.ಆರ್. ಸ್ವಾಮಿಗೂ ಏನಾದರೂ ಸಂಬಂಧವಿದೆಯಾ ಎಂಬ ಪ್ರಶ್ನೆ ಎದ್ದಿದೆ.


Updated:October 5, 2018, 7:48 PM IST
ಪ್ಲಂಬರ್​ನ ಶೋಕಿ ಜೀವನ; ಕಿಡ್ನಾಪ್ ಕೇಸ್ ಮತ್ತು ಸರಕಾರಿ ಅಧಿಕಾರಿ ಸ್ವಾಮಿ
ಪ್ರಾತಿನಿಧಿಕ ಚಿತ್ರ

Updated: October 5, 2018, 7:48 PM IST
- ಕಿರಣ್ ಕೆ.ಎನ್., ನ್ಯೂಸ್18 ಕನ್ನಡ

ಬೆಂಗಳೂರು(ಅ. 05): ಈತ ಶಿವಾಜಿನಗರದ ಸೈಫುಲ್ಲಾ. ಪ್ಲಂಬರ್ ಕೆಲಸ ಮಾಡಿಕೊಂಡಿದ್ದವ…. ಇದ್ದಕ್ಕಿದ್ದಂತೆ ಈತ ಹೊಂಗಸಂದ್ರದಲ್ಲಿ ಒಂದು ನಿವೇಶನ ಹಾಗೂ ಒಂದು ಕಾರು ಖರೀದಿಸಿ ಐಷಾರಾಮಿ ಜೀವನ ಪ್ರಾರಂಭಿಸಿದ್ದ. ಎಲ್ಲರಿಗೂ ಅಚ್ಚರಿಯೋ ಅಚ್ಚರಿ..! ಈತನಿಗೆ ಇಷ್ಟೆಲ್ಲಾ ಸಂಪತ್ತು ಹೇಗೆ ಬಂತು…! ಯಾವುದಾದ್ರೂ ಲಾಟರಿ ಹೊಡೆಯಿತಾ ಎಂದು ಪ್ರಶ್ನೆ ಮಾಡಿದವರೇ ಹೆಚ್ಚು. ಎರಡು ತಿಂಗಳ ಹಿಂದೆ, ಅದೊಂದು ದಿನ ವಿಧಾನಸೌಧ ಮುಂಭಾಗದ ಮೆಟ್ರೋ ಸ್ಟೇಷನ್ ಬಳಿ ದುಷ್ಕರ್ಮಿಗಳ ತಂಡವೊಂದು ಈತನನ್ನು ಕಿಡ್ನಾಪ್ ಮಾಡಿಯೇ ಬಿಟ್ಟಿತು. ತುಮಕೂರಿನ ಗೋಡೌನ್​ನಲ್ಲಿ ಈತನನ್ನು ಕೂಡಿಹಾಕಿ ಹಣಕ್ಕೆ ಬೇಡಿಕೆ ಇಟ್ಟರು. ಆಗ ಈತ ದುಷ್ಕರ್ಮಿಗಳ ಮುಂದೆ ತನ್ನ ಸಂಪತ್ತಿನ ರಹಸ್ಯವನ್ನು ಬಿಚ್ಚಿಡುತ್ತಾನೆ.

ಅಪಾರ್ಟ್ಮೆಂಟ್​ನಲ್ಲಿ ಸಿಕ್ಕಿತ್ತು 1.5 ಕೋಟಿ ರೂ.:

ಒಂದೂವರೆ ವರ್ಷದ ಹಿಂದೆ ಸೈಫುಲ್ಲಾ ಮಂತ್ರಿ ಗ್ರೀನ್ಸ್ ಅಪಾರ್ಟ್​ಮೆಂಟ್​ನಲ್ಲಿ ಪ್ಲಂಬಿಂಗ್ ಕೆಲಸಕ್ಕೆ ಹೋಗಿರುತ್ತಾನೆ. ಅಪಾರ್ಟ್​ಮೆಂಟ್ ಶುಚಿಗೊಳಿಸುವ ವೇಳೆ ಬೇಸ್ಮೆಂಟ್​ನಲ್ಲಿ ಈತನಿಗೆ 1.5 ಕೋಟಿ ರೂ ನಗದು ಹಣ ಸಿಗುತ್ತದೆ. ಗರಿಗರಿ 2000 ಮತ್ತು 500 ರೂ ಮುಖಬೆಲೆಯ ನೋಟುಗಳು ಅದರಲ್ಲಿರುತ್ತವೆ. ಅಷ್ಟು ಹಣವನ್ನು ವಸತಿ ಸಮುಚ್ಚಯದಿಂದ ಹೊರಗೆ ತರಲು ಈತನಿಗೆ ಸಹಾಯವಾಗಿದ್ದು ಅಪಾರ್ಟ್ಮೆಂಟ್​ನ ಸೆಕ್ಯೂರಿಟಿ ಮ್ಯಾನೇಜರ್ ಭಾರತಿ. ಮಗಳ ಮದುವೆಗೆ ಹಣದ ಅವಶ್ಯಕತೆ ಇದ್ದ ಭಾರತಿಯು ಪ್ಲಂಬರ್​​ಗೆ ಸಹಾಯ ಮಾಡುತ್ತಾರೆ. ಒಂದೂವರೆ ಕೋಟಿ ರೂಪಾಯಿಯಲ್ಲಿ 20 ಲಕ್ಷವನ್ನು ಭಾರತಿಗೆ ನೀಡಿ ಉಳಿದ ಹಣವನ್ನು ಈತ ತೆಗೆದುಕೊಂಡು ಹೋಗುತ್ತಾನೆ. ಆ ಹಣದಲ್ಲೇ ಈತ ಒಂದು ಕಾರು ಹಾಗೂ ಹೊಂಗಸಂದ್ರದಲ್ಲಿ ಒಂದು ನಿವೇಶನ ಖರೀದಿಸುತ್ತಾನೆ.

ಈ ವಿಚಾರವನ್ನು ಸೈಫುಲ್ಲಾ ತನ್ನ ಕಿಡ್ನಾಪರ್ಸ್​ಗೆ ತಿಳಿಸುತ್ತಾನೆ. ತನ್ನ ಬಳಿ ಉಳಿದಿದ್ದ 18.37 ಲಕ್ಷ ರೂ. ಹಾಗೂ ಭಾರತಿಯವರ ಕೆಲ ಒಡವೆ ಎಲ್ಲವನ್ನೂ ಸೇರಿಸಿ ಅಪಹರಣಕಾರರಿಗೆ ಕೊಡುತ್ತಾನೆ. ಅವರಿಂದ ಬಿಡುಗಡೆಯಾದ ಬಳಿಕ ಹತಾಶೆಗೊಂಡ ಸೈಫುಲ್ಲಾ 15 ದಿನಗಳ ಬಳಿಕ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಕೊಡುತ್ತಾನೆ.

ಇದನ್ನೂ ಓದಿ: ಎಸಿಬಿಯಿಂದ ಭ್ರಷ್ಟ ಅಧಿಕಾರಿಗಳ ಬೇಟೆ; ಮೂಟೆ ಮೂಟೆ ನಗದು ಪತ್ತೆಈಗ ಈ ಪ್ಲಂಬರ್ ಮತ್ತು ಕಿಡ್ನಾಪ್ ಪ್ರಕರಣ ಮುನ್ನೆಲೆಗೆ ಬರಲು ಕಾರಣವಾಗಿದ್ದು ಮಂತ್ರಿ ಗ್ರೀನ್ಸ್ ಅಪಾರ್ಟ್ಮೆಂಟ್ ವಿಚಾರವೇ. ಇವತ್ತು ಶುಕ್ರವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಬ್ಬರು ಸರಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಕೋಟ್ಯಂತರ ಹಣವನ್ನು ವಶಕ್ಕೆ ಪಡೆದಿದೆ. ಕೆಐಎಡಿಬಿ ಎಂಡಿ ಆಗಿರುವ ಟಿ.ಆರ್. ಸ್ವಾಮಿ ಅವರಿರುವ ಮಂತ್ರಿ ಗ್ರೀನ್ ಅಪಾರ್ಟ್ಮೆಂಟ್​ನ ಮನೆಯ ಮೇಲೂ ಎಸಿಬಿ ದಾಳಿಯಾಗಿದೆ. ಐದು ಕೋಟಿಗೂ ಹೆಚ್ಚು ಕ್ಯಾಷ್, ಒಂದೂಮುಕ್ಕಾಲು ಕಿಲೋ ಚಿನ್ನ, 3 ಕಾರು, ಕೋಟ್ಯಂತರ ಮೌಲ್ಯದ ಆಸ್ತಿಪತ್ರಗಳು ಮೊದಲಾದವು ಈ ಅಧಿಕಾರಿ ಮನೆಯಲ್ಲಿ ಸಿಕ್ಕಿವೆ.

ಒಂದೂವರೆ ವರ್ಷದ ಹಿಂದೆ ಪ್ಲಂಬರ್ ಸೈಫುಲ್ಲಾಗೆ ಒಂದೂವರೆ ಕೋಟಿ ರೂ ಸಿಕ್ಕಿದ್ದು ಇದೇ ಅಪಾರ್ಟ್ಮೆಂಟ್​ನ ನೆಲಮಾಳಿಗೆಯಲ್ಲೇ. ಈತನಿಗೆ ಸಿಕ್ಕ ಹಣಕ್ಕೂ ಕೆಐಎಡಿಬಿ ಅಧಿಕಾರಿ ಪಿ.ಆರ್. ಸ್ವಾಮಿಗೂ ಏನಾದರೂ ಸಂಬಂಧವಿದೆಯಾ ಎಂಬ ಪ್ರಶ್ನೆ ಎದ್ದಿದೆ.

ವಿಡಿಯೋ:

ಪಾತ್ರೆಗಳೇ ದೋಣಿಗಳು: ನದಿ ದಾಟಿ ಶಾಲೆಗೆ ಹೋಗುವ ಮಕ್ಕಳ ವ್ಯಥೆಯ ಕಥೆ
First published:October 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ