ಯಾದಗಿರಿ (ಅ.23): ದೀಪಾವಳಿ (Deepavali) ಎಲ್ಲರ ಬಾಳಲ್ಲಿ ಬೆಳಕು ತರುವ ಹಬ್ಬ ಈ ಹಬ್ಬ ಈಗ ಕುಂಬಾರರಿಗೆ (Potters) ಕತ್ತಲೆಯಾಗಿದೆ. ಕಳೆದ 2 ವರ್ಷದಿಂದ ಕೊರೊನಾ ಹೊಡೆತಕ್ಕೆ ಬೇಸತ್ತ ಕುಂಬಾರರಿಗೆ ಈಗ ಮತ್ತೆ ಹೊಡೆತ ಶುರುವಾಗಿದೆ. ಅದರಲ್ಲೂ ದೀಪಾವಳಿ ಹಬ್ಬ ಬಂತೆಂದರೆ ಕುಂಬಾರರಿಗೆ ಎಲ್ಲಿಲ್ಲದ ಕೈತುಂಬಾ ಕೆಲಸ ಇರುತ್ತಿತ್ತು. ಆದರೆ ಇದೀಗ ಪ್ಲಾಸ್ಟಿಕ್ (Plastic) ಹಾವಳಿಯಿಂದ ಕುಂಬಾರರು ಸಂಕಷ್ಟದ ಜೀವನ ನಡೆಸುವಂತಾಗಿದೆ. ಅಧುನಿಕತೆ ಬಿರುಗಾಳಿಗೆ ಕುಂಬಾರರು ಜೀವನ ನಡೆಸುವುದು ಕಷ್ಟಕರವಾಗಿದೆ. ಪ್ರಸಕ್ತ ಬೆಳೆಯುತ್ತಿರುವ ಜಾಗತೀಕರಣದಲ್ಲಿ ಈಗ ಕುಂಬಾರರಿಗೆ ಬೇಡಿಕೆ (Demand) ಇಲ್ಲದಂತಾಗಿದೆ.
ಪರಿಸರ ಸ್ನೇಹಿ ಹಣತೆ ಮಾರಾಟ ಕುಸಿತ!
ಕುಂಬಾರರು ಮಣ್ಣನ್ನು ತೆಗೆದುಕೊಂಡು ಬಂದು ಹಣತೆ ಹಾಗೂ ಮಡಿಕೆ ಹಾಗೂ ವಿವಿಧ ತರಹ ಮಣ್ಣಿನ ವಸ್ತುಗಳನ್ನು ತಯಾರಿಸುತ್ತಾರೆ. ಪರಿಸರ ಸ್ನೇಹಿ ಮಣ್ಣಿನ ಹಣತೆಗಳಿಗೆ ಭಾರೀ ಡಿಮ್ಯಾಂಡ್ ಇತ್ತು. ಆದರೆ, ಆಧುನಿಕತೆ ಭರಾಟೆ ಕುಂಬಾರರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಮಣ್ಣಿನ ಮಡಿಕೆ ದೀಪ ಮಾಡಿ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಕುಂಬಾರರ ಬದುಕು ಅಯೋಮಯವಾಗಿದೆ.
ಕುಂಬಾರರ ಬದುಕೇ ಅಯೋಮಯ
ಯಾದಗಿರಿ ತಾಲೂಕಿನ ಮುದ್ನಾಳ ಗ್ರಾಮದಲ್ಲಿ ಮಲ್ಲಿಕಾರ್ಜುನ ಅವರ ಕುಟುಂಬವು ಸುಮಾರು ವರ್ಷಗಳಿಂದ ಕುಂಬಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.ಆದರೆ, ಪ್ಲಾಸ್ಟಿಕ್ ಯುಗದಿಂದ ಕುಂಬಾರರ ಬದುಕು ಕಗ್ಗತ್ತಲಾಗಿದೆ.ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿಯೂ ಕುಂಬಾರರಿಗೆ ಹೊಡೆತ ಬಿದ್ದಿದೆ.
ಈ ವರ್ಷ ಕೈಕೊಟ್ಟ ವ್ಯಾಪಾರ
ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಿದ್ದ ಕುಂಬಾರರಿಗೆ ಈ ವರ್ಷ ಕೈ ಕೊಟ್ಟಿದೆ. ಈದರಿಂದಾಗಿ ಕುಂಬಾರಿಕೆ ಮಾಡುತ್ತಿದ್ದ ಕುಟುಂಬಗಳು ಇಂದು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಹಣತೆ ತಯಾರಿಕೆ ಮಾಡಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ಕುಂಬಾರರು ಹಣತೆಗಳ ಮಾರಾಟ ಕಡಿಮೆಯಾಗುತ್ತಿರುವುದಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.
ಜನರು ಮಣ್ಣಿನ ಹಣತೆ ಕೊಳ್ಳುತ್ತಿಲ್ಲ
ಈ ಬಗ್ಗೆ ಮಲ್ಲಿಕಾರ್ಜುನ ಅವರು ಮಾತನಾಡಿ, ಜನರು ಪ್ಲಾಸ್ಟಿಕ್ ಮೊರೆ ಹೋಗಿದ್ದಾರೆ. ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಹಣತೆಗಳು ಮಾರಾಟ ಮಾಡಲಾಗುತ್ತಿದ್ದು ಜನರು ಮಣ್ಣಿನ ಹಣತೆ ಬಳಕೆ ಕಡಿಮೆ ಮಾಡುತ್ತಿದ್ದಾರೆ. ಜೀವನ ನಡೆಸುವುದು ಕಷ್ಟವಾಗಿದೆ ಎಂದರು.
ಹಣತೆಗಳಿಗೆ ಬೇಡಿಕೆ ಕಡಿಮೆಯಾಗಿದೆ
ಕುಂಬಾರರು ತಯಾರಿಸಿದ ಮಣ್ಣಿನ ಹಣತೆಗಳನ್ನು ವ್ಯಾಪಾರಸ್ಥರು ಖರೀದಿ ಮಾಡಿ ಜಿಲ್ಲಾದ್ಯಂತ ಮಾರಾಟ ಮಾಡುತ್ತಿದ್ದಾರೆ. ಜಿಲ್ಲೆಯ ಶಹಾಪುರ, ಸುರಪುರ, ಹುಣಸಗಿ, ವಡಗೇರಾ, ಗುರುಮಿಠಕಲ್, ಯಾದಗಿರಿ ನಗರದ ಗಾಂಧಿ ವೃತ್ತ, ಸುಭಾಷ್ ವೃತ್ತ, ಶಾಸ್ತ್ರಿ ವೃತ್ತ, ಹಳೇ ಜಿಲ್ಲಾಸ್ಪತ್ರೆ ಸಮೀಪ ಸೇರಿದಂತೆ ಮೊದಲಾದ ಕಡೆ ಮಣ್ಣಿನ ಹಣತೆ ಮಾರಾಟ ಮಾಡಲಾಗುತ್ತಿದೆ. ಕಳೆದ ನಾಲ್ಕು ದಿನಗಳಿಂದ ಮಾರಾಟ ಮಾಡುತ್ತಿದ್ದಾರೆ. ಆದರೆ, ವ್ಯಾಪಾರಸ್ಥರು ಉತ್ತಮ ಲಾಭದ ನಿರೀಕ್ಷೆಯಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಆದರೆ, ಕಳೆದ ವರ್ಷಕ್ಕಿಂತ ಈ ವರ್ಷ ವ್ಯಾಪಾರ ಕುಸಿದಿದೆ.
ಇದನ್ನೂ ಓದಿ: V Somanna: ಸಮಸ್ಯೆ ಹೇಳಿಕೊಳ್ಳಲು ಬಂದಿದ್ದೇ ತಪ್ಪಾಯ್ತಾ? ಮಹಿಳೆಯ ಕಪಾಳಕ್ಕೆ ಹೊಡೆದ ಸಚಿವ ಸೋಮಣ್ಣ
ಬೆಳೆ ಹಾನಿಯಿಂದ ರೈತರ ಸಂಭ್ರಮ
ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ಹಾನಿಯಾಗಿದೆ. ಬೆಳೆ ಹಾನಿಯಿಂದ ರೈತರ ಸಂಭ್ರಮ ಕಸಿದಿದೆ. ಹೀಗಾಗಿ ಹಬ್ಬದ ವ್ಯಾಪಾರ ಕಡಿಮೆಯಾಗುತ್ತಿದೆ. ಆದರೆ, ಖರೀದಿ ಮಾಡುವರ ಸಂಖ್ಯೆ ಕಡಿಮೆಯಾಗಿದೆ. ಜನರು ಆಧುನಿಕತೆಯ ವಸ್ತುಗಳ ಮೊರೆ ಹೋಗದೆ ಪರಿಸರ ಸ್ನೇಹಿ ಮಣ್ಣಿನ ಮಡಿಕೆ ಹಾಗೂ ಹಣತೆ ಖರೀದಿ ಮಾಡಿ ಪರಿಸರದ ಕಾಳಜಿ ಮೆರೆಯಬೇಕಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ