ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಮಂಡ್ಯಕ್ಕೆ ಭೇಟಿ ಕೊಟ್ಟಿದ್ದಾಗ ಕಾರ್ಯಕರ್ತನೊಬ್ಬನ ತಲೆ ಮೇಲೆ ಹೊಡೆದಿದ್ದಾರೆ. ಬಳಿಕ ತಾವು 'ಹೊಡೆದದ್ದನ್ನು' ಸಮರ್ಥಿಸಿಕೊಂಡಿದ್ದಾರೆ. 'ಆತ ನಮ್ಮ ಮನೆಯ ಹುಡುಗ, ದೂರದ ಸಂಬಂಧಿ, ತಪ್ಪು ಮಾಡಿದ ಕಾರಣಕ್ಕೆ ಹೊಡೆದು ಬುದ್ದಿವಾದ ಹೇಳಿದ್ದೇನೆ. ಮನೆಯ ಹಿರೀಕನ ಪಾತ್ರ ನಿರ್ವಹಿಸಿದ್ದೇನೆ' ಎಂದು ಹೇಳುವ ಮೂಲಕ ತಮ್ಮದು ತಪ್ಪೇ ಅಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಹೊಡೆಸಿಕೊಂಡ ವ್ಯಕ್ತಿ ಕೂಡ ಆಕ್ರೋಶ ವ್ಯಕ್ತಪಡಿಸಿಲ್ಲ. ಬದಲಿಗೆ 'ಡಿಕೆಶಿ ನನ್ನ ಸಂಬಂಧಿ, ಅದಕ್ಕಾಗಿ ಅಭಿಮಾನದಿಂದ ನೋಡಲು ಹೋಗಿದ್ದೆ. ಅಚಾತುರ್ಯ ಹೀಗಾಯಿತು' ಎಂಬುದಾಗಿ ಮಾತನಾಡಿದ್ದಾರೆ. ಇಷ್ಟಕ್ಕೆ ಈ ವಿಷಯ ಸತ್ತು ಹೋಯಿತು ಎಂದುಕೊಂಡರೂ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯ ವರ್ತನೆ ಚರ್ಚೆ ಮಾಡಲೇಬೇಕಾದ ಸಂಗತಿ.
ಹೊಡೆಯುವುದು, ತಲೆ ಮೇಲೆ ಹೊಡೆಯುವುದು, ಸಾರ್ವಜನಿಕವಾಗಿ ಹೊಡೆಯುವುದು ಎಲ್ಲವೂ ಒಂದಕ್ಕಿಂತ ಒಂದು ಹೆಚ್ಚು ಕ್ರೂರ ವರ್ತನೆಗಳೇ. ಅವುಗಳಿಗೆ ಸಂದರ್ಭಗಳ ಸಮರ್ಥನೆ ಕೊಡುವುದು ಸರ್ವಥಾ ಸರಿ ಅಲ್ಲ. ಕಡೆಯ ಪಕ್ಷ ಡಿ.ಕೆ. ಶಿವಕುಮಾರ್ ಅವರು ಕ್ಷಮೆ ಅಥವಾ ವಿಷಾಧವನ್ನಾದರೂ ವ್ಯಕ್ತಪಡಿಸಬೇಕಿತ್ತು. ಬದಲಿಗೆ ಅವರು 'ಹೆಗಲ ಮೇಲೆ ಕೈ ಹಾಕುವುದು ಎಂದರೆ ಏನು ಅರ್ಥ? ನನ್ನ ಹೆಗಲ ಮೇಲೆ ಕೈ ಹಾಕಿದರೆ ನೋಡುವವರು ಏನಂದುಕೊಳ್ಳುತ್ತಾರೆ? ಇದಕ್ಕೆಲ್ಲಾ ಅವಕಾಶ ಕೊಡಲು ಸಾಧ್ಯವೇ? ಎಂದು ಬಲವಾದ ಸಮರ್ಥನೆಗೆ ಇಳಿದಿದ್ದಾರೆ. ಅವರು ಅವರದೇ ಮಾತಿಗೆ ಬದ್ಧರಾಗುವುದಾದರೆ ಈ ಲೇಖನದೊಂದಿಗೆ ಪ್ರಕಟಿಸಿರುವ ಫೋಟೋವನ್ನು ಎರಡೆರಡು ಬಾರಿ ನೋಡಿಕೊಳ್ಳಬೇಕು. ಡಿ.ಕೆ. ಶಿವಕುಮಾರ್ ಅವರೇ, ನೀವು ಮಾತ್ರ ನಿಮ್ಮ ಹೈಕಮಾಂಡ್ ನಾಯಕ ರಾಹುಲ್ ಗಾಂಧಿ ಅವರ ಹೆಗಲ ಮೇಲೆ ಕೈ ಹಾಕಬಹುದು, ಕಾರ್ಯಕರ್ತರಾದವರು ನಿಮ್ಮ ಹೆಗಲಮೇಲೆ ಕೈ ಹಾಕಬಾರದೆ?
ಇದನ್ನೂ ಓದಿ: DK Shivakumar: ಹೆಗಲ ಮೇಲೆ ಕೈ ಹಾಕುವುದು ಎಂದರೆ ಏನು?; ಕಾರ್ಯಕರ್ತನ ಮೇಲಿನ ಹಲ್ಲೆಗೆ ಡಿಕೆಶಿ ಸ್ಪಷ್ಟನೆ
ಘಟನೆ ಬಗ್ಗೆ ನ್ಯೂಸ್ 18 ನೆಟ್ ವರ್ಕ್ ಜೊತೆ ಮಾತನಾಡಿದ ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್ ನಾಯಕರೊಬ್ಬರು 'ನೀವು ಎಷ್ಟು ಬಾರಿ ನಾನು ಕಾಂಗ್ರೆಸ್ ಕಾರ್ಯಕರ್ತ, ನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಲ್ಲ? ನೀವು ಕಾರ್ಯಕರ್ತರೇ ಹಾಗಿದ್ದರೆ ನಿಮ್ಮ ನಾಯಕನ ಹೆಗಲ ಮೇಲೆ ಹೇಗೆ ಕೈ ಹಾಕಿದ್ದಿರಿ? ಇದರಿಂದ ನೋಡುವವರು ಏನಂದುಕೊಳ್ಳುತ್ತಾರೆ? ನಾನು ರಾಹುಲ್ ಗಾಂಧಿ ಜೊತೆ ಬಹಳ ಕ್ಲೋಸ್ ಎಂದು ತೋರಿಸಿಕೊಳ್ಳಲು ಅವರ ಹೆಗಲ ಮೇಲೆ ಕೈ ಹಾಕಿದ್ದಿರಾ? ಹಾಗಿದ್ರೆ ನಿಮ್ಮ ಕಾರ್ಯಕರ್ತರು ಕೂಡ ಡಿ.ಕೆ. ಶಿವಕುಮಾರ್ ಜೊತೆ ನಾನೆಷ್ಟು ಕ್ಲೋಸ್ ಎಂದು ತೋರಿಸಿಕೊಳ್ಳಲು ಹೆಗಲ ಮೇಲೆ ಕೈ ಹಾಕುತ್ತಾರೆ. ನಿಮ್ಮ ನಡೆ ತಪ್ಪಲ್ಲ ಎನ್ನುವುದಾದರೆ ಕಾರ್ಯಕರ್ತರ ನಡೆ ಹೇಗೆ ತಪ್ಪಾಗುತ್ತದೆ?' ಎಂದು ಡಿ.ಕೆ. ಶಿವಕುಮಾರ್ ಅವರ ವರ್ತನೆ ಬಗ್ಗೆ ಪ್ರಶ್ನೆಗಳ ಮಳೆ ಸುರಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ