ಬೆಂಗಳೂರು (ಆ. 21): ರಾಜ್ಯ ಸರ್ಕಾರದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಫೋನ್ ಕದ್ದಾಲಿಕೆಯ ಆರೋಪ ಮಾಡಿದ್ದರು. ಈ ಆರೋಪಕ್ಕೆ ವಿಧಾನಸೌಧದಲ್ಲಿ ತಿರುಗೇಟು ನೀಡಿರುವ ಸಚಿವ ಆರ್. ಅಶೋಕ್, ಫೋನ್ ಟ್ಯಾಪಿಂಗ್ ಹಗರಣದಲ್ಲಿ ಸಿಲುಕಿದವರೇ ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಯ್ತು ಎಂದು ಲೇವಡಿ ಮಾಡಿದ್ದಾರೆ.
ಒಂದು ವರ್ಷದ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ನಮ್ಮ ಪಕ್ಷದ ನಾಯಕರ ಫೋನ್ ಟ್ಯಾಪ್ ಮಾಡಿಸಿದ್ದು, ಈಗ ಅದರ ತನಿಖೆ ನಡೆಯುತ್ತಿರೋದು ಎಲ್ಲರಿಗೂ ಗೊತ್ತಿದೆ. ಆ ಪ್ರಕರಣದ ತನಿಖೆ ಒಂದು ಹಂತಕ್ಕೆ ಬರುತ್ತಿದೆ. ಆದರೆ, ಈಗ ಫೋನ್ ಟ್ಯಾಪಿಂಗ್ ಹಗರಣದಲ್ಲಿ ಸಿಕ್ಕಿಹಾಕಿಕೊಂಡವರೇ ಫೋನ್ ಕದ್ದಾಲಿಕೆಯ ಆರೋಪ ಮಾಡಿದ್ದಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಾಯಿತು ಎಂದು ಆರ್. ಅಶೋಕ್ ಡಿಕೆಶಿಯವರನ್ನು ಭೂತಕ್ಕೆ ಹೋಲಿಸಿದ್ದಾರೆ.
ಇದನ್ನೂ ಓದಿ: ಮೈಸೂರಿನ ವೈದ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ: ತನಿಖೆಗೆ ಸಿಎಂ ಆದೇಶ; ಮೃತರ ಕುಟಂಬಕ್ಕೆ 50 ಲಕ್ಷ ಪರಿಹಾರ
ಗೃಹ ಸಚಿವ ಬಸವರಾಜ ಬೊಮ್ಮಾಯಿ ಫೋನ್ ಟ್ಯಾಪಿಂಗ್ ಮಾಡಿಸುವಷ್ಟು ಕೆಳಮಟ್ಟಕ್ಕೆ ಇಳಿಯುವುದಿಲ್ಲ. ಬೊಮ್ಮಾಯಿ ಅಂತಹ ಸಂಸ್ಕೃತಿಯಿಂದ ಬಂದವರಲ್ಲ. ಅವರ ತಂದೆ ಸಿಎಂ ಆಗಿ ಕೆಲಸ ಮಾಡಿದವರು. ಫೋನ್ ಟ್ಯಾಪಿಂಗ್ ಸಂಸ್ಕೃತಿ ಕಾಂಗ್ರೆಸ್ನವರಿಗೇ ಇದೆ. ಅವರಿಗೆ ಇದರಲ್ಲಿ ಅನುಭವ ಇದೆ. ಫೋನ್ ಟ್ಯಾಪಿಂಗ್ ಮಾಡೋ ಅಗತ್ಯ ನಮಗಿಲ್ಲ. ಅವರ ಪಕ್ಷದಲ್ಲಿ ಅಭದ್ರತೆ ಇದೆ. ಹೀಗಾಗಿ ಈ ರೀತಿಯ ಕೆಲಸ ಮಾಡಿದ್ದಾರೆ ಎಂದು ಆರ್. ಅಶೋಕ್ ಕಾಂಗ್ರೆಸ್ ಮೇಲೆ ಆರೋಪಿಸಿದ್ದಾರೆ.
ಕಾಂಗ್ರೆಸ್ ದಬ್ಬಾಳಿಕೆಯ ಸಂಸ್ಕೃತಿ ಬಿಡಬೇಕು:
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರಿಗೆ ಡಿಕೆಶಿ ವಾರ್ನಿಂಗ್ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಆರ್. ಅಶೋಕ್, ಕಮಲ್ ಪಂಥ್ ದಕ್ಷ ಅಧಿಕಾರಿ. ಬೆಂಗಳೂರಿನ ಗಲಭೆಯಲ್ಲಿ ಭಾಗಿಯಾದವರ ಹೆಡೆಮುರಿ ಕಟ್ಟಿದ್ದಾರೆ. ಪೊಲೀಸರನ್ನು ಹೊಡೆದವರು, ಸ್ಟೇಷನ್ಗೆ ನುಗ್ಗಿ ಬೆಂಕಿ ಹಚ್ಚಿದವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ ಕಮಿಷನರ್ ಬಿಜೆಪಿ ಏಜೆಂಟ್ ಅಂತ ಹೇಳಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Phone Tapping: ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ; ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ
ಪೋಲಿಸ್ ಸ್ಟೇಷನ್ಗೆ ಬೆಂಕಿ ಇಟ್ಟವರು ಧರ್ಮಾತ್ಮರಾ? ಕಾಂಗ್ರೆಸ್ ಈ ಸಂಸ್ಕೃತಿ ಬಿಡಬೇಕು. ಈ ದಬ್ಬಾಳಿಕೆ, ಆರೋಪ ನಿಮಗೆ ಬಂದಿರುವ ಬಳುವಳಿ. ಯಾರನ್ನೋ ರಕ್ಷಣೆ ಮಾಡೋದಕ್ಕೆ ಕಮಿಷನರ್ಗೆ ವಾರ್ನಿಂಗ್ ಕೊಡೋದು ಸರಿಯಲ್ಲ ಎಂದು ಡಿಕೆಶಿಗೆ ಸಚಿವ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ