• Home
  • »
  • News
  • »
  • state
  • »
  • Kodagu: ಕುಡಿಯುವ ನೀರಿಲ್ಲದೇ ಟಾರ್ಪಲ್ ಟೆಂಟ್​​ನಲ್ಲಿ ವಾಸ; ಯಾವಾಗ ಸಿಗುತ್ತೆ ಸೂರು?

Kodagu: ಕುಡಿಯುವ ನೀರಿಲ್ಲದೇ ಟಾರ್ಪಲ್ ಟೆಂಟ್​​ನಲ್ಲಿ ವಾಸ; ಯಾವಾಗ ಸಿಗುತ್ತೆ ಸೂರು?

ಟೆಂಟ್​​

ಟೆಂಟ್​​

ಬಾರಿಕಾಡು ಪೈಸಾರಿಯ ಸಮೀಪವೆ ಕಳೆದ ಎರಡು ವರ್ಷಗಳಿಂದ ಮನೆಗಳ ನಿರ್ಮಾಣವಾಗುತ್ತಿದ್ದರು ಇನ್ನೂ ಮನೆಗಳ ಕಾರ್ಯ ಪೂರ್ಣಗೊಂಡಿಲ್ಲ. ಕೇಳಿದರೆ ಅಧಿಕಾರಿಗಳು ನೂರೊಂದು ಸಬೂಬು ಹೇಳುತ್ತಿದ್ದಾರೆ.

  • Share this:

ಕೊಡಗು: ಕೊಡಗು (Kodagu District) ಎಂದ ಕೂಡಲೇ ಸಮೃದ್ಧಿಯಾದ ಜಿಲ್ಲೆ, ಪ್ರವಾಸಿತಾಣ (Tourist Place), ಕಾಫಿ ಎಸ್ಟೇಟ್‍ಗಳ ಮಾಲೀಕರಿದ್ದಾರೆ. ಹೀಗೆಲ್ಲಾ ಒಂದು ಕಲ್ಪನೆ ಕಣ್ಮುಂದೆ ಬಂದು ಬಿಡುತ್ತದೆ. ಆದರೆ ಈ ಜಿಲ್ಲೆಯಲ್ಲಿ ಇಂದಿಗೂ ತಲತಲಾಂತರಗಳಿಂದ ಸ್ವಂತ ಸೂರಿಲ್ಲದೆ (House), ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದ ಸಾವಿರಾರು ಕುಟುಂಬಗಳು ಅತ್ಯಂತ ಹೀನಾಯ ಬದುಕು ದೂಡುತ್ತಿವೆ. ಅಂತಹ ಒಂದಷ್ಟು ಕುಟುಂಬಗಳ ಶೋಚನೀಯ ಬದುಕಿನ ವ್ಯಥೆ ಇಲ್ಲಿದೆ. ಟಾರ್ಪಲ್ ಹೊದಿಸಿ ನಿರ್ಮಿಸಿದ ಗುಡಿಸಲೇ (Huts) ಇವರ ಪಾಲಿನ ಮನೆಗಳು. ವಿದ್ಯುತ್ (Electricity) ಸೌಲಭ್ಯವಿಲ್ಲದೆ ಕಗ್ಗತ್ತಲ್ಲಿ ಮುಳುಗಿದ 59 ಕುಟುಂಬಗಳು. ಅತ್ಯಂತ ಕೊಳಚೆಯಂತ ಕಲುಷಿತ (Dirty Water) ನೀರೇ ಇವರಿಗೆ ಜೀವಜಲ. ಇಂತಹ ಅತೀ ಶೋಚಯನೀಯ ಬದುಕು ದೂಡುತ್ತಿರುವ ಈ ಕುಟುಂಬಗಳು ಇರುವುದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾರಿಕಾಡು ಪೈಸಾರಿಯಲ್ಲಿ.


ಇವರೆಲ್ಲ ದಿಡ್ಡಳ್ಳಿ ಆದಿವಾಸಿಗಳ ಹೋರಾಟದ ಸಮಯದಲ್ಲಿ ನಮಗೂ ಸ್ವಂತ ಸೂರು ಬೇಕು ಎಂದು ಹೋರಾಟ ಆರಂಭಿಸಿದ್ದರು. ಆದರೆ ಜಿಲ್ಲಾಡಳಿತ ಇವರನ್ನ ಮನವೊಲಿಸಿ ನಿಮಗೆ ಆದಷ್ಟು ಬೇಗ ಮನೆ ಕೊಡಿಸುವುದಾಗಿ ಹಿಂದಕ್ಕೆ ಕಳುಹಿಸಿತ್ತು.


ಕಾಫಿ ಎಸ್ಟೇಟ್‍ಗಳಲ್ಲಿರುವ ಲೈನ್ ಮನೆಗಳಲ್ಲಿ ಬದುಕಿದ್ದವರು


ಹೀಗೆ ದಿಡ್ಡಳ್ಳಿ ಹೋರಾಟದಿಂದ ಹಿಂದೆ ಬಂದವರೆ ಇಂದಿಗೂ ಟಾರ್ಪಲ್ ಕಟ್ಟಿಕೊಂಡು, ಕನಿಷ್ಠ ಶುದ್ಧ ಕುಡಿಯುವ ನೀರೂ ಇಲ್ಲದೆ ಪರದಾಡುತ್ತಿದ್ದಾರೆ. ಅಷ್ಟಕ್ಕೂ ಇವರೆಲ್ಲಾ ಈ ಹೋರಾಟಕ್ಕೂ ಮುಂಚೆ ತಮ್ಮ ತಾತ ಮುತ್ತಾತನ ಕಾಲದಿಂದಲೂ ಕಾಫಿ ಎಸ್ಟೇಟ್‍ಗಳಲ್ಲಿ ಇರುವ ಲೈನ್ ಮನೆಗಳಲ್ಲಿ ಬದುಕಿದ್ದವರು. ಲೈನ್ ಮನೆಗಳಲ್ಲಿ ದುಡಿಯಲು ಶಕ್ತಿ ಇರುವವರೆಗೆ ಮಾತ್ರ ಜೀವನ ಮಾಡಬಹುದು. ಆದರೆ ದುಡಿಯುವ ಶಕ್ತಿ ಕಳೆದುಕೊಳ್ಳುತ್ತಿದ್ದಂತೆ ಬಾಡಿಗೆ ಕಟ್ಟಲು ಸಾಧ್ಯವಾಗದೇ ಹೊರಹೋಗುವ ದೈನೇಸಿಗಳಂತೆ ಹೊರಹೋಗಬೇಕು.


People living tarpal tent in barikadu paisari kodagu rsk mrq
ಟೆಂಟ್​​


ಹೀಗಾಗಿ ನಮಗೂ ಸ್ವಂತ ಮನೆ ಕೊಡಿ ಎಂದು ದಿಡ್ಡಳ್ಳಿ ಆದಿವಾಸಿಗಳ ಹೋರಾಟದೊಂದಿಗೆ ಕೈಜೋಡಿಸಿ ಸ್ವಂತ ಮನೆಗಳಿಗಾಗಿ ಬೇಡಿಕೆ ಇಟ್ಟಿದ್ದರು. ಆದರೆ ಜಿಲ್ಲಾಡಳಿತದ ಮಾತಿಗೆ ಗೌರವಕೊಟ್ಟು ಅವರ ಮಾತು ಕೇಳಿಕೊಂಡು ಹೋರಾಟದಿಂದ ಹಿಂದೆ ಸರಿದ ಆದಿವಾಸಿಗಳು ಬಾರಿಕಾಡು ಪೈಸಾರಿ ಜಾಗದಲ್ಲಿ ತಾತ್ಕಾಲಿಕ ಮನೆಗಳನ್ನ ನಿರ್ಮಾಣ ಮಾಡಿಕೊಂಡು ಜೀವನ ಆರಂಭಿಸಿದ ಪ್ರತಿಫಲ ಇಂದು ಹೀನಾಯ ಬದುಕು ದೂಡುತ್ತಿದ್ದಾರೆ.


ಇದನ್ನೂ ಓದಿ:  Kanile: ಅಲಲೆ! ಇದು ಕಣಿಲೆ! ತಿಂದ್ರೆ ದೇಹ ಇರುತ್ತೆ ಬೆಚ್ಚಗೆ; ನೋಡಿ ವಿಡಿಯೋ


5 ವರ್ಷ ಕಳೆದ್ರೂ ಸಿಗದ ಸೂರು


ಈ ಬಾರಿಕಾಡು ಪೈಸಾರಿಯಲ್ಲಿ 59 ಕುಟುಂಬಗಳು ಟಾರ್ಪಲ್ ಹೊದಿಕೆಯ ಗುಡಿಸಲುಗಳಲ್ಲಿ ವಾಸವಾಗಿದ್ದಾರೆ. ನಿಮಗೆ ಸ್ವಂತ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದ ಜಿಲ್ಲಾಡಳಿತ 5 ವರ್ಷ ಕಳೆದರೂ ಕೂಡ ಈ ಕುಟುಂಬಗಳಿಗೆ ಶಾಶ್ವತ ಸೂರಿನ ವ್ಯವಸ್ಥೆ ಮಾತ್ರ ಮಾಡಿಲ್ಲ.


People living tarpal tent in barikadu paisari kodagu rsk mrq
ಇಲ್ಲಿಯ ಜನರು ಕುಡಿಯುತ್ತಿರುವ ನೀರು


ವಿಷಪೂರಿತ ನೀರು ಸೇವನೆ


ಪುಟ್ಟ ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೂ ಈ ಟಾರ್ಪಲ್‍ಗಳ ಜೋಪಡಿಯಲ್ಲಿ ದುಸ್ಥರದ ಬದುಕು ಸಾಗಿಸಲು ಹೆಣಗಾಡುತ್ತಿದ್ದಾರೆ. ಗುಡಿಸಲಿಗೆ ವಿದ್ಯುತ್ ಸಂಪರ್ಕವಿಲ್ಲದಿರುವುದು ಒಂದು ಕಡೆಯಾದರೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಒಂದು ಹ್ಯಾಂಡ್ ಬೋರ್‍ವೆಲ್ ಇದ್ದು, ಅದನ್ನೇ ಅವಲಂಬಿಸಿದ್ದಾರೆ. ಅದರಲ್ಲಿ ಬರುವ ನೀರನ್ನು ನೀವು ನೋಡಿ ಅಸಹ್ಯಪಟ್ಟುಕೊಳ್ಳುವ ರೀತಿಯಲ್ಲಿದೆ. ಆದರೆ ಬೇರೆ ವಿಧಿಯಿಲ್ಲದೆ ಈ ಕುಟುಂಬಗಳು ಇಂತಹ ವಿಷಪೂರಿತ ನೀರಿನ್ನೇ ಕುಡಿಯುತ್ತಿವೆ.


ಇದನ್ನೂ ಓದಿ:  Kodagu: ಮಳೆಗಾಲದಲ್ಲೂ ಬೇಗ ಬಟ್ಟೆ ಒಣಗಿಸಿ! ಇದು ಕೊಡವರ ಐಡಿಯಾ!


ಇಲ್ಲಿನ ನಿವಾಸಿಗಳು ಕಲುಷಿತ ನೀರು ಸೇವನೆಯಿಂದ ಗಂಭೀರ ಆರೋಗ್ಯದ ಸಮಸ್ಯೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಂತೂ ಈ ಜನರ ಸ್ಥಿತಿ ಆ ದೇವರಿಗೆ ಪ್ರೀತಿ ಆಗಬೇಕು. ಬೆಟ್ಟದ ತಪ್ಪಲಿನಲ್ಲಿ ಗುಡಿಸಲುಗಳು ಇರುವುದರಿಂದ ಮನೆಯ ಒಳಗೆಲ್ಲ ಅಂತರ್ಜಲ ಉಕ್ಕಿ ಕೆಸರು ಗದ್ದೆಯಂತ್ತಾಗುತ್ತದೆ.


People living tarpal tent in barikadu paisari kodagu rsk mrq
ಟೆಂಟ್​​


ಅಧಿಕಾರಿಳಿಂದ ನೂರೊಂದು ಸಬೂಬು


ಬಾರಿಕಾಡು ಪೈಸಾರಿಯ ಸಮೀಪವೆ ಕಳೆದ ಎರಡು ವರ್ಷಗಳಿಂದ ಮನೆಗಳ ನಿರ್ಮಾಣವಾಗುತ್ತಿದ್ದರು ಇನ್ನೂ ಮನೆಗಳ ಕಾರ್ಯ ಪೂರ್ಣಗೊಂಡಿಲ್ಲ. ಕೇಳಿದರೆ ಅಧಿಕಾರಿಗಳು ನೂರೊಂದು ಸಬೂಬು ಹೇಳುತ್ತಿದ್ದಾರೆ.


ಒಟ್ಟಿನಲ್ಲಿ ಕೊಡಗು ಜಿಲ್ಲೆ ದೂರದ ಪ್ರಪಂಚಕ್ಕೆ ಸುಂದರವಾಗಿ ಕಂಡರು, ಅದರ ಒಳ ಹೊಕ್ಕಾಗಲೇ ಅಲ್ಲಿನ ನೈಜ ಜೀವನದ ಕಥೆಗಳು ಅನಾವರಣಗೊಳ್ಳುತ್ತವೆ. ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಬಡಜೀವಗಳಿಗೆ ಸೂರು, ನೀರು, ಬೆಳಕು ನೀಡಿ ಇವರ ಜೀವ ಉಳಿಸಬೇಕಿದೆ.

Published by:Mahmadrafik K
First published: