ಚಿತ್ರದುರ್ಗ(ಮೇ.26): ನಾವು ಬಡವರ ಪರ, ನೊಂದವರ ಪರ ಇದ್ದೇವೆ, ಬಡ ಜನರಿಗೆ ಲಕ್ಷ ಲಕ್ಷ ಮನೆ ಕಟ್ಟಿಕೊಟ್ಟಿದ್ದೇವೆ ಅಂಥ ಸರ್ಕಾರ, ಸಚಿವ, ಶಾಸಕರು ಬೊಬ್ಬೆ ಹೊಡೆಯುತ್ತಿದ್ದಾರೆ. ಸಚಿವ ಬಿ. ಶ್ರೀರಾಮುಲು (B. Sriramulu) ಪ್ರತಿನಿಧಿಸುವ ಮೊಳಕಾಲ್ಮೂರಲ್ಲಿ ಇದ್ದ ಮನೆಗಳನ್ನ ರಸ್ತೆ ಅಗಲೀಕರಣದ ಹೆಸರಲ್ಲಿ ಕೆಡವಿ ಬೀದಿಗೆ ಬಿದ್ದ ಬಡ ಕುಟುಂಬಗಳು (Family) ಬಯಲಲ್ಲೆ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದಾರೆ. ಪರಿಹಾರ, ಆಶ್ರಯ ಎರಡೂ ಸಿಗದೆ ಕಳೆದ ಆರು ತಿಂಗಳಿಂದ ಜನರು ಕಣ್ಣಿರಲ್ಲಿ ಕೈ ತೊಳೆಯುತ್ತ ಬಿದ್ದ ಮನೆಗಳಲ್ಲೇ ಜೀವ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಳೆದ 30-40 ವರ್ಷಗಳಿಂದ ಮೊಳಕಾಲ್ಮೂರು ಪಟ್ಟಣದ ಅಂಬೇಡ್ಕರ್ ನಗರದ (Ambedkar Nagara) ಜನರು ಸಣ್ಣ ಪುಟ್ಟ ಮನೆಗಳನ್ನ ಕಟ್ಟಿಕೊಂಡು ಕೂಲಿ ನಾಲಿ ಮಾಡಿಕೊಂಡು, ಕಟ್ಟಿಗೆ ಹೊತ್ತು ಜೀವನ ಮಾಡುತ್ತಿದ್ದರು.
ಕಳೆದ ಆರು ತಿಂಗಳ ಹಿಂದೆ ಮೊಳಕಾಲ್ಮೂರು ಅನಂತಪುರ ರಾಷ್ಟ್ರೀಯ ಹೆದ್ದಾರಿ (National Highway) ಅಗಲೀಕರಣಕ್ಕೆ ಅನುಮೋದನೆ ದೊರೆತು ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರ ರಸ್ತೆ ಅಗಲಿಕರಣಕ್ಕಾಗಿ ರಸ್ತೆ ಬದಿ ಇದ್ದ ಕಟ್ಟಡಗಳನ್ನ ತೆರವು ಮಾಡಿದೆ. ಅದರಲ್ಲಿ ಅಂಬೇಡ್ಕರ್ ನಗರದ 19 ಕುಟುಂಬಗಳಿಗೆ ಮೌಕಿಕವಾಗಿಯಾಗಲಿ ಮುಂಜಾಗ್ರತೆಯಿಂದ ಮನೆ ಖಾಲಿ ಮಾಡಿ ಅಂತ ನೋಟೀಸನ್ನೂ ನೀಡದೆ ಮನೆಗಳನ್ನ ಕೆಡವಿದ್ದಾರೆ.
ಜೀವನವೇ ಅತಂತ್ರ
ಇದರಿಂದ ಕೂಲಿ ನಾಲಿ ಮಾಡಿ ಜೀವನ ಮಾಡುತ್ತಿದ್ದ ಅಷ್ಟೂ ಕುಟುಂಬಗಳ ಜೀವನ ಸದ್ಯ ಅತಂತ್ರ ಆಗಿದೆ. ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಾಥ್ ನೀಡಿ ಮನೆಗಳನ್ನ ಕೆಡವಿಸಿದ ಪಟ್ಟಣ ಪಂಚಾಯ್ತಿ ಆಡಳಿತ, ಹಾಗೂ ತಾಲ್ಲೂಕು ಆಡಳಿತ ಈ ಕ್ಷಣಕ್ಕೂ ಈ ಬಡ ಜನರ ನೆರವಿಗೆ ಬಂದಿಲ್ಲ.
ತಾತ್ಕಾಲಿಕ ಆಶ್ರಯವೂ ಇಲ್ಲ
ಅಲ್ಲದೇ ಇದ್ದ ಮನೆಗಳನ್ನ ಕಿತ್ತುಕೊಂಡು ಕೆಡವಿದ ಬಳಿಕ ಅವರಿಗೆ ತಾತ್ಕಾಲಿಕ ಆಶ್ರಯ ಮನೆಗಳನ್ನಾಗಲಿ, ಅಥವಾ ನಿವೇಶನಗಳನ್ನಾಗಲಿ ನೀಡಿಲ್ಲ. ಇವರ ಈ ದಿವ್ಯ ನಿರ್ಲಕ್ಷದಿಂದ ಬಡ ಕುಟುಂಬಗಳು ಬೀದಿಗೆ ಬಿದ್ದಿದ್ದು ಬದುಕು ಮೂರಾಬಟ್ಟೆಯಾಗಿದೆ. ಸದ್ಯ ಮನೆಗಳನ್ನ ಕೆಡವಿ ಆರು ತಿಂಗಳು ಕಳೆಯುತ್ತಿದ್ದು, ಆಶ್ರವಿಲ್ಲದೇ ಬಡವರು ಅರೆಬರೆ ಬಿದ್ದ ಮನೆಗಳಲ್ಲಿ ಜೀವ ಭಯದಲ್ಲೇ ಜೀವನ ಮಾಡುತ್ತಿದ್ದಾರೆ.
ಆದರೇ ಸಚಿವ ಬಿ. ಶ್ರೀರಾಮುಲು ತನ್ನ ಕ್ಷೇತ್ರದ ಬಡ ಕುಟುಂಬಳ ಕಣ್ಣೀರುನ್ನೂ ಲೆಕ್ಕಿಸಿಲ್ಲ, ಇನ್ನೂ ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ಮಳೆಯಾಗಿ ತಾಲ್ಲೂಕಿನ ಹಲವಡೆ ಸಿಡಿಲು ಬಡಿದು ಪ್ರಾಣ ಹಾನಿ ಆಗಿವೆ. ಅದರಲ್ಲು ಗುಡುಗು, ಸಿಡುಲು ಬಡಿದು ಅವಾಂತರಕ್ಕೆ ಬೆಚ್ಚಿಬಿದ್ದಿರೋ ಕುಟುಂಬಗಳು ಮಳೆಗಾಲದಲ್ಲಿ ಬದುಕುವುದು ಹೇಗೆ ಎಂದು ಕಂಗಾಲಾಗಿದ್ದಾರೆ. ಅಲ್ಲದೇ ಸಣ್ಣ ಸಣ್ಣ ಮಕ್ಕಳನ್ನ ಕಟ್ಟಿಕೊಂಡು ಕೆಡವಿದ ಮನೆಗಳಲ್ಲಿ ಜನರು ವಾಸವಾಗಿದ್ದು, ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಕುಟುಂಬಗಳ ನೆರವಿಗೆ ಬಾರದ ತಾಲ್ಲೂಕು ಆಡಳಿತ ನಿರ್ಲಕ್ಷ ವಹಿಸಿದ್ದಾರೆ.
ಇದನ್ನೂ ಓದಿ: PM Modi Inspiration: ಪ್ರಧಾನಿ ಮೋದಿ ಜೀವನವೇ ಸ್ಪೂರ್ತಿ: ಬಡವರಿಗೆ ವಿಶೇಷ ಟೀ ಡಿಸ್ಪೆನ್ಸರ್ ಸಿದ್ಧಪಡಿಸಿದ ಹುಬ್ಬಳ್ಳಿ ಸಂಸ್ಥೆ
ಇತ್ತ ಸಂಕಷ್ಟದಲ್ಲಿರುವ ಜನರನ್ನ ತಿರುಗಿಯೂ ನೋಡದ ಜನ ಪ್ರತಿನಿಧಿಗಳು ಕಂಡೂ ಕಾಣದೆ ಓಡಾಡುತ್ತಿದ್ದಾರೆ. ಸೂರಿಗಾಗಿ ಸ್ಥಳಿಯ ಶಾಸಕ, ಸಚಿವ ಶ್ರೀರಾಮುಲು, ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿಗೆ ಬಡ ಜನರು ಮನವಿ ನೀಡಿದರೂ ಉಪಯೋಗ ಮಾತ್ರ ಏನೂ ಇಲ್ಲ.ಇದರಿಂದ ಮನೆ ಕಳೆದುಕೊಂಡ ಮಹಿಳೆಯರು ಮಕ್ಕಳು ಬದುಕು ನಿಜಕ್ಕೂ ಶೋಚನೀಯವಾಗಿದ್ದು, ಮಹಿಳೆಯರು ಸ್ನಾನಕ್ಕೆ, ರಾತ್ರಿ ಮಲಗಲೂ ಜಾಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿ ಹೈರಾಣಾಗಿದ್ದಾರೆ.
ಸೂರಿಗಾಗಿ ಅಲೆದು ಸುಸ್ತಾದ ಜನ
ಅಲ್ಲದೇ ಐದಾರು ಜನ ಇರುವ ಕುಟುಂಬಕ್ಕೆ 10-15 ಅಡಿಯೂ ಜಾಗವಿಲ್ಲದೆ ಸೂರು ಕೊಡಿ ಅಂತ ಶಾಸಕರು, ಸಚಿವರು, ಅಧಿಕಾರಿಗಳ ಬಳಿಗೆ ಅಲೆದು ಅಲೆದು, ಪರದಾಡುತ್ತಿದ್ದಾರೆ, ಮನೆ ಕಳೆದುಕೊಂಡು ಆರು ತಿಂಗಳಾದ್ರು ತಿರುಗಿ ನೋಡದ ತಾಲ್ಲೂಕು ಆಡಳಿತಕ್ಕೆ ಬಡ ಜನರ ಹಿಡಿ ಶಾಪ ಹಾಕಿ, ಸಿಡಿಲು, ಮಳೆಗೆ ಅನಾಹುತ ಆಗುವ ಮೊದಲು ಆಶ್ರಯ ನೀಡಿ ಎನ್ನುತ್ತಿದ್ದಾರೆ.
ಇದನ್ನೂ ಓದಿ: Govt School: ಈ ಶಾಲೆಯಲ್ಲಿಲ್ಲ ಕೊಠಡಿ ವ್ಯವಸ್ಥೆ : ಪೋಷಕರಿಂದ ಮಕ್ಕಳ ಕಳುಹಿಸದೆ ಪ್ರತಿಭಟನೆ
ಇನ್ನೂ ಈ ಕುರಿತು ಪಟ್ಟಣ ಪಂಚಾಯತ್ತಿ ಅಧ್ಯಕ್ಷರನ್ನ ಕೇಳಿದ್ರೆ, ಬಡವರಿಗೆ ಅನ್ಯಾಯವಾಗಿದೆ, ಆದ್ದರಿಂದ ನಗರೋತ್ಥಾನ ಯೋಜನೆಯಲ್ಲಿ ನಿವೇಶನಕ್ಕೆ ಹಣ ತೆಗೆದಿಟ್ಟಿದ್ದೇವೆ.ಸ್ಲಂ ಬೋರ್ಡಲ್ಲಿ ಮನೆ ನಿರ್ಮಿಸಿಕೊಳ್ಳಲು 75% ವಂತಿಕೆ ಹಣ ನೀಡುತ್ತೇವೆ, ಅವರಿಗೆ ಬೇಕಾದ ಸಜಹಾಯ ಮಾಡುತ್ತೇವೆ ಎಂದು ಕಣ್ಣೊರೆಸೊ ತಂತ್ರದ ಮಾತನಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ