ಬೆಂಗಳೂರು (ಆ. 21): ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಬಿಜೆಪಿ ನಾಯಕರ ಫೋನ್ ಕದ್ದಾಲಿಕೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಆ ಆರೋಪ ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿತ್ತು. ಈ ವಿಷಯವಾಗಿ ಮೂರೂ ಪಕ್ಷಗಳು ಕೆಸರೆರಚಾಟ ಮಾಡಿಕೊಂಡಿದ್ದವು. ಇದೀಗ ಫೋನ್ ಕದ್ದಾಲಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ಫೋನ್ ಕದ್ದಾಲಿಕೆಯ ಆರೋಪ ಮಾಡಿದ್ದಾರೆ.
ನನ್ನ ಫೋನ್ ಟ್ಯಾಪಿಂಗ್ ಆಗುತ್ತಿದೆ. ಇಲ್ಲಿಯವರೆಗೆ ಚೆನ್ನಾಗಿತ್ತು, ಇವತ್ತು ಬೆಳಗ್ಗೆಯಿಂದ ಫೋನ್ ಕರೆಗಳು ಬರುತ್ತಿಲ್ಲ. ಇವತ್ತು ಇದರ ಬಗ್ಗೆ ದೂರು ಕೊಡುತ್ತೇನೆ. ನಮ್ಮ ಸುದರ್ಶನ್ ನನಗೆ 25 ಬಾರಿ ಕಾಲ್ ಮಾಡಿದ್ದಾರೆ. ಆದರೆ ಒಮ್ಮೆಯೂ ನನಗೆ ಕಾಲ್ ಬಂದಿಲ್ಲ. ನನ್ನ ಫೋನ್ ಕದ್ದಾಲಿಕೆ ಮಾಡುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ. ಈ ಹಿಂದೆಯೂ ನನ್ನ ಫೋನ್ ಟ್ಯಾಪಿಂಗ್ ಆಗಿತ್ತು, ಈಗ ಮತ್ತೆ ಆಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಇಂಥವರಿಗೆ ನೋಟೀಸ್ ಕೊಡು ಅಂತ ಮಿನಿಸ್ಟರ್ ಹೇಳುತ್ತಾರಾ? ನೋಟೀಸ್ ಕೊಟ್ಟು ಅವರನ್ನು ಕರೆಸಿ, ಬೆದರಿಕೆಯೊಡ್ಡುತ್ತಿದ್ದಾರೆ. ಮಿನಿಸ್ಟರ್ ನೋಟೀಸ್ ಕೊಡುತ್ತೇವೆ ಅಂದ್ರೆ ಹೇಗೆ? ಯಾರಾದರೂ ಹೀಗೆ ಹೇಳೋಕೆ ಆಗುತ್ತಾ? ನಾವು 30 ವರ್ಷದಿಂದ ರಾಜಕಾರಣ ನೋಡಿದ್ದೇವೆ. ಗೃಹ ಇಲಾಖೆಯ ಬಗ್ಗೆಯೂ ಚೆನ್ನಾಗಿ ಗೊತ್ತಿದೆ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರಿನ ವೈದ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ: ತನಿಖೆಗೆ ಸಿಎಂ ಆದೇಶ; ಮೃತರ ಕುಟಂಬಕ್ಕೆ 50 ಲಕ್ಷ ಪರಿಹಾರ
ನಾನು ಸಿಎಂ ಏನು ಹೇಳಿದ್ದಾರೆ ಎಂಬುದನ್ನು ಗಮನಿಸಿದ್ದೇನೆ. ಅವರು ಹೇಳಿದಂತೆ ಎಲ್ಲಾದರೂ ನಡೆದುಕೊಂಡಿದ್ದಾರಾ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ. ಸರ್ಕಾರ ಪರ್ಮನೆಂಟ್ ಅಲ್ಲ, ಹರಿಯೋ ನೀರಿದ್ದಂತೆ. ಸರ್ಕಾರ ಇಂದು ಅಧಿಕಾರಕ್ಕೆ ಬರುತ್ತೆ, ನಾಳೆ ಹೋಗುತ್ತದೆ ಎಂದಿದ್ದಾರೆ.
ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ಆರೋಗ್ಯ ಕಾರ್ಯಕರ್ತರು ಪ್ರಾಣ ಒತ್ತೆ ಇಟ್ಟು ಸೇವೆ ಮಾಡುತ್ತಿದ್ದಾರೆ. ಅವರ ಸೇವೆಗೆ ಎಷ್ಟು ಗೌರವ ಕೊಟ್ಟರೂ ಸಾಲದು. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ನಾನು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೆ. ಆಗ ಬಿಜೆಪಿ ನಾಯಕರು ವ್ಯಂಗ್ಯ ಮಾಡಿದ್ದರು. ಇಂದು ಪತಿಯನ್ನು ಕಳೆದುಕೊಂಡ ಹೆಣ್ಣುಮಗಳು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಅರೆಸ್ಟ್ ಮಾಡೋಕೆ ಎಷ್ಟು ದಿನ ಬೇಕು? ವೈದ್ಯಕೀಯ ಶಿಕ್ಷಣ ಮಿನಿಸ್ಟರ್ ಅಲ್ಲಿ ಹೋಗಿ ನಿಂತರೆ ಸಾಕಾ? ಕೇಸನ್ನು ಮುಚ್ಚಿ ಹಾಕೋ ಪ್ರಯತ್ನವೇಕೆ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ