ಜನತೆ ನಮಗೆ ವಿರೋಧ ಪಕ್ಷದ ಸ್ಥಾನ ನೀಡಿದ್ದಾರೆ, ಸರ್ಕಾರ ಉರುಳಿಸುವ ಅಗತ್ಯ ಇಲ್ಲ - ಯಡಿಯೂರಪ್ಪ

news18
Updated:August 8, 2018, 12:10 PM IST
ಜನತೆ ನಮಗೆ ವಿರೋಧ ಪಕ್ಷದ ಸ್ಥಾನ ನೀಡಿದ್ದಾರೆ, ಸರ್ಕಾರ ಉರುಳಿಸುವ ಅಗತ್ಯ ಇಲ್ಲ - ಯಡಿಯೂರಪ್ಪ
news18
Updated: August 8, 2018, 12:10 PM IST
-ನ್ಯೂಸ್​ 18 ಕನ್ನಡ

ಬೆಂಗಳೂರು,(ಆ.08): ಜನತೆ ನಮಗೆ ವಿರೋಧ ಪಕ್ಷದ ಸ್ಥಾನ ನೀಡಿದ್ದಾರೆ, ಸರ್ಕಾರ ಉರುಳಿಸುವ ಅಗತ್ಯವಿಲ್ಲ ಎಂದು ವಿಪಕ್ಷ ನಾಯಕ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

ಡಾಲರ್ಸ್​ ಕಾಲೋನಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಆಪರೇಷನ್​ ಕಮಲ ಮಾಡುತ್ತಿದ್ದಾರೆ ಎಂಬ ಡಿ.ಕೆ.ಶಿವಕುಮಾರ್​ ಆರೋಪಕ್ಕೆ ಪ್ರತ್ಯುತ್ತರ ನೀಡಿದರು. ಡಿಕೆಶಿ ಮಾಡಿರುವ ಆರೋಪ ಅರ್ಥಹೀನ. ನಾವು ವಿರೋಧ ಪಕ್ಷದಲ್ಲಿ ಇರಬೇಕೆಂದು ಜನ ತೀರ್ಮಾನ ಮಾಡಿದ್ದಾರೆ. ಗೌರವಯುತವಾಗಿ ವಿರೋಧಪಕ್ಷದಲ್ಲೇ ಇರುತ್ತೇವೆ. ಆಪರೇಷನ್​ ಕಮಲ ಮಾಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.

ನಿನ್ನೆ ಪ್ರಧಾನಿ ಮೋದಿ ಹಾಗೂ ನಮ್ಮ ರಾಷ್ಟ್ರೀಯ ಅದ್ಯಕ್ಷ ಅಮಿತ್ ಷಾ ಸೇರಿದಂತೆ ಕೇಂದ್ರದ ಸಚಿವರನ್ನು ಭೇಟಿ ಆಗಿ ಬಂದೆ. ನಮ್ಮ ರಾಜ್ಯಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಕೇಂದ್ರ ಸಚಿವರ ಬಳಿ ಮಾತನಾಡಿದ್ದೇನೆ. ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಭೇಟಿಗೆ ನಿನ್ನೆ ಸಮಯ ಕೊಟ್ಟಿದ್ದರು. ರಾಜ್ಯದ ಪ್ರಸಕ್ತ ವಿದ್ಯಮಾನಗಳು ಹಾಗೂ ಮುಂದೆ ಇರಬೇಕಾದ ಹೆಜ್ಜೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

ನಾಳೆಯಿಂದ ಬೀದರ್ ಜಿಲ್ಲೆಯಿಂದ ಪ್ರವಾಸ ಆರಂಭಿಸುತ್ತೇನೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿದೆ. ಹಾಗೂ ಕೆಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ಇದೆ. ಪ್ರವಾಸದ ವೇಳೆ ಇದೆಲ್ಲವನ್ನೂ ಅವಲೋಕಿಸುತ್ತೇವೆ ಎಂದು ಹೇಳಿದರು.

ದಿನೇಶ್​ ಗುಂಡೂರಾವ್​ ಆರೋಪ:

ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಉರುಳಿಸಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್​ನ 80 ಶಾಸಕರನ್ನು ಸಂಪರ್ಕ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಆರೋಪ ಮಾಡಿದ್ದರು. ಬಿಜೆಪಿಯವರಿಗೆ ಅಧಿಕಾರದ ದಾಹ ಇದೆ. ಕಾಂಗ್ರೆಸ್​ ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ. ಅನೈತಿಕ ಕೆಲಸಕ್ಕೆ ಬಿಜೆಪಿಯವರು ಕೈಹಾಕುತ್ತಿದ್ದಾರೆ. ಅವರು ಇದನ್ನೆಲ್ಲಾ ಬಿಟ್ಟು ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು.
Loading...

ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲ. ಅನ್ಯ ಮಾರ್ಗದಲ್ಲಿ ಸರ್ಕಾರ ರಚನೆ ಮಾಡುವುದು ಸರಿಯಲ್ಲ. ಯಡಿಯೂರಪ್ಪ ಮೂರು ದಿನ ಮುಖ್ಯಮಂತ್ರಿಯಾಗಿದ್ದರು. ಈಗಾಗಲೇ ಬಿಎಸ್​ವೈ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟಿಕೊಂಡಿದ್ದಾರೆ. ಇನ್ನಾದರೂ ಸರ್ಕಾರದ ತಂಟೆಗೆ ಹೋಗದೆ ಸುಮ್ಮನಿರುವುದು ಅವರಿಗೆ ಒಳಿತು ಎಂದು ಹೇಳಿದ್ದರು.

ಡಿಕೆಶಿ ಆರೋಪ:

ಬಿಜೆಪಿ ನಾಯಕರು ಕಾಂಗ್ರೆಸ್​ ನಾಯಕರನ್ನು ಭೇಟಿ ಮಾಡಿ ಆಮಿಷಗಳನ್ನು ಒಡ್ಡುತ್ತಿದ್ದಾರೆ. 5 ಜನ ಬಿಜೆಪಿ ನಾಯಕರು ದಿನನಿತ್ಯ ಇದೇ ಕೆಲಸ ಮಾಡುತ್ತಿದ್ದು, ರಾಜ್ಯದಲ್ಲಿ ಮತ್ತೆ ಆಪರೇಷನ್​ ಕಮಲ ಶುರುವಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​​ ಆರೋಪ ಮಾಡಿದ್ದರು.

ರಮೇಶ್​ ಜಾರಕಿಹೊಳಿ ಸ್ಪಷ್ಟನೆ:

ನಿನ್ನೆ ಯಡಿಯೂರಪ್ಪನವರು ಪ್ರಯಾಣ ಬೆಳೆಸಿದ ವಿಮಾನದಲ್ಲೇ ದೆಹಲಿಗೆ ಹೋದ ಐವರು ಕಾಂಗ್ರೆಸ್​ ನಾಯಕರಲ್ಲಿ ರಮೇಶ್​ ಜಾರಕಿಹೊಳಿ ಕೂಡ ಇದ್ದರು. ಇದರಿಂದ ಅವರೇನಾದರೂ ಬಿಜೆಪಿ ಸೇರಲಿದ್ದಾರಾ? ಎಂಬ ಚರ್ಚೆಗಳು ನಡೆದಿತ್ತು. ಆದರೆ, ಆ ಗಾಳಿಸುದ್ದಿಗೆ ಪೂರ್ಣವಿರಾಮ ಇಟ್ಟಿದ್ದ ರಮೇಶ್​ ಜಾರಕಿಹೊಳಿ, ನಾನು ಬಿಜೆಪಿ ಸೇರುವ ಮಾತೇ ಇಲ್ಲ. ರಾಜಕೀಯ ಜೀವನ ಆರಂಭಿಸಿದ್ದೂ ಕಾಂಗ್ರೆಸ್​ನಲ್ಲಿ; ಮುಗಿಸುವುದೂ ಕಾಂಗ್ರೆಸ್​ನಲ್ಲಿ ಎಂದು ಸ್ಪಷ್ಟನೆ ನೀಡಿದ್ದರು.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ