HOME » NEWS » State » PEOPLE ACROSS KARNATAKA IN CELEBRATION AFTER INDIA STRIKES BACK AGAINST PAKISTAN

ಮಂಡ್ಯದ ಹುತಾತ್ಮ ಯೋಧನ ಪುಣ್ಯತಿಥಿಯಂದೇ ಭಾರತದ ಪ್ರತೀಕಾರ; ಗುರು ಕುಟುಂಬದ ಸಂತಸ; ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ

ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಭಾರತ ನಡೆಸಿದ ವೈಮಾನಿಕ ದಾಳಿಯನ್ನು ಕರ್ನಾಟಕದಾದ್ಯಂತ ಸ್ವಾಗತಿಸಿದ್ದಾರೆ. ರಾಜ್ಯದ ವಿವಿಧೆಡೆ ನೂರಾರು ಜನರು ಪಟಾಕಿ ಸಿಡಿಸಿ ಸಹಿ ಹಂಚಿ ಸಂಭ್ರಮಿಸಿದ್ದಾರೆ.

Vijayasarthy SN | news18
Updated:June 26, 2020, 2:45 PM IST
ಮಂಡ್ಯದ ಹುತಾತ್ಮ ಯೋಧನ ಪುಣ್ಯತಿಥಿಯಂದೇ ಭಾರತದ ಪ್ರತೀಕಾರ; ಗುರು ಕುಟುಂಬದ ಸಂತಸ; ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ
ಕಲಬುರ್ಗಿಯಲ್ಲಿ ಜನರ ವಿಜಯೋತ್ಸವ
  • News18
  • Last Updated: June 26, 2020, 2:45 PM IST
  • Share this:
ಬೆಂಗಳೂರು(ಫೆ. 26): ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದ ಬಗ್ಗೆ ರಾಜ್ಯದ ವಿವಿಧೆಡೆ ಸಂಭ್ರಮಾಚರಣೆ ನಡೆದಿದೆ. ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದ ಮಂಡ್ಯದ ಯೋಧ ಗುರು ಅವರ ಕುಟುಂಬ ಸದಸ್ಯರು ಭಾರತ ತಿರುಗೇಟು ನೀಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಪತಿಯನ್ನು ಕೊಂದವರ ಮೇಲೆ ಸೇನೆ ಪ್ರತೀಕಾರ ತೀರಿಸಿಕೊಂಡಿರುವುದಕ್ಕೆ ಗುರು ಪತ್ನಿ ಕಲಾವತಿ ಕೃತಜ್ಞತೆ ಸಲ್ಲಿಸಿದ್ದಾರೆ. ಇವತ್ತು ಗುರು ಪುಣ್ಯತಿಥಿಗೆ ಆಗಮಿಸಿದ್ದ ನೂರಾರು ಯುವಕರು ಈ ಸಂದರ್ಭದಲ್ಲಿ ಸೇನೆಯ ಪರವಾಗಿ ಘೋಷಣೆ ಹಾಕಿ ಸಂಭ್ರಮಾಚರಣೆ ನಡೆಸಿದರು.

ಇದೇ ವೇಳೆ, ಮಂಡ್ಯದಲ್ಲಿ ಪ್ರಜಾಪ್ರಿಯ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ನಡೆಸಿ ಗುರು ಆತ್ಮಕ್ಕೆ ಶ್ರದ್ಧಂಜಲಿ ಸಲ್ಲಿಸಲಾಯಿತು.

ಇನ್ನು, ರಾಜ್ಯದ ಅನೇಕ ನಾಯಕರು ಭಾರತೀಯ ವೈಮಾನಿಕ ದಾಳಿಯನ್ನು ಸ್ವಾಗತಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಮೊದಲಾದವರು ಸೇನಾ ಕಾರ್ಯವನ್ನು ಪ್ರಶಂಸಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪನವರು, ಉಗ್ರ ಸಂಘಟನೆಯ ಮೇಲೆ ನಡೆದ ಒಂದು ದಾಳಿಗೆ ತೃಪ್ತಿ ಪಡುವ ಅಗತ್ಯ ಇಲ್ಲ. ಪಾಕಿಸ್ತಾನದ ಜಂಘಾ ಬಲವನ್ನೇ ಅಡಗಿಸಬೇಕು. ಶಾಂತಿ ಮಾತುಕತೆಯಿಂದ ಏನೂ ಆಗೊಲ್ಲ. 130 ಕೋಟಿ ಭಾರತೀಯರು ಪ್ರಧಾನಿ ಜೊತೆ ಇದ್ದಾರೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ಕೊಟ್ಟರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಿವಿಧ ಸಂಘಟನೆಗಳು ಪ್ರಮುಖ ಬೀದಿಗಳಲ್ಲಿ ವಿಜಯ ಮೆರವಣಿಗೆ ನಡೆಸಿದವು. ಕಲಬುರ್ಗಿಯ ಸರ್ದಾರ್ ಪಟೇಲ್ ವೃತ್ತದಲ್ಲಿ ವೀರಶೈವ-ಲಿಂಗಾಯದ ಸ್ವಾಭಿಮಾನಿ ಬಳಗದಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಯಿತು. ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಸ್ಥಳೀಯ ಜನರು, ಆಟೋ ಚಾಲಕರು ಮೊದಲಾದವರು ಈ ಸಂಭ್ರಮದಲ್ಲಿ ಭಾಗಿಯಾದರು.


ವಿಜಯಪುರದ ಶಿವಾಜಿ ವೃತ್ತದಲ್ಲಿ ಮರಾಠ ಸಮಾಜದ ವತಿಯಿಂದ ಪಾಲಿಕೆ ಸದಸ್ಯ ರಾಹುಲ್ ಜಾಧವ್ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು. ಮಂಗಳೂರಿನ ಮಲ್ಲಿಕಟ್ಟೆ ವೃತ್ತದ ಬಳಿ ಶ್ರೀರಾಮಸೇನೆಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಇಲ್ಲಿನ ರಥ ಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದಲ್ಲಿ ಸೇನೆಯ ಪರವಾಗಿ ನೂರಾರು ಜನರು ಪ್ರಾರ್ಥನೆ ಸಲ್ಲಿಸಿದರು. ಪುತ್ತೂರಿನ ಗಾಂಧಿಕಟ್ಟೆಯ ಬಳಿಯೂ ಜನರು ಪಟಾಕಿ ಸಿಡಿಸಿ ಹರ್ಷಾಚರಣೆ ನಡೆಸಿದರು.

ಕೋಲಾರದ ಬಸ್ ನಿಲ್ದಾಣದ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ದೇಶದ ಸೈನಿಕರ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ಬಾಗಲಕೋಟೆ, ಧಾರವಾಡ, ಹಾವೇರಿ ಮೊದಲಾದ ಕಡೆಯೂ ನೂರಾರು ಜನರು ಬೀದಿ ಬೀದಿಗಳಲ್ಲಿ ಸಂಭ್ರಮಾಚರಣೆ ನಡೆಸಿರುವುದು ವರದಿಯಾಗಿದೆ.
First published: February 26, 2019, 1:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories