ಪೂತ್ತೂರು(ಅ. 11): ದಕ್ಷಿಣ ಭಾರತದ ಹೆಸರಾಂತ ನಾಗ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಪೂಜೆಗೆ ತನ್ನದೇ ಆದ ಮಹತ್ವವಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಇಲ್ಲಿ ಈ ಸೇವೆಯನ್ನು ನೆರವೇರಿಸುತ್ತಾರೆ. ಅದರಲ್ಲೂ ಆಶ್ಲೇಷ ನಕ್ಷತ್ರದ ದಿನ ಈ ಸೇವೆಯನ್ನು ನೆರವೇರಿಸಿದರೆ ಉತ್ತಮ ಫಲ ಲಭಿಸುವುದು ಎನ್ನುವ ನಂಬಿಕೆ ಹಿಂದಿನಿಂದಲೂ ಬೆಳೆದು ಬಂದಿದೆ. ಈ ಹಿನ್ನೆಲೆ ಪೂಜೆಗೆ ಅನೇಕ ಭಕ್ತರು ದೂರದೂರುಗಳಿಂದ ಆಗಮಿಸುತ್ತಾರೆ. ಕೊರೋನಾ ಅನ್ಲಾಕ್ ಬಳಿಕ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೆಲ ದಿನಗಳಿಂದ ಹೆಚ್ಚಿನ ಭಕ್ತರು ಭೇಟಿ ನೀಡುತ್ತಿದ್ದಾರೆ. ಅದರಲ್ಲಿಯೂ ನಾಳೆ ಆಶ್ಲೇಷ ನಕ್ಷತ್ರ ವಿಶೇಷ ದಿನವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಸೋಮವಾರದ ಸೇವೆ ನೆರವೇರಿಸಲು ಭಾನುವಾರ ರಾತ್ರಿಯೇ ದೇವಾಲಯದ ಮುಂದೆ ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂದಿದೆ.
ಕುಕ್ಕೆಯಲ್ಲಿ ಸೇವೆಗಳಿಗೆ ರಶೀದಿಯನ್ನು ಬೆಳಿಗ್ಗೆ 7 ಗಂಟೆಗೆ ನೀಡಲು ಪ್ರಾರಂಭಿಸುತ್ತಾರೆ. ಆದರೆ, ಇತ್ತ ಭಕ್ತರು ರಶೀದಿ ವಂಚಿತವಾಗುವ ಅಥವಾ ತಡವಾಗುವ ಆತಂಕದಿಂದ ಭಾನುವಾರ ರಾತ್ರಿಯೇ ದೇವಲದ ಕಚೇರಿ ಬಳಿ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಆಶ್ಲೇಷ ಬಲಿ ಪೂಜೆಗೆ ಈ ಬಾರಿ ಕೊರೋನಾ ಆತಂಕ ಕೂಡ ಮೂಡಿದೆ. ಕೋವಿಡ್ ಹಿನ್ನಲೆಯಲ್ಲಿ ಸೇವೆಗಳಿಗೆ ಮಿತಿ ಇರುವುದರಿಂದ ಭಕ್ತರು ಸೇವೆಗಾಗಿ ರಾತ್ರಿಯೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕೋವಿಡ್ ಮಾರ್ಗಸೂಚಿ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ದಿನಕ್ಕೆ 100 ಆಶ್ಲೇಷ ಪೂಜೆಗಳನ್ನಷ್ಟೇ ಮಾಡಲಾಗುತ್ತಿದ್ದು, ಇದರಿಂದಾಗಿ ಇಂದೇ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಲ್ಲಲು ಆರಂಭಿಸಿದ್ದಾರೆ.
ಕ್ಷೇತ್ರದಲ್ಲಿ ಸೇವಾ ಕೌಂಟರ್ ನಾಳೆ ಬೆಳಿಗ್ಗೆ 7 ಗಂಟೆಯ ಬಳಿಕ ತೆರೆಯುವ ಹಿನ್ನಲೆಯಲ್ಲಿ ಪೂಜೆಯ ಅವಕಾಶಕ್ಕಾಗಿ ಈ ರೀತಿಯ ಪ್ರಯತ್ನದಲ್ಲಿ ಭಕ್ತರು ನಿರತರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ