• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Chikkamagaluru: ಸೇತುವೆ ಇಲ್ಲದೆ ಬಾಣಂತಿಯನ್ನು ಹೆಗಲ ಮೇಲೆ ಹೊತ್ತು ತಂದ ಜನ; ಕೇಳೋರಿಲ್ಲ ಆದಿವಾಸಿಗಳ ಗೋಳು

Chikkamagaluru: ಸೇತುವೆ ಇಲ್ಲದೆ ಬಾಣಂತಿಯನ್ನು ಹೆಗಲ ಮೇಲೆ ಹೊತ್ತು ತಂದ ಜನ; ಕೇಳೋರಿಲ್ಲ ಆದಿವಾಸಿಗಳ ಗೋಳು

ಬಾಣಂತಿ ಹೊತ್ತುಕೊಂಡು ಹೋದ ಜನ

ಬಾಣಂತಿ ಹೊತ್ತುಕೊಂಡು ಹೋದ ಜನ

ಬಿಳಗಲ್ ಗ್ರಾಮದ ಬಳಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಭದ್ರಾ ನದಿ ದಾಟಲು ತೂಗು ಸೇತುವೆ ಇದೆಯಾದರೂ ಸೇತುವೆಯಲ್ಲಿ ವಾಹನಗಳ ಸಂಚಾರ ಸಾಧ್ಯವಿಲ್ಲದ ಪರಿಣಾಮ ಅನಾರೋಗ್ಯ ಪೀಡಿತರನ್ನು, ಗರ್ಭಿಣಿ, ಬಾಣಂತಿಯರನ್ನು ಕುರ್ಚಿಗೆ ಕಟ್ಟಿ ಹೊತ್ತು ಸಾಗಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

  • Share this:

ಚಿಕ್ಕಮಗಳೂರು (ಜು. 24) : ಬಿಳಗಲ್ ಗ್ರಾಮದ  ಬಳಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಭದ್ರಾ ನದಿ (Bhadra River) ದಾಟಲು ತೂಗು ಸೇತುವೆ (Bridge) ಇದೆಯಾದರೂ ಸೇತುವೆಯಲ್ಲಿ ವಾಹನಗಳ ಸಂಚಾರ ಸಾಧ್ಯವಿಲ್ಲದ ಪರಿಣಾಮ ಅನಾರೋಗ್ಯ ಪೀಡಿತರನ್ನು, ಗರ್ಭಿಣಿ, ಬಾಣಂತಿಯರನ್ನು ಮರಕ್ಕೆ ಕಟ್ಟಿ ಹೊತ್ತು ಸಾಗಿಸೋ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಳಸ ತಾಲೂಕು ವ್ಯಾಪ್ತಿಯ ಸಂಸೆ ಗ್ರಾಮ ಪಂಚಾಯತ್‍ಗೆ ಒಳಪಟ್ಟಿರುವ ಬಿಳಗಲ್ ಗ್ರಾಮದ 35 ಗಿರಿಜನ ಕುಟುಂಬಗಳು ಸಮರ್ಪಕ ರಸ್ತೆ (Adequate Road), ಸೇತುವೆ ಸೌಲಭ್ಯದ ಕೊರತೆಯಿಂದ ಹೊರಜಗತ್ತಿನ ಸಂಪರ್ಕಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.


ಬಾಣಂತಿ ಹೊತ್ತೊಯ್ದ ದೃಶ್ಯ ವೈರಲ್​


ಇತ್ತೀಚೆಗೆ ಬಾಣಂತಿಯೊಬ್ಬರನ್ನು  ಮರದ ಬಡಿಗೆಗಳ ಸಹಾಯದಿಂದ ಗ್ರಾಮಸ್ಥರು ಹೊತ್ತು ಸಾಗಿಸಿದ್ದು, ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಗ್ರಾಮವನ್ನು ಪ್ರತಿನಿಧಿಸುವ ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕಳಸ ತಾಲೂಕಿನ ಸಂಸೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಬಿಳಗಲ್ ಗ್ರಾಮದಲ್ಲಿ ಸುಮಾರು 35 ಗಿರಿಜನ ಸಮುದಾಯದ ಕುಟುಂಬಗಳು ವಾಸಿಸುತ್ತಿವೆ. ಈ ಕುಟುಂಬಗಳು ಮೂಲತಃ ಕುದುರೆಮುಖ ಅಭಯಾರಣ್ಯ ವ್ಯಾಪ್ತಿಯ ನಿವಾಸಿಗಳಾಗಿದ್ದು, ಕುದುರೆಮುಖದಲಿರುವ ಲಕ್ಯಾ ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ಈ ಕುಟುಂಬಗಳನ್ನು ಅಲ್ಲಿಂದ ಒಕ್ಕಲೆಬ್ಬಿಸಿದ ಪರಿಣಾಮ ಸಂತ್ರಸ್ಥರಿಗೆ ಬಿಳಗಲ್ ಗ್ರಾಮದಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು.


ವಾಹನ ಸಂಪರ್ಕಕ್ಕೆ 2 ಕಿ.ಮೀ ದೂರ ಕ್ರಮಿಸಬೇಕು


ಈ ಕುಟುಂಬಗಳು ಸದ್ಯ ವಾಸಿಸುತ್ತಿರುವ ಬಿಳಗಲ್ ಗ್ರಾಮದ ಪಕ್ಕದಲ್ಲಿ ಭದ್ರಾ ನದಿ ಸೇರಿದಂತೆ ಸಣ್ಣ ಹಳ್ಳವೊಂದು ಹರಿಯುತ್ತಿದ್ದು, ಈ 2 ನದಿಗಳನ್ನು ದಾಟಿಕೊಂಡು ನಿವಾಸಿಗಳು ತಮ್ಮ ಗ್ರಾಮ ತಲುಪಬೇಕಿದೆ. ಭದ್ರಾ ನದಿ ದಾಟಲು ಸುಸಜ್ಜಿತವಾದ ಆಧುನಿಕ ತೂಗು ಸೇತುವೆಯನ್ನು ನಿರ್ಮಿಸಲಾಗಿದ್ದು, ಮತ್ತೊಂದು ನದಿ ದಾಟಲು ಸೇತುವೆಯನ್ನೂ ನಿರ್ಮಿಸಿಕೊಡಲಾಗಿದೆ. ಗ್ರಾಮದ ಜನರು ಈ ಸೇತುವೆ ಹಾಗೂ ತೂಗು ಸೇತುವೆ ಮೂಲಕ ಹೊರ ಜಗತ್ತಿನ ಸಂಪರ್ಕ ಸಾಧಿಸುತ್ತಿದ್ದಾರೆ. ಆದರೆ ತೂಗು ಸೇತುವೆ ಮೂಲಕ ವಾಹನಗಳ ಸಂಚಾರ ಸಾಧ್ಯವಿಲ್ಲದ ಪರಿಣಾಮ ಗ್ರಾಮದಲ್ಲಿರುವ ಜನರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಹಾಗೂ ಗರ್ಭಿಣಿ, ಬಾಣಂತಿಯರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಂತ್ರಸ್ಥರನ್ನು ಮರದ ಬಡಿಗೆಗಳಿಗೆ ಕಟ್ಟಿಕೊಂಡು ಸುಮಾರು 2 ಕಿಮೀ ದೂರ ಕ್ರಮಿಸಿ ಬಳಿಕ ವಾಹನಗಳ ಮೂಲಕ ಆಸ್ಪತ್ರೆಗೆ ಸಾಗಿಸಬೇಕಾದ ಕರುಣಾಜನಕ ಸ್ಥಿತಿ ಗ್ರಾಮಸ್ಥರದ್ದಾಗಿದೆ.


ಇದನ್ನೂ ಓದಿ: Basavaraj Bommai: ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ


ಸ್ಥಳೀಯ ಶಾಸಕರ ವಿರುದ್ಧ ವ್ಯಾಪಕ ಆಕ್ರೋಶ


ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಹೆರಿಗೆಗೆ ತೆರಳಿದ್ದ ಮಹಿಳೆಯೊಬ್ಬರನ್ನು ಎರಡು ಬಡಿಗೆಗಳಿಗೆ ಕಟ್ಟಲಾದ ಚೇರ್ ವೊಂದರಲ್ಲಿ ಕೂರಿಸಿಕೊಂಡು ನಾಲ್ಕೈದು ಜನರು ತೂಗು ಸೇತುವೆ ಮೇಲೆ ಹಸಸಾಹಸ ಪಡುತ್ತಾ ಹೊತ್ತು ಸಾಗಿಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಮಸ್ಥರು ಹೊರ ಜಗತ್ತಿನ ಸಂಪರ್ಕಕ್ಕೆ ಪಡಿಪಾಟಲು ಅನುಭವಿಸುತ್ತಿರುವುದನ್ನು ಕಂಡು ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಳಗಲ್ ಗ್ರಾಮದ ಜನರು ತಮ್ಮ ಈ ಸಮಸ್ಯೆ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ ಸೇರಿದಂತೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.


ಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಜಾಗದಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಿಕೊಡಬೇಕೆಂದು ನಿವಾಸಿಗಳ ಮನವಿಗೆ ಇದುವರೆಗೂ ಸ್ಪಂದೆನೆ ಸಿಗದ ಪರಿಣಾಮ ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾದವರನ್ನು ಮರದ ಬಡಿಗೆಗಳಿಗೆ ಕಟ್ಟಿ ಹೊತ್ತು ಸಾಗಿಸಬೇಕಾದ ದಯನೀಯ ಸ್ಥಿತಿ ಮುಂದುವರಿದಿದೆ. ತೂಗು ಸೇತುವೆ ಇರುವ ಜಾಗದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ ಎಂದು ಕ್ಷೇತ್ರದ ಶಾಸಕರು ಪ್ರತೀ ಬಾರಿ ಹೇಳುತ್ತಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಸೇತುವೆ ನಿರ್ಮಾಣಕ್ಕೆ ಇದುವರೆಗೂ ಕ್ರಮವಹಿಸಿಲ್ಲ.




ಸೇತುವೆ ನಿರ್ಮಾಣಕ್ಕೆ ಬಂದ ಅನುದಾನ ಎಲ್ಲಿಗೆ ಹೋಗಿದೆಯೋ ಗೊತ್ತಿಲ್ಲ. ಬಿಳಗಲ್ ಗ್ರಾಮಸಂಪರ್ಕಕ್ಕೆ ಭದ್ರಾ ನದಿಗೆ ನಿರ್ಮಿಸಲಾಗಿರುವ ತೂಗು ಸೇತುವೆ ದಾಟಿ ಹೋಗುಬೇಕು. ಅಲ್ಲಿಂದಾಚೆ ಮತ್ತೊಂದು ಹಳ್ಳವಿದ್ದು, ಆ ಹಳ್ಳ ದಾಟಲು ಸೇತುವೆ ಇದೆ. ಆದರೆ ತೂಗು ಸೇತುವೆಯಲ್ಲಿ ವಾಹನಗಳ ಸಂಚಾರ ಸಾಧ್ಯವಿಲ್ಲದ ಪರಿಣಾಮ ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಉಪಯೋಗ ಇದ್ದರೂ ಇಲ್ಲದಂತಾಗಿದೆ. ತೂಗುಸೇತುವೆ ಇರುವ ಜಾಗದಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಿದಲ್ಲಿ ಬಿಳಗಲ್ ಗ್ರಾಮದೊಳಗೆ ವಾಹನಗಳು ಬರಲು ಸಾಧ್ಯವಾಗಲಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.


ಇದನ್ನೂ ಓದಿ: Hubballi: ಸ್ಪಾರ್ಕರ್ ಕ್ಯಾಂಡಲ್ ಕಾರ್ಖಾನೆಯಲ್ಲಿ ಸ್ಫೋಟ; 8 ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ


ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಬಾಣಂತಿ ವಸಂತಿ ನಮ್ಮ ಗ್ರಾಮ ಸಂಪರ್ಕಕ್ಕೆ ಸೇತುವೆ ಇಲ್ಲ. ತೂಗು ಸೇತುವೆ ಇದ್ದು, ಅದರ ಮೇಲೆ ವಾಹನಗಳು ಬರುವುದಿಲ್ಲ. ಗರ್ಭಿಣಿಯಾಗಿದ್ದ ನನ್ನನ್ನು ಕುಟುಂಬಸ್ಥರು ಜು.11ಕ್ಕೆ ಚೇರ್​ಗೆ ಕಟ್ಟಿ ಹೊತ್ತು ಸಾಗಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಜು.4ಕ್ಕೆ ಡೆಲಿವರಿಯಾಗಿದ್ದು,  ವಾರ ಕಳೆದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಆಗಲೂ ನನ್ನನ್ನು ಚೇರ್ ಗೆ ಕಟ್ಟಿಕೊಂಡೇ ಹೊತ್ತುಕೊಂಡು ಬಂದಿದ್ದಾರೆ. ಅನೇಕ ವರ್ಷಗಳಿಂದ ಸೇತುವೆ ಸಮಸ್ಯೆಯಿಂದ ಬಳಲುತ್ತಿದ್ದೇವೆ. ನಮ್ಮ ಸಮಸ್ಯೆಗೆ ಯಾರೂ ಸ್ಪಂದಿಸಿಲ್ಲ. ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ವಾಹನಗಳಿಗೆ ಕರೆ ಮಾಡಲೂ ನೆಟ್‍ವರ್ಕ್ ಸಮಸ್ಯೆ ಇದೆ. ಗ್ರಾಮದಿಂದ ಮೂರು ಕಿಮೀ ದೂರು ನಡೆದುಕೊಂಡು ಹೋಗಬೇಕು. ಅನಾರೋಗ್ಯ ಪೀಡಿತರನ್ನೂ ಮೂರು ಕಿಮೀ ಹೊತ್ತು ಸಾಗಬೇಕು. ಮನೆಗಳಿಗೆ ಬೇಕಾದ ವಸ್ತುಗಳನ್ನೂ ಹೊತ್ತುಕೊಂಡೇ ತರಬೇಕು. ನಾವಿರುವ ಜಾಗ ಅರಣ್ಯ ಇಲಾಖೆ ಜಾಗ ಎನ್ನುತ್ತಿದ್ದು, ಇದರಿಂದಾಗಿ ನಮ್ಮೂರಿಗೆ ಮೂಲಸೌಕರ್ಯ ಸಿಗುತ್ತಿಲ್ಲ ಎಂದರು.


ಶಾಲೆ-ಕಾಲೇಜಿಗೆ ಹೋಗುವ ಮಕ್ಕಳ ಹರಸಾಹಸ


ಸ್ಥಳೀಯ ಸುರೇಶ್ ಮಾತಾನಾಡಿ ಬಿಳಗಲ್ ಗ್ರಾಮ ಕಳಸ ತಾಲೂಕಿನ ಕಟ್ಟಕಡೆಯ ಕುಗ್ರಾಮ, ಮೂಲಸೌಕರ್ಯವಿಲ್ಲದ ಗ್ರಾಮವಾಗಿದೆ. ಕುದುರೆಮುಖ ಕಂಪನಿಯವರು ನಮ್ಮನ್ನು ಲಕ್ಯಾ ಡ್ಯಾಂ ನಿರ್ಮಾಣಕ್ಕಾಗಿ ನಮ್ಮನ್ನು ಒಕ್ಕಲೆಬ್ಬಿಸಿ ಇಲ್ಲಿ ಪುನರ್ವಸತಿ ಕಲ್ಪಿಸಿದ್ದು, ಸುಮಾರು 45 ವರ್ಷಗಳಿಂದ ಈ ಗ್ರಾಮದಲ್ಲಿ ಮೂಲ ಸೌಕರ್ಯಗಳಿಲ್ಲದೇ ಬದುಕುತ್ತಿದ್ದೇವೆ. ರಸ್ತೆ, ನೆಟ್‍ವರ್ಕ್, ಶಾಲೆ ಸೌಲಭ್ಯಗಳಿಲ್ಲ. ಗ್ರಾಮದಲ್ಲಿ 30 ಶಾಲಾ ಕಾಲೇಜು ಮಕ್ಕಳಿದ್ದು, ಹತ್ತಿರದಲ್ಲಿ ಶಾಲೆಗಳಿಲ್ಲ. 10-25 ಕಿ.ಮೀ ದೂರ ನಡೆದುಕೊಂಡು ಶಾಲೆಗೆ ಹೋಗಬೇಕು.



top videos


    ಗ್ರಾಮದ ಪಕ್ಕದಲ್ಲಿ ಭದ್ರಾನದಿ ಹರಿಯುತ್ತಿದ್ದು, 30 ವರ್ಷಗಳ ಹಿಂದೆ ನಿರ್ಮಿಸಿರುವ ಸದ್ಯ ಶಿಥಲಾವಸ್ಥೆಯಲ್ಲಿರುವ ತೂಗು ಸೇತುವೆ ಮೂಲಕ ಗ್ರಾಮಸ್ಥರು, ಶಾಲಾ ಮಕ್ಕಳು ಪ್ರಾಣಭೀತಿ ಬಿಟ್ಟು ತಿರುಗಾಡಬೇಕು. ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾದವರನ್ನು ಬಡಿಗೆಗಳಿಗೆ ಕಟ್ಟಿ ಹೊತ್ತು ಸಾಗಬೇಕು. ಮೊನ್ನೆ ಬಾಣಂತಿಯೊಬ್ಬರನ್ನು ಬಡಿಗೆಗೆ ಕಟ್ಟಿ ಹೊತ್ತು ಕರೆ ತಂದಿದ್ದೇವೆ. ಗ್ರಾಮ ಸಮೀಪದಲ್ಲಿ ಅಂಗನವಾಡಿ ನಿರ್ಮಿಸದೇ 3 ಕಿಮೀ ದೂರದಲ್ಲಿ ಅಂಗನವಾಡಿ ನಿರ್ಮಿಸಿದ್ದಾರೆ. ಅಂಗನವಾಡಿ ಶಿಕ್ಷಕಿರು ನದಿ ದಾಟಬೇಕೆಂಬ ಕಾರಣಕ್ಕೆ ಅಂಗನವಾಡಿಯನ್ನು ರಸ್ತೆ ಬದಿಯಲ್ಲಿ ನಿರ್ಮಿಸಿದ್ದು, ಗ್ರಾಮಸ್ಥರು ತಮ್ಮ ಮಕ್ಕಳನ್ನು ನದಿ, ತೂಗುಸೇತುವೆ ಮೂಲಕ ಕರೆ ತಂದು 3 ಕಿ.ಮೀ ನಡೆದು ಅಂಗನವಾಡಿಗೆ ಬಿಡಬೇಕು. ಶಿಕ್ಷಕರು ಪ್ರಾಣಕ್ಕೆ ಏನು ಆಗಬಾರದು, ಗ್ರಾಮದ ಮಕ್ಕಳು, ಗ್ರಾಮಸ್ಥರ ಪ್ರಾಣಕ್ಕೆ ಏನಾದರೂ ಪರವಾಗಿಲ್ಲ ಎಂಬುದು ಸರಕಾರ, ಜನಪ್ರತನಿಧಿಗಳು, ಅಧಿಕಾರಿಗಳ ನಿಲುವಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

    First published: