ಬೆಂಗಳೂರು: ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಬಿಜೆಪಿ ಹೇಳಿಕೊಂಡಂತೆ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿದೆ. ಜನ ಕೊಟ್ಟ ತೀರ್ಪು ಎಲ್ಲರೂ ಒಪ್ಪಲೇಬೇಕು. ಪರ, ವಿರೋಧ ಏನೇ ಇದ್ದರೂ ಒಪ್ಪಬೇಕು. ಮಮತಾ ಬ್ಯಾನರ್ಜಿ ವಿರುದ್ಧ ಮೋದಿ, ಅಮಿತ್ ಶಾ ದೊಡ್ಡ ಯುದ್ಧ ಸಾರಿದ್ದರು. ಒಬ್ಬಂಟಿಯಾಗಿ ಮಮತಾ ಬ್ಯಾನರ್ಜಿ ಹೋರಾಡಿದರು. ಹಣ, ಅಧಿಕಾರ, ತೋಳ್ಬಲ ಬಳಸಿ ಬಿಜೆಪಿ ಸಾಕಷ್ಟು ಕುತಂತ್ರ ಮಾಡಿತ್ತು. ಕುತಂತ್ರ ಧಿಕ್ಕರಿಸಿ ಮಮತಾ ಬ್ಯಾನರ್ಜಿಗೆ ಬಂಗಾಳದ ಜನರು ಆಶೀರ್ವಾದ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದರು.
ಫಲಿತಾಂಶದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಸುವೇಂದು ಅಧಿಕಾರಿ ಟಿಎಂಸಿ ಬಿಟ್ಟು ಬಿಜೆಪಿ ಸೇರಿದ್ದರು. ಸುವೇಂದು ವಿರುದ್ಧ ಮಮತಾ ಬ್ಯಾನರ್ಜಿ ಸ್ಪರ್ಧೆ ಮಾಡಿದ್ದರು. ಸವಾಲು ಸ್ವೀಕಾರ ಮಾಡಿ, ಸುವೇಂದು ಕ್ಷೇತ್ರಕ್ಕೆ ಹೋಗಿ ಸ್ಪರ್ಧೆ ಮಾಡಿದ್ದರು. ಕಡಿಮೆ ಅಂತರ ಇದ್ದರೂ ಅದು ಐತಿಹಾಸಿಕ ಗೆಲುವು. ಕಳೆದ ಬಾರಿಗಿಂತ ಬಿಜೆಪಿಯ ದಬ್ಬಾಳಿಕೆ ಎದುರಿಸಿ ಹೆಚ್ಚು ಸ್ಥಾನ ಪಡೆದಿದ್ದಾರೆ. ಮಮತಾ ಬ್ಯಾನರ್ಜಿ ಜನಪ್ರಿಯತೆ ಹೆಚ್ಚಾಗಿದೆ. ಅಮಿತ್ ಶಾ ಕನಸು ನುಚ್ಚು ನೂರಾಗಿದೆ ಎಂದರು.
ಕೇರಳ ಮತ್ತು ತಮಿಳುನಾಡಿನಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ. ಯುಡಿಎಫ್ ಬರುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಎಲ್‌ಡಿಎಫ್ ಮತ್ತೆ ಅಧಿಕಾರಕ್ಕೆ ಬಂದಿದೆ. ಪಿಣರಾಯಿ ವಿಜಯನ್‌ಗೆ ಜನ ಬೆಂಬಲ ನೀಡಿದ್ದಾರೆ. ಪಿಣರಾಯಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂದು ತಿಳಿಸಿದರು.
ಸಿ.ಟಿ. ರವಿ ಬಹಳಷ್ಟು ಹೇಳಿಕೊಂಡಿದ್ದರು. ಆದರೆ ತಮಿಳುನಾಡಿನಲ್ಲಿ ಬಿಜೆಪಿ ಒಂದು ಸ್ಥಾನವೂ ಗೆಲ್ಲಲಿಲ್ಲ. ಕೋಮುವಾದಿ ಪಕ್ಷವನ್ನು ಜನ ತಿರಸ್ಕರಿಸಿದ್ದಾರೆ. ಕರ್ನಾಟಕದಲ್ಲೂ ಕೂಡ ಅವರಿಗೆ ಬಹುಮತ ಬಂದಿರಲಿಲ್ಲ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಸ್ಟಾಲಿನ್‌ಗೆ ನಾನು ಅಭಿನಂದನೆ ಸಲ್ಲಿಸುವೆ. ಒಟ್ಟಾರೆ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ವಿಫಲವಾಗಿದೆ. ಬಂಗಾಳದಲ್ಲಂತೂ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
ಮಸ್ಕಿಯಲ್ಲಿ ದೊಡ್ಡ ಅಂತರದಲ್ಲಿ ಗೆದ್ದಿದ್ದೇವೆ. ಬಸವಕಲ್ಯಾಣದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದರು. 50:50 ಅವಕಾಶ ಇದೆ ಎಂದು ಭಾವಿಸಿದ್ದೆ. ಈ ಕಾರಣಕ್ಕೆ ನಾವು ಸೋಲಬೇಕಾಯ್ತು. ಬೆಳಗಾವಿ ಲೋಕಸಭೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ನಿರೀಕ್ಷೆ ಇತ್ತು. ಸಾಕಷ್ಟು ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ವಿಜಯೇಂದ್ರ ಅವನು ಚುನಾವಣಾ ಚಾಣಕ್ಯ ಎಂದು ಹೇಳುತ್ತಿದ್ದರು. ಅವನು ಚಾಣಕ್ಯನಲ್ಲ, ದುಡ್ಡು ಖರ್ಚು ಮಾಡುತ್ತಿದ್ದ. ಚುನಾವಣೆಯಲ್ಲಿ ದುಡ್ಡು ಯಾರು ಬೇಕಾದರೂ ಕೊಡಬಹುದು. ದುಡ್ಡು ಕೊಡಲು ಹೋದವರನ್ನು ಓಡಿಸಿದ್ದಾರೆ. ಮಸ್ಕಿ ಜನರಿಗೆ ಎಷ್ಟು ಅಭಿನಂದನೆ ಹೇಳಿದರೂ ಸಾಲದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದನ್ನು ಓದಿ: Mamata Banerjee: ನಂದಿಗ್ರಾಮದಲ್ಲೂ ದೀದಿ ಮೆನಿಯಾ, ಕೊನೆಗೂ ಪ್ರಯಾಸದ ಗೆಲುವಿನ ನಗೆ ಬೀರಿದ ಮಮತಾ ಬ್ಯಾನರ್ಜಿ
ಪ್ರತಾಪ್‌ಗೌಡ ಪಾಟೀಲ ಪಕ್ಷಾಂತರ ಮಾಡಿದ್ದರ ಪರಿಣಾಮ ಮಸ್ಕಿಯಲ್ಲಿ ಸೋತಿದ್ದಾರೆ. ಬಸನಗೌಡ ತುರ್ವಿಹಾಳ ಒಳ್ಳೆಯ ಅಭ್ಯರ್ಥಿ. ಅವರ ಮೇಲೆ ಅನುಕಂಪ ಇತ್ತು. ಎಲ್ಲ ಯುವಕರು ಬಸನಗೌಡಗೆ ಬೆಂಬಲ ನೀಡಿದ್ದರು. ಗೆಲುವು ಸಾಧಿಸಿದ ಬಸನಗೌಡ ತುರ್ವಿಹಾಳಗೆ ಅಭಿನಂದನೆ ಸಲ್ಲಿಸುವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ