YES Bank Crisis: ಗಾಬರಿ ಬಿದ್ದ ಜನರ ಪರದಾಟ; ಬೆಂಗಳೂರಿನ ವಿವಿಧ ಯೆಸ್ ಬ್ಯಾಂಕ್, ಎಟಿಎಂಗಳಲ್ಲಿ ಉದ್ದುದ್ದ ಕ್ಯೂ

ಬೆಂಗಳೂರಿನಲ್ಲಿ ಯೆಸ್ ಬ್ಯಾಂಕ್​ನ ಸುಮಾರು 40 ಬ್ರ್ಯಾಂಚ್​ಗಳಿವೆ. ಬೆಂಗಳೂರಿನ ಆಚೆ ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಯೆಸ್ ಬ್ಯಾಂಕ್ ಶಾಖೆಗಳಿವೆ. ಬಹುತೇಕ ಎಲ್ಲ ಕಡೆಯೂ ಜನರು ಕ್ಯೂನಲ್ಲಿ ನಿಂತು ತಮ್ಮ ಹಣ ಹಿಂಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಯೆಸ್ ಬ್ಯಾಂಕ್​ನಲ್ಲಿ ಹಣ ವಿತ್​ಡ್ರಾ ಮಾಡಲು ಕ್ಯೂ

ಯೆಸ್ ಬ್ಯಾಂಕ್​ನಲ್ಲಿ ಹಣ ವಿತ್​ಡ್ರಾ ಮಾಡಲು ಕ್ಯೂ

  • Share this:
    ಬೆಂಗಳೂರು(ಮಾ. 06): ಯೆಸ್ ಬ್ಯಾಂಕ್ ಹಣಕಾಸು ಮುಗ್ಗಟ್ಟಿಗೆ ಸಿಲುಕಿರುವ ಹಿನ್ನೆಲೆಯಲ್ಲಿ ಆ ಬ್ಯಾಂಕ್​ನ ಗ್ರಾಹಕರು ಕಂಗಾಲಾಗಿದ್ದಾರೆ. ದೇಶಾದ್ಯಂತ ಎಲ್ಲೆಡೆ ಜನರು ಪರದಾಡುತ್ತಿದ್ಧಾರೆ. ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಯೆಸ್ ಬ್ಯಾಂಕ್ ಕಚೇರಿ ಮತ್ತು ಎಟಿಎಂ ಕೇಂದ್ರಗಳಲ್ಲಿ ಜನರು ಉದ್ದುದ್ದ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿತು.

    ನಿನ್ನೆ ದಿಢೀರ್ ಬೆಳವಣಿಗೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ಯೆಸ್ ಬ್ಯಾಂಕ್​ನಿಂದ ಠೇವಣಿದಾರರು ಗರಿಷ್ಠ 50 ಸಾವಿರ ರೂ ಮಾತ್ರ ಹಿಂಪಡೆಯಬಹುದು ಎಂದು ಲಕ್ಷ್ಮಣ ರೇಖೆ ಹಾಕಿತ್ತು. ಇದರ ಬೆನ್ನಲ್ಲೇ ಯೆಸ್ ಬ್ಯಾಂಕ್ ಗ್ರಾಹಕರು ಗಾಬರಿಗೊಂಡಿದ್ದಾರೆ. ತಮ್ಮ ಠೇವಣಿ ಹಣ ಮಣ್ಣುಪಾಲಾಗುತ್ತದೆಂದು ಭಾವಿಸಿ ಹಣ ವಿತ್​ಡ್ರಾ ಮಾಡಲು ಮುಗಿಬಿದ್ದಿದ್ಧಾರೆ.

    ಬೆಂಗಳೂರಿನಲ್ಲಿ ಯೆಸ್ ಬ್ಯಾಂಕ್​ನ ಸುಮಾರು 40 ಬ್ರ್ಯಾಂಚ್​ಗಳಿವೆ. ಬೆಂಗಳೂರಿನ ಆಚೆ ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಯೆಸ್ ಬ್ಯಾಂಕ್ ಶಾಖೆಗಳಿವೆ. ಬಹುತೇಕ ಎಲ್ಲ ಕಡೆಯೂ ಜನರು ಕ್ಯೂನಲ್ಲಿ ನಿಂತು ತಮ್ಮ ಹಣ ಹಿಂಪಡೆಯಲು ಪ್ರಯತ್ನಿಸುತ್ತಿದ್ದಾರೆ. ಎಟಿಎಂಗಳಲ್ಲೂ ಕೂಡ ಯೆಸ್ ಬ್ಯಾಂಕ್ ಕಾರ್ಡ್​ಗಳಿಂದ ಹಣ ವಿತ್​ಡ್ರಾ ಮಾಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಜನರು ಬ್ಯಾಂಕ್​ನ ಶಾಖೆಗಳಿಗೆ ತೆರಳಿ ಹಣ ಪಡೆಯಲು ಯತ್ನಿಸುತ್ತಿದ್ದಾರೆ. ಅನೇಕ ಉದ್ಯೋಗಿಗಳ ಸಂಬಳದ ಹಣ ಯೆಸ್ ಬ್ಯಾಂಕ್​ನೊಂದಿಗೆ ಜೋಡಿತವಾಗಿದೆ. ಹೀಗಾಗಿ, ಸಾಕಷ್ಟು ಜನರು ಹಣಕ್ಕಾಗಿ ಪರದಾಡುವ ಪರಿಸ್ಥಿತಿ ಬಂದಿದೆ.

    ಇದನ್ನೂ ಓದಿ: YES ಬ್ಯಾಂಕ್ ಬಿಕ್ಕಟ್ಟು: ಭಾರತೀಯ ಷೇರುಪೇಟೆಗೆ ಭಾರೀ ಹೊಡೆತ; ಪ್ರಪಾತಕ್ಕೆ ಕುಸಿದ ಸೆನ್ಸೆಕ್ಸ್, ನಿಫ್ಟಿ

    ಇನ್ನು, ಯೆಸ್ ಬ್ಯಾಂಕ್​ನ ಆನ್​ಲೈನ್ ಹಣ ವಹಿವಾಟು ವ್ಯವಸ್ಥೆ ಕೂಡ ಸ್ಥಗಿತಗೊಂಡಿದೆ. ಯೆಸ್ ಬ್ಯಾಂಕ್​ನ ಆನ್​ಲೈನ್ ವ್ಯವಸ್ಥೆಯೊಂದಿಗೆ ಜೋಡಿತಗೊಂಡಿರುವ ಫೋನ್ ಪೇನಲ್ಲೂ ವಹಿವಾಟು ಸ್ಥಗಿತಗೊಂಡಿದೆ. ಸ್ವಿಗ್ಗಿ, ಫ್ಲಿಪ್​ಕಾರ್ಟ್, ಜಬೋಂಗ್ ಮೊದಲಾದ ಅನ್​ಲೈನ್ ಸೇವೆ ಸಂಸ್ಥೆಗಳು ಮತ್ತು ಗ್ರಾಹಕರು ಬಾಧಿತರಾಗಿದ್ದಾರೆ.

    ಯೆಸ್ ಬ್ಯಾಂಕ್​ನಲ್ಲಿ ಠೇವಣಿ ಇಟ್ಟಿರುವ ಜನರು ಹೆದರಬೇಕಿಲ್ಲ. ಅವರ ಹಣ ಸುರಕ್ಷಿತವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೂ ಜನರಿಗೆ ಧೈರ್ಯ ಬಂದಿಲ್ಲ. ಷೇರುಮಾರುಕಟ್ಟೆಯಲ್ಲಿ ಯೆಸ್ ಬ್ಯಾಂಕ್​ನ ಷೇರು ಮೌಲ್ಯ ಪ್ರಪಾತಕ್ಕೆ ಕುಸಿದಿದೆ. ಜನರು ಕಂಗಾಲಾಗಿ ಯೆಸ್ ಬ್ಯಾಂಕ್ ಷೇರುಗಳನ್ನು ಸಿಕ್ಕ ಬೆಲೆಗೆ ಮಾರುತ್ತಿರುವುದು  ಕಂಡುಬಂದಿದೆ.

    ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

    First published: