ಬೆಂಗಳೂರು (ಫೆಬ್ರವರಿ 16); ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತವಾಗಿ ಏರುತ್ತಲೇ ಇದೆ. ಕಳೆದ 45 ದಿನಗಳಲ್ಲಿ ಈವರೆಗೆ 19 ಭಾರಿ ಬೆಲೆ ಏರಿಕೆ ಮಾಡಲಾಗಿದೆ. ಪರಿಣಾಮ ದೇಶದಾದ್ಯಂತ ಪೆಟ್ರೋಲ್ ಪ್ರತಿ ಲೀಟರ್ಗೆ 92 ರೂ ಗಡಿ ದಾಟಿದೆ. ಇನ್ನೂ ಹಲವೆಡೆ 100 ರೂ ಆಸುಪಾಸಿನಲ್ಲಿದೆ. ಪೆಟ್ರೋಲ್-ಡೀಸೆಲ್ ಜೊತೆಗೆ ಇದೀಗ ಅಡಿಗೆ ಅನಿಲ (ಎಲ್ಪಿ ಗ್ಯಾಸ್) ಬೆಲೆಯಲ್ಲೂ 50 ರೂ ಏರಿಕೆ ಮಾಡಲಾಗಿದೆ. ಈವರೆಗೆ 722 ರೂ ಗೆ ಮಾರಾಟ ಮಾಡಲಾಗುತ್ತಿದ್ದ 14.2 ಕೆಜಿ ಸಿಲಿಂಡರ್ ಇದೀಗ 772ಕ್ಕೆ ಏರಿಕೆಯಾಗಿದೆ. ದಿನಬಳಕೆ ವಸ್ತುಗಳ ಬೆಲೆಯೂ ಸತತವಾಗಿ ಏರುತ್ತಲೇ ಇದೆ. ಕೇಂದ್ರ ಸರ್ಕಾರದ ಈ ಕ್ರಮವನ್ನು ಖಂಡಿಸಿರುವ ಆಮ್ ಆದ್ಮಿ ರಾಜ್ಯ ಘಟಕ ಬಿಜೆಪಿ ಸರ್ಕಾರದ ವಿರುದ್ಧ ಎಳ್ಳು ನೀರು ತರ್ಪಣ ಬಿಡುವ ಅಭಿಯಾನ ಹಮ್ಮಿಕೊಂಡಿದೆ ಎಂದು ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ, "ಬಿಜೆಪಿ ನಂಬಿ ಮತ ನೀಡಿದ್ದ ಜನರನ್ನೇ ಅದು ಹುರಿದು ಮುಕ್ಕುತ್ತಿದೆ. 'ಅಚ್ಚೇದಿನ್ ಆಯೇಗಾ' ಎಂದು ಹೇಳಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಲೂಟಿ ಹೊಡೆಯುತ್ತಿದೆ. ಇಂತಹ ಕೆಟ್ಟ ಸರ್ಕಾರ ನಮಗೆ ಬೇಕೇ?" ಎಂದು ಪ್ರಶ್ನಿಸಿದ್ದಾರೆ.
ದಿನಬಳಕೆ ವಸ್ತುಗಳು, ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇವೆ. ಬಿಜೆಪಿ ಸರ್ಕಾರದ ಈ ಎಲ್ಲಾ ವೈಫಲ್ಯಗಳನ್ನು ಮನೆ, ಮನೆಗೆ ತಲುಪಿಸುವ ಕಾರ್ಯಕ್ರಮ ಸೇರಿದಂತೆ ಎಳ್ಳು, ನೀರು ತರ್ಪಣ ಬಿಡುವ ಅಭಿಯಾನವನ್ನು ಆಮ್ ಆದ್ಮಿ ಪಕ್ಷದಿಂದ ಹಮ್ಮಿಕೊಳ್ಳಲಾಗುವುದು" ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಒಣ ಭೂಮಿ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆ ಬೆಳೆದು ಯಶಸ್ಸು ಕಂಡ ರೈತ
ಈ ಹಿಂದೆ ಸರ್ಕಾರಿ ಗೋದಾಮುಗಳನ್ನು ಹೆಗ್ಗಣಗಳು ಹಾಳು ಮಾಡುತ್ತಿದ್ದವು. ಆದರೆ ಈಗ ಆ ಹೆಗ್ಗಣಗಳ ಜಾಗಕ್ಕೆ ಬಿಜೆಪಿ ಸರ್ಕಾರ ಬಂದು ಕೂತಿದೆ. ಜನರನ್ನೇ ತಿನ್ನುವ ಹೆಗ್ಗಣಗಳ ಸರ್ಕಾರ ಇದು ಎಂದು ಮೋಹನ್ ದಾಸರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ