ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ (Praveen Nettaru Murder Case) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ತನ್ನ ತನಿಖೆಯನ್ನು (NIA Investigation) ಮತ್ತಷ್ಟು ತೀವ್ರಗೊಳಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆಯ ಜೊತೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹತ್ಯೆಗೆ ಸಂಚು ನಡೆಸಿ ಬಂಧಿಸಲ್ಪಟ್ಟ ಇಬ್ಬರು ಆರೋಪಿಗಳ ಮಾಹಿತಿ ಆಧಾರದಲ್ಲಿ ಇಂದು ಮುಂಜಾನೆ ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯನಾದ ರಿಯಾಜ್ ಪರಂಗಿಪೇಟೆ (Riyaz Parangipete) ಮನೆಗೆ ದಾಳಿ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪರ್ಲಿಯಾ ಎಂಬಲ್ಲಿರುವ ರಿಯಾಜ್ ಮನೆಗೆ ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ದಾಳಿ ಮಾಡಿರುವ ಅಧಿಕಾರಿಗಳ ತಂಡ ಮೊಬೈಲ್ ವಶಕ್ಕೆ ಪಡೆದು ಹಲವು ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ನೂರಾರು ಪಿಎಫ್ಐ ಸಂಘಟನೆಗೆ ಸೇರಿದ ಕಾರ್ಯಕರ್ತರು ರಿಯಾಜ್ ಪರಂಗಿಪೇಟೆ ಮನೆ ಬಳಿ ಸೇರಿದ್ದಾರೆ. ಎನ್ಐಎ ತಂಡದ ವಿರುದ್ಧ ಪ್ರತಿಭಟನೆಯನ್ನು ನಡೆಸಿದ ಕಾರ್ಯಕರ್ತರು ಗೋ ಬ್ಯಾಕ್ ಎನ್ಐಎ ಎನ್ನುವ ಘೋಷಣೆಯೊಂದಿಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ.
PFI ಪ್ರತಿಭಟನೆ, ಭಜರಂಗದಳ ಖಂಡನೆ
ಬಂಟ್ವಾಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪಿಎಫ್ಐ ಕಾರ್ಯಕರ್ತರನ್ನು ಚದುರಿಸಿದ್ದು, ಆ ಬಳಿಕವೂ ಎನ್ಐಎ ತಂಡ ರಿಯಾಜ್ ಪರಂಗಿಪೇಟೆ ಮನೆಯ ತುಂಬಾ ಶೋಧ ಕಾರ್ಯ ಮುಂದುವರಿಸಿದೆ. ಈ ನಡುವೆ ತನಿಖಾ ದಳದ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪಿಎಫ್ಐ ಸಂಘಟನೆಯ ನಡೆಯನ್ನು ಭಜರಂಗದಳ ಖಂಡಿಸಿದೆ.
ಈ ಕುರಿತು ನ್ಯೂಸ್ 18 ಗೆ ಪ್ರತಿಕ್ರಿಯೆ ನೀಡಿರುವ ಭಜರಂಗದಳ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಪಿಎಫ್ಐ ಮುಖಂಡ ರಿಯಾಜ್ ಪರಂಗಿಪೇಟೆ ಮನೆ ಮೇಲೆ ಎನ್ಐಎ ದಾಳಿ ಮಾಡಿರುವ ಸಂದರ್ಭದಲ್ಲಿ ಪಿಎಫ್ಐ ಕಾರ್ಯಕರ್ತರು ರಾಷ್ಟ್ರೀಯ ತನಿಖಾ ದಳದಂತಹ ಸಂಸ್ಥೆಯ ಕರ್ತವ್ಯಕ್ಕೆ ಅಡ್ಡಿ ಮಾಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: Praveeen Nettaru Murder: ಎನ್ಐಎ ತನಿಖೆಯಲ್ಲಿ ಪ್ರವೀಣ್ ಹತ್ಯೆಯ ಉದ್ದೇಶ ಬಹಿರಂಗ
NIA ತಂಡಕ್ಕೆ ಸೂಕ್ತ ಭದ್ರತೆ ನೀಡಿ
ಇಂಥಹ ಘಟನೆಗಳು ಹೆಚ್ಚಾಗಿ ಕಾಶ್ಮೀರದಲ್ಲಿ ನಡೆಯುತ್ತಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಗೂ ತಲುಪಿದೆ. ಆದರೆ ಇಂಥಹ ಕೃತ್ಯಗಳಿಗೆ ಭಜರಂಗದಳ ಇಲ್ಲಿ ಅವಕಾಶ ನೀಡುವುದಿಲ್ಲ. ತನಿಖೆಗಾಗಿ ಬಂದಿರುವ ಎನ್ಐಎ ಅಧಿಕಾರಿಗಳಿಗೆ ಪೊಲೀಸರು ಸೂಕ್ತ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಪೊಲೀಸರಿಗೆ ಭದ್ರತೆ ನೀಡಲು ಸಾಧ್ಯವಾಗದೇ ಹೋದಲ್ಲಿ ಭಜರಂಗದಳ ಈ ಕೆಲಸವನ್ನು ಮಾಡಲಿದೆ. ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಆದರೆ ಈ ತನಿಖೆಗೂ ಅಡ್ಡಿ ಪಡಿಸುತ್ತಾರೆಂದರೆ ಏನಿದರ ಅರ್ಥ. ತನಿಖೆಗೆ ಅಡ್ಡಿಪಡಿಸಿದವರನ್ನೂ ಪೊಲೀಸರು ತಕ್ಷಣವೇ ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸರು ಇದೇ ರೀತಿಯ ಉದಾಸೀನತೆಯನ್ನು ತೋರಿದಲ್ಲಿ ಮುಂದಿನ ದಿನಗಳಲ್ಲಿ ಇಂಥಹ ಘಟನೆಗಳು ಜಿಲ್ಲೆಯಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: Kappatagudda: ಕಪ್ಪತ್ತಗುಡ್ಡದಲ್ಲಿ ಬಿಳಿ ಬಣ್ಣದ ನೊರೆ ತೆರನಾದ ಆಯಿಲ್ ಮಿಶ್ರಿತ ದ್ರವ ಪತ್ತೆ
ಫ್ರೀಡಂ ಕಮ್ಯುನಿಟಿ ಹಾಲ್ ಮುಚ್ಚಿಸಿ
ಬಂಟ್ವಾಳ ತಾಲೂಕಿನ ಮಿತ್ತೂರು ಸಮೀಪ ಕಾರ್ಯಾಚರಿಸುತ್ತಿರುವ ಫ್ರೀಡಂ ಕಮ್ಯುನಿಟಿ ಹಾಲ್ ನಲ್ಲಿ ದೇಶದ್ರೋಹಿ ಕೃತ್ಯಗಳ ತರಬೇತಿ ನಡೆಯುತ್ತಿದೆ. ಸರಕಾರ ಕೂಡಲೇ ಈ ಕೇಂದ್ರವನ್ನೂ ಮುಚ್ಚವ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ