ಸೈಕಲ್​ನಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತೆ; ಸಂಸದ ಸಿದ್ದೇಶ್ವರ ಮಾತಿಗೆ ಜನರ ಆಕ್ರೋಶ

ಹೀಗೆ ಪೆಟ್ರೋಲ್​ ಬೆಲೆ ಏರಿಕೆಯಾದರೆ, ಜನರು ಸೈಕಲ್​ ಮೇಲೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಸೈಕಲಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತದೆ ಎಂದಿದ್ದಾರೆ

ಸಂಸದ ಸಿದ್ದೇಶ್ವರ್​

ಸಂಸದ ಸಿದ್ದೇಶ್ವರ್​

 • Share this:
  ಬೆಂಗಳೂರು (ಜು. 10): ಪೆಟ್ರೋಲ್​ ಬೆಲೆ ಏರಿಕೆಯಾಗಿದೆ ಎಂದು ದೂಷಿಸುವ ಬದಲು ಜನರು ಸೈಕಲ್​ನಲ್ಲಿ ಓಡಾಡಬೇಕು. ಇದರಿಂದ ಜನರಿಗೆ ವ್ಯಾಯಾಮ ಆಗುತ್ತದೆ ಎಂಬ ಸಂಸದ ಸಿದ್ದೇಶ್ವರ್​ ಅವರ ಉಡಾಫೆ ಮಾತಿಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನದಿಂದ ದಿನ ಪೆಟ್ರೋಲ್​ ಬೆಲೆ ಏರಿಕೆಯಾಗುತ್ತಿದೆ. ಹೀಗೆ ಪೆಟ್ರೋಲ್​ ಬೆಲೆ ಏರಿಕೆಯಾದರೆ, ಜನರು ಸೈಕಲ್​ ಮೇಲೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಸೈಕಲಲ್ಲಿ ಓಡಾಡಿದ್ರೆ ವ್ಯಾಯಾಮ ಆಗುತ್ತದೆ ಎಂದು ಉತ್ತರ ನೀಡಿದ್ದಾರೆ. ಅವರ ಈ ಹೇಳಿಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

  ದಾವಣಗೆರೆಯಲ್ಲಿ ಮಾತನಾಡಿದ ಅವರು, ಕಚ್ಚಾ ತೈಲದ ಬ್ಯಾರೆಲ್​ ಬೆಲೆ ಜಾಸ್ತಿ ಆದಾಗ ದರ ಹೆಚ್ಚುವುದು ಸಹಜ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳ ಆದ ಹಿನ್ನಲೆ ದೇಶದಲ್ಲಿ ಪೆಟ್ರೋಲ್​ ಬೆಲೆ ಏರಿಕೆಯಾಗಿದೆ, ದರ ಕಡಿಮೆ ಮಾಡಲು ಪ್ರಧಾನಿಗಳು ಪ್ರಯತ್ನಿಸುತ್ತಿದ್ದಾರೆ ಎಂದಿದ್ದರು.

  ಅವರ ಈ ಹೇಳಿಕೆಗೆ ಜನರು ಟೀಕೆ ವ್ಯಕ್ತಪಡಿಸಿದ್ದು, ಜವಾಬ್ದಾರಿಯುತ ಸಂಸದರಾಗಿ ಈ ರೀತಿ ಉತ್ತರ ನೀಡುವುದೇ, 10-15 ಕಿ.ಮೀ ಸೈಕಲ್ ತುಳಿಯಲು ಸಾಧ್ಯವೇ? ಇದು ಮೆದುಳಿರುವವರು ಮಾತಾಡುವ ಮಾತಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಮೊದಲು ಸಿದ್ಧೇಶ್ವರ್ ಕಾರು ಓಡಿಸುವುದು ಬಿಡಲಿ. ಅವರು ಯಾಕೆ ಬೆಂಜ್ ಕಾರಿನಲ್ಲಿ ಓಡಾಡುತ್ತಾರೆ . ಸಿದ್ಧೇಶ್ವರ್ ಸೈಕಲ್​​ನಲ್ಲಿ ಓಡಾಡಿ ತೋರಿಸಲಿ ಎಂದು ಸವಾಲ್​ ಹಾಕಿದ್ದಾರೆ

  ಇನ್ನು ಇತ್ತೀಚೆಗೆ ಕೋವಿಡ್​ ಲಾಕ್​ಡೌನ್​ ಸಂದರ್ಭದಲ್ಲೂ ಕೂಡ ಸಂಸದರು ಕೊರೋನಾ ನಿಯಾಮಾವಳಿಗಳನ್ನು ಮೀರಿ ಹುಟ್ಟುಹಬ್ಬ ಆಚರಿಸಿದ್ದರು. ಅವರ ಈ ಕಾರ್ಯಕ್ಕೆ ಕೂಡ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ನಿಯಮಗಳನ್ನು ಪಾಲಿಸಬೇಕಾದ ಜನಪ್ರತಿನಿಧಿಗಳೇ ಹೀಗೆ ಮಾಡಿದರೆ ಏನು ಎಂದು ಸಾರ್ವಜನಿಕರು ಪ್ರಶ್ನಿಸಿದ್ದರು.

  ಇದನ್ನು ಓದಿ: ಹೆಗಲ ಮೇಲೆ ಕೈ ಹಾಕುವುದು ಎಂದರೆ ಏನು?; ಕಾರ್ಯಕರ್ತನ ಮೇಲಿನ ಹಲ್ಲೆಗೆ ಡಿಕೆಶಿ ಸ್ಪಷ್ಟನೆ

  ಕಳೆದ ಫೆಬ್ರವರಿಯಲ್ಲಿ ಕೂಡ ಪೆಟ್ರೋಲ್​ ಬೆಲೆ ಏರಿಕೆ ಕುರಿತು ಬಿಹಾರ ಬಿಜೆಪಿ ನಾಯಕ ಕೂಡ ಇದೇ ರೀತಿ ಬೇಜಾವ್ದಾರಿ ಹೇಳಿಕೆ ನೀಡಿ ಟ್ರೋಲಿಗೆ ಗುರಿಯಾಗಿದ್ದರು. ಬೆಲೆ ಹೆಚ್ಚಳ ಕುರಿತು ಪ್ರತಿಕ್ರಿಯಿಸಿದ್ದ ಬಿಹಾರ ಸಚಿವ ನಾರಾಯಣ ಪ್ರಸಾದ್​, ಇಂಧನ ಬೆಲೆ ಹೆಚ್ಚಳದಿಂದ ಸಾಮಾನ್ಯ ಜನರಿಗೆ ತೊಂದರೆಯಾಗುವುದಿಲ್ಲ. ಕಾರಣ ಸಾಮಾನ್ಯ ಜನರು ಸಾರ್ವಜನಿಕ ಸಾರಿಗೆ ಮೇಲೆ ಹೆಚ್ಚು ಅವಲಂಬಿತ ಆಗಿರುತ್ತಾರೆ. ಇದರಿಂದ ಅವರ ಮೇಲೆ ಪೆಟ್ರೋಲ್​ ಬೆಲೆ ಹೆಚ್ಚಳ ಪರಿಣಾಮ ಬೀರುವುದಿಲ್ಲ ಎಂದಿದ್ದರು.

  ದಿನದಿಂದ ದಿನಕ್ಕೆ ಇಂಧನ ಬೆಲೆ ಹೆಚ್ಚಾಗುತ್ತಲೇ ಇದೆ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಕೊನೆಯದಾಗಿ ಜುಲೈ 8 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿವೆ. ಮುಂಬೈಯಲ್ಲಿ ಪೆಟ್ರೋಲ್ ಪಂಪ್ ದರ ಪ್ರತಿ ಲೀಟರ್​ಗೆ 106.59 ರೂ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100.56 ರೂ, ಕೋಲ್ಕತ್ತಾದಲ್ಲಿ ಲೀಟರ್‌ಗೆ 100.62 ರೂ. ಚೆನ್ನೈನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ 101.37 ರೂ. ಬೆಂಗಳೂರಿನ ಪೆಟ್ರೋಲ್ ಬೆಲೆ ಮುಂಬೈ ನಂತರದ ಎರಡನೆಯ ಸ್ಥಾನದಲ್ಲಿದ್ದು,  ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 103.93 ರೂ ಇದೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: