• Home
  • »
  • News
  • »
  • state
  • »
  • ತಮ್ಮ ಮದುವೆಯ ಮಾಹಿತಿ ಮುಚ್ಚಿಟ್ರಾ ಸೂರಜ್ ರೇವಣ್ಣ? JDS ಅಭ್ಯರ್ಥಿಗೆ ರಿಲೀಫ್ ಕೊಟ್ಟ ಹೈಕೋರ್ಟ್

ತಮ್ಮ ಮದುವೆಯ ಮಾಹಿತಿ ಮುಚ್ಚಿಟ್ರಾ ಸೂರಜ್ ರೇವಣ್ಣ? JDS ಅಭ್ಯರ್ಥಿಗೆ ರಿಲೀಫ್ ಕೊಟ್ಟ ಹೈಕೋರ್ಟ್

ಸೂರಜ್​ ರೇವಣ್ಣ

ಸೂರಜ್​ ರೇವಣ್ಣ

2017ರ ಮಾರ್ಚ್​ 4ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಗರಿಕಾ ಅವರನ್ನು ಸೂರಜ್​ ವಿವಾಹವಾಗಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆ ಮದುವೆಯಾಗಿದ್ದರೂ ಪತ್ನಿಯ ಬಗ್ಗೆ ಯಾವುದೇ ವಿವರ ನೀಡಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು.

  • Share this:

ಬೆಂಗಳೂರು: ವಿಧಾನ ಪರಿಷತ್​ ಚುನಾವಣೆಗೆ (MLC Election) ಹಾಸನದಿಂದ ಜೆಡಿಎಸ್(JDS)​ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸೂರಜ್​ ರೇವಣ್ಣ (Suraj Revanna) ಅವರ ನಾಮಪತ್ರ ತಿರಸ್ಕರಿಸುವಂತೆ ಹಾಗೂ ಚುನಾವಣೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಹೈಕೋರ್ಟ್(High Court of Karnataka) ನಿರಾಕರಿಸಿದೆ. ಸೂರಜ್ ರೇವಣ್ಣ ಸ್ಪರ್ಧೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್​​ ವಜಾ ಮಾಡಿದೆ. ಮದುವೆಯಾಗಿದ್ದರೂ ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿಲ್ಲ, ಮದುವೆ ವಿವರದಲ್ಲಿ ಅನ್ವಯವಿಲ್ಲ ಎಂದು‌ ನಮೂದಿಸಿದ್ದಾರೆ. ಹೀಗಾಗಿ ಸೂರಜ್ ನಾಮಪತ್ರ ತಿರಸ್ಕಾರ ಮಾಡಬೇಕೆಂದು ಕುಂದೂರು ಗ್ರಾ.ಪಂ ಸದಸ್ಯ ಹರೀಶ್ ಕೆ ಎಲ್ ರಿಟ್​ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಹೈಕೋರ್ಟ್​, ಚುನಾವಣೆ ವೇಳಾಪಟ್ಟಿ ಈಗಾಗಲೇ ಘೋಷಣೆಯಾಗಿದೆ. ಚುನಾವಣೆ ಘೋಷಣೆಯಾದ ಮೇಲೆ‌ ಹಸ್ತಕ್ಷೇಪ ಸಾಧ್ಯವಿಲ್ಲ. ಆಕ್ಷೇಪವಿದ್ದರೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.


ಪುತ್ರನ ವಿರುದ್ಧದ ಆರೋಪಗಳಿಗೆ ಮಾಜಿ ಸಚಿವ ರೇವಣ್ಣ ಸ್ಪಷ್ಟನೆ


ಪುತ್ರ ವಿರುದ್ಧದ ಅರ್ಜಿ ವಜಾ ಆಗಿರುವ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ನ್ಯಾಯಾಲಯದಲ್ಲಿರುವ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಯಾರು ಅರ್ಜಿ ಹಾಕಿಕೊಂಡಿದ್ದಾರೆ ಗೊತ್ತಿಲ್ಲ. ನಾವು ನ್ಯಾಯಾಲಯದ ತೀರ್ಪಿಗೆ ತಲೆ ಬಾಗುತ್ತೇವೆ. ನ್ಯಾಯಾಲಯದ ಬಗ್ಗೆ ನಮಗೆ ಗೌರವವಿದೆ. ನ್ಯಾಯಾಲಯ‌ ಏನು ತೀರ್ಪು ಕೊಡುತ್ತೋ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟನೆ ನೀಡಿದರು.


ಸೂರಜ್​ ವಿರುದ್ಧದ ಆರೋಪಗಳೇನು?


ನಾಮಪತ್ರ ಸಲ್ಲಿಕೆ ವೇಳೆ ಎಲ್ಲಾ ವಿವರಗಳನ್ನೂ ಸಲ್ಲಿಸಿರುವ ಸೂರಜ್​ ರೇವಣ್ಣ ಮದುವೆಯಾಗಿದ್ದರೂ ಪತ್ನಿಯ ಬಗ್ಗೆ ಯಾವುದೇ ವಿವರ ನೀಡಿಲ್ಲ. ಅವರ ಆಸ್ತಿಯ ಬಗ್ಗೆಯೂ ಯಾವುದೇ ದಾಖಲೆ ನೀಡಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. 2017ರ ಮಾರ್ಚ್​ 4ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಗರಿಕಾ ಅವರನ್ನು ಸೂರಜ್​ ವಿವಾಹವಾಗಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ. ಸೂರಜ್​ ರೇವಣ್ಣ ತಮ್ಮ ಬ್ಯಾಂಕ್​ ಅಕೌಂಟ್​ ಬಗ್ಗೆಯೂ ಸರಿಯಾದ ಮಾಹಿತಿ ನೀಡಿಲ್ಲ ಎಂದು ಕುಂದೂರು ಗ್ರಾ.ಪಂ ಸದಸ್ಯ ಹರೀಶ್ ಆರೋಪಿಸಿದ್ದರು.


ಸೂರಜ್​ ಸಲ್ಲಿಸಿರುವ ಆಸ್ತಿ ವಿವರ ಹೀಗಿದೆ


ಸೂರಜ್​ ರೇವಣ್ಣ ನಾಮಪತ್ರದ ಜೊತೆ ತಮ್ಮ ಆಸ್ತಿಯ ವಿವರವನ್ನು ಸಲ್ಲಿಸಿದ್ದಾರೆ. ಅಫಿಡೆವಿಟ್ ನಲ್ಲಿ ಸೂರಜ್ ರೇವಣ್ಣ ಸಲ್ಲಿಸಿರುವ ಆಸ್ತಿ ವಿವರ ಹೀಗಿದೆ. 3,53,16,463 ರೂ. ಚರಾಸ್ಥಿ, ಸ್ಥಿರಾಸ್ತಿ 61,68,28,761 ರೂಪಾಯಿಗಳು ಎಂದು ಸೂರಜ್ ರೇವಣ್ಣ ಘೋಷಿಸಿಕೊಂಡಿದ್ದಾರೆ. ತಾತಾ ದೇವೇಗೌಡರು, ಅಜ್ಜಿ ಚನ್ನಮ್ಮ, ಅತ್ತೆಯರು, ಅಪ್ಪ-ಅಮ್ಮನಿಂದ 14,97,74,989 ರೂ. ಸಾಲ ಪಡೆದಿದ್ದಾರೆ. ಉಡುಗೊರೆಯಾಗಿ ನೀಡಿರುವ ಬೆಳ್ಳಿ ವಸ್ತುಗಳು ಒಟ್ಟು 12 ಕೆಜಿ. ಸೂರಜ್ ಬಳಿಯಿರುವ ಚಿನ್ನಾಭರಣಗಳು 1 ಕೆಜಿ ಚಿನ್ನ, 6 ಕೆಜಿ ಬೆಳ್ಳಿ. ಒಂದು ಟ್ರ್ಯಾಕ್ಟರ್ ಇದ್ದು, 36 ಹಸು, 6 ಎತ್ತು, 8 ಎಮ್ಮೆಗಳಿವೆ ಎಂದು ದಾಖಲೆಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: ಹಾಸನದಿಂದ MLC Electionಗೆ ಸ್ಪರ್ಧಿಸಿರುವ ಡಾ.ಸೂರಜ್ ರೇವಣ್ಣ ಆಸ್ತಿ ಎಷ್ಟು ಕೋಟಿ ಗೊತ್ತಾ?


ಕರ್ನಾಟಕ ವಿಧಾನಮಂಡಲದ ಮೇಲ್ಮನೆ ವಿಧಾನ ಪರಿಷತ್​ಗೆ ಚುನಾವಣೆ ಘೋಷಣೆಯಾಗಿದೆ. 2022ರ ಜನವರಿ 5ರಂದು 25 ಪರಿಷತ್​ ಸದಸ್ಯರ ಅಧಿಕಾರ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ 25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ ‌10ರಂದು ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಡಿ.10ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ಕ್ಕೆ ಮತ ಎಣಿಕೆ (vote counting) ನಡೆದು, ಫಲಿತಾಂಶ ಹೊರ ಬೀಳಲಿದೆ. ನವೆಂಬರ್ 16ರಂದು ಅಧಿಸೂಚನೆ ಹೊರಡಿಸಲಾಗುವುದು. ನವೆಂಬರ್ 23 ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿರುತ್ತದೆ.

Published by:Kavya V
First published: