ಚಾಮರಾಜನಗರ (ಏ.15) ಬಂಡೀಪುರ ಹುಲಿಸಂರಕ್ಷಿತ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತವಾಗಿ ಇಡಲು ಅರಣ್ಯ ಇಲಾಖೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೀಗ ಬಂಡೀಪುರ ಮಧ್ಯದಲ್ಲಿ ಹಾದು ಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ನಿತ್ಯ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲು ನಿರಂತರ ಗಸ್ತು ಮಾಡಲಾಗುತ್ತಿದೆ. ಇದಕ್ಕಾಗಿಯೇ ಪ್ರತ್ಯೇಕ ವಾಹನ ಹಾಗೂ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಿ ಒಂದೇ ಒಂದು ಪ್ಲಾಸ್ಟಿಕ್ ತ್ಯಾಜ್ಯವೂ ಉಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಅತಿ ಹೆಚ್ಚು ಹುಲಿಗಳ ಅರಣ್ಯಗಳ ಪೈಕಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿರುವ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಆನೆ, ಚಿರತೆ, ಕರಡಿ, ಜಿಂಕೆ, ಕಡವೆ ಮೊದಲಾದಪ್ರಾಣಿಗಳ ಆವಾಸಸ್ಥಾನವೂ ಹೌದು. ಈ ಅರಣ್ಯದನಡುವೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತವೆ. ಒಂದು ಕೇರಳ ರಾಜ್ಯದ ಸುಲ್ತಾನ್ ಬತ್ತೇರಿಗು ಮತ್ತೊಂದು ತಮಿಳುನಾಡಿನ ಊಟಿಗೂ ಸಂಪರ್ಕ ಕಲ್ಪಿಸುತ್ತವೆ. ಈ ಎರಡೂ ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಪ್ರವಾಸಿಗರು ನೀರು ಕುಡಿದು ಪ್ಲಾಸ್ಟಿಕ್ ಬಾಟಲ್ ಗಳು, ತಿಂಡಿ ತಿನಿಸುಗಳ ಪ್ಲಾಸ್ಟಿಕ್ ಕವರ್ ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲಿ ಎಸೆಯುವುದು ಸಾಮಾನ್ಯವಾಗಿದೆ
ಹೀಗೆ ಬೀಸಾಡಿದ ಪ್ಲಾಸ್ಟಿಕ್ ಬಾಟಲ್ ಪ್ಲಾಸ್ಟಿಕ್ ಕವರ್ ಗಳು ತ್ಯಾಜ್ಯ ವಸ್ತುಗಳು ಅರಣ್ಯದ ಪರಿಸರ ಹಾಗೂ ವನ್ಯಜೀವಿ ಗಳ ಪಾಲಿಗೆ ಮಾರಕವಾಗಿವೆ. ಹೀಗೆ ಪ್ಲಾಸ್ಟಿಕ್ ತ್ಯಾಜ್ಯ ಬೀಸಾಡುವವರಿಗೆ ದಂಡ ಹಾಕಿದರೂ ನಿಯಂತ್ರಣ ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಈ ಎರಡೂ ರಾಷ್ಟ್ರೀಯ ಹೆದ್ದಾರಿ ಗಳಲ್ಲಿ ನಿರಂತರ ಗಸ್ತು ಮಾಡಿ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದ ಪ್ಲಾಸ್ಟಿಕ್ ಹಾಗು ಇತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲು ವಾಹನ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹೀಗೆ ನಿಯೋಜಿಸಲಾದ ಅರಣ್ಯ ಸಿಬ್ಬಂದಿ ಮೇಲುಕಾಮನಹಳ್ಳಿಯ ಬಂಡೀಪುರ ಪ್ರವೇಶ ದ್ವಾರದಿಂದ ಕೆಕ್ಕನಹಳ್ಳ ಚೆಕ್ ಪೋಸ್ಟ್ ಹಾಗೂ ಮದ್ದೂರು ಚೆಕ್ ಪೋಸ್ಟ್ ನಿಂದ ಮೂಲೆಹೊಳೆ ಚೆಕ್ ಪೋಸ್ಟ್ ವರೆಗು ಬೆಳಿಗ್ಗೆಯಿಂದ ಸಂಜೆಯವರೆಗೆ ಗಸ್ತು ನಡೆಸಿ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ವಾಹನಗಳಲ್ಲಿ ಸಂಗ್ರಹಿಸಿ ಅರಣ್ಯದಿಂದ ಹೊರಗೆ ವಿಲೇವಾರಿ ಮಾಡುತ್ತಿದ್ದಾರೆ
ಅರಣ್ಯ ಪರಿಸರಕ್ಕೆ ಯಾವುದೇ ಧಕ್ಕೆ ಬಾರದಂತೆ ಸಂರಕ್ಷಣೆ ಮಾಡುವುದು, ಅರಣ್ಯ ದೊಳಗೆ ಪ್ಲಾಸ್ಟಿಕ್ ಹಾಗೂ ಇತರೆಕಸ ಬಾರದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ, ಪ್ರವೇಶ ದ್ವಾರದಲ್ಲೇ ಸಾಧ್ಯವಾದಷ್ಟು ನಿಯಂತ್ರಣ ಮಾಡುತ್ತಿದ್ದೇವೆ. ಆದರೂ ಈ ಹೆದ್ದಾರಿಗಳಲ್ಲಿ ಸಂಚರಿಸುವ ಪ್ರಯಾಣಿಕರು ಪ್ಲಾಸ್ಟಿಕ್ ಸೇರಿದಂತೆ ಇತರೆ ತ್ಯಾಜ್ಯ ವಸ್ತುಗಳನ್ನು ನಮ್ಮ ಕಣ್ತಪ್ಪಿಸಿ ಬೀಸಾಡಿ ಹೋಗುವುದು ಸಾಮಾನ್ಯವಾಗಿದ್ದು ಕಸ ನಿಯಂತ್ರಣ ಸಾಧ್ಯವಾಗಿಲ್ಲ. ಹಾಗಾಗಿ ಸಿಬ್ಬಂದಿ ನಿಯೋಜಿಸಿ ಹೆದ್ದಾರಿಗಳ ಇಕ್ಕೆಲಗಳಲ್ಲಿ ವಾಹನಗಳ ಮೂಲಕ ಕಸ ಸಂಗ್ರಹಿಸುವುದಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ನಟೇಶ್ ತಿಳಿಸಿದ್ದಾರೆ
ಇದನ್ನು ಓದಿ: ಮಾರುಕಟ್ಟೆಯಲ್ಲಿ ಈ ಬಾರಿ ಹುಲಕೋಟಿ ಮಾವು ಅಭಾವ; ರೋಗಗಳ ಕಾಟಕ್ಕೆ ರೈತ ಕಂಗಾಲು
ಅರಣ್ಯ ಇಲಾಖೆಯ ಈ ಕ್ರಮ ಪರಿಸರವಾದಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಜನರು ಸಹ ಇದಕ್ಕೆ ಅರಣ್ಯ ಇಲಾಖೆಯ ಕ್ರಮಕ್ಕೆ ಪೂರಕವಾಗಿ ವರ್ತಿಸಬೇಕು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎನ್ನುತ್ತಾರೆ ಪರಿಸರವಾದಿ ಪುಣಜನೂರು ದೊರೆಸ್ವಾಮಿ
ಅರಣ್ಯವನ್ನು ಪ್ಲಾಸ್ಟಿಕ್ ಮುಕ್ತವಾಗಿ ನೋಡಿಕೊಳ್ಳುವದು ಕೇವಲ ಅರಣ್ಯ ಇಲಾಖೆ ಅಷ್ಟೇ ಅಲ್ಲ, ಪ್ರತಿಯೊಬ್ಬರ ಜವಬ್ದಾರಿ ಆಗಿದೆ ಪ್ರವಾಸಿಗರು ಸಹ ಜವಬ್ದಾರಿ ಯಿಂದ ವರ್ತಿಸಬೇಕು ಎಂಬುದು ಪರಿಸರ ಹಾಗೂ ವನ್ಯಜೀವಿ ಪ್ರಿಯರ ಆಶಯವಾಗಿದೆ
(ವರದಿ: ಎಸ್.ಎಂ.ನಂದೀಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ