ಮಳೆಯ ಆರ್ಭಟಕ್ಕೆ ಅಪಾರ ಬೆಳೆ ನಾಶ; ಕಾಫಿ-ಮೆಣಸಿಗೆ ಬೆಂಬಲ ಬೆಲೆ ಘೋಷಿಸುವಂತೆ ಮಲೆನಾಡಿಗರ ಆಗ್ರಹ

news18
Updated:September 8, 2018, 1:17 PM IST
ಮಳೆಯ ಆರ್ಭಟಕ್ಕೆ ಅಪಾರ ಬೆಳೆ ನಾಶ; ಕಾಫಿ-ಮೆಣಸಿಗೆ ಬೆಂಬಲ ಬೆಲೆ ಘೋಷಿಸುವಂತೆ ಮಲೆನಾಡಿಗರ ಆಗ್ರಹ
news18
Updated: September 8, 2018, 1:17 PM IST
-ವೀರೇಶ್ ಜಿ ಹೊಸೂರ್, ನ್ಯೂಸ್ 18 ಕನ್ನಡ

ಚಿಕ್ಕಮಗಳೂರು,(ಸೆ.08): ಮಳೆರಾಯನ ಅಬ್ಬರಕ್ಕೆ ಮಲೆನಾಡಿನ ಜನ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ದಾಖಲೆ ಮುರಿದ ಈ ಬಾರಿಯ ಮಳೆಗೆ ಕಾಫಿ ಬೆಳೆಗಾರರ ಪರಿಸ್ಥಿತಿ ಹೇಳತೀರದಾಗಿದೆ. ತಮ್ಮ ಜೀವನಾಧಾರಕ್ಕೆ ಕಾಫಿ ಮತ್ತು ಮೆಣಸು ಬೆಳೆಯನ್ನೇ ನಂಬಿಕೊಂಡಿದ್ದ ಮಲೆನಾಡಿಗರಿಗೆ ಈ ಸಲ ವರುಣ ಕೈಕೊಟ್ಟಿದ್ದಾನೆ. ಪ್ರತೀ ಬಾರಿ ಅನಾವೃಷ್ಟಿಯಿಂದ ನಲುಗಿ ಹೋಗುತ್ತಿದ್ದ ಜನ, ಈ ಬಾರಿ ಅತಿವೃಷ್ಟಿಯಿಂದ ತತ್ತರಿಸಿದ್ದಾರೆ. ಮಳೆಯ ಅಬ್ಬರಕ್ಕೆ ಜಿಲ್ಲೆಯ ವಾಣಿಜ್ಯ ಬೆಳೆಗಳಾದ ಅಡಿಕೆ, ಮೆಣಸು, ಕಾಫಿ ಸಂಪೂರ್ಣ ನೆಲಕಚ್ಚಿದೆ. ಒಂದೆಡೆ ವರುಣನ ಕಣ್ಣಾಮುಚ್ಚಾಲೆ ಆಟಕ್ಕೆ ಮೆಣಸು ಬೆಳೆಗಾರರು ಕಂಗಾಲಾಗಿದ್ದರೆ, ಇನ್ನೊಂದೆಡೆ ಸರ್ಕಾರದ ದ್ವಂದ್ವ ನೀತಿ ಮತ್ತು ಮೆಣಸಿಗೆ ಸೂಕ್ತ ಬೆಲೆ ಸಿಗದೆ ಮಲೆನಾಡಿಗರು ಬೇಸತ್ತು ಹೋಗಿದ್ದಾರೆ.

ಕಾಫಿನಾಡು ಚಿಕ್ಕಮಗಳೂರಲ್ಲಿ ಒಟ್ಟು 90 ಸಾವಿರಕ್ಕೂ ಅಧಿಕ ಹೆಕ್ಟೇರ್​ನಲ್ಲಿ ಕಾಫಿ ಬೆಳೆದಿದ್ದರೆ, ಅಷ್ಟು ಪ್ರದೇಶದಲ್ಲೂ ಕಾಫಿಗೆ ಪರ್ಯಾಯವಾಗಿ ಮೆಣಸನ್ನು ಬೆಳೆದಿದ್ದಾರೆ. ಕಾಫಿಯ ದರ ಹಾಗೂ ವರುಣನ ಕಣ್ಣಾಮುಚ್ಚಾಲೆ ಆಟದಿಂದ ಎರಡರಲ್ಲಿ ಒಂದು ಬೆಳೆಯಾದರೂ ಕೈಹಿಡಿಯಲೆಂದು ಬೆಳೆಗಾರರು ಕಾಫಿಗೆ ಕೊಡುವಷ್ಟೆ ಪ್ರಾಮುಖ್ಯತೆಯನ್ನ ಮೆಣಸಿಗೂ ಕೊಡುತ್ತಾರೆ. ಆದರೆ ಈ ಬಾರಿಯ ವರುಣನ ಅಬ್ಬರ, ಪ್ರವಾಹಕ್ಕೆ ಜಿಲ್ಲೆಯ ಕಾಫಿ ಹಾಗೂ ಮೆಣಸು ಶೇಕಡ 50-60ರಷ್ಟು ನೆಲಕಚ್ಚಿರುವುದು ಬೆಳೆಗಾರರಿಗೆ ಗಾಯದ ಮೇಲೆ ಎರಡೆರಡು ಬರೆ ಎಳೆದಂತಾಗಿದೆ. ಅತಿವೃಷ್ಠಿಯಿಂದ ಕಾಫಿ ಹಾಗೂ ಮೆಣಸು ನೆಲಕ್ಕೆ ಉದುರಿದ್ದು, ಕೆಲವೆಡೆ ಶೀಥ ಹೆಚ್ಚಾಗಿ ಬಳ್ಳಿ-ಗಿಡಗಳೇ ಕೊಳೆಯುತ್ತಿವೆ. ಈ ನಡುವೆ ಸರ್ಕಾರದ ದ್ವಂದ್ವ ನೀತಿಯಿಂದ ಮೆಣಸಿನ ದರವೂ ಪಾತಾಳ ಕಂಡಿರುವುದು ಬೆಳೆಗಾರರನ್ನು ಮತ್ತಷ್ಟು ಕಂಗಾಲಾಗಿಸಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.

ಮೆಣಸಿನ ದರ ಕುಸಿತ:

ಕಳೆದ ವರ್ಷ ಬರದ ನಡುವೆಯೂ ಮೆಣಸು ಕೆ.ಜಿಗೆ 700 ರೂಪಾಯಿ ಇತ್ತು. ಕೇಂದ್ರ ಸರ್ಕಾರ ವಿಯೇಟ್ನಾಂ, ಮೆಕ್ಸಿಕೋದಿಂದ ಮೆಣಸನ್ನ ಆಮದು ಮಾಡಿಕೊಂಡಿದ್ದರಿಂದ ಕೆ.ಜಿಗೆ 400, 300, 270ರಷ್ಟು ಕುಸಿದಿತ್ತು. ಈ ವರ್ಷ ಮತ್ತೆ ಮೆಣಸಿನ ದರ 250ಕ್ಕೆ ಕುಸಿದಿದ್ದು ಬೆಳೆಗಾರರು ಬದುಕಿನ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ಅತ್ತ ಕಾಫಿಯೂ ಇಲ್ಲ, ಇತ್ತ ಮೆಣಸು ಇಲ್ಲದಂತಾದರೆ  ಜೀವನವೇ ದುಸ್ಥರವಾಗಲಿದೆ ಎಂದು ಬೆಳೆಗಾರರು ತಲೆ ಮೇಲೆ ಕೈಹೊದ್ದು ಕೂತಿದ್ದಾರೆ. ಕಳೆದ ವರ್ಷ ಬರದ ನಡುವೆ ಬೆಳೆಗಾರರು ಬದುಕಿಸಿಕೊಂಡಿದ್ದ ಗಿಡಗಳು ಈ ವರ್ಷ ಕೊಳೆತು ನಿಂತಿವೆ. ಮಳೆ-ಗಾಳಿಗೆ ಮೆಣಸು, ಕಾಫಿ ನೆಲಕಂಡಿದ್ದು ಮುಂದಿನ ಎರಡ್ಮೂರು ವರ್ಷವೂ ಬೆಳೆ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಬೆಲೆ ಇದ್ದಾಗ ಬೆಳೆ ಇರಲ್ಲ, ಬೆಳೆ ಇದ್ದಾಗ ಬೆಲೆ ಇರಲ್ಲ ಎಂಬಂತಿದ್ದ ಕಾಫಿನಾಡಿಗರಿಗೆ ಈ ವರ್ಷ ಎರಡೂ ಇಲ್ಲದಂತಾಗಿದೆ. 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎಂಬಂತೆ ಮಲೆನಾಡಿಗರ ಪರಿಸ್ಥಿತಿಯೂ ಕೂಡ ಆಗಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಫಿ-ಮೆಣಸಿಗೆ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

ಒಟ್ಟಾರೆ, ವಾರ್ಷಿಕ ದಾಖಲೆ ಮಳೆ ಸುರಿಯುವ  ಕಾಫಿನಾಡಲ್ಲಿ ಎರಡ್ಮೂರು ವರ್ಷದಿಂದ ಭೀಕರ ಬರ. ಈ ವರ್ಷದ ವರುಣನ ರುದ್ರನರ್ತನಕ್ಕೆ ಬೆಳೆಗಾರರು ಅರ್ಧ ಸತ್ತಿದ್ದರೆ,  ಸರ್ಕಾರಗಳ ಬೇಜಾವಾಬ್ದಾರಿ ನೀತಿಯಿಂದ ಇನ್ನರ್ಧ ಸತ್ತಿದ್ದಾರೆ. ಈ ನಡುವೆ, ಈ ಬಾರಿ ಮೂರು ದಶಕಗಳ ಬಳಿಕ ಬಿದ್ದ ಭಾರೀ ಮಳೆ ಬೆಳೆಯನ್ನೇ ಅವನತಿಯ ಅಂಚಿಗೆ ತಂದೊಡ್ಡಿದ್ದರೆ,  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆಗಾರರ ಜೊತೆ ಆಟವಾಡುತ್ತಿರುವುದು ಬೆಳೆಗಾರರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.
First published:September 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...