ಬೆಂಗಳೂರು (ಜುಲೈ 23): ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಿ ಮತ್ತೆ ಸಿಎಂ ಪಟ್ಟಕ್ಕೆ ಏರಿದ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ದಟ್ಟವಾಗುತ್ತಿರುವಂತೆಯೇ ಸಿಎಂ ರೇಸ್ನಲ್ಲಿ ಹಲವು ಹೆಸರುಗಳು ಮುನ್ನೆಲೆಗೆ ಬರುತ್ತಿವೆ. ಹೈಕಮಾಂಡ್ ಸೂಚನೆಗೆ ಕಾಯುತ್ತಿರುವ ಬಿಎಸ್ವೈ ಯಾವ ಕ್ಷಣದಲ್ಲಿ ಬೇಕಾದರೂ ರಾಜಿನಾಮೆ ನೀಡಬಹುದು ಎಂದು ಹೇಳಲಾಗುತ್ತಿದೆ. ಈ ಬದಲಾವಣೆಗೆ ಕಾಯುತ್ತಿರುವ ಅನೇಕ ಬಿಜೆಪಿ ನಾಯಕರುಗಳು ನಾ ಮುಂದು, ತಾ ಮುಂದು ಎನ್ನುತ್ತಾ ಸಿಎಂ ರೇಸ್ನಲ್ಲಿ ಭಾಗವಹಿಸುತ್ತಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಇದೀಗ ಆರ್ ಅಶೋಕ ಕೂಡ ಲಾಬಿ ನಡೆಸಲು ನಿಂತಿದ್ದು, ಪಕ್ಷದ ಹಿರಿಯ ಮುಖಂಡರಿಗೆ ದುಂಬಾಲು ಬೀಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಅತ್ಯಂತ ಆಪ್ತವಾಗಿರುವ ಹಾಗೂ ಪ್ರಬಲರಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮೂಲಕ ಲಾಬಿ ಮಾಡಲು ಪ್ರಾರಂಭಿಸಿರುವ ಸಚಿವ ಆರ್.ಅಶೋಕ್ ಶುಕ್ರವಾರ ರಾತ್ರಿ ಪ್ರಹ್ಲಾದ್ ಜೋಷಿಗೆ ಕರೆ ಮಾಡಿ ’’ಸಿಎಂ ರೇಸ್ ನಲ್ಲಿ ಯಾರಿದ್ದಾರೆ ಎಂದು ಸ್ವಲ್ಪ ಮಾಹಿತಿ ಕೊಡಿ’’ ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ ಜೋಷಿ ’’ಇನ್ನು ಯಾರು ಎಂದು ಫೈನಲ್ ಆಗಿಲ್ಲ, ಆದ ತಕ್ಷಣ ನಾನು ಮಾಹಿತಿ ನೀಡುತ್ತೇನೆ’’ ಎಂದು ಹೇಳಿ ಕರೆ ಕಟ್ ಮಾಡಿದ್ದಾರೆ. ಇದಾದ ಬಳಿಕ ಸಿಟಿ ರವಿಗೂ ಕರೆ ಮಾಡಿ ಸಿಎಂ ರೇಸ್ನಲ್ಲಿ ಯಾರಿದ್ದಾರೆ ಎಂದು ಮಾಹಿತಿ ಪಡೆಯಲು ಅಶೋಕ್ ಯತ್ನಿಸಿದ್ದಾರೆ, ಆದರೆ ಸಿಟಿ ರವಿಯಿಂದಲೂ ಇನ್ನೂ ಯಾರು ಎಂದು ಫೈನಲ್ ಆಗಿಲ್ಲ, ಯಾರೆಂಬುದು ಫೈನಲ್ ಆದ ನಂತರ ಹೇಳುತ್ತೆನೆ, ಆನಂತರ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.
ಇಷ್ಟಕ್ಕೂ ಸುಮ್ಮನಾಗದ ಆರ್.ಅಶೋಕ್ ಅವರು ಮತ್ತೆ ಪ್ರಹ್ಲಾದ್ ಜೋಷಿಗೆ ಕರೆ ಮಾಡಿ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕಾಗಿ ಕೇಳಿಕೊಂಡಿದ್ದಾರೆ. ಅಲ್ಲದೇ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಸಮಯ ಕೊಡಿಸಿ, ಇಬ್ಬರು ನಾಯಕರ ಜೊತೆ ನಾನು ಮಾತಾಡಬೇಕು ದಯವಿಟ್ಟು ಸಮಯ ಕೊಡಿಸಿ ಎಂದು ಅಶೋಕ್ ಮನವಿ ಮಾಡಿದರು ಎಂದು ಹೇಳಲಾಗಿದೆ.
ಇದನ್ನೂ ಓದಿ: Exclusive: ಸಿಎಂ ಬಿಎಸ್ವೈ ಚೇಂಬರ್ನಲ್ಲಿ ಏನಾಯ್ತು? ವಲಸಿಗ ಸಚಿವರ ಜೊತೆ ಸಿಎಂ ಏನು ಚರ್ಚೆ ಮಾಡಿದರು? ಇಲ್ಲಿದೆ ಸಂಪೂರ್ಣ ವರದಿ
ಮುಂಚಿನಿಂದಲೂ ಬಿಎಸ್ವೈ ಬಣದಲ್ಲೇ ಗುರುತಿಸಿಕೊಂಡಿದ್ದ ಸಚಿವ ಆರ್.ಅಶೋಕ್ ಈ ಎಲ್ಲಾ ಬೆಳವಣಿಗೆಗಳು ಖಾತ್ರಿಯಾಗುತ್ತಿದ್ದಂತೆ ಬಿಎಸ್ವೈ ಅವರ ಸುತ್ತಲೇ ಗಿರಕಿ ಹೊಡೆಯಲು ಪ್ರಾರಂಭಿಸಿದ್ದಾರ. ಹೈಕಮಾಂಡ್ ನಿಮ್ಮ ಬಳಿ ಮುಂದಿನ ಸಿಎಂ ಯಾರಾಗಬೇಕು? ಎಂದು ಅಭಿಪ್ರಾಯ ಕೇಳಿದರೆ, ಆರ್.ಅಶೋಕ್ ಎಂದು ನನ್ನ ಹೆಸರೇಳಿ ಎಂದು ಸಿಎಂಗೆ ದುಂಬಾಲು ಬಿದ್ದಿದ್ದಾರೆ ಎಂದು ಸಿಎಂ ಆಪ್ತರು ಹೇಳಿದ್ದಾರೆ.
ವರದಿ: ಚಿದಾನಂದ್ ಪಟೇಲ್
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ, ಗುಂಪುಗೂಡುವುದನ್ನು ನಿಯಂತ್ರಿಸಿ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ