ಕೊಪ್ಪಳ(ಮೇ 22): ಕೊರೋನಾ ಮಹಾಮಾರಿ ಈಗ ಗ್ರಾಮೀಣ ಭಾಗವನ್ನು ಆವರಿಸಿದೆ. ಗ್ರಾಮಗಳಲ್ಲಿ ಕೊರೋನಾ ಅಬ್ಬರಿಸುತ್ತಿರುವ ಹಿನ್ನಲೆ ಕೆಲವರು ಗ್ರಾಮ ತೊರೆದು ಹೊಲಗಳಲ್ಲಿ ವಾಸಿಸಲು ಮುಂದಾಗಿದ್ದಾರೆ. ಇದಕ್ಕೆ ಉದಾಹರಣೆ ಎಂದರೆ ಕೊಪ್ಪಳ ಜಿಲ್ಲೆಯ ಹಿರೇಬೊಮ್ಮನಾಳದಲ್ಲಿ ಸುಮಾರು 20 ಕುಟುಂಬಗಳು ಈಗ ಹೊಲಗಳಲ್ಲಿ ವಾಸವಾಗಿದ್ದಾರೆ. ಕೊಪ್ಪಳ ತಾಲೂಕಿನ ಹಿರೇಬೊಮ್ಮನಾಳದಲ್ಲಿ ಇತ್ತೀಚೆಗೆ ಕೊರೋನಾ ವ್ಯಾಪಕವಾಗಿ ಹರಡಿತ್ತು. ಇಲ್ಲಿಯವರೆಗೂ ಒಟ್ಟು 30 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ ಹೇಮಣ್ಣ ಹಡಪದ ಎಂಬುವವರು ಸಾವನ್ನಪ್ಪಿದ್ದಾರೆ. ಹೇಮಣ್ಣನಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಿಗದೆ ಸಾವನ್ನಪ್ಪಿದ್ದಾನೆ.
ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಆದರೆ ಇಲ್ಲಿ ವೈದ್ಯರಿಲ್ಲ, ಸೋಂಕು ತಗುಲಿದವರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಗ್ರಾಮದ ಹಲವರು ಗ್ರಾಮದಲ್ಲಿದ್ದರೆ ತಮಗೂ ಸೋಂಕು ತಗುಲುತ್ತದೆ ಎಂಬ ಕಾರಣಕ್ಕೆ ಈಗ ತಮ್ಮ ಕೃಷಿ ಭೂಮಿಯಲ್ಲಿ ವಾಸಿಸುತ್ತಿದ್ದಾರೆ.
ಇಲ್ಲಿಯವರೆಗೂ ಸುಮಾರು 20 ಕುಟುಂಬಗಳು ಹೊಲಗಳಲ್ಲಿ ವಾಸವಾಗಿ ಸೋಂಕಿನಿಂದ ದೂರವಿರಲು ತೀರ್ಮಾನಿಸಿದ್ದಾರೆ. ಕಳೆದ ಹದಿನೈದು ದಿನಗಳಿಂದ ಒಬ್ಬೊಬ್ಬರಾಗಿ ಹೊಲಗಳಲ್ಲಿ ವಾಸಿಸುತ್ತಿದ್ದಾರೆ. ಇಡೀ ದಿನ ಹೊಲದಲ್ಲಿಯೇ ಇದ್ದು ಹಗಲಿನಲ್ಲಿ ಹೊಲದಲ್ಲಿ ಕೆಲಸ ಮಾಡಿಕೊಂಡು ರಾತ್ರಿ ಗುಡಿಸಲಿಗೆ ಬರುತ್ತಾರೆ. ಕೆಲವರು ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ. ಹೊಲದಲ್ಲಿದ್ದವರಿಗೆ ಅವಶ್ಯ ವಸ್ತುಗಳು ಬೇಕಿದ್ದರೆ ಒಬ್ಬರೇ ಗ್ರಾಮದೊಳಗೆ ಹೋಗಿ ದೂರದಲ್ಲಿಯೇ ನಿಂತು ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಂಡು ಬರುತ್ತಿದ್ದಾರೆ. ಬಹುತೇಕರು ಸೋಂಕಿನ ಭಯದಿಂದಾಗಿ ಗ್ರಾಮ ತೊರೆಯುತ್ತಿದ್ದಾರೆ. ಗ್ರಾಮದಲ್ಲಿದ್ದರೆ ಸೋಂಕು ತಗುಲಬಹುದು, ಸೋಂಕು ತಗುಲಿದರೆ ಚಿಕಿತ್ಸೆಗೆ ವೈದ್ಯರಿಲ್ಲ. ಸಾಕಷ್ಟು ಸಾವು ನೋವುಗಳು ಆಗುತ್ತಿವೆ. ಅದಕ್ಕಾಗಿಯೇ ನಾವು ಹೊಲದಲ್ಲಿದ್ದೇವೆ ಎಂದು ಹೇಳುತ್ತಾರೆ.
ಸೋಂಕಿತರಲ್ಲಿ ಸುಮಾರು 10 ಜನರೂ ಸಹ ಪ್ರತ್ಯೇಕವಾಗಿ ಹೊಲಗಳಲ್ಲಿಯೇ ಇದ್ದಾರೆ. ಈ ಗ್ರಾಮದಲ್ಲಿ ಕೊರೋನಾ ರಣಕೇಕೆ ಹಾಕುತ್ತಿದೆ. ಕೊರೋನಾ ಭಯದಿಂದ ಜನ ತತ್ತರಿಸಿದ್ದಾರೆ. ಈ ಸಮಯದಲ್ಲಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಸಿಕೊಳ್ಳೋಣ ಅಂದರೆ ಅಲ್ಲಿ ವೈದ್ಯರೇ ಇಲ್ಲ. ಇಲ್ಲಿರುವುದು ಒಬ್ಬ ಡಿ ದರ್ಜೆ ನೌಕರ, ಒಬ್ಬ ನರ್ಸ್, ಒಬ್ಬ ಫಾರ್ಮಿಸಿಸ್ಟ್. ಒಬ್ಬ ಲ್ಯಾಬ್ ಟೆಕ್ನಿಷನ್. ಇದು ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಹಿರೇಬೊಮ್ಮನಾಳದಲ್ಲಿಯ ಸ್ಥಿತಿ.
ಹಿರೇಬೊಮ್ಮನಾಳದಲ್ಲಿ 20 ವರ್ಷದ ಹಿಂದೆಯೇ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭವಾಗಿದೆ. ಆಗಿನಿಂದಲೂ ಇಲ್ಲಿ ಸಿಬ್ಬಂದಿ ಇಲ್ಲ, ಇಲ್ಲಿ ಒಟ್ಟು ಒಬ್ಬರು ವೈದ್ಯರು ಸೇರಿ 7 ಜನ ಸಿಬ್ಬಂದಿ ಇರಬೇಕು. ಆದರೆ ಈಗಿರುವವರು 4 ಜನ ಮಾತ್ರ. ಈ ಪ್ರಾಥಮಿಕ ಆರೋಗ್ಯ ಕೇಂದ್ರವು 21 ಹಳ್ಳಿಯ ಜನರಿಗೆ ಅನುಕೂಲವಾಗಲಿ ಎಂದು ಕಟ್ಟಿಸಲಾಗಿದೆ. ಇಲ್ಲಿ ವೈದ್ಯರು ಇಲ್ಲದೆ ಇರುವುದರಿಂದ ಈ ಆಸ್ಪತ್ರೆ ಇದ್ದರೂ ಇಲ್ಲದಂತಾಗಿದೆ.
ಹಿರೇಬೊಮ್ಮನಾಳದಲ್ಲಿ ಈಗ ಸುಮರು 30 ಜನರಿಗೆ ಕೊರೋನಾ ಸೋಂಕು ತಗುಲಿ ಅದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಪ್ರಾಥಮಿಕ ಆರೋಗ್ಯ ವ್ಯಾಪ್ತಿಯಲ್ಲಿ ಕಳೆದ ಹದಿನೈದು ದಿನಗಳಲ್ಲಿ 152 ಜನರಿಗೆ ಸೋಂಕು ತಗುಲಿದೆ. ಸೋಂಕಿತರಿಗೆ ಭೇಟಿ ಮಾಡಿ ಅವರಿಗೆ ಔಷಧಿಯನ್ನು ಸರಿಯಾಗಿ ನೀಡುತ್ತಿಲ್ಲ, ಯಾರೂ ಭೇಟಿಯಾಗುತ್ತಿಲ್ಲ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ