ಕರಾವಳಿಯಲ್ಲಿ ಮತ್ತೆ ಶುರುವಾಯ್ತು ಸಮುದ್ರ ನರ್ತನ - ಮುಳುಗಿ ಹೋಗುವ ಸ್ಥಿತಿಯಲ್ಲಿ ಮನೆ ಮತ್ತು ರಸ್ತೆಗಳು

ಪ್ರತೀ ವರ್ಷವೂ 6 ಕೋಟಿ, 12 ಕೋಟಿ ಹೀಗೆ ಕೋಟಿ ಕೋಟಿ ಹಣವನ್ನು ಕಡಲು ಕೊರೆತಕ್ಕಾಗಿ ಮೀಸಲಿಟ್ಟರೂ, ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ. ತಡೆಗೋಡೆ ಎನ್ನುವ ಶಾಶ್ವತ ಪರಿಹಾರ ದಕ್ಷಿಣಕನ್ನಡದ ಕರಾವಳಿಗೆ ಮಾತ್ರ ಮರೀಚೆಕೆಯಾಗಿಯೇ ಉಳಿದಿದೆ.

ಕರಾವಳಿ ಕರ್ನಾಟಕ

ಕರಾವಳಿ ಕರ್ನಾಟಕ

  • Share this:
ಮಂಗಳೂರು(ಜು.20): ಕರಾವಳಿಯಾದ್ಯಂತ ನಿನ್ನೆಯಿಂದ ಮಳೆ ಸಂಪೂರ್ಣ ಕಡಿಮೆಯಾಗಿದ್ದು, ಬಿಸಿಲಿನ ವಾತಾವರಣ ಮತ್ತೆ ಮುಂದುವರಿದಿದೆ. ಆದರೆ ಕಡಲ ತೀರಗಳಲ್ಲಿ ಮಾತ್ರ ಕಡಲ್ಕೋರೆತದ ಬರಸಿಡಿಲು ತೀರದ ಕುಟುಂಬಗಳಿಗೆ ಬಡಿಯಲಾರಂಭಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಉಚ್ಚಿಲ ಕಡಲ ಕಿನಾರೆಯಲ್ಲಿ ಕಡಲ್ಕೊರೆತ ತೀವೃಗೊಂಡಿದ್ದು, ಬಟ್ಟಪ್ಪಾಡಿ ಮೊದಲಾದ ಕಡೆಗಳಿಗೆ ಸಂಪರ್ಕಿಸುವ ರಸ್ತೆ ಭಾಗಶ ಸಮುದ್ರಪಾಲಾಗಿದೆ. ಕಡಲ್ಕೊರೆತ ಇದೇ ರೀತಿ ಮುಂದುವರಿದಲ್ಲಿ ತೀರ ಭಾಗದ ಮನೆಗಳೂ ನೀರಿಗೆ ಕೊಚ್ಚಿ ಹೋಗುವ ಭೀತಿ ಎದುರಾಗಿದೆ.

ಕರಾವಳಿಯಲ್ಲಿ ಒಂದು ವಾರ ನಿರಂತರ ಸುರಿದ ಮಳೆಗೆ ಇದೀಗ ಕೊಂಚ ವಿರಾಮ ದೊರೆತಿದೆ. ಭಾನುವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸಂಪೂರ್ಣ ತಗ್ಗಿದ್ದು, ಬಿಸಿಲಿನ ವಾತಾವರಣ ಮತ್ತೆ ಮುಂದುವರಿದಿದೆ. ಇದರಿಂದಾಗಿ ಜಿಲ್ಲೆಯ ತಗ್ಗು ಪ್ರದೇಶದ ಜನ ಮಳೆಯ ನೀರಿನ ಪ್ರವಾಹದ ಸಮಸ್ಯೆಯಿಂದ ಕೊಂಚ ಚೇತರಿಸಿಕೊಂಡಿದ್ದಾರೆ.

ಮಳೆಯ ಪ್ರಮಾಣ ಕಡಿಮೆಯಾದಂತೆ ಕಡಲ ತೀರಗಳಲ್ಲಿ ಕಡಲ್ಕೊರೆತದ ಸಮಸ್ಯೆ ಜಾಸ್ತಿಯಾಗಲಾರಂಭಿಸಿದೆ. ಜಿಲ್ಲೆಯ ಉಳ್ಳಾಲ, ಸುರತ್ಕಲ್ ಮೊದಲಾದ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಕಡಲಿನ ರಭಸ ಇದೀಗ ದಕ್ಷಿಣದ ಕಡೆಗೆ ಮುಖ ಮಾಡಿದೆ. ಸುರತ್ಕಲ್ , ಉಳ್ಳಾಲ ಮೊದಲಾದ ಪ್ರದೇಶಗಳಲ್ಲಿ ಕಡಲಿಗೆ ಬ್ರೇಕ್ ವಾಟರ್, ರೀಫ್ ಬ್ಲಾಕ್ ಅಳವಡಿಸಿದ ಹಿನ್ನಲೆಯಲ್ಲಿ ಆ ಭಾಗದಲ್ಲಿದ್ದ ಕಡಲ್ಕೊರೆತೆ ಇದೀಗ ಸೋಮೇಶ್ವರ, ಉಚ್ಚಿಲ ಮೊದಲಾದ ಕಡೆಗಳಿಗೆ ಶಿಫ್ಟ್ ಆಗಿದೆ.

ಇದರಿಂದಾಗಿ ಉಚ್ಚಿಲ, ಬಟ್ಟಪ್ಪಾಡಿ ಸಂಪರ್ಕ ರಸ್ತೆಯ ಒಂದು ಭಾಗ ಇದೀಗ ಸಮುದ್ರ ಪಾಲಾಗುವ ಆತಂಕದಲ್ಲಿದೆ. ಉಚ್ಚಿಲದಿಂದ ಅಳಿವೆ ಬಾಗಿಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಟ್ಟಪ್ಪಾಡಿ ಎಂಬಲ್ಲಿ ಭಾಗಶ ಸಮುದ್ರ ಪಾಲಾಗಿದೆ. ಜಿಲ್ಲೆಯಲ್ಲಿ ಮಳೆ ಹಾಗೂ ಗಾಳಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಇರುವ ಕಾರಣ ಈ ಭಾಗದಿಂದ ಕಡಲಿನಿಂದ ಆಗುವ ಅನಾಹುತ ಇನ್ನಷ್ಟು ಹೆಚ್ಚಾಗಲಿದೆ.

ಕಡಲ್ಕೊರೆತ ತಡೆಯಲು ಕಡಲು ತೀರದ ಉದ್ದಕ್ಕೂ ತಡೆಗೋಡೆ ನಿರ್ಮಿಸುವ ಕಾಮಗಾರಿ ಆರಂಭಗೊಂಡಿದ್ದರೂ, ಕೆಲವು ಕಡೆಗಳಲ್ಲಿ ತಡೆಗೋಡೆ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಇದರಿಂದಾಗಿ ತಡೆಗೋಡೆ ಕಾಮಗಾರಿ ಮುಕ್ತಾಯಗೊಂಡಿರುವಲ್ಲಿ ಕೊಂಚ ಸಮಸ್ಯೆ ಕಡಿಮೆಯಾಗಿದ್ದು, ಕಾಮಗಾರಿ ಆರಂಭಗೊಳ್ಳದ ಕಡೆಗಳಲ್ಲಿ ಕೊರೆತದ ತೀವೃತೆ ಹೆಚ್ಚಾಗಲಾರಂಭಿಸಿದೆ.

ಪ್ರತೀ ಬಾರಿಯೂ ಮಳೆಗಾಲ ಆರಂಭಗೊಂಡಾಗ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರದ ಭರವಸೆಯನ್ನು ನೀಡುವುದನ್ನು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ ಎನ್ನುವ ಆರೋಪಿಸುತ್ತಾರೆ ಸ್ಥಳೀಯ ಮಹಿಳೆ ರಮ್ಲತ್.

ಕಳೆದ ಬಾರಿಯ ಮಳೆಗಾಲದಲ್ಲಿ ರಸ್ತೆಯ ಒಂದು ಬದಿಯಲ್ಲಿದ್ದ ಮನೆಗಳು, ತೆಂಗಿನ ಮರಗಳು ಸಮುದ್ರ ಪಾಲಾಗಿದ್ದರೆ, ಈ ಬಾರಿ ಈಗಲೇ ರಸ್ತೆ ತನಕ ನೀರು ಬರಲಾರಂಭಿಸಿದೆ. ಕೆಲವು ಕಡೆಗಳಲ್ಲಿ ಅರ್ಧ ರಸ್ತೆ ನೀರಿಗೆ ಕೊಚ್ಚಿಹೋಗಿದ್ದು, ಇನ್ನರ್ಧ ಇಂದೋ ನಾಳೆಯೋ ಕುಸಿದು ಬೀಳುವ ಹಂತದಲ್ಲಿದೆ. ತಡೆಗೋಡೆ ನಿರ್ಮಿಸಿ ಮನೆಗಳನ್ನು ರಕ್ಷಿಸುತ್ತೇವೆ ಎಂದವರು ಕಾಣೆಯಾಗಿದ್ದಾರೆ ಎನ್ನುವ ಆಕ್ರೋಶ ವ್ಯಕ್ತಪಡಿಸುತ್ತಾರೆ ಮನೆ ಕಳೆದುಕೊಳ್ಳುವ ಭೀತಿಯಲ್ಲಿರುವ ಮಹಿಳೆ ರಾಜೀವಿ.

ಇದನ್ನೂ ಓದಿ: ದಲಿತ ವ್ಯಕ್ತಿ ಬೈಕ್‌ ಮುಟ್ಟಿದಕ್ಕೆ ಅರೆಬೆತ್ತಲೆಗೊಳಿಸಿ ಹಲ್ಲೆ; ವಿಜಯಪುರದಲ್ಲೊಂದು ಅಮಾನವೀಯ ಘಟನೆ

ಪ್ರತೀ ವರ್ಷವೂ 6 ಕೋಟಿ, 12 ಕೋಟಿ ಹೀಗೆ ಕೋಟಿ ಕೋಟಿ ಹಣವನ್ನು ಕಡಲು ಕೊರೆತಕ್ಕಾಗಿ ಮೀಸಲಿಟ್ಟರೂ, ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ. ತಡೆಗೋಡೆ ಎನ್ನುವ ಶಾಶ್ವತ ಪರಿಹಾರ ದಕ್ಷಿಣಕನ್ನಡದ ಕರಾವಳಿಗೆ ಮಾತ್ರ ಮರೀಚೆಕೆಯಾಗಿಯೇ ಉಳಿದಿದೆ.
Published by:Ganesh Nachikethu
First published: